ಭಟ್ಕಳ ಕ್ಷೇತ್ರದ ಬಿಜೆಪಿಯಲ್ಲಿ ಎಲ್ಲವೂ ಸರಿಯಿಲ್ಲ. ಪಕ್ಷದ ಕಾರ್ಯಕರ್ತರಲ್ಲಿ ಅಸಮಧಾನವಿದೆ ಎನ್ನುವ ಆರೋಪಕ್ಕೆ ಪುಷ್ಠಿ ನೀಡಿದ್ದು, ಇದು ಶಾಸಕರ ಎದುರೇ ಮತ್ತೊಮ್ಮೆ ಜಗಜ್ಜಾಹಿರಾಗಿದೆ.
ಕಾರವಾರ(ಅ.07): ಭಟ್ಕಳ ಶಾಸಕ ಸುನೀಲ್ ನಾಯ್ಕ ಕೋಟೆಬೈಲ್ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸಮಯದಲ್ಲಿ ಅವರದ್ದೇ ಪಕ್ಷದ ಕಾರ್ಯಕರ್ತರು ಕಪ್ಪು ಬಾವುಟ ಪ್ರದರ್ಶನ ಮಾಡಿದ ಘಟನೆ ನಿನ್ನೆ(ಗುರುವಾರ) ನಡೆದಿದೆ.
ತಮ್ಮ ಗ್ರಾಮದ ರಸ್ತೆ ಕೆಲಸ ಆಗಿಲ್ಲ, ಹಣ ಮಂಜೂರಿ ಮಾಡಿಲ್ಲ ಎಂದು ಶಾಸಕರು ಕಾಯಕ್ರಮದಲ್ಲಿ ಇರೋವಾಗಲೇ ಪಕ್ಕದ ಮುಟ್ಟಾ ಗ್ರಾಮದ ಐದಾರು ಜನರು ಕಪ್ಪು ಬಾವುಟ ಹಿಡಿದು ಸಭಾಂಗಣದ ಸನಿಹದಲ್ಲೇ ನಿಂತಿದ್ದರು. ಅಲ್ಲದೇ, ಬಾವುಟ ಎತ್ತಿ ಶಾಸಕರಿಗೆ ತೋರಿಸುತ್ತಲೇ ಇದ್ದರು. ಸುಮಾರು ಹತ್ತು ನಿಮಿಷವಾದರೂ ಬಾವುಟ ಹಿಡಿದೇ ನಿಂತಿರುವುದನ್ನು ನೋಡಿದ ಶಾಸಕರ ಬೆಂಬಲಿಗರು ಮತ್ತು ಕಾರ್ಯಕರ್ತರು ಸ್ಥಳಕ್ಕೆ ಜಮಾಯಿಸಿದ್ದು, ಮಾತಿಗೆ ಮಾತು ಬೆಳೆದು ಕೈ ಕೈ ಮೀಲಾಯಿಸಿದ ಘಟನೆ ನಡೆದಿದೆ.
undefined
ಪೊರಕೆ ಹಿಡಿದು ಬಸ್ ನಿಲ್ದಾಣ ಸ್ವಚ್ಛಗೊಳಿಸಿದ ಸ್ಪೀಕರ್ ಕಾಗೇರಿ
ನಂತರ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಬಂದು ಪ್ರತಿಭಟನೆ ನಿರತರನ್ನು ವಾಪಾಸ್ ಕಳುಹಿಸಿ ಪರಿಸ್ಥಿತಿ ತಿಳಿಗೊಳಿಸಿದರು. ಸವೇದಿಕೆಯಲ್ಲಿ ಭಾಷಣದ ವೇಳೆ ವಿಷಯ ಪ್ರಸ್ತಾಪಿಸಿದ ಶಾಸಕ ಸುನೀಲ್ ನಾಯ್ಕ್, ಕಪ್ಪು ಬಾವುಟ ಹಿಡಿದು ಬರುವ ಬದಲು ವಿಷಯವನ್ನು ಗಮನಕ್ಕೆ ತಂದಿದ್ದರೆ ಅವರ ಕೆಲಸ ಇಂದೇ ಪ್ರಾರಂಭ ಮಾಡುತ್ತಿದ್ದೆ. ಅವರು ಕೂಡಾ ನಮ್ಮವರೇ, ನೆರೆಯ ನಮ್ಮ ಪಕ್ಷದ ಕಾರ್ಯಕರ್ತರಾಗಿ ಯಾಕೆ ಈ ರೀತಿ ಮಾಡಿದರೂ ಗೊತ್ತಿಲ್ಲ. ಆ ಭಾಗದ ಎರಡು ರಸ್ತೆಗೆ ಈಗಾಗಲೇ ಹಣ ಹಾಕಲಾಗಿದೆ. 40 ಲಕ್ಷ ರೂ. ವೆಚ್ಚದಲ್ಲಿ ರಸ್ತೆ ನಿಮಾಣವಾಗಲಿದ್ದು, ಈ ವಾರವೇ ಕಾಮಗಾರಿಗೆ ಚಾಲನೆ ನೀಡಲಿದ್ದೇನೆ. ಕಾರ್ಯಕರ್ತರಿಂದ ಏನಾದರೂ ತೊಂದರೆಯಾದರೆ ಅವರ ಪರವಾಗಿ ಬಹಿರಂಗ ಕ್ಷಮೆ ಕೇಳುತ್ತೇನೆ ಎನ್ನುವ ಮೂಲಕ ಕಹಿ ಘಟನೆಯನ್ನು ಮರೆ ಮಾಚಿದರು.
ಈ ಎಲ್ಲಾ ವಿಷಯಗಳನ್ನು ಗಮನಿಸಿದರೆ ಭಟ್ಕಳ ಕ್ಷೇತ್ರದ ಬಿಜೆಪಿಯಲ್ಲಿ ಎಲ್ಲವೂ ಸರಿಯಿಲ್ಲ. ಪಕ್ಷದ ಕಾರ್ಯಕರ್ತರಲ್ಲಿ ಅಸಮಧಾನವಿದೆ ಎನ್ನುವ ಆರೋಪಕ್ಕೆ ಪುಷ್ಠಿ ನೀಡಿದ್ದು, ಇದು ಶಾಸಕರ ಎದುರೇ ಮತ್ತೊಮ್ಮೆ ಜಗಜ್ಜಾಹಿರಾಗಿದೆ. ಪರೇಶ ಪ್ರಕರಣದ ಕುರಿತಾಗಿ ಸಿಬಿಐ ಸಲ್ಲಿಸಿದ್ದ ಬಿ ರಿಪೋರ್ಟ್ ವರದಿಯಿಂದ ಮುಜಗರಕ್ಕೊಳಗಾದ ಬಿಜೆಪಿ ಪಕ್ಷದ ಕಾರ್ಯಕರ್ತರ ಬಹಿರಂಗ ಅಸಮಾಧಾನದ ಜೊತೆ ಇದೀಗ ಕಪ್ಪು ಬಾವುಟ ಪ್ರದರ್ಶನದ ಬೆಳವಣಿಗೆ ಮುಂದಕ್ಕೆ ಯಾವ ಹಂತ ಕಾಣಲಿದೆ ಎಂದು ಕಾದು ನೋಡಬೇಕಷ್ಟೇ.