Omicron Variant: ವಿದೇಶದಿಂದ ಬರೋರಿಗೆ ಸಾಂಸ್ಥಿಕ ಕ್ವಾರಂಟೈನ್‌ ಸದ್ಯಕ್ಕಿಲ್ಲ

By Kannadaprabha News  |  First Published Dec 19, 2021, 7:05 AM IST

*   ಸಾಂಸ್ಥಿಕ ಕ್ವಾರಂಟೈನ್‌ ಜಾರಿಗೆ ತರಲಿದೆ ಎಂಬ ಚರ್ಚೆ
*   ಕೇಂದ್ರ, ರಾಜ್ಯ ಸರ್ಕಾರದ ಮಾರ್ಗಸೂಚಿ ಪ್ರಕಾರ ಕ್ರಮ 
*   ತಾತ್ಕಾಲಿಕ ಆಸ್ಪತ್ರೆಯಲ್ಲಿ ಒಮಿಕ್ರೋನ್‌ ಚಿಕಿತ್ಸೆ


ಬೆಂಗಳೂರು(ಡಿ.19): ವಿದೇಶಗಳಿಂದ(Foreign) ನಿತ್ಯ ಸಾವಿರಾರು ಮಂದಿ ಆಗಮಿಸುತ್ತಿರುವುದರಿಂದ ಎಲ್ಲರಿಗೂ ಸಾಂಸ್ಥಿಕ ಕ್ವಾರಂಟೈನ್‌(Institutional Quarantine) ಕಲ್ಪಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಸಾಂಸ್ಥಿಕ ಕ್ವಾರಂಟೈನ್‌ ಮಾಡಬೇಕೇ ಅಥವಾ ಬೇಡವೇ ಎಂಬ ಜಿಜ್ಞಾಸೆಗೆ ಬಿಬಿಎಂಪಿ(BBMP)  ಸಿಲುಕಿದೆ.

ವಿದೇಶದಿಂದ ಬಂದು ಹೋಂ ಕ್ವಾರಂಟೈನ್‌(Home Quarantine) ಇರುವವರಲ್ಲಿ ಎರಡು ಮೂರು ದಿನಕ್ಕೆ ಸೋಂಕು ಕಾಣಿಸಿಕೊಳ್ಳುತ್ತಿದೆ. ಜೊತೆಗೆ ಒಮಿಕ್ರೋನ್‌(Omicron) ಪತ್ತೆಯಾಗುತ್ತಿರುವುದು ಬಿಬಿಎಂಪಿಯನ್ನು ಚಿಂತೆಗೀಡು ಮಾಡಿದೆ. ವಿದೇಶದಿಂದ ಬಂದು ಹೋಂ ಕ್ವಾರಂಟೈನ್‌ನಲ್ಲಿ ಇರುವವರಲ್ಲಿ ಸೋಂಕು ದೃಢಪಡುತ್ತಿದ್ದರೆ, ರಾಜ್ಯ ಸರ್ಕಾರ ಈ ಹಿಂದಿನಂತೆ ಸಾಂಸ್ಥಿಕ ಕ್ವಾರಂಟೈನ್‌ ಜಾರಿಗೆ ತರಲಿದೆ ಎಂಬ ಚರ್ಚೆ ಮುನ್ನೆಲೆಗೆ ಬಂದಿತ್ತು.
ಈ ಹಿಂದಿನಂತೆ ಬಿಬಿಎಂಪಿ ಕೂಡ ಸಾಂಸ್ಥಿಕ ಕ್ವಾರಂಟೈನ್‌ ಜಾರಿಗೆ ತರಲಿದೆ ಎಂಬ ಚರ್ಚೆಗಳು ಆರಂಭಗೊಂಡಿತ್ತು. ಆದರೆ ಇದೀಗ ಹೈ ರಿಸ್ಕ್‌ ದೇಶಗಳು ಸೇರಿದಂತೆ ಯಾವುದೇ ದೇಶಗಳಿಂದ ಬರುವ ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಈವರೆಗೆ ಕಡ್ಡಾಯ ಸಾಂಸ್ಥಿಕ ಕ್ವಾರಂಟೈನ್‌ ನಿಗದಿಪಡಿಸಿಲ್ಲ ಎಂದು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯು(ಬಿಬಿಎಂಪಿ) ಸ್ಪಷ್ಟಪಡಿಸಿದೆ.

Latest Videos

undefined

Covid 19 Variant: ಕ್ರಿಸ್‌ಮಸ್‌, ಹೊಸ ವರ್ಷಾಚರಣೆಗೆ ಬೀಳುತ್ತಾ ಬ್ರೇಕ್‌?

ವಿದೇಶಗಳು ಒಳಗೊಂಡಂತೆ ಹೈ ರಿಸ್ಕ್‌ ದೇಶಗಳಿಂದ ಬರುವವರನ್ನು ತಕ್ಷಣ ಸಾಂಸ್ಥಿಕ ಕ್ವಾರಂಟೈನ್‌ಗೆ ಒಳಪಡಿಸುವಂತೆ ಹಲವು ಸಲಹೆಗಳು ಬಂದಿದ್ದರೂ ಈ ಬಗ್ಗೆ ಯಾವುದೇ ಕ್ರಮಕೈಗೊಂಡಿಲ್ಲ. ಬಿಬಿಎಂಪಿಯು ಕಡ್ಡಾಯ ಸಾಂಸ್ಥಿಕ ಕ್ವಾರಂಟೈನ್‌ ಅನ್ನು ಇದುವರೆಗೆ ನಿಗದಿಪಡಿಸಿಲ್ಲ. ಆದರೆ, ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಕೋವಿಡ್‌ ಪರೀಕ್ಷೆ(Covid Test) ಮತ್ತು ಸೋಂಕಿನ ಲಕ್ಷಣಗಳ ಬಗ್ಗೆ ತಪಾಸಣೆ ನಡೆಸಲು ಕ್ರಮಗಳನ್ನು ಕೈಗೊಳ್ಳಲಾಗಿದೆ. ಆರ್‌ಟಿಪಿಸಿಆರ್‌ ಪರೀಕ್ಷೆಯಲ್ಲಿ ಪಾಸಿಟಿವ್‌ ದೃಢಪಟ್ಟರೆ ತಕ್ಷಣವೇ ಆಸ್ಪತ್ರೆಯಲ್ಲಿ ಐಸೋಲೇಷನ್‌ ಮಾಡಲಾಗುತ್ತಿದೆ. ಉಳಿದವರಿಗೆ ಮನೆಗಳಲ್ಲಿಯೇ ಸ್ವಯಂ ಪ್ರೇರಿತ ಐಸೋಲೇಷನ್‌ ಮತ್ತು ಎಂಟು ದಿನಗಳ ಬಳಿಕ ಮತ್ತೆ ಪರೀಕ್ಷೆಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದೆ.

ಕೋವಿಡ್‌-19(Covid-19) ಜಾಗತಿಕ ಸಾಂಕ್ರಾಮಿಕವಾಗಿದ್ದು, ಈ ವೈರಸ್‌ ಹೊಸ ರೂಪಾಂತರಿಯು ದಕ್ಷಿಣ ಆಫ್ರಿಕಾ, ಇಂಗ್ಲೆಂಡ್‌ ಸೇರಿದಂತೆ 12 ದೇಶಗಳಲ್ಲಿದೆ. ಈ ದೇಶಗಳನ್ನು ಹೈರಿಸ್ಕ್‌ ದೇಶಗಳೆಂದು ಗುರುತಿಸಲಾಗಿದ್ದು, ಒಮಿಕ್ರೋನ್‌ ತಳಿಯ ಹರಡುವಿಕೆಯನ್ನು ನಿಯಂತ್ರಣಕ್ಕೆ ಕ್ರಮಗಳನ್ನು ನಿಗದಿಪಡಿಸಿದ್ದೇವೆ. ಸಾಂಸ್ಥಿಕ ಕ್ವಾರಂಟೈನ್‌ ಬಗ್ಗೆ ಯಾವುದೇ ನಿರ್ಧಾರವನ್ನು ತಜ್ಞರೊಂದಿಗೆ ಸಮಾಲೋಚಿಸಿ ಮತ್ತು ಕೇಂದ್ರ, ರಾಜ್ಯ ಸರ್ಕಾರದ(Government of Karnataka) ಮಾರ್ಗಸೂಚಿ(Guidelines) ಪ್ರಕಾರ ಕೈಗೊಳ್ಳಲಾಗುತ್ತದೆ. ಸದ್ಯಕ್ಕೆ ಬಿಬಿಎಂಪಿ ಸಾಂಸ್ಥಿಕ ಕ್ವಾರಂಟೈನ್‌ ಕಡ್ಡಾಯಗೊಳಿಸಿಲ್ಲ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್‌ ಗುಪ್ತಾ ತಿಳಿಸಿದ್ದಾರೆ.

ಮೊದಲ ಮತ್ತು ಎರಡನೇ ಅಲೆ ಸಂದರ್ಭದಲ್ಲಿ ವಿದೇಶದಿಂದ ಬಂದವನ್ನು ಸಾಂಸ್ಥಿಕ ಕ್ವಾರಂಟೈನ್‌ನಲ್ಲಿಟ್ಟು ಆ ನಂತರ ಮನೆಗಳಿಗೆ ಪ್ರವೇಶ ನೀಡಲು ಅನುಮತಿ ಕೊಡಲಾಗುತ್ತಿತ್ತು. ಆದರೆ ಈಗ ಒಮಿಕ್ರೋನ್‌ ಭೀತಿ ಇದ್ದರೂ ನೇರವಾಗಿ ಹೋಂ ಐಸೋಲೇಷನ್‌ಗೆ ಅನುಮತಿ ಕೊಟ್ಟಿರುವುದು ಆತಂಕಕ್ಕೆ ಕಾರಣವಾಗಿದೆ.

Omicron Variant: ಬೆಂಗ್ಳೂರಲ್ಲಿ ತಾಯಿ-ಮಗನಿಗೆ ಒಮಿಕ್ರೋನ್‌: ಸಾಮೂಹಿಕ ಪರೀಕ್ಷೆ

ತಾತ್ಕಾಲಿಕ ಆಸ್ಪತ್ರೆಯಲ್ಲಿ ಒಮಿಕ್ರೋನ್‌ ಚಿಕಿತ್ಸೆ

ಮೂರನೇ ಅಲೆ ಮುಂಜಾಗ್ರತಾ ಕ್ರಮವಾಗಿ ಅಕ್ಟೋಬರ್‌ನಲ್ಲಿ ರಾಜ್ಯ ಸರ್ಕಾರ ರಾಜೀವ್‌ಗಾಂಧಿ ಎದೆರೋಗಗಳ ಆಸ್ಪತ್ರೆ ಆವರಣದಲ್ಲಿ ನಿರ್ಮಿಸಿದ್ದ ತಾತ್ಕಾಲಿಕ (ಮೇಕ್‌ಶಿಫ್ಟ್‌ ಮಾಡಲ್‌) ಆಸ್ಪತ್ರೆಯನ್ನು ವಿದೇಶದಿಂದ ಬಂದ ಕೊರೋನಾ ಸೋಂಕಿತರು ಮತ್ತು ಒಮಿಕ್ರೋನ್‌ ಸೋಂಕಿತರ ಚಿಕಿತ್ಸೆಗೆ ಬಳಸಿಕೊಳ್ಳಲು ಆರೋಗ್ಯ ಇಲಾಖೆ ಮುಂದಾಗಿದೆ.

ಸದ್ಯ ಬೌರಿಂಗ್‌ ಆಸ್ಪತ್ರೆಯಲ್ಲಿ ಸೋಂಕಿತರಿಗೆ ಚಿಕಿತ್ಸೆ(Treatment) ನೀಡಲಾಗುತ್ತಿದೆ. ಆದರೆ, ಕಳೆದ ಎರಡು ದಿನಗಳಿಂದ ವಿದೇಶದಿಂದ ಬಂದವರಲ್ಲಿ ಸೋಂಕು ಹೆಚ್ಚಳವಾಗಿರುವುದು ಮತ್ತು ಒಮಿಕ್ರೋನ್‌ ಹೊಸ ಪ್ರಕರಣಗಳು ಪತ್ತೆಯಾಗಿರುವ ಹಿನ್ನೆಲೆ ಹೆಚ್ಚುವರಿಯಾಗಿ ರಾಜೀವ್‌ಗಾಂಧಿ ಆಸ್ಪತ್ರೆಯನ್ನು ನಿಗದಿಪಡಿಸಲಾಗಿದೆ. ಸದ್ಯ ಬೌರಿಂಗ್‌ನಲ್ಲಿ 120 ಹಾಸಿಗೆಗಳನ್ನು ಚಿಕಿತ್ಸೆಗೆಂದು ಮೀಸಲಿಟ್ಟಿದ್ದು, 20 ಹಾಸಿಗೆ ಭರ್ತಿಯಾಗಿವೆ. ಎಲ್ಲಾ ಹಾಸಿಗೆಗಳು ಭರ್ತಿಯಾದ ಬಳಿಕ ಗಾಜೀವ್‌ಗಾಂಧಿ ಆಸ್ಪತ್ರೆಗೆ ಸೋಂಕಿತರನ್ನು ಕಳುಹಿಸಲಾಗುತ್ತದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
 

click me!