
ಬೆಂಗಳೂರು (ಸೆ.3): ರೇಣುಕಾಸ್ವಾಮಿ ಕೊಲೆ ಕೇಸ್‌ನ ಆರೋಪಿ ನಟ ದರ್ಶನ್‌ನನ್ನು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡುವಂತೆ ಜೈಲಿನ ಅಧಿಕಾರಿಗಳು ಸಲ್ಲಿಸಿದ್ದ ಅರ್ಜಿಯನ್ನು 64ನೇ ಸೆಷನ್ಸ್ ಕೋರ್ಟ್ ವಿಚಾರಣೆ ನಡೆಸಿದ್ದು, ಸೆ. 9ಕ್ಕೆ ತನ್ನ ತೀರ್ಪನ್ನು ಕಾಯ್ದಿರಿಸಿದೆ. ಬುಧವಾರ ಕೋರ್ಟ್‌ನಲ್ಲಿ ವಾದ ಮಂಡಿಸಿದ ದರ್ಶನ್ ಪರ ವಕೀಲ ಸುನೀಲ್ ಕುಮಾರ್, ದರ್ಶನ್‌ಗೆ ಜೈಲಿನಲ್ಲಿ ಆಗುತ್ತಿರುವ ಸಮಸ್ಯೆಗಳನ್ನು ಎಳೆಎಳೆಯಾಗಿ ವಿವರಿಸಿದರು. ಖೈದಿಗಳ ಹಕ್ಕುಗಳ ಬಗ್ಗೆ ಸುಪ್ರೀಂ ಕೋರ್ಟ್ ನ ಕೆಲ ತೀರ್ಪುಗಳನ್ನೂ ಕೂಡ ತಮ್ಮ ವಾದದಲ್ಲಿ ಉಲ್ಲೇಖ ಮಾಡಿದ ಅವರು ಯಾವುದೇ ಕಾರಣಕ್ಕೂ ದರ್ಶನ್‌ರನ್ನು ಬೇರೆ ಜೈಲಿಗೆ ಸ್ಥಳಾಂತರ ಮಾಡಬಾರದು ಎಂದು ವಾದಿಸಿದರು.
ಇಲ್ಲಿ ವಿಚಾರಾಣಾಧೀನ ಖೈದಿ ಮತ್ತು ಶಿಕ್ಷಿತ ಅಪರಾಧಿ ಗಳ ಮಧ್ಯೆ ತಾರತಮ್ಮ ಮಾಡುವಂತಿಲ್ಲ. ಅದೇ ರೀತಿ ಈ ಪ್ರಕರಣದ ಆರೋಪಿ ನಟ ದರ್ಶನ್ ಅಂತಾ, ಬೇರೆ ಖೈದಿಗಳ ಜೊತೆ ತಾರತಮ್ಯ ಮಾಡುವಂತಿಲ್ಲ. ಜೈಲಿನಲ್ಲಿ ಏನಾದರೂ ಸೌಲಭ್ಯ ಬೇಕು ಅಂದ್ರೆ ದುಡ್ಡು ಕೊಡಬೇಕು. ದರ್ಶನ್ ಬಲಗೈಗೆ ಆಪರೇಷನ್ ಆಗಿದೆ, ಶೀತದಿಂದ ಕೈ ಅಲ್ಲಾಡಿಸಲು ಕೂಡ ಸಾಧ್ಯವಾಗ್ತಿಲ್ಲ. ಇಲ್ಲಿ ದಯಾನಂದ್ ಅವರ ಜೇಬಿನಿಂದ ಕೊಡಿ ಅಂತ ಕೇಳುತ್ತಿಲ್ಲ. ಕಾನೂನಾತ್ಮಕವಾಗಿ ಕೊಡಬೇಕಾದ ಕನಿಷ್ಠ ಸೌಲಭ್ಯ ಕೇಳುತ್ತಿದ್ದೇವೆ ಎಂದು ಹೇಳಿದರು.
ಕನಿಷ್ಠ ಸೌಲಭ್ಯ ಆಗಿರುವಂಥ ಊಟ, ಬಟ್ಟೆ, ಹಾಸಿಗೆ ಕೇಳುತ್ತಿದ್ದೇವೆ. ಸುಪ್ರೀಂ ಕೋರ್ಟ್ ಜಾಮೀನು ರದ್ದು ಮಾಡಿದೆ ಅನ್ನೋ ಕಾರಣಕ್ಕೆ ಏನೂ ಕೊಡುವಂತಿಲ್ಲ ಅಂತ ಜೈಲು ಅಧಿಕಾರಿಗಳು ಹೇಳುತ್ತಿದ್ದಾರೆ. ಹೀಗಾಗಿ ದರ್ಶನ್ ಬೇರೆ ಜೈಲಿಗೆ ಶಿಫ್ಟ್ ಮಾಡಬಾರದು ಎಂದು ನನ್ನ ಮನವಿ. ಅಲ್ಲದೆ ಹಾಸಿಗೆ, ದಿಂಬು ಬಟ್ಟೆ, ಕನಿಷ್ಠ ಸೌಲಭ್ಯ ನೀಡುವಂತೆ ಆದೇಶಿಸಲು ಮನವಿ ಮಾಡುತ್ತೇನೆ ಎಂದಿದ್ದಾರೆ.
ಬಟ್ಟೆ, ಹಾಸಿಗೆ, ದಿಂಬು ಸೇರಿ ಸೌಕರ್ಯ ಕೋರಿ ಅರ್ಜಿ ಸಲ್ಲಿಸಿದ್ದಾರೆ. ಬಟ್ಟೆ, ಬೆಡ್, ಪ್ಲೇಟ್, ಚಪ್ಪಲಿ, ಸ್ಪೂನ್ ಸೇರಿ ಅಗತ್ಯ ವಸ್ತುಗಳನ್ನ ಸ್ವಂತವಾಗಿ ಪಡೆಯಲು ಅವಕಾಶ ಇದೆ. ಪ್ರಿಸನ್ಸ್ ಕಾಯ್ದೆ 63ರ ಅಡಿ ಸ್ವಂತ ವಸ್ತುಗಳನ್ನು ಹೊಂದಲು ಅವಕಾಶ ಇದೆ. ವಿಚಾರಣಾಧೀನ ಖೈದಿ, ಶಿಕ್ಷಿತ ಅಪರಾಧಿ ಕೂಡ ಪಡೆಯಲು ಅವಕಾಶ ಇದೆ. ಕಾನೂನಿನಲ್ಲಿ ಇರುವ ಅವಕಾಶ ಕೊಡಿ ಅಂತ ದರ್ಶನ್ ಕೇಳುತ್ತಿದ್ದಾರೆ.
ನಾವು ಹೆಚ್ಚುವರಿಯಾಗಿ ಕೇಳುತ್ತಿಲ್ಲ. ಮಂಗಳವಾರ ಜೈಲು ಅಧಿಕಾರಿಗಳೇ ನನಗೆ ಕರೆ ಮಾಡಿ ಅರ್ಜಿ ಹಿಂಪಡೆಯಲು ಕೇಳಿಕೊಂಡಿದ್ದಾರೆ. ಏನಿದೆಯೋ ಅದನ್ನು ಕೊಡುತ್ತೇವೆ ಎಂದು ಹೇಳಿದ್ದಾರೆ ಎಂದು ಸುನೀಲ್ ಕುಮಾರ್ ವಾದದ ವೇಳೆ ತಿಳಿಸಿದ್ದಾರೆ.
ಎನ್ಐಎ ಪ್ರಕರಣವೊಂದರಲ್ಲಿ ಜೈಲು ವೈದ್ಯ ಆರೋಪಿ ಆಗಿದ್ದಾರೆ. ಅಂತಹ ವೈದ್ಯ ಆರೋಪಿಗೆ ವಿಶೇಷ ಸೌಲಭ್ಯ ಕೊಟ್ಟಿದ್ದಾರೆ. ಪ್ರತ್ಯೇಕವಾಗಿ ಪರದೆ ಹಾಕಿ ವಿಶೇಷ ಸೌಲಭ್ಯ ಕೊಟ್ಟಿದ್ದಾರೆ. ಈ ರೀತಿ ತಾರತಮ್ಯ ಯಾಕೆ? ದರ್ಶನ್ ಗೆ ಏನಾದರೂ ಸಾಲಿಟರಿ ಕನ್ಫೈನ್ ಮೆಂಟ್ ಶಿಕ್ಷೆ ಆಗಿದ್ಯಾ? (ಸಾಲಿಟರಿ ಕನ್ಫೈನ್ ಮೆಂಟ್ ಎಂದರೆ, ಒಂದು ರೂಮಿನಲ್ಲಿ ಒಬ್ಬನೇ ಎನ್ನುವ ಏಕಾಂತ ಶಿಕ್ಷೆ). ಈ ರೀತಿಯ ತಾರತಮ್ಯಕ್ಕೆ ಕಾರಣ ಈಗಿನ ಕಾರಾಗೃಹ ಡಿಜಿಪಿ ದಯಾನಂದ ಅವರು. ಜೈಲಿನ ಸೆಲ್ ನಿಂದ ಹೊರಗೆ ಬರಲು ಬಿಟ್ಟಿಲ್ಲ, ಹೀಗಿದ್ದಾಗ ಸೌಲಭ್ಯಕ್ಕೆ ಲಿಖಿತ ಮನವಿ ನೀಡಲು ಹೇಗೆ ಸಾಧ್ಯ? ಎಂದು ಪ್ರಶ್ನೆ ಮಾಡಿದ್ದಾರೆ.
ದರ್ಶನ್ ಜೈಲು ಸೇರಿ ಒಂದು ತಿಂಗಳಾಗಿದೆ. ಕುಟುಂಬಸ್ಥರಿಗೆ ಪೋನ್ ಮಾಡಲು ಅವಕಾಶ ನೀಡಿಲ್ಲ. ವಿಡಿಯೋ ಕಾನ್ಫರೆನ್ಸ್ ಗೆ ಕೂಡ ಅವಕಾಶ ನೀಡಿಲ್ಲ. ಟಿವಿ, ಪೇಪರ್ ಪಡೆಯಲು ಅವಕಾಶ ಇದೆ. ಆದರೆ, ದರ್ಶನ್‌ಗೆ ಸಿಗ್ತಿಲ್ಲ. ಹೊರಜಗತ್ತಿನಲ್ಲಿ ಏನ್ ನಡೀತಾ ಇದೆ? ತಮ್ಮ ಕೇಸ್ ಏನ್ ಆಗ್ತಿದೆ ಅಂತ ಕೂಡ ಗೊತ್ತಾಗ್ತಾ ಇಲ್ಲ. ಖೈದಿಗಳಿಗೆ ಬೇಸಿಕ್ ಮೂಲಭೂತ ಹಕ್ಕುಗಳು ಇವೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಹೈಜನಿಕ್ ಫುಡ್ ಸೇರಿದಂತಡ ಕನಿಷ್ಠ ಸೌಲಭ್ಯ ನೀಡಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ ಎಂದು ತಿಳಿಸಿದ್ದಾರೆ.