
ಬೆಂಗಳೂರು (ಸೆ.3): ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಸ್ವತಃ ಸುಪ್ರೀಂ ಕೋರ್ಟ್‌ನಿಂದಲೇ ಜಾಮೀನು ರದ್ದು ಶಿಕ್ಷೆ ಪಡೆದುಕೊಂಡಿರುವ ಕಿಲ್ಲಿಂಗ್ ಸ್ಟಾರ್ ನಟ ದರ್ಶನ್ ಅವರ ಜೈಲಿನ ಭವಿಷ್ಯ ಸೆ. 9ಕ್ಕೆ ನಿರ್ಧಾರವಾಗಲಿದೆ. ಹೈಕೋರ್ಟ್‌ನಿಂದ ಜಾಮೀನು ಪಡೆಯುವ ಮುನ್ನ ದರ್ಶನ್ ಬಳ್ಳಾರಿ ಜೈಲಿನಲ್ಲಿದ್ದರು. ಆದರೆ, ಸುಪ್ರೀಂ ಕೋರ್ಟ್ ಜಾಮೀನು ರದ್ದು ಮಾಡಿದ ಬಳಿಕ ಆತನನ್ನು ಪರಪ್ಪನ ಅಗ್ರಹಾರ ಜೈಲಿನಲ್ಲಿ ಇಡಲಾಗಿದೆ. ಆದರೆ, ದರ್ಶನ್‌ನನ್ನು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಬೇಕು ಎಂದು ಜೈಲಿನ ಅಧಿಕಾರಿಗಳು ಸಲ್ಲಿಕೆ ಮಾಡಿದ್ದ ಅರ್ಜಿಯನ್ನು 64ನೇ ಸೆಷನ್ಸ್ ಕೋರ್ಟ್ ನಲ್ಲಿ ವಿಚಾರಣೆ ನಡೆಸಲಾಗಿದೆ. ಬುಧವಾರ ದರ್ಶನ್ ಪರ ವಕೀಲ ಸುನೀಲ್ ಕುಮಾರ್ ತಮ್ಮ ವಾದ ಮಂಡಿಸಿದ ಬಳಿಕ, ಸೆಷನ್ಸ್ ಕೋರ್ಟ್ ಸೆ.9ಕ್ಕೆ ತೀರ್ಪು ಕಾಯ್ದಿರಿಸಿದೆ.
ಇದರಿಂದಾಗ ದರ್ಶನ್ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲೇ ಇರ್ತಾರಾ ಅಥವಾ ಬಳ್ಳಾರಿ ಜೈಲಿಗೆ ಹೋಗ್ತಾರಾ ಅನ್ನೋ ನಿರ್ಧಾರ ಮುಂದಿನ ಮಂಗಳವಾರ ತಿಳಿಯಲಿದೆ.
ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಇನ್ನೇನು ವಿಚಾರಣೆ ಆರಂಭವಾಗಿದೆ. ಹಾಗಾಗಿ ದರ್ಶನ್‌ರನ್ನು ಯಾವುದೇ ಕಾರಣಕ್ಕೂ ಬೇರೆ ಜೈಲಿಗೆ ಶಿಫ್ಟ್ ಮಾಡಬಾರದು ಎಂದು ದರ್ಶನ್ ಪರ ವಕೀಲ ಸುನೀಲ್ ಕುಮಾರ್ ವಾದ ಮಂಡಿಸಿದ್ದಾರೆ. ಇನ್ನೂ ಸರ್ಕಾರದ ಪರ ವಕೀಲ ದರ್ಶನ್‌ರನ್ನು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಬೇಕು ಎಂದು ಆಗ್ರಹಿಸಿದ್ದಾರೆ. ಎರಡೂ ಪಕ್ಷಗಳ ವಾದ-ಪ್ರತಿವಾದ ಆಲಿಸಿದ ಕೋರ್ಟ್ ಸೆ.8ಕ್ಕೆ ಆದೇಶವನ್ನು ಕಾಯ್ದಿರಿಸಿದೆ.
ವಾದ ಮಾಡುವ ವೇಳೆ ಆರೋಪಿಗಳ ಪರ ವಕೀಲ ಸುನೀಲ್ ಕುಮಾರ್ ಜೈಲು ಅಧಿಕಾರಿಗಳ ನಡೆಯ ಬಗ್ಗೆ ಗಂಭೀರ ಆರೋಪಗಳನ್ನು ಮಾಡಿದರು. "ಆರೋಪಿಗಳನ್ನು ಏಕೆ ವರ್ಗಾಯಿಸಬೇಕು? ಅವರ ಮೇಲೆ ಇಷ್ಟೊಂದು ಆಸಕ್ತಿ ಯಾಕೆ?" ಎಂದು ಪ್ರಶ್ನಿಸಿದ ವಕೀಲರು, ಆರೋಪಿಗಳು ಜೈಲು ಸೇರಿದ ಎರಡೇ ದಿನಕ್ಕೆ ವರ್ಗಾವಣೆ ಅರ್ಜಿ ಸಲ್ಲಿಸಲಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಆಡಳಿತ ಮತ್ತು ಭದ್ರತೆಯ ಕಾರಣ ನೀಡಿ ವಿಚಾರಣಾಧೀನ ಕೈದಿಗಳನ್ನು ವರ್ಗಾಯಿಸಲು ನಿಯಮಗಳಲ್ಲಿ ಅವಕಾಶ ಇಲ್ಲ ಎಂದು ವಕೀಲರು ವಾದಿಸಿದರು.
ವಕೀಲ ಸುನೀಲ್ ಕುಮಾರ್, 2024ರಲ್ಲಿ ಜೈಲಿನಲ್ಲಿ ನಡೆದ ಘಟನೆಯ ಬಗ್ಗೆಯೂ ಪ್ರಸ್ತಾಪಿಸಿದರು. ಆ ಸಮಯದಲ್ಲಿ ಅಧಿಕಾರಿಗಳು ಜೈಲಿನಿಂದ ಕೆಲವು ವಸ್ತುಗಳನ್ನು ಸಾಗಿಸಿದ್ದರು ಎಂಬ ಆರೋಪದ ಮೇಲೆ ಕೆಲವರು ಅಮಾನತುಗೊಂಡಿದ್ದರು. ಈ ಹಗರಣವನ್ನು ಮುಚ್ಚಿಹಾಕಲು ಮತ್ತು ಜೈಲು ಅಧಿಕಾರಿಗಳನ್ನು ರಕ್ಷಿಸಿಕೊಳ್ಳಲು ದರ್ಶನ್ ಮತ್ತು ಇತರ ಆರೋಪಿಗಳ ವರ್ಗಾವಣೆಗೆ ಮುಂದಾಗಿದ್ದಾರೆ ಎಂದು ಅವರು ಆರೋಪಿಸಿದರು.
"ಬೇಲಿ ಎದ್ದು ಹೊಲ ಮೇಯ್ದ ಹಾಗೆ" ಎಂಬಂತೆ ಜೈಲು ಅಧಿಕಾರಿಗಳೇ ಆರೋಪ ಮುಕ್ತರಾಗಲು ಈ ನಾಟಕವಾಡುತ್ತಿದ್ದಾರೆ ಎಂದು ವಕೀಲರು ಹರಿಹಾಯ್ದರು. ದರ್ಶನ್ ಅವರೊಂದಿಗೆ ಫೋಟೋದಲ್ಲಿ ಕಾಣಿಸಿಕೊಂಡಿದ್ದವರ ಪ್ರಕರಣಕ್ಕೆ ಹೈಕೋರ್ಟ್ ತಡೆ ನೀಡಿರುವುದನ್ನು ಕೂಡ ಅವರು ಉಲ್ಲೇಖಿಸಿದರು. ಈ ಎಲ್ಲಾ ಬೆಳವಣಿಗೆಗಳು ಪ್ರಕರಣದ ದಿಕ್ಕು ತಪ್ಪಿಸುವ ಪ್ರಯತ್ನದ ಭಾಗವಾಗಿವೆ ಎಂದು ವಕೀಲರು ನ್ಯಾಯಾಲಯದ ಗಮನಕ್ಕೆ ತಂದರು.