ಶಕ್ತಿ ಯೋಜನೆ: ಶ್ರೀ ಧರ್ಮಸ್ಥಳಕ್ಕೆ ಹರಿದು ಬರುತ್ತಿರುವ ಮಹಿಳಾ ಭಕ್ತರ ದಂಡು

By Kannadaprabha News  |  First Published Jun 18, 2023, 1:40 AM IST

‘ಶಕ್ತಿ’ ಯೋಜನೆಯಿಂದಾಗಿ ಉಚಿತ ಪ್ರಯಾಣ ಮಾಡಿ ಪುಣ್ಯ ಕ್ಷೇತ್ರಗಳಿಗೆ ಮಹಿಳೆಯರು ಸಾಗರೋಪಾದಿಯಲ್ಲಿ ಬರುತ್ತಿದ್ದಾರೆ. ತಾಲೂಕಿನ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಎಲ್ಲೆಂದರಲ್ಲಿ ಮಹಿಳೆಯರೇ ತುಂಬಿಹೋಗಿದ್ದಾರೆ. 


ಬೆಳ್ತಂಗಡಿ (ಜೂ.18): ‘ಶಕ್ತಿ’ ಯೋಜನೆಯಿಂದಾಗಿ ಉಚಿತ ಪ್ರಯಾಣ ಮಾಡಿ ಪುಣ್ಯ ಕ್ಷೇತ್ರಗಳಿಗೆ ಮಹಿಳೆಯರು ಸಾಗರೋಪಾದಿಯಲ್ಲಿ ಬರುತ್ತಿದ್ದಾರೆ. ತಾಲೂಕಿನ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಎಲ್ಲೆಂದರಲ್ಲಿ ಮಹಿಳೆಯರೇ ತುಂಬಿಹೋಗಿದ್ದಾರೆ. ವಾರಾಂತ್ಯ ಹಿನ್ನೆಲೆಯಲ್ಲಿ ಹೆಚ್ಚಿನ ಎಲ್ಲ ಸರ್ಕಾರಿ ಬಸ್‌ಗಳಲ್ಲಿ ಮಹಿಳಾ ಭಕ್ತರೇ ಅಧಿಕ ಸಂಖ್ಯೆಯಲ್ಲಿ ಧರ್ಮಸ್ಥಳಕ್ಕೆ ಆಗಮಿಸಿ ದೇವರ ದರ್ಶನ ಪಡೆದರು.

ಉತ್ತರ ಕರ್ನಾಟಕದಿಂದ ಅತಿ ಹೆಚ್ಚು ಮಹಿಳಾ ಭಕ್ತರು ಆಗಮಿಸಿದ್ದು, ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಮಾಡಿ, ಅನ್ನಛತ್ರದಲ್ಲಿ ಭೋಜನ ಪ್ರಸಾದ ಸ್ವೀಕರಿಸಿ ಅಲ್ಲಿಂದ ಸುಬ್ರಹ್ಮಣ್ಯನ ದರ್ಶನಕ್ಕೆ ಸರ್ಕಾರಿ ಬಸ್‌ಗಳಲ್ಲೇ ಪ್ರಯಾಣ ಮಾಡುತ್ತಿದ್ದಾರೆ. ಭಾನುವಾರ ಮಣ್ಣೆತ್ತಿನ ಅಮಾವಾಸ್ಯೆಯಾಗಿರುವುದರಿಂದಲೂ ಮಹಿಳೆಯರ ಸಂಖ್ಯೆ ಅಧಿಕವಾಗಿದೆ.

Tap to resize

Latest Videos

ಮರಳು ಮಾಫಿಯಾಗೆ ಪೇದೆ ಬಲಿ: ಕರ್ತವ್ಯ ನಿರ್ಲಕ್ಷ ಆರೋಪದಡಿ ಮೂವರು ಪೊಲೀಸರ ಅಮಾನತ್ತು

ಶನಿವಾರ ಧರ್ಮಸ್ಥಳಕ್ಕೆ ಹುಬ್ಬಳ್ಳಿಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಬಂದಿದ್ದು ಎಲ್ಲ ಬಸ್‌ಗಳು ತುಂಬಿ ತುಳುಕುತ್ತಿದ್ದವು. ಬಸ್‌ ಹತ್ತಲು ಮತ್ತು ಇಳಿಯಲು ಮಹಿಳೆಯರೇ ಹರಸಾಹಸ ಪಡುತ್ತಿದ್ದುದು ಕಂಡುಬಂತು. ಪ್ರಯಾಣಿಕರ ಸಂಖ್ಯೆ ಹೆಚ್ಚಾದ ಹಿನ್ನೆಲೆಯಲ್ಲಿ 8 ಹೆಚ್ಚುವರಿ ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ಧರ್ಮಸ್ಥಳದಿಂದ ಸುಬ್ರಹ್ಯಣ್ಯಕ್ಕೆ ಬಿಡಲಾಗಿದೆ.

ಮೊದಲ ಬಾರಿಗೆ ಬಂದ ಯುವತಿ: ಉಚಿತ ಬಸ್‌ ಪ್ರಯಾಣ ಹಿನ್ನೆಲೆಯಲ್ಲಿ ಮಹಿಳೆಯೊಬ್ಬರು ಇದೇ ಮೊದಲ ಬಾರಿಗೆ ಧರ್ಮಸ್ಥಳಕ್ಕೆ ಆಗಮಿಸಿದ್ದು ಸಂತಸದಿಂದಿರುವುದು ಕಂಡು ಬಂತು. ನಾನು ಇದೇ ಮೂದಲ ಬಾರಿಗೆ ಧರ್ಮಸ್ಥಳಕ್ಕೆ ಬಂದಿದ್ದೇನೆ. ಈ ಹಿಂದೆ ಇಲ್ಲಿಗೆ ಬರಲು ಆಗಿರಲಿಲ್ಲ. ಇದೀಗ ರಾಜ್ಯ ಸರ್ಕಾರದ ಶಕ್ತಿ ಯೋಜನೆಯಿಂದ ಕುಟುಂಬ ಸಮೇತ ದೇವಸ್ಥಾನಕ್ಕೆ ಬಂದಿದ್ದೇವೆ. ಸರ್ಕಾರದ ಯೋಜನೆ ಬಗ್ಗೆ ಖುಷಿಯಾಗ್ತಾ ಇದೆ, ಒಳ್ಳೆಯ ಯೋಜನೆ. ಆದರೆ ಬಸ್‌ಗಳಲ್ಲಿ ಫುಲ್‌ ರಶ್‌ ಆಗುತ್ತಿದೆ. ಅದೊಂದು ಬಿಟ್ಟರೆ ಬಹುತೇಕ ಪ್ರಯಾಣ ಖುಷಿಯಾಯಿತು. ದೇವರ ದರ್ಶನ ಪಡೆಯಲು ಈ ಮೂಲಕ ಅವಕಾಶ ಸಿಕ್ಕಿದ್ದು ಸಂತಸ ತಂದಿದೆ ಎಂದರು.

ಇನ್ನೊಂದೆಡೆ ಕಿಟಕಿ ಬದಿಯ ಸೀಟಿಗಾಗಿ ನೂಕಾಟ-ತಳ್ಳಾಟ ನಡೆದಿರುವುದು ಕಂಡು ಬಂದಿದೆ. ಸೀಟಿನ ಬದಿಯ ಕಬ್ಬಿಣದ ಕಂಬಿಯನ್ನೇ ಕಿತ್ತು ಹಾಕಿದ ಘಟನೆಯೂ ನಡೆದಿದೆ. ಇನ್ನು ಒಂದೇ ಬಾಗಿಲು ಇರುವ ಬಸ್‌ಗಳಲ್ಲಂತೂ ಹತ್ತಲು ಮತ್ತು ಇಳಿಯಲು ರಂಪಾಟವೇ ನಡೆದಿದೆ. ಪ್ರತಿ ಐದು ನಿಮಿಷಕ್ಕೊಂದು ಬಸ್‌ ಇದ್ದರೂ ಭಾರೀ ಜನಜಂಗುಳಿ ಕಂಡುಬಂತು. ಕಾಲಿಡಲೂ ಜಾಗವಿಲ್ಲದಂತೆ ಬಸ್‌ಗಳು ತುಂಬಿ ಹೋಗಿದ್ದವು.

ಉತ್ತರ ಕರ್ನಾಟಕ ಭಾಗದಿಂದ ಹೆಚ್ಚು ಪ್ರಯಾಣ: ಉಚಿತ ಪ್ರಯಾಣ ಬಳಿಕ ಪುಣ್ಯಕ್ಷೇತ್ರಗಳ ದರ್ಶನಕ್ಕೆ ಮಹಿಳೆಯರು ಹೊರಡುತ್ತಿದ್ದು ಅದರಲ್ಲೂ ಉತ್ತರ ಕರ್ನಾಟಕ ಭಾಗದಿಂದ ಹೆಚ್ಚು ಮಹಿಳೆಯರು ಧರ್ಮಸ್ಥಳ ಶ್ರೀ ಮಂಜುನಾಥನ ದರ್ಶನಕ್ಕೆ ಸಾಗರೋಪಾದಿಯಲ್ಲಿ ಬರುತ್ತಿದ್ದಾರೆ.  ಹೀಗಾಗಿ ಈ ಮಾರ್ಗದ ಎಲ್ಲ ಬಸ್ ಗಳು ಪ್ರಯಾಣಿಕರಿಂದ ತುಂಬಿತುಳುಕುತ್ತಿವೆ. ಬೆಂಗಳೂರು, ಮೈಸೂರು, ಕೋಲಾರ, ತುಮಕೂರು ಭಾಗದಿಂದಲೂ ಬಂದ ಮಹಿಳಾ ಭಕ್ತರು. 

ಬಿಜೆಪಿ ಮುಖಂಡರಿಂದಲೇ ಪಕ್ಷಕ್ಕೆ ಸೋಲು: ಸಂಸದ ಮುನಿಸ್ವಾಮಿ ಬೇಸರ

ಇದೀಗ ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಎಲ್ಲಿ ನೋಡಿದರೂ ಮಹಿಳಾ ಭಕ್ತರೇ ಕಾಣಿಸುತ್ತಿದ್ದಾರೆ. ಮಂಜುನಾಥ ಸ್ವಾಮಿಯ ದರ್ಶನ ಪಡೆದು‌ ಕುಕ್ಕೆಯತ್ತ ತೆರಳುತ್ತಿರುವ ಮಹಿಳಾ ಭಕ್ತರು. ಹೀಗಾಗಿ ಧರ್ಮಸ್ಥಳದಿಂದ ಕುಕ್ಕೆ ಸುಬ್ರಹ್ಮಣ್ಯಕ್ಕೆ ಹೋಗೋ ಬಸ್ ಗಳಲ್ಲೂ ಮಹಿಳಾ ಭಕ್ತರ ರಶ್.  ಮಣ್ಣೆತ್ತಿನ ಅಮವಾಸ್ಯೆ ಹಿನ್ನೆಲೆಯಲ್ಲಿಯೂ ಹೆಚ್ಚಾಗಿ ಬಂದಿರುವ ಭಕ್ತ ಸಮೂಹ. ಒಟ್ಟಿನಲ್ಲಿ ರಾಜ್ಯ ಸರ್ಕಾರ ಶಕ್ತಿ ಯೋಜನೆಯಿಂದ ತೀರ್ಥಕ್ಷೇತ್ರಗಳು, ಪ್ರವಾಸಿತಾಣಗಳಿಗೂ ಹೊಸ ಚೈತನ್ಯ ಬಂದಂತಾಗಿದೆ. ಉಚಿತ ಪ್ರಯಾಣದ ಪರಿಣಾಮ ಪ್ರವಾಸೋದ್ಯಮಕ್ಕೂ ಅನುಕೂಲವಾಗಿದೆ.

click me!