ದಕ ಮತೀಯ ಗಲಭೆಗೆ ಬಲಿಯಾದ ನಾಲ್ವರ ಕುಟುಂಬಕ್ಕಿಂದು ₹25 ಲಕ್ಷರೂ. ಪರಿಹಾರ

By Kannadaprabha News  |  First Published Jun 18, 2023, 5:34 AM IST

ದ.ಕ.ಜಿಲ್ಲೆಯಲ್ಲಿ ಈ ಹಿಂದೆ ಮತೀಯ ದುಷ್ಕರ್ಮಿಗಳಿಂದ ಹತ್ಯೆಗೊಳಗಾದ ನಾಲ್ವರ ಕುಟುಂಬಕ್ಕೆ ಈಗಿನ ಸರ್ಕಾರ ತಲಾ 25 ಲಕ್ಷ ರು.ಗಳ ಪರಿಹಾರ ಘೋಷಿಸಿದೆ. ಜೂ.18ರಂದು ಬೆಂಗಳೂರಿನಲ್ಲಿ ಸಿಎಂ ಪರಿಹಾರ ಮೊತ್ತ ಹಸ್ತಾಂತರಿಸಲಿದ್ದಾರೆ.


ಮಂಗಳೂರು (ಜೂ.18) :: ದ.ಕ.ಜಿಲ್ಲೆಯಲ್ಲಿ ಈ ಹಿಂದೆ ಮತೀಯ ದುಷ್ಕರ್ಮಿಗಳಿಂದ ಹತ್ಯೆಗೊಳಗಾದ ನಾಲ್ವರ ಕುಟುಂಬಕ್ಕೆ ಈಗಿನ ಸರ್ಕಾರ ತಲಾ 25 ಲಕ್ಷ ರು.ಗಳ ಪರಿಹಾರ ಘೋಷಿಸಿದೆ. ಜೂ.18ರಂದು ಬೆಂಗಳೂರಿನಲ್ಲಿ ಸಿಎಂ ಪರಿಹಾರ ಮೊತ್ತ ಹಸ್ತಾಂತರಿಸಲಿದ್ದಾರೆ. ಮತೀಯ ಹತ್ಯೆ ಘಟನೆ ಬಳಿಕ ಹತ್ಯೆಗೆ ಒಳಗಾದ ನಾಲ್ವರ ಪೈಕಿ ಮೂವರ ಕುಟುಂಬ ಮೊದಲಿನ ವಾಸ್ತವ್ಯದ ಮನೆ ಬಿಟ್ಟು ಬೇರೆ ಕಡೆಯಲ್ಲಿ ವಾಸಿಸುತ್ತಿದೆ. ಮೃತಪಟ್ಟವರ ಕುಟುಂಬ ಇನ್ನೊಬ್ಬರ ಪೋಷಣೆಯಲ್ಲಿ ಜೀವನ ಸಾಗಿಸುವಂತಾಗಿದೆ.

ಬಿಜೆಪಿ ಕಾರ್ಯಕರ್ತನಿಗೂ ಪರಿಹಾರ:

Tap to resize

Latest Videos

ಮತೀಯ ದುಷ್ಕರ್ಮಿಗಳಿಂದ ಹತ್ಯೆಗೆ ಒಳಗಾದವರ ಪೈಕಿ ಕಾಟಿಪಳ್ಳ ನಿವಾಸಿ ದೀಪಕ್‌ ರಾವ್‌ ಬಿಜೆಪಿ ಪದಾಧಿಕಾರಿಯಾಗಿದ್ದರು. ದೀಪಕ್‌ ರಾವ್‌ ಸೇರಿದಂತೆ ಮಸೂದ್‌, ಮೊಹಮ್ಮದ್‌ ಫಾಜಿಲ್‌ ಹಾಗೂ ಅಬ್ದುಲ್‌ ಜಲೀಲ್‌ ಕುಟುಂಬಕ್ಕೆ ಈಗ ಸರ್ಕಾರ ತಲಾ 25 ಲಕ್ಷ ರು.ಗಳ ಪರಿಹಾರ ಘೋಷಿಸಿದೆ. ಇವರಲ್ಲಿ ದೀಪಕ್‌ ರಾವ್‌ ಹೊರತುಪಡಿಸಿ ಉಳಿದ ಮೂರು ಮಂದಿಯ ಕುಟುಂಬಕ್ಕೆ ಪರಿಹಾರ ನೀಡುವಂತೆ ಈ ಹಿಂದೆಯೇ ಕಾಂಗ್ರೆಸ್‌ ಹಾಗೂ ಮುಸ್ಲಿಂ ಸಂಘಟನೆಗಳು ಆಗ್ರಹಿಸಿದ್ದವು. ಪ್ರವೀಣ್‌ ನೆಟ್ಟಾರು ಕುಟುಂಬಕ್ಕೆ ಸರ್ಕಾರ 25 ಲಕ್ಷ ರು. ಪರಿಹಾರ ನೀಡಿತ್ತು. ಆದರೆ ಈ ನಾಲ್ವರ ಕುಟುಂಬಕ್ಕೂ ವಿವಿಧ ಸಂಘಟನೆಗಳು ಹಾಗೂ ಸಾರ್ವಜನಿಕರಿಂದ ಸುಮಾರು 60ರಿಂದ 70 ಲಕ್ಷ ರು.ಗಳಷ್ಟುನೆರವಿನ ಮೊತ್ತ ಹರಿದುಬಂದಿತ್ತು. ಅಲ್ಲದೆ ಮುಸ್ಲಿಂ ಸೆಂಟ್ರಲ್‌ ಕಮಿಟಿ ಸಂತ್ರಸ್ತ ಮುಸ್ಲಿಂ ಕುಟುಂಬಗಳಿಗೆ ತಲಾ 30 ಲಕ್ಷ ರು.ಗಳ ಪರಿಹಾರ ಮೊತ್ತ ನೀಡಿತ್ತು. ಮಾತ್ರವಲ್ಲ ಜೆಡಿಎಸ್‌ನಿಂದ ತಲಾ 5 ಲಕ್ಷ ರು.ಗಳ ನೆರವು ನೀಡಲಾಗಿತ್ತು.

 

ಕೋಮು ಉದ್ವಿಗ್ನತೆಯ ವಾತಾವರಣದಲ್ಲಿರುವುದು ನಾಗರಿಕರ ಜೀವಿಸುವ ಹಕ್ಕಿನ ಉಲ್ಲಂಘನೆ: Supreme Court

ದೀಪಕ್‌ ರಾವ್‌ ಕುಟುಂಬ ಸ್ಥಳಾಂತರ: ದೀಪಕ್‌ ರಾವ್‌ ಹತ್ಯೆ ಬಳಿಕ ಅವರ ಜತೆ ಇದ್ದ ತಾಯಿ ಮತ್ತು ಸಹೋದರ ಕೃಷ್ಣಾಪುರದಿಂದ ಬೇರೆ ಕಡೆಗೆ ಸ್ಥಳಾಂತರಗೊಂಡಿದ್ದಾರೆ. ದೀಪಕ್‌ ರಾವ್‌ ಅವರ ಸಹೋದರ ಸತೀಶ್‌ಗೆ ಬಾಯಿ ಬರುತ್ತಿಲ್ಲ, ಕಿವಿಯೂ ಕೇಳುತ್ತಿಲ್ಲ.

ದೀಪಕ್‌ ರಾವ್‌ ಕುಟುಂಬಕ್ಕೆ ಆಗಿನ ಮಂಗಳೂರು ಉತ್ತರ ಶಾಸಕರಾಗಿದ್ದ ಮೊಯ್ದಿನ್‌ ಬಾವಾ ಅವರು 5 ಲಕ್ಷ ರು. ಪರಿಹಾರ ಮೊತ್ತ ನೀಡಲು ಮುಂದಾಗಿದ್ದರು. ಆದರೆ ಕುಟುಂಬಸ್ಥರು ಅದನ್ನು ತಿರಸ್ಕರಿಸಿದ್ದರು. ಸಂಗ್ರಹವಾದ ಮೊತ್ತದಲ್ಲಿ 35 ಲಕ್ಷ ರು.ಗಳಲ್ಲಿ ಕಾಟಿಪಳ್ಳದಲ್ಲಿ ಸ್ವಂತ ಮನೆ ನಿರ್ಮಿಸಿದ್ದರು. ಆದರೆ ದೀಪಕ್‌ ರಾವ್‌ನ ತಾಯಿ ಹಾಗೂ ತಮ್ಮ ಇಬ್ಬರೇ ಇರುವುದರಿಂದ ಕಾರ್ಕಳದಲ್ಲಿರುವ ಸಂಬಂಧಿಕರ ಮನೆಯಲ್ಲಿ ವಾಸವಿದ್ದಾರೆ. ಕಾಟಿಪಳ್ಳದ ಹೊಸ ಮನೆಯನ್ನು ಸದ್ಯ ಬಾಡಿಗೆ ನೀಡಿದ್ದಾರೆ. ಪ್ರಸಕ್ತ ತಾಯಿ ಅನಾರೋಗ್ಯದಿಂದಿದ್ದು, ಸತೀಶ್‌ ಮನೆಯಲ್ಲೇ ಇದ್ದಾರೆ ಎನ್ನುತ್ತಾರೆ ದೀಪಕ್‌ ರಾವ್‌ ಅವರ ಸಹೋದರ ವಿನೋದ್‌.

ಇಬ್ಬರ ಕುಟುಂಬ ಬೇರೆ ಕಡೆಗೆ: ಮತೀಯ ದುಷ್ಕರ್ಮಿಗಳಿಂದ ಸುಳ್ಯ ಬೆಳ್ಳಾರೆಯ ಮಸೂದ್‌ 2022 ಜು.19ರಂದು ಹತ್ಯೆಗೀಡಾದರೆ, ಜು.28ರಂದು ಸುರತ್ಕಲ್‌ನಲ್ಲಿ ಮೊಹಮ್ಮದ್‌ ಫಾಜೀಲ್‌ ಕೊಲೆಯಾಗಿದ್ದರು. ಡಿ.24ರಂದು ಅಬ್ದುಲ್‌ ಜಲೀಲ್‌ನ್ನು ಕಾಟಿಪಳ್ಳದಲ್ಲಿ ಹತ್ಯೆ ಮಾಡಲಾಗಿತ್ತು. ಈ ಮೂವರ ಪೈಕಿ ಫಾಜೀಲ್‌ ಕುಟುಂಬ ಬಾಳ ಗ್ರಾಮದ ಮಂಗಳಪೇಟೆಯಲ್ಲಿದೆ.

ಮಸೂದ್‌ನ ಮೂಲ ಚಿಕ್ಕಮಗಳೂರಿನ ಮೂಡಿಗೆರೆಯ ದಾರದಹಳ್ಳಿ. ಬೆಳ್ಳಾರೆಯಲ್ಲಿ ಅಜ್ಜಿ ಮನೆಯಲ್ಲಿ ತಾಯಿ ಹಾಗೂ ಸಹೋದರರ ಜತೆ ಈತ ವಾಸವಿದ್ದು, ಕೂಲಿ ಕೆಲಸ ಮಾಡುತ್ತಿದ್ದ. ಮಸೂದ್‌ ಹತ್ಯೆ ಬಳಿಕ ಈತನ ಕುಟುಂಬ ಮೂಡಿಗೆರೆಗೆ ತೆರಳಿದೆ. ಸದ್ಯ ಈತನ ತಾಯಿ ಸಾರಮ್ಮ ಕೂಲಿ ಕೆಲಸ ಮಾಡಿ ಜೀವನ ನಡೆಸುತ್ತಿದ್ದಾರೆ. ಸುಳ್ಯ ಮುಸ್ಲಿಂ ಜಮಾತ್‌ ಸಮಿತಿ ಹಾಗೂ ಅವಿಭಜಿತ ದ.ಕ. ಮುಸ್ಲಿಂ ಶಿಕ್ಷಣ ಸಂಸ್ಥೆಗಳ ಒಕ್ಕೂಟ ಸೇರಿ ಬೆಳ್ಳಾರೆಯಲ್ಲಿ ಸ್ವಂತ ಮನೆ ನಿರ್ಮಿಸಿದೆ. ಈ ಮನೆಗೆ ಮಸೂದ್‌ ಕುಟುಂಬ ಇನ್ನೂ ಆಗಮಿಸಿಲ್ಲ.

ಅಬ್ದುಲ್‌ ಜಲೀಲ್‌ ಹತ್ಯೆಗೂ ಮುನ್ನ ಕೃಷ್ಣಾಪುರದಲ್ಲಿ ಬಾಡಿಗೆ ಅಂಗಡಿ ನಡೆಸುತ್ತಿದ್ದರು. ಇವರ ಪತ್ನಿ ದಿಲ್ಶಾದ್‌ ಹಾಗೂ ಒಂದೂವರೆ ವರ್ಷದ ಮಗುವಿನ ಜತೆ ಸಂಬಂಧಿಕರ ಮನೆಯಲ್ಲಿದ್ದಾರೆ. ಕಾಟಿಪಳ್ಳದ ಬದ್ರಿಯಾ ಜುಮ್ಮಾ ಮಸೀದಿ ಮುಸ್ಲಿಂ ಜಮಾತ್‌ನಿಂದ ಫ್ಲ್ಯಾಟ್‌ವೊಂದರಲ್ಲಿ ಮನೆ ಖರೀದಿಸಿ ನೀಡಲಾಗಿದೆ. ಅದಕ್ಕೆ ಇನ್ನೂ ಈ ಕುಟುಂಬ ಸ್ಥಳಾಂತರಗೊಂಡಿಲ್ಲ ಎನ್ನುತ್ತಾರೆ ಜಮಾತ್‌ ಅಧ್ಯಕ್ಷ ಮುಮ್ತಾಜ್‌ ಆಲಿ.

ಶರತ್‌ ಮಡಿವಾಳ, ಬಶೀರ್‌ಗೆ ಗರಿಷ್ಠ ಪರಿಹಾರ ಯಾಕಿಲ್ಲ?

2017 ಜು.4ರಂದು ಆರ್‌ಎಸ್‌ಎಸ್‌ ಕಾರ್ಯಕರ್ತ ಶರತ್‌ ಮಡಿವಾಳ ಅವರನ್ನು ಬಿ.ಸಿ.ರೋಡ್‌ನ ಲ್ಯಾಂಡ್ರಿಯಲ್ಲಿ ಇರುವಾಗಲೇ ದುಷ್ಕರ್ಮಿಗಳು ಇರಿದು ಹತ್ಯೆ ಮಾಡಿದ್ದರು. ಇವರ ಕುಟುಂಬಕ್ಕೆ ಸಾಂತ್ವನ ಬಿಟ್ಟರೆ ಸರ್ಕಾರದಿಂದ ಯಾವುದೇ ಗರಿಷ್ಠ ಮೊತ್ತದ ಪರಿಹಾರ ಸಿಕ್ಕಿಲ್ಲ.

ಮೀನುಗಾರರಿಗೆ ಪರಿಹಾರ ವಿಳಂಬವಾದರೆ ಅಧಿಕಾರಿಗಳೇ ಹೊಣೆ: ಸಚಿವ ಮಾಂಕಾಳ ವೈದ್ಯ

ಸುರತ್ಕಲ್‌ನಲ್ಲಿ ದೀಪಕ್‌ ರಾವ್‌ ಕೊಲೆ ಘಟನೆ ನಡೆದ ದಿನ 2018 ಜ.3ರಂದು ರಾತ್ರಿ ಮಂಗಳೂರಿನ ಕೊಟ್ಟಾರ ಚೌಕಿಯಲ್ಲಿ ಮಿನಿ ಕ್ಯಾಂಟಿನ್‌ ನಡೆಸುತ್ತಿದ್ದ ಅಬ್ದುಲ್‌ ಬಶೀರ್‌ ಆಕಾಶಭವನ ಇವರ ಹತ್ಯೆ ಕೂಡ ನಡೆದಿತ್ತು. ಬಶೀರ್‌ ಕುಟುಂಬಕ್ಕೆ ಮುಸ್ಲಿಂ ಸೆಂಟ್ರಲ್‌ ಕಮಿಟಿ 30 ಲಕ್ಷ ರು., ಜೆಡಿಎಸ್‌ನಿಂದ 5 ಲಕ್ಷ ರು. ಪರಿಹಾರ ನೀಡಿದ್ದು ಬಿಟ್ಟರೆ ಸರ್ಕಾರದಿಂದ ಗರಿಷ್ಠ ಮೊತ್ತದ ಪರಿಹಾರ ಸಿಕ್ಕಿಲ್ಲ ಎನ್ನುತ್ತಾರೆ ಕುಟುಂಬಸ್ಥರು. ಈ ನಡುವೆ 2017 ಜೂ.21ರಂದು ಬೆಂಜನಪದವಿನಲ್ಲಿ ದುಷ್ಕರ್ಮಿಗಳಿಂದ ಕೊಲೆಯಾದ ಎಸ್‌ಡಿಪಿಐ ವಲಯ ಅಧ್ಯಕ್ಷ ಅಶ್ರಫ್‌ ಕಲಾಯಿ ಕುಟುಂಬಕ್ಕೂ ಪರಿಹಾರ ನೀಡುವಂತೆ ಆಗ್ರಹ ಕೇಳಿಬರಲಾರಂಭಿಸಿದೆ.

click me!