ಕುಟುಂಬಕ್ಕೆ ಕೊರೋನಾ ತಟ್ಟಿದರೂ ಧೃತಿಗೆಡಲಿಲ್ಲ: ಅನ್ನ, ಆಹಾರ ಕೊಟ್ಟು ನೆರವಾದ್ರು ಅಕ್ಕಪಕ್ಕದ ಜನ

By Kannadaprabha News  |  First Published Jul 22, 2020, 10:18 AM IST

ಪತಿ, ಪತ್ನಿ ಹಾಗೂ ಪುತ್ರ ಹೀಗೆ ಒಂದೇ ಮನೆಯ ಮೂವರಿಗೆ ಕೊರೋನಾ ಪಾಸಿಟಿವ್‌ ಬಂದಾಗ ಒಮ್ಮೆ ದಿಗ್ಭ್ರಾಂತರಾದರೂ ಧೃತಿಗೆಡದೆ ಚಿಕಿತ್ಸೆ ಪಡೆದ ಮಂಗಳೂರಿನ ಕುಟುಂಬ ಈಗ ಕ್ವಾರಂಟೈನ್‌ನಲ್ಲಿದೆ. ಕೋವಿಡ್‌ ಪಾಸಿಟಿವ್‌ ಗೊತ್ತಿದ್ದೂ ಸಮಾಜ ಸ್ಪಂದಿಸಿದ ರೀತಿಗೆ ಈ ಕುಟುಂಬ ತಲೆದೂಗುತ್ತಿದೆ.


ಮಂಗಳೂರು(ಜು.22): ಪತಿ, ಪತ್ನಿ ಹಾಗೂ ಪುತ್ರ ಹೀಗೆ ಒಂದೇ ಮನೆಯ ಮೂವರಿಗೆ ಕೊರೋನಾ ಪಾಸಿಟಿವ್‌ ಬಂದಾಗ ಒಮ್ಮೆ ದಿಗ್ಭ್ರಾಂತರಾದರೂ ಧೃತಿಗೆಡದೆ ಚಿಕಿತ್ಸೆ ಪಡೆದ ಮಂಗಳೂರಿನ ಕುಟುಂಬ ಈಗ ಕ್ವಾರಂಟೈನ್‌ನಲ್ಲಿದೆ. ಕೋವಿಡ್‌ ಪಾಸಿಟಿವ್‌ ಗೊತ್ತಿದ್ದೂ ಸಮಾಜ ಸ್ಪಂದಿಸಿದ ರೀತಿಗೆ ಈ ಕುಟುಂಬ ತಲೆದೂಗುತ್ತಿದೆ.

ಮೊದಲು ಕೊರೋನಾ ಪಾಸಿಟಿವ್‌ ಬಂದದ್ದು ಮನೆಯ ಯಜಮಾನನಿಗೆ. ಅಚ್ಚರಿಯ ಸಂಗತಿ ಎಂದರೆ, ಈ ಯಜಮಾನನೇ ಎಲ್ಲರಿಗೆ ಕೋವಿಡ್‌ ಬಗ್ಗೆ ಜಾಗೃತರಾಗುವಂತೆ ತಿಳಿಹೇಳುತ್ತಿದ್ದರು. ಅಂತಹವರನ್ನೇ ಕೊರೋನಾ ಹುಡುಕಿಕೊಂಡು ಬಂದಿತ್ತು!

Tap to resize

Latest Videos

ಕೊರೋನಾ ಮಧ್ಯೆ ಫೀಲ್ಡ್‌ಗಿಳಿದ ಡಿಸಿ: ಮಾಸ್ಕ್ ಧರಿಸದವರಿಗೆ ದಂಡ

ಇವರ ಹೆಸರು ರಾಜರತ್ನ ಸನಿಲ್‌. ಮಂಗಳೂರಿನ ಜೆಪ್ಪು ಮಾಂಕಾಳಿಪಡ್ಪು ನಿವಾಸಿಯಾದ ಇವರು ಮಂಗಳೂರಿನಲ್ಲಿ ಮೀನುಗಾರಿಕಾ ಬೋಟ್‌ ಹೊಂದಿದ್ದಾರೆ, ಕರ್ನಾಟಕ ರಾಜ್ಯ ಜನಜಾಗೃತಿ ವೇದಿಕೆ ಸಂಘಟನೆ ಅಧ್ಯಕ್ಷ. ಸಮಾಜ ಸೇವೆ ಹಿನ್ನೆಲೆಯಲ್ಲಿ ತನ್ನ ಸಂಘಟನೆಯ ಎಲ್ಲರಲ್ಲೂ ಕೋವಿಡ್‌ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ತಿಳಿಹೇಳುತ್ತಿದ್ದರು. ಮಾತ್ರವಲ್ಲ ಸಮಾಜದಲ್ಲೂ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದರು.

ಕಾರಿನ ಎಸಿ ತಂದ ಎಡವಟ್ಟು: ಜೂ.13ರಂದು ಮುಖ್ಯರಸ್ತೆಯಲ್ಲಿ ಬರುತ್ತಿರಬೇಕಾದರೆ ಪೊಲೀಸ್‌ ಅಧಿಕಾರಿ ಜೊತೆ ಕಾರು ನಿಲ್ಲಿಸಿ ಹರಟುತ್ತಿದ್ದರು. ಆಗ ಇನ್ನೊಂದು ಬೋಟ್‌ ಮಾಲೀಕರು ಮತ್ತೊಬ್ಬ ಸ್ನೇಹಿತನೊಂದಿಗೆ ಜೊತೆಯಾದರು. ಈ ನಾಲ್ವರು ಸೇರಿ ಕಾರಿನಲ್ಲಿ ಎಸಿ ಹಾಕಿಕೊಂಡು ಒಂದು ಗಂಟೆ ಕಾಲ ಪಟ್ಟಾಂಗ ತೆಗೆದಿದ್ದರು. ಇದುವೇ ಕೋವಿಡ್‌ ಪಾಸಿಟಿವ್‌ಗೆ ಕಾರಣ ಎಂಬುದು ಬಳಿಕ ಟ್ರಾವೆಲ್‌ ಹಿಸ್ಟರಿಯಲ್ಲಿ ಪತ್ತೆಯಾಗಿತ್ತು.

ಅಂಧನ 'ಮನೆ' ಬೆಳಗಿದ ಯುವ ಬ್ರಿಗೇಡ್: ಮನೆ ಹಸ್ತಾಂತರಿಸಿದ ಸೂಲಿಬೆಲೆ

ಅಲ್ಲಿಂದ ಮನೆಗೆ ಬಂದವರಿಗೆ ರಾತ್ರಿ ಸಣ್ಣ ಜ್ವರ ಕಾಣಿಸಿತ್ತು. ಸಂಬಂಧಿ ವೈದ್ಯರೊಬ್ಬರ ಸಲಹೆ ಮೇರೆಗೆ ಮಾತ್ರೆ ತೆಗೆದುಕೊಂಡಿದ್ದರು. ಮರುದಿನ ಕಡಿಮೆಯಾದರೂ ಸ್ವರದಲ್ಲಿ ಬದಲಾವಣೆ ಉಂಟಾಗಿತ್ತು. ಇದನ್ನು ಗಮನಿಸಿದ ಸಂಬಂಧಿಕ ವೈದ್ಯರು ಕೂಡಲೇ ಕೋವಿಡ್‌ ತಪಾಸಣೆ ನಡೆಸುವಂತೆ ಸೂಚಿಸಿದ್ದರು. ಅದೇ ವೇಳೆ ಕಾರಿನಲ್ಲಿ ಜೊತೆಯಾಗಿ ಮಾತನಾಡಿದ್ದ ಬೋಟ್‌ ಮಾಲೀಕನಿಗೆ ಕೊರೋನಾ ಪಾಸಿಟಿವ್‌ ಬಂದಿತ್ತು. ಇದರಿಂದ ತುಸು ಬೆದರಿದ ಸನಿಲ್‌ ಹಾಗೂ ಅವರ ಪತ್ನಿ ಸ್ವಾಬ್‌ ಪರೀಕ್ಷೆಗೆ ಒಳಗಾಗಿದ್ದರು. ಅದರಲ್ಲಿ ಪಾಸಿಟಿವ್‌ ಬಂದಿತ್ತು. ಇದರಿಂದ ದಿಗಿಲುಗೊಂಡರೂ, ಕೂಡಲೇ ವೆನ್ಲಾಕ್‌ ಕೋವಿಡ್‌ ಆಸ್ಪತ್ರೆಗೆ ದಾಖಲಾದರು.

ಅಷ್ಟರಲ್ಲಿ ಇವರ ಪ್ರಾಥಮಿಕ ಸಂಪರ್ಕದಲ್ಲಿ ಇದ್ದ ಪುತ್ರನಿಗೂ ಗಂಟಲ ದ್ರವ ಪರೀಕ್ಷೆಯಲ್ಲಿ ಪಾಸಿಟಿವ್‌ ಬಂದಿತ್ತು. ಆದರೆ ಇವರ ಇನ್ನೊಬ್ಬ ಪುತ್ರ ಹಾಗೂ ಮನೆಯಲ್ಲಿದ್ದ 78 ವರ್ಷದ ತಾಯಿಗೆ ಅದೃಷ್ಟವಶಾತ್‌ ಸೋಂಕು ತಟ್ಟಿರಲಿಲ್ಲ.

ಅಸಹಾಯಕರ ನೆರವಿಗೆ ಉಚಿತ ಸಂಚಾರ ಸೇವೆ ಘೋಷಿಸಿದ ಯುವಕ!

ಜೂ.24ರಿಂದ ಸುಮಾರು 15 ದಿನಗಳ ಕಾಲ ಈ ಕುಟುಂಬ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದೆ. ಇವರಿಗೆ ರೋಗಲಕ್ಷಣ ರಹಿತ ಕೋವಿಡ್‌ ಪಾಸಿಟಿವ್‌ ಆದ ಕಾರಣ ಆಸ್ಪತ್ರೆಯಲ್ಲಿ ವಿಟಮಿನ್‌ ಹಾಗೂ ವೈರಾಣು ನಾಶ ಔಷಧವನ್ನು ನೀಡುತ್ತಿದ್ದರು. ಮನೆಯಿಂದಲೇ ಊಟೋಪಹಾರ ತರಿಸಿಕೊಳ್ಳುತ್ತಿದ್ದರು. ಇಡೀ ದಿನ ವಿಶ್ರಾಂತಿ ಪಡೆಯಬೇಕಾಗಿತ್ತು. ಈ ವೇಳೆ ಬಂಧುಬಳಗ, ಸ್ನೇಹಿತರು ಕರೆ ಮಾಡಿ ಯೋಗಕ್ಷೇಮ ವಿಚಾರಿಸುತ್ತಿದ್ದರು. ಆಸ್ಪತ್ರೆಯಿಂದ ಬಿಡುಗಡೆಗೊಂಡ ಬಳಿಕ ಮನೆಯಲ್ಲೇ 14 ದಿನಗಳ ಕ್ವಾರಂಟೈನ್‌ ಮುಗಿಸಿದರೂ ಮತ್ತೆ ಸ್ವಯಂ ಕ್ವಾರಂಟೈನ್‌ ಮುಂದುವರಿಸುತ್ತಿದ್ದಾರೆ.

ಊಟ ನೀಡಿದ ಅಧಿಕಾರಿ, ಸ್ಯಾನಿಟೈಸ್‌ ಮಾಡಿದ ಸ್ನೇಹಿತ

ರಾಜರತ್ನ ಸನಿಲ್‌ ಅವರು ಪತ್ನಿ ಹಾಗೂ ಪುತ್ರನೊಂದಿಗೆ ಆಸ್ಪತ್ರೆಯಲ್ಲಿದ್ದರೆ, ಮನೆಯಲ್ಲಿ ತಾಯಿ ಮತ್ತು ಮಗ ಮಾತ್ರ ಇದ್ದರು. ಮನೆಯನ್ನು ಕೂಡ ಸೀಲ್ಡೌನ್‌ ಮಾಡಲಾಗಿತ್ತು. ಆಗ ಮನೆಗೆ ಊಟ ಪೂರೈಸುತ್ತಿದ್ದುದು ಪಕ್ಕದ ಮನೆಯವರು. ಕಸ್ಟಮ್ಸ್‌ ಅಧಿಕಾರಿ ಹಾಗೂ ಇನ್ನೊಂದು ಮನೆಯ ನಿವೃತ್ತ ಅಧಿಕಾರಿಯ ಕುಟುಂಬ ಕೋವಿಡ್‌ ನಿಯಮಕ್ಕೆ ಬದ್ಧವಾಗಿ ಇವರ ಮನೆಯ ಯೋಗಕ್ಷೇಮ ನೋಡಿಕೊಳ್ಳುತ್ತಿತ್ತು.

ಡಿಸ್ಚಾಜ್‌ರ್‍ ದಿನ ಇವರ ಸ್ನೇಹಿತರೊಬ್ಬರು ಆಸ್ಪತ್ರೆಗೆ ಧಾವಿಸಿ ಇವರ ಕಾರನ್ನು ಪೂರ್ತಿ ಸ್ಯಾನಿಟೈಸ್‌ ಮಾಡಿದ್ದರು. ಬಳಿಕವೇ ಈ ಕುಟುಂಬ ಕಾರಿನಲ್ಲಿ ಮನೆಗೆ ಆಗಮಿಸಿತ್ತು. ಕೋವಿಡ್‌ ಪಾಸಿಟಿವ್‌ ಗೊತ್ತಾದ ಬಳಿಕ ಹಾಗೂ ಡಿಸ್ಚಾಜ್‌ರ್‍ ಆಗಿ ಬಂದ ನಂತರ ಅಕ್ಕಪಕ್ಕದವರಿಂದ ಉತ್ತಮ ಸ್ಪಂದನ ದೊರಕುತ್ತಿದೆ ಎನ್ನುತ್ತಾರೆ ರಾಜರತ್ನ ಸನಿಲ್‌.

ಕೊರೋನಾ ಕಾಟ: ಗ್ರಾಮೀಣ ಭಾಗದಲ್ಲೂ ಸೋಂಕಿನಾರ್ಭಟ, ಬೆಚ್ಚಿಬಿದ್ದ ಜನತೆ

ಕೋವಿಡ್‌-19 ಭಯಂಕರ ರೋಗ ಅಲ್ಲ, ಈ ರೋಗ ತಗಲುವುದು ಅಪರಾಧ ಎಂಬಂತೆ ಯಾರೂ ಭಾವಿಸಬಾರದು. ಇದು ಎಲ್ಲರಿಗೂ ಬಂದರೂ ಅಚ್ಚರಿ ಇಲ್ಲ. ಸಮಾಜ ಇದನ್ನು ಒಪ್ಪಿಕೊಂಡು ಕೋವಿಡ್‌ ನಿಯಮದಂತೆ ಬದುಕಬೇಕು. ಸೋಂಕಿತರು ಹಾಗೂ ಅವರ ಕುಟುಂಬವನ್ನು ಯಾವತ್ತೂ ಕೀಳಾಗಿ ನೋಡಬಾರದು ಎಂದು ಗುಣಮುಖರಾದ ಕೋವಿಡ್‌ ಸೋಂಕಿತ ರಾಜರತ್ನ ಸನಿಲ್‌ ತಿಳಿಸಿದ್ದಾರೆ.

-ಆತ್ಮಭೂಷಣ್‌

click me!