ತೀವ್ರ ವಿರೋಧ: ಸದ್ಯಕ್ಕಿಲ್ಲ ಕಸ ಶುಲ್ಕದ ಹೊರೆ

Kannadaprabha News   | Asianet News
Published : Dec 18, 2020, 07:22 AM IST
ತೀವ್ರ ವಿರೋಧ: ಸದ್ಯಕ್ಕಿಲ್ಲ ಕಸ ಶುಲ್ಕದ ಹೊರೆ

ಸಾರಾಂಶ

ತ್ಯಾಜ್ಯ ಶುಲ್ಕ ಪ್ರಸ್ತಾವನೆ ಕೈಬಿಟ್ಟ ಪಾಲಿಕೆ| ಮನೆ, ಹೊಟೇಲ್‌, ಮಾಲ್‌ಗಳಿಗೆ ಭಾರೀ ಕಸ ಶುಲ್ಕಕ್ಕೆ ಮುಂದಾಗಿದ್ದ ಬಿಬಿಎಂಪಿ| ತಿಂಗಳಿಗೆ 200ರಿಂದ 14000 ಸೇವಾ ಶುಲ್ಕ ವಿಧಿಸಲು ಸಿದ್ಧತೆ ಮಾಡಿಕೊಂಡಿದ್ದ ಪಾಲಿಕೆ| ಕರೆಂಟ್‌ ಬಿಲ್‌ ಜತೆ ಕಸ ಶುಲ್ಕ ಸಂಗ್ರಹಿಸಲು ಯೋಜನೆ| ಸಾರ್ವಜನಿಕರು, ಪ್ರತಿಪಕ್ಷಗಳಿಂದ ತೀವ್ರ ವಿರೋಧ ವ್ಯಕ್ತ, ಹೋರಾಟ| 

ಬೆಂಗಳೂರು(ಡಿ.18): ನಾಗರಿಕರಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ತಾಜ್ಯ ಸಂಗ್ರಹಣೆಗೆ ಸೇವಾ ಶುಲ್ಕ ವಿಧಿಸುವ ಪ್ರಸ್ತಾವನೆಯನ್ನು ಬಿಬಿಎಂಪಿ ಕೈ ಬಿಟ್ಟಿದ್ದು, ಸದ್ಯಕ್ಕೆ ಯಾವುದೇ ಶುಲ್ಕ ವಿಧಿಸುವುದಿಲ್ಲ ಎಂದು ಬಿಬಿಎಂಪಿ ಆಡಳಿತಾಧಿಕಾರಿ ಗೌರವ ಗುಪ್ತಾ ಸ್ಪಷ್ಟಪಡಿಸಿದ್ದಾರೆ.

ವಿಧಾನಸೌಧದಲ್ಲಿ ಗುರುವಾರ ನಡೆದ ‘ಮಿಷನ್‌ ಬೆಂಗಳೂರು-2022’ ಕಾರ್ಯಕ್ರಮದಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಬೆಂಗಳೂರಿನಲ್ಲಿ ಮನೆ-ಮನೆಯಿಂದ ಕಸ ಸಂಗ್ರಹಿಸಲು ಹೊಸದಾಗಿ ಯಾವುದೇ ಶುಲ್ಕ ವಿಧಿಸುವುದಿಲ್ಲ. ಪ್ರಸ್ತುತ ಇರುವ ವ್ಯವಸ್ಥೆಯನ್ನೇ ಇನ್ನೂ ಸಮರ್ಪಕವಾಗಿ ಅನುಷ್ಠಾನಗೊಳಿಸುತ್ತೇವೆ. ಇತ್ತೀಚೆಗೆ ವರದಿಯಾಗಿರುವಂತೆ ಹೊಸದಾಗಿ ಹೆಚ್ಚುವರಿ ಶುಲ್ಕ ಸಂಗ್ರಹ ಮಾಡುವ ಪ್ರಸ್ತಾವನೆ ಸರ್ಕಾರ ಹಾಗೂ ಬಿಬಿಎಂಪಿ ಮುಂದಿಲ್ಲ ಎಂದು ಹೇಳಿದರು.

ಕಸ ಶುಲ್ಕಕ್ಕೆ ಕಾಂಗ್ರೆಸ್‌ ವಿರೋಧ; ಬಿಬಿಎಂಪಿಗೆ ಮುತ್ತಿಗೆ ಹಾಕುವ ಎಚ್ಚರಿಕೆ

‘ಬಿಬಿಎಂಪಿಯ ಕಸ ನಿರ್ವಹಣೆ ಉಪ ನಿಯಮ-2020ರ’ ಅನ್ವಯ ಕಸ ಸಂಗ್ರಹಣೆ ಸೇವಾ ಶುಲ್ಕ ವಸೂಲಿ ಮಾಡಲು ಮುಂದಾಗಿದ್ದ ಬಿಬಿಎಂಪಿ ತನ್ನ ನಿರ್ಧಾರದಿಂದ ಹಿಂದೆ ಸರಿದಿದೆ. ನಿಯಮಗಳ ಪ್ರಕಾರ ತ್ಯಾಜ್ಯ ಉತ್ಪಾದಕರರಾದ ಹೊಟೇಲ್‌, ಕಲ್ಯಾಣ ಮಂಟಪ, ಆಸ್ಪತ್ರೆ, ಶಾಪಿಂಗ್‌ ಮಾಲ್‌ಗಳಿಂದ ಹೊಸ ವರ್ಷದಿಂದ ಕಸ ಸಂಗ್ರಹಕ್ಕಾಗಿ ಪ್ರತಿ ತಿಂಗಳು ಕನಿಷ್ಠ 200 ರು.ನಿಂದ 14 ಸಾವಿರ ರು. ತನಕ ಶುಲ್ಕ ವಸೂಲಿಗೆ ಬಿಬಿಎಂಪಿ ಸಿದ್ಧತೆ ಮಾಡಿಕೊಂಡಿತ್ತು. ಈಗಾಗಲೇ ಕೊರೋನಾ ಸಂಕಷ್ಟದಿಂದ ಪರದಾಡುತ್ತಿರುವಾಗ ಹೆಚ್ಚುವರಿ ಶುಲ್ಕ ವಿಧಿಸುತ್ತಿರುವ ಬಗ್ಗೆ ಸಾರ್ವಜನಿಕ ವಲಯ ಹಾಗೂ ಪ್ರತಿಪಕ್ಷಗಳಿಂದ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಹೀಗಾಗಿ ಸೇವಾ ಶುಲ್ಕವನ್ನು ಬೆಸ್ಕಾಂ ಬಿಲ್‌ನೊಂದಿಗೆ ಪ್ರತಿ ತಿಂಗಳು ಸಂಗ್ರಹಿಸುವ ನಿರ್ಧಾರದಿಂದ ಹಿಂದೆ ಸರಿದಿದೆ.

ನಗರದಲ್ಲಿ ಮನೆ-ಮನೆಯಿಂದ ಕಸ ಸಂಗ್ರಹಿಸಲು ಹೊಸದಾಗಿ ಯಾವುದೇ ಶುಲ್ಕ ವಿಧಿಸುವುದಿಲ್ಲ. ಪ್ರಸ್ತುತ ಇರುವ ವ್ಯವಸ್ಥೆಯನ್ನೇ ಇನ್ನೂ ಸಮರ್ಪಕವಾಗಿ ಅನುಷ್ಠಾನಗೊಳಿಸುತ್ತೇವೆ ಎಂದು ಬಿಬಿಎಂಪಿ ಆಡಳಿತಾಧಿಕಾರಿ ಗೌರವ್‌ ಗುಪ್ತಾ ತಿಳಿಸಿದ್ದಾರೆ. 
 

PREV
click me!

Recommended Stories

ದರ್ಶನ್ ಗ್ಯಾಂಗ್‌ನಿಂದ ಕೊಲೆಗೀಡಾದ ರೇಣುಕಾಸ್ವಾಮಿಗೆ ಸತ್ತಮೇಲೂ ನೆಮ್ಮದಿಯಿಲ್ಲ! ಸಮಾಧಿ ಧ್ವಂಸಗೈದ ಡೆವಿಲ್ ಗ್ಯಾಂಗ್‌!
ಧರ್ಮಸ್ಥಳ ನೂರಾರು ಶವ ಹೂಳಿದ ಕೇಸ್: ಬುರುಡೆ ಗ್ಯಾಂಗ್ ಷಡ್ಯಂತ್ರ ಬಯಲು - SIT ವರದಿಯಲ್ಲಿ ಒಬ್ಬರಿಗೆ ಕ್ಲೀನ್ ಚಿಟ್!