ತುಮಕೂರು (ಮೇ.24): ಕಳೆದ 15 ದಿನಗಳಿಂದ 3 ಸಾವಿರದತ್ತ ಲಗ್ಗೆ ಇಟ್ಟಿದ್ದ ಕೊರೋನಾ ಸೋಂಕು ಜಿಲ್ಲೆಯಲ್ಲಿ ಇಳಿಕೆಯತ್ತ ಸಾಗಿದ್ದು 2 ಸಾವಿರಕ್ಕಿಂತಲೂ ಕಡಿಮೆ ಸೋಂಕು ದಾಖಲಾಗುತ್ತಿದೆ. ಈ ಮೂಲಕ ಜಿಲ್ಲೆಯ ಜನ ಕೊಂಚ ನಿಟ್ಟುಸಿರು ಬಿಡುವಂತಾಗಿದೆ.
10 ತಾಲೂಕುಗಳನ್ನೊಳಗೊಂಡ ತುಮಕೂರಲ್ಲಿ ಮೊದಲ ಅಲೆ ಅಷ್ಟಾಗಿ ಬಾಧಿಸಿರಲಿಲ್ಲ. ಅದರೆ ರಾಕೇಟ್ ವೇಗದಲ್ಲಿ ಅಪ್ಪಳಿಸಿದ ಎರಡನೆ ಅಲೆಯಿಂದ ಜನ ಹೈರಾಟಾಗಿ ಹೋಗಿದ್ದರು. ಪ್ರತೀ ಮನೆಯಲ್ಲಿ ಒಬ್ಬೊಬ್ಬ ಸೋಂಕಿತರು ಇರುವಷ್ಟು ಸಮುದಾಯಕ್ಕೆ ಹಬ್ಬಿತ್ತು. ನಗರ ಪ್ರದೇಶವಷ್ಟೇ ಅಲ್ಲದೇ ಗ್ರಾಮೀಣ ಪ್ರದೇಶಕ್ಕೂ ಸೋಂಕು ಹಬ್ಬಿದೆ.
ಚೇತರಿಕೆ ಜತೆ ಸಾವಿನ ಸಂಖ್ಯೆಯೂ ಏರಿಕೆ, ಎಚ್ಚರ ತಪ್ಪುವಂತೆ ಇಲ್ಲ
ಆದರೆ ಕಳೆದ 3 - 4 ದಿನಗಳಿಮದ 2 ಸಾವಿರಕ್ಕಿಂತಲೂ ಕಡಿಮೆ ಸೋಂಕು ದಾಖಲಾಗುತ್ತಿದೆ. ಈಗ 1500ಕ್ಕೆ ಇಳಿದಿದೆ.
ಅಲ್ಲದೇ ನಗರ ಪ್ರದೇಶದಲ್ಲಿ ಸೋಂಕು ಗಣನೀಯವಾಗಿ ಕುಸಿದಿದೆ. ಸದ್ಯ ಗ್ರಾಮೀಣ ಭಾಗದಲ್ಲಿ ಹೆಚ್ಚಿರುವ ಕೋವಿಡ್ ಕಟ್ಟಿ ಹಾಕಬೇಕಾದ ಮಹತ್ವದ ಜವಾಬ್ದಾರಿ ಜಿಲ್ಲಾಡಳಿತದ ಮೇಲಿದೆ.
15 ದಿವಸಗಳ ಹಿಂದೆ ಆಸ್ಪತ್ರೆಗೆ ಎಡತಾಕುತ್ತಿದ್ದ ಸೋಂಕಿತರ ಸಂಖ್ಯೆಯಲ್ಲಿಯೂ ಗಣನೀಯ ಇಳಿಕೆಯಾಗುತ್ತಿದೆ. 15 ದಿವಸದ ಹಿಂದೆ ಆಸ್ಪತ್ರೆಯಲ್ಲಿ ಬೆಡ್ ಸಿಗುವುದೇ ಕಷ್ಟಕರವಾಗುತಿತ್ತು. ಅದರಲ್ಲೂ ಆಕ್ಸಿಜನ್ ಬೆಡ್ ಸಿಗುವುದು ಮತ್ತಷ್ಟು ದುಸ್ತರವಾಗುತಿತ್ತು. ಆದರೆ ಈಗ ಸಲೀಸಾಗಿ ಆಸ್ಪತ್ರೆಯಲ್ಲಿ ಬೆಡ್ ಸಿಗುವಂತಾಗಿದೆ. ಇದಕ್ಕೆ ಪ್ರಮುಖ ಕಾರಣ ಸೋಂಕಿನ ಪ್ರಮಾಣದಲ್ಲಿ ಇಳಿಕೆ.
ಮನೆಯಲ್ಲಿ ಐಸೊಲೇಟ್ ಆಗುತ್ತಿದ್ದವರನ್ನು ಕೋವಿಡ್ ಕೇರ್ ಸೆಂಟರಿಗೆ ಕರೆತಂದು ಆರೈಕೆ ಮಾಡಿದ್ದರಿಂದ ಸೋಂಕಿನ ಸಂಖ್ಯೆಯಲ್ಲಿ ಇಳಿಕೆಯಾಗಿದೆ. ಇದರಿಂದ ಹರಡುವಿಕೆ ಪ್ರಮಾಣ ಇಳಿಕೆಯಾಗಿದೆ.
ವ್ಯಾಕ್ಸಿನ್ ಹಾಕುವಲ್ಲಿಯೂ ಕೂಡ ಜಿಲ್ಲಾಡಳಿತ ಯಶಸ್ವಿಯಾಗಿದೆ. ದಿನೇ ದಿನೇ ಅಧಿಕ ಸಂಖ್ಯೆಯಲ್ಲಿ ವ್ಯಾಕ್ಸಿನ್ ಹಾಕಲಾಗುತ್ತಿದೆ.