ನಿತ್ಯ ಲಕ್ಷಾಂತರ ರು. ದಂಧೆಗಿಲ್ಲ ಕಡಿವಾಣ| ಕ್ರಿಕೆಟ್ ಜಾತ್ರೆ ಎಂದೇ ಬಿಂಬಿಸಲಾಗುವ ಐಪಿಎಲ್ ಕ್ರಿಕೆಟ್ ಟೂರ್ನಿ ವೇಳೆ ನಡೆಯುವ ಬೆಟ್ಟಿಂಗ್ ದಂಧೆಯಲ್ಲಿ ಅಮಾಯಕರೇ ಹೆಚ್ಚು ಬಲಿ| ಯುವಕರು ಸಹ ಈ ದಂಧೆಗೆ ಮಾರು ಹೋಗಿದ್ದು, ಬೆಟ್ಟಿಂಗ್‌ನಲ್ಲಿ ಹಣ ಕಳೆದುಕೊಂಡು ಸಾಲಗಾರರಾಗುತ್ತಿದ್ದಾರೆ|
ಕೆ.ಎಂ. ಮಂಜುನಾಥ್
ಬಳ್ಳಾರಿ(ಅ.01): ಐಪಿಎಲ್ ಕ್ರಿಕೆಟ್ ದಿನ ದಿನಕ್ಕೆ ರೋಚಕ ಘಟ್ಟತಲುಪುತ್ತಿರುವ ನಡುವೆ ನಗರ ಪ್ರದೇಶಗಳಲ್ಲಿ ‘ಬೆಟ್ಟಿಂಗ್’ ದಂಧೆಯೂ ಜೋರಾಗಿ ನಡೆಯುತ್ತಿದೆ. ಹೆಚ್ಚಾಗಿ ಯುವಕರು ಬೆಟ್ಟಿಂಗ್‌ನಲ್ಲಿ ತೊಡಗಿಸಿಕೊಳ್ಳುತ್ತಿದ್ದು ಕ್ರಿಕೆಟ್‌ನಿಂದ ಕ್ರೀಡಾ ಸ್ಫೂರ್ತಿ ಪಡೆಯಬೇಕಾದವರು ಬೆಟ್ಟಿಂಗ್‌ನಿಂದಾಗಿ ನಿತ್ಯ ಸಾವಿರಾರು ರುಪಾಯಿ ಹಣ ಕಳೆದುಕೊಳ್ಳುತ್ತಿದ್ದಾರೆ.
ಬಳ್ಳಾರಿ ನಗರವೊಂದರಲ್ಲಿಯೇ ನಿತ್ಯ ಲಕ್ಷಾಂತರ ರು. ಬೆಟ್ಟಿಂಗ್ ನಡೆಯುತ್ತಿದೆ ಎಂದು ತಿಳಿದು ಬಂದಿದ್ದು, ತೆರೆಮರೆಯಲ್ಲಿ ನಡೆಯುವ ಬೆಟ್ಟಿಂಗ್ ದಂಧೆಯ ನಿಯಂತ್ರಣಕ್ಕೆ ಪೊಲೀಸರು ಗಮನ ಹರಿಸುತ್ತಿಲ್ಲ ಎಂಬ ದೂರುಗಳು ಸಹ ಕೇಳಿ ಬರುತ್ತಿವೆ. ನಗರ ಪ್ರದೇಶಗಳಿಗೆ ಸೀಮಿತವಾಗಿದ್ದ ಬೆಟ್ಟಿಂಗ್ ಕರಾಳ ದಂಧೆ, ಇದೀಗ ಗ್ರಾಮೀಣ ಭಾಗಕ್ಕೂ ಲಗ್ಗೆ ಇಟ್ಟಿದ್ದು, ಇಸ್ಪೀಟ್, ಜೂಜಾಟದಂತೆ ಕ್ರಿಕೆಟ್ ಬೆಟ್ಟಿಂಗ್ ಸಹ ಹಳ್ಳಿಗಳನ್ನು ಆವರಿಸಿಕೊಳ್ಳಲಾರಂಭಿಸಿದೆ. ಇದು ಅತ್ಯಂತ ಆತಂಕದ ಸಂಗತಿಯೂ ಹೌದು.
ಬೆಟ್ಟಿಂಗ್ ನಡೆಯೋದು ಹೇಗೆ?:
ಪ್ರತಿ ವರ್ಷವೂ ಐಪಿಎಲ್ ಕ್ರಿಕೆಟ್ ಶುರುವಾಗುತ್ತಿದ್ದಂತೆಯೇ ಬೆಟ್ಟಿಂಗ್ ದಂಧೆಯೂ ಸದ್ದಿಲ್ಲದೆ ತೆರೆದುಕೊಳ್ಳುತ್ತದೆ. ಐಪಿಎಲ್ ಕ್ರಿಕೆಟ್ ವೀಕ್ಷಿಸಿ ಸಂಭ್ರಮಿಸುವ ಯುವಕರು ಒಂದೆಡೆಯಾದರೆ, ಬೆಟ್ಟಿಂಗ್‌ಗಾಗಿಯೇ ಐಪಿಎಲ್ ಟೂರ್ನಿ ಶುರುವಾಗುವುದು ಎಂದು ಕಾತರದಿಂದ ಕಾಯುವವರು ಮತ್ತೊಂದೆಡೆ ಇರುತ್ತಾರೆ. ಇವರಿಗೆ ಯಾವ ತಂಡ ಗೆಲ್ಲುತ್ತದೆ ಎಂಬುದು ಮುಖ್ಯವಲ್ಲ. ಯಾವ ತಂಡದ ಕಡೆಗೆ ಬೆಟ್ಟಿಂಗ್ ಕಟ್ಟಿದರೆ ಅನಾಯಾಸವಾಗಿ ಹಣ ಬಾಚಿಕೊಳ್ಳಬಹುದು ಎಂಬ ಲೆಕ್ಕಾಚಾರವಿರುತ್ತದೆ. ಈ ಬಾರಿಯ ಬಲಿಷ್ಠ ತಂಡಗಳು ಯಾವವು? ಯಾರ ತಂಡದಲ್ಲಿ ಯಾವ ಉತ್ತಮ ಆಟಗಾರನಿದ್ದಾನೆ. ಯಾವ ತಂಡ ಈ ಬಾರಿ ಫೆವರಿಟ್ ಎಂಬಿತ್ಯಾದಿ ಸಂಗತಿಗಳನ್ನಾಧರಿಸಿಯೇ ಬೆಟ್ಟಿಂಗ್ ನಡೆಯುತ್ತದೆ.
ಸದ್ಯಕ್ಕೆ ಹೈಸ್ಕೂಲ್ ಮಾತ್ರ ಆರಂಭಿಸೋದು ಒಳ್ಳೆಯದು: ಸಚಿವ ಆನಂದ ಸಿಂಗ್
ಅನಾಮಿಕನ ಜತೆ ಆಟ:
ಈ ಹಿಂದೆ ಬೆಟ್ಟಿಂಗ್ ದಂಧೆ ಬೇಧಿಸಿದ ಪೊಲೀಸರೇ ಹೇಳುವ ಪ್ರಕಾರ, ಪ್ರತಿಬಾಲ್, ಓವರ್, ಪಂದ್ಯದ ಸೋಲು-ಗೆಲುವಿನ ಮೇಲೆ ಬೆಟ್ಟಿಂಗ್ ನಡೆಸುತ್ತಾರೆ. 100 ರಿಂದ 200 ಗಳಿಂದ ಶುರುವಾಗುವ ಬೆಟ್ಟಿಂಗ್ 5 ರಿಂದ 10 ಸಾವಿರದ ವರೆಗೆ ತಲುಪುತ್ತದೆ. ದೊಡ್ಡ ಕುಳಗಳು ಆಡುವ ಬೆಟ್ಟಿಂಗ್‌ನಲ್ಲಿ ಲಕ್ಷಾಂತರ ರು. ಮೀರುತ್ತದೆ. ಗೆಳೆಯರು ಜತೆಗೂಡಿ ಬೆಟ್ಟಿಂಗ್ ನಡೆಸುವುದು ಒಂದೆಡೆಯಾದರೆ, ವಿಶ್ವಾಸದ ಮೇಲೆ ಅನಾಮಿಕನ ಜತೆ ಸಾವಿರಾರು ರು.ಗಳ ಬೆಟ್ಟಿಂಗ್ ಕಟ್ಟುವವರು ಇದ್ದಾರೆ. ಬೆಟ್ಟಿಂಗ್ ದಂಧೆಯಲ್ಲಿ ತೊಡಗಿಸಿಕೊಂಡವರು ಮೊಬೈಲ್‌ಗಳ ಮೂಲಕ ವ್ಯವಹಾರ ಕುದುರಿಸಿಕೊಳ್ಳುತ್ತಾರೆ. ವ್ಯಾಟ್ಸ್‌ಆ್ಯಪ್ ಹೆಚ್ಚು ಬಳಕೆ ಮಾಡುತ್ತಾರೆ.
ದುಬಾರಿ ಬಡ್ಡಿಗೆ ಹಣ ತರುವ ಯುವಕರು:
ಕ್ರಿಕೆಟ್ ಜಾತ್ರೆ ಎಂದೇ ಬಿಂಬಿಸಲಾಗುವ ಐಪಿಎಲ್ ಕ್ರಿಕೆಟ್ ಟೂರ್ನಿ ವೇಳೆ ನಡೆಯುವ ಬೆಟ್ಟಿಂಗ್ ದಂಧೆಯಲ್ಲಿ ಅಮಾಯಕರೇ ಹೆಚ್ಚು ಬಲಿಯಾಗುತ್ತಾರೆ. ಹಣ ಬಾಚಲು ಐಪಿಎಲ್ ಸುವರ್ಣ ಅವಕಾಶ ಎಂದುಕೊಳ್ಳುವವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಸಂಜೆಯಾಗುತ್ತಿದ್ದಂತೆಯೇ ಶುರುವಾಗುವ ಬೆಟ್ಟಿಂಗ್‌ನಲ್ಲಿ ಪಾಲ್ಗೊಳ್ಳಲು ಅನೇಕ ಯುವಕರು ದುಬಾರಿ ಬಡ್ಡಿಗೆ ಹಣ ತರುತ್ತಾರೆ. ಇದಕ್ಕಾಗಿ ತಮ್ಮಲ್ಲಿರುವ ಅಥವಾ ಮನೆಯಲ್ಲಿ ಚಿನ್ನಾಭರಣಗಳನ್ನು ಒತ್ತೆ ಇಡುತ್ತಾರೆ. ನಿತ್ಯದ ದುಡಿಮೆಯನ್ನು ಅವಲಂಬಿಸಿರುವ ಯುವಕರು ಸಹ ಈ ದಂಧೆಗೆ ಮಾರು ಹೋಗಿದ್ದು, ಬೆಟ್ಟಿಂಗ್‌ನಲ್ಲಿ ಹಣ ಕಳೆದುಕೊಂಡು ಸಾಲಗಾರರಾಗುತ್ತಿದ್ದಾರೆ. ಜಿಲ್ಲಾ ಪೊಲೀಸರು ಬೆಟ್ಟಿಂಗ್ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳದೆ ಹೋದರೆ, ನೂರಾರು ಯುವಕರು ತೀವ್ರ ಸಂಕಷ್ಟಕ್ಕೆ ಗುರಿಯಾಗುವ ಸಾಧ್ಯತೆ ಇದೆ.
ನಗರದಲ್ಲಿ ದೊಡ್ಡ ಪ್ರಮಾಣದಲ್ಲಿ ಬೆಟ್ಟಿಂಗ್ ನಡೆಯುತ್ತಿರುವುದು ನಿಜ. ಆದರೆ, ಇದು ಹೊಸದಲ್ಲ. ಪ್ರತಿಬಾರಿ ಐಪಿಎಲ್ ವೇಳೆಯಲ್ಲೂ ಬೆಟ್ಟಿಂಗ್ ನಡೆಯುತ್ತಿದೆ. ಪೊಲೀಸರು ಇದರ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವಂತಾಗಬೇಕು ಎಂದು ಖಾಸಗಿ ಉದ್ಯೋಗಿ, ವಿ.ಎಸ್. ರಾಜೇಶ್, ಸರ್ ಎಂ.ವಿ. ಅವರು ತಿಳಿಸಿದ್ದಾರೆ.