ಪಕ್ಷೇತರವಾಗಿ ಸ್ಪರ್ಧೆಗೆ ಮುಂದಾದ ಮುಖಂಡ

By Kannadaprabha NewsFirst Published Oct 7, 2022, 4:24 AM IST
Highlights

ನಾಗಮಂಗಲ ವಿಧಾನಸಭಾ ಕ್ಷೇತ್ರದಿಂದ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಪಕ್ಷೇತರವಾಗಿ ಸ್ಪರ್ಧಿಸುವುದು ಖಚಿತ ಎಂದು ಮಾಜಿ ಸಂಸದ ಶಿವರಾಮೇಗೌಡ ಸ್ಪಷ್ಟಪಡಿಸಿದರು.

ಮದ್ದೂರು(ಅ.07): ನಾಗಮಂಗಲ ವಿಧಾನಸಭಾ ಕ್ಷೇತ್ರದಿಂದ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಪಕ್ಷೇತರವಾಗಿ ಸ್ಪರ್ಧಿಸುವುದು ಖಚಿತ ಎಂದು ಮಾಜಿ ಸಂಸದ  ಶಿವರಾಮೇಗೌಡ ಸ್ಪಷ್ಟಪಡಿಸಿದರು.

ತಾಲೂಕಿನ ಗುಡಿದೊಡ್ಡಿ ಗ್ರಾಮದಲ್ಲಿ ಗುರುವಾರ ನಡೆದ ಬೀರೇಶ್ವರ ಚನ್ನಕೆಶ್ವರಸ್ವಾಮಿ ದೇವರ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂದಿನ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ಕಾಂಗ್ರೆಸ್‌, ಬಿಜೆಪಿ ಮತ್ತು ಜೆಡಿಎಸ್‌ ಮೂರು ಪಕ್ಷಗಳಿಂದ ಆಹ್ವಾನವಿದೆ. ಚುನಾವಣಾ ಕಾಲಕ್ಕೆ ಪಕ್ಷೇತರ ಅಥವಾ ಯಾವುದೇ ಪಕ್ಷದಿಂದ ಸ್ಪರ್ಧಿಸುವ ಸಂಬಂಧ ನನ್ನ ಹಿತೈಷಿಗಳ ಹಾಗೂ ಬೆಂಬಲಿಗರ ಸಭೆ ನಡೆಸಿ ಅವರಿಂದ ಸಲಹೆ ಪಡೆದು ಅಂತಿಮ ತಿರ್ಮಾನ ಕೈಗೊಳ್ಳುತ್ತೇನೆ ಎಂದರು.

ಮುಂದಿನ ಚುನಾವಣೆಯಲ್ಲಿ (Election) ಕ್ಷೇತ್ರದ ಜನರು ಬದಲಾವಣೆ ಬಯಸಿದ್ದಾರೆ. ಚಲುವರಾಯಸ್ವಾಮಿ, ಸುರೇಶ್‌ಗೌಡರ ಆಡಳಿತ ನೋಡಿದ್ದಾರೆ. ನಮಗೂ ಒಂದು ಅವಕಾಶವನ್ನು ಈ ಭಾರಿ ಕ್ಷೇತ್ರದ ಜನರು ನೀಡಲಿದ್ದಾರೆ ಎಂದು ಭರವಸೆ ವ್ಯಕ್ತಪಡಿಸಿದರು.

ಚುನಾವಣೆಗಳ ಫಲಿತಾಂಶ ಎಲ್ಲಾ ಸಮಯದಲ್ಲೂ ಒಂದೇ ರೀತಿ ಇರುವುದಿಲ್ಲ. ಚಲುವರಾಯಸ್ವಾಮಿ ಅವರನ್ನು ಕಳೆದ ವಿಧಾನಸಭಾ ಚುನಾವಣೆಯಲ್ಲಿ 47 ಸಾವಿರ ಮತಗಳ ಅಂತರದಿಂದ ಸೋಲಿಸಿದ್ದಾರೆ. ಮುಂದಿನ ಚುನಾವಣೆಯಲ್ಲಿ ಶಾಸಕ (MLA) ಸುರೇಶ್‌ಗೌಡ 60 ಸಾವಿರ ಮತಗಳ ಅಂತರದಿಂದ ಪರಾಭವಗೊಂಡರು ಅಚ್ಚರಿಪಡುವಂತ್ತಿಲ್ಲ ಎಂದರು.

ಜಿಲ್ಲೆಯ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಕಳೆದ 6-7 ತಿಂಗಳಿಂದ ಸಮಾಜ ಸೇವಕರ ಹೆಸರಿನಲ್ಲಿ ರಾಜಕೀಯಕ್ಕೆ ಬರಲು ಸಜ್ಜಾಗುವ ಮೂಲಕ ಜನರ ಸೇವೆ ಮಾಡುತ್ತಿದ್ದಾರೆ. ಉಳ್ಳವರು ಜನ ಸೇವೆ ಮಾಡುವುದರಲ್ಲಿ ತಪ್ಪೇನಿಲ್ಲ. ಸರ್ಕಾರ ಹಾಗೂ ಜನ ಪ್ರತಿನಿಧಿಗಳು ಮಾಡಬೇಕಾದ ಕೆಲಸವನ್ನು ಸಮಾಜ ಸೇವಕರು ಮಾಡುತ್ತಿದ್ದಾರೆ ಎಂದರು.

ಮದ್ದೂರು

ಭಾರತ್‌ ಜೋಡೋ ಬೃಹತ್‌ ಪಾದಯಾತ್ರೆ ಪ್ರಸ್ತುತದಲ್ಲಿ ಅಗತ್ಯವಾಗಿದೆ.

ಕಾಂಗ್ರೆಸ್‌ ನಾಯಕ ರಾಹುಲ್…ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಕನ್ಯಾಕುಮಾರಿಯಿಂದ ಕಾಶ್ಮಿರದವರೆಗೆ ನಡೆಯುತ್ತಿರುವ ಭಾರತ್‌ ಜೋಡೋ ಬೃಹತ್‌ ಪಾದಯಾತ್ರೆ ಪ್ರಸ್ತುತದಲ್ಲಿ ಅಗತ್ಯವಾಗಿದೆ. ಕಾಂಗ್ರೆಸ್‌ ಪಕ್ಷ ಅಧಿಕಾರದಲ್ಲಿದ್ದಾಗ ಯಾವುದೇ ಕೋಮು ಗಲಭೆಗಳಾಗಿಲ್ಲ. 50 ವರ್ಷಕ್ಕೂ ಹೆಚ್ಚು ಕಾಲ ಕಾಂಗ್ರೆಸ್‌ ಆಡಳಿತ ನಡೆಸಿದೆ. ಇದಿಗ ಮತೀಯ ಸಂಘರ್ಷಗಳು, ಒಡೆದಾಟ ಮತ್ತು ಜಗಳಗಳು ನಡೆಯುತ್ತಿವೆ ಎಂದು ಮಾಜಿ ಸಂಸದ ಎಲ….ಆರ್‌.ಶಿವರಾಮೇಗೌಡ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಯಾವುದೇ ಪಕ್ಷದ ಕಾರ್ಯಕರ್ತನಲ್ಲ. ನಾನು ಸ್ವತಂತ್ರವಾಗಿದ್ದೇನೆ. ರಾಜ್ಯದಲ್ಲಿ ಎಲ್ಲ ಜನಾಂಗಗಳಿವೆ. ಅವುಗಳ ದ್ವೇಷ ಮಾಡಿದರೆ ಕಲಹಗಳು ಆರಂಭವಾಗುತ್ತವೆ. ದೇಶದಲ್ಲಿ ಕಿತ್ತು ತಿನ್ನುತ್ತಿರುವ ಬಡತನ, ನಿರುದ್ಯೋಗ ಸಮಸ್ಯೆಯಿಂದ ಆರ್ಥಿಕ ಸ್ಥಿತಿಗತಿ ಹಾಳಾಗಿವೆ. ಈ ಬಗ್ಗೆ ಆರ್‌ಎಸ್‌ಎಸ್‌ ಮುಖಂಡರು ಕಳವಳ ವ್ಯಕ್ತಪಡಿಸಿದ್ದಾರೆ ಎಂದು ಬಿಜೆಪಿ ಸರ್ಕಾರಗಳ ವಿರುದ್ಧ ಪರೋಕ್ಷ ಅಸಮಾಧಾನ ವ್ಯಕ್ತಪಡಿಸಿದರು.

ಸಡ್ಡು ಹೊಡೆದ ಮುಖಂಡ

 

ಕರ್ನಾಟಕ ವಿಧಾನಸಭೆ  ಚುನಾವಣೆಗೆ (Karnataka Assembly Election 2024) ಒಂದು ವರ್ಷ ಬಾಕಿ ಇದೆ. ಆಗಲೇ ಜೆಡಿಎಸ್‌ ಭದ್ರಕೋಟೆ ಮಂಡ್ಯದಲ್ಲಿ ರಾಜಕೀಯ (Mandya Politics) ಚಟುವಟಿಕೆಗಳು ಗರಿಗೆದರಿವೆ. ಜೆಡಿಎಸ್​ನಿಂದ ಉಚ್ಚಾಟನೆಗೊಂಡ ಬಳಿಕ ಎಲ್​. ಆರ್​. ಶಿವರಾಮೇಗೌಡ ಅವರು ರೆಬೆಲ್ ಆಗಿದ್ದು, ಜೆಡಿಎಸ್ ಹಾಗೂ ಕಾಂಗ್ರೆಸ್ ವಿರುದ್ಧ ತೊಡೆ ತಟ್ಟಲು ಸಜ್ಜಾಗಿದ್ದಾರೆ. 

ಹೌದು.. ನಾಗಮಂಲ ಕ್ಷೇತ್ರದಿಂದ ಪಕ್ಷೇತರವಾಗಿ ಸ್ಪರ್ಧೆಗೆ ನಿಲ್ಲಲು ತಯಾರಾಗಿದ್ದು,  ಏಕಕಾಲದಲ್ಲಿ ಇಬ್ಬರು ಬದ್ಧ ವೈರಿಗಳನ್ನು ಸೋಲಿಸುವ ಅವಕಾಶ ಬಂದಿದೆ ಎಂದು ಗುಡುಗಿದ್ದಾರೆ. ಈ ಮೂಲಕ ಶಿವರಾಮೇಗೌಡ(LR Shivaramegowda) ಅವರು ಜೆಡಿಎಸ್ (JDS) ಹಾಗೂ ಕಾಂಗ್ರೆಸ್‌ಗೆ (Congress) ಸೆಡ್ಡು ಹೊಡೆದಿದ್ದಾರೆ.

LR Shivaramegowda ಮಾಜಿ ಸಂಸದ ಜೆಡಿಎಸ್‌ನಿಂದ ಉಚ್ಚಾಟನೆ, ನಾಯಕನ ರಾಜಕೀಯ ಜೀವನಕ್ಕೆ ಮುಳುವಾಯ್ತು ಆಡಿಯೋ

ನಿತ್ಯ ಕ್ಷೇತ್ರ ಪ್ರವಾಸ ಮಾಡುವ ಮೂಲಕ ಪ್ರಚಾರ ಆರಂಭಿಸಿರುವ ಶಿವರಾಮೇಗೌಡ, ನಾಗಮಂಗಲದಲ್ಲೇ ಟಿಕಾಣಿ ಹೂಡಲು ಗೃಹ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಮನೆ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸುವ ಮೂಲಕ ಸ್ಪರ್ಧೆ ಖಚಿತ ಎಂಬ ಸಂದೇಶ ರವಾನೆ ಮಾಡಿದ್ದಾರೆ. ಹಳ್ಳಿ ಹಳ್ಳಿಗಳಲ್ಲೂ ಬೆಂಬಲಿಗರ ಪಡೆ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ. 

ಇನ್ನು ಈ ಬಗ್ಗೆ ಇಂದು(ಮಂಗಳವಾರ) ನಾಗಮಂಗಲದಲ್ಲಿ ಮಾತನಾಡಿದ ಅವರು, ಚಲುವರಾಯಸ್ವಾಮಿ, ಸುರೇಶ್ ಗೌಡ ನನಗೆ ರಾಜಕೀಯ ಬದ್ಧ ವೈರಿಗಳು. ಏಕಕಾಲದಲ್ಲಿ ಬದ್ಧ ವೈರಿಗಳನ್ನು ಸೋಲಿಸುವ ಅವಕಾಶ ನನಗೀಗ ಬಂದಿದೆ. ನಾನು ಈಗ ಫ್ರೀ ಬರ್ಡ್, ನನಗೆ ಪಕ್ಷ ಸೂಟ್ ಆಗಲ್ಲ ಅಂತ ಜನರೇ ಹೇಳ್ತಿದ್ದಾರೆ. ಪ್ರತಿ ಹಳ್ಳಿಯಲ್ಲೂ ಕಾಂಗ್ರೆಸ್-ಜೆಡಿಎಸ್ ಎರಡು ಪಕ್ಷದ ಕಾರ್ಯಕರ್ತರೂ ಬೆಂಬಲ ಕೊಡ್ತಿದ್ದಾರೆ. ಪಕ್ಷೇತರ ಸ್ಪರ್ಧೆ ಮಾಡುವುದು ನಿರ್ಧಾರವಾಗಿದೆ ಎಂದು ಸ್ಪಷ್ಟಪಡಿಸಿದರು.

ನನ್ನ ಸ್ಪರ್ಧೆ ಕೆಲವರಿಗೆ ಲಾಭ ಆಗಬಹುದು ಎಂದು ತಿಳಿದಿದ್ದಾರೆ. ನಾನು ಚೆಲುವರಾಯಸ್ವಾಮಿ, ಸುರೇಶ್ ಗೌಡ ಇಬ್ಬರ ಮತವನ್ನು ಪಡೆಯುತ್ತೇನೆ. ಪ್ರತಿ ಊರಲ್ಲೂ ಮೂರು ಗುಂಪಾಗಿ ರಚಿಸುತ್ತೇನೆ. ಅವರಿಬ್ಬರಂತೆ ನನ್ನ ಗುಂಪು ಇರುವಂತೆ ಮಾಡುತ್ತೇನೆ. ಅವರ ಗುಂಪು ಇಲ್ಲದಿದ್ರು ನನ್ನ ಪರವಾದ ಗುಂಪು ಇರಲೇಬೇಕು. ಈ ಕ್ಷೇತ್ರ ಬಿಟ್ಟು ಹೋಗಲ್ಲ ಎಂಬ ಸಂದೇಶ ಸಾರುವ ಉದ್ದೇಶದಿಂದಲೇ ನಾನಿಲ್ಲಿ ಮನೆ ಮಾಡ್ತಿರೋದು. ಚುನಾವಣೆ ಮುಗಿಯುವವರೆಗೂ ನಿದ್ದೆ ಮಾಡುವುದಿಲ್ಲ, ಹೋರಾಟ ನಿರಂತರ ಎಂದು ಗುಡುಗಿದರು.

ಎಚ್​.ಡಿ. ಕುಮಾರಸ್ವಾಮಿ, ದೇವೇಗೌಡರ ವಿರುದ್ಧ ಅಸಮಾಧಾನ ಇಲ್ಲ. ನಮ್ಮವರೇ ಕೆಲವರು ನನ್ನ ವಿರುದ್ಧ ಹುನ್ನಾರ ನಡೆಸಿದ್ರು. ಅವರ ಹುನ್ನಾರಕ್ಕೆ ನಾನು ಖೆಡ್ಡಕ್ಕೆ ಬಿದ್ದಿದ್ದೀನಿ. ಕುಮಾರಸ್ವಾಮಿ ಅವರು ಈ ಕುರಿತು ಯೋಚಿಸಬಹುದಿತ್ತು. ಆದ್ರೆ ಅವರು ತಕ್ಷಣ ಉಚ್ಚಾಟನೆ ತೀರ್ಮಾನ ಮಾಡಿಬಿಟ್ರು. ಅವರ ತೀರ್ಮಾನಕ್ಕೆ ನಾನು ಬದ್ಧನಾಗಿದ್ದೇನೆ. ನಾಗಮಂಗಲದಲ್ಲಿ ಭ್ರಷ್ಟಾಚಾರ ಮುಗಿಲು ಮುಟ್ಟಿದೆ. ಸಾರಾಸಗಟಾಗಿ 7% ಕಮಿಷನ್ ಪ್ರತಿ ಕೆಲಸದಲ್ಲೂ ಇದೆ. ಶಾಸಕರೇ ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದಾರೆ ಎಂದು ಜೆಡಿಎಸ್ ಶಾಸಕ ಸುರೇಶ್ ಗೌಡ ವಿರುದ್ಧ ಗಂಭೀರ ಆರೋಪ ಮಾಡಿದರು.

click me!