ಕೊರೋನಾ ಗೆದ್ದ ಬಾಣಂತಿಯರು, ಹಸುಗೂಸುಗಳು!

By Kannadaprabha News  |  First Published May 24, 2021, 8:05 AM IST
  • ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲೊಂದು ಪಾಸಿಟಿವ್ ಬೆಳವಣಿಗೆ
  • ಕೊರೋನಾ ಗೆದ್ದ ಹಸುಗುಸುಗಳು ಬಾಣಂತಿಯರು
  •  ಸೋಂಕಿತ 52 ಗರ್ಭಿಣಿಯರಿಗೆ ಜಿಲ್ಲಾಸ್ಪತ್ರೆಯಲ್ಲಿ ಸುರಕ್ಷಿತ ಹೆರಿಗೆ

ವರದಿ : ಸೋಮರಡ್ಡಿ ಅಳವಂಡಿ

ಕೊಪ್ಪಳ (ಮೇ.24):  ಕೊರೋನಾ ಮೂರನೇ ಅಲೆ ಮಕ್ಕಳಿಗೆ ಕಂಟಕ ಎನ್ನುವ ಆತಂಕ ಮನೆ ಮಾಡಿರುವ ವೇಳೆ ಇಲ್ಲೊಂದು ಪಾಸಿಟಿವ್‌(ಒಳ್ಳೆಯ) ಸುದ್ದಿ ಇದೆ. ಕೊರೋನಾ ಸೋಂಕಿತ ಗರ್ಭಿಣಿಯರು, ಬಾಣಂತಿಯರು ಮತ್ತು ಹಸುಗೂಸುಗಳು ಕೊರೋನಾ ಗೆದ್ದಿದ್ದಾರೆ!

Tap to resize

Latest Videos

ಇಲ್ಲಿನ ಜಿಲ್ಲಾಸ್ಪತ್ರೆಯಲ್ಲಿ ಸೋಂಕಿತ ಗರ್ಭಿಣಿಯರಿಗೆ ಸುರಕ್ಷಿತ ಹೆರಿಗೆ ಮಾಡಿಸಲಾಗುತ್ತಿದೆ. ಅಲ್ಲದೆ ಅವರು ಕೊರೋನಾದಿಂದ ಗುಣಮುಖವಾಗಿದ್ದಾರೆ. ತಾಯಿಗೆ ಕೊರೋನಾ ಇದ್ದರೂ ಮಗುವಿಗೆ ಸೋಂಕು ತಗುಲಿಲ್ಲ. ಆಸ್ಪತ್ರೆಗೆ ದಾಖಲಾಗಿದ್ದ ಒಂದು ಮಗು ಸಹ ಗುಣಮುಖವಾಗುವ ಮೂಲಕ ಕೊರೋನಾ ಗೆದ್ದಿದೆ.

ಎರಡನೇ ಅಲೆಯಲ್ಲಿ ಇದುವರೆಗೂ ಸೋಂಕಿತ 52 ಗರ್ಭಿಣಿಯರಿಗೆ ಜಿಲ್ಲಾಸ್ಪತ್ರೆಯಲ್ಲಿ ಹೆರಿಗೆ ಮಾಡಿಸಲಾಗಿದೆ. ಇದರಲ್ಲಿ 27 ಸಿ ಸೆಕ್ಷನ್‌ (ಶಸ್ತ್ರಚಿಕಿತ್ಸೆಯ ಮೂಲಕ) ಆಗಿದ್ದರೆ, 25 ಸಹಜ ಹೆರಿಗೆಯಾಗಿವೆ. ಎಲ್ಲರೂ ಗುಣಮುಖವಾಗಿದ್ದಾರೆ.

2ರಿಂದ 12 ವರ್ಷದ ಮಕ್ಕಳ ಮೇಲೆ ಕ್ಲಿನಿಕಲ್‌ ಟ್ರಯಲ್‌: ಭಾರತದಲ್ಲೂ ಲಸಿಕೆ ಪ್ರಯೋಗ? . 

ದೆ ಹಾಲಿನಿಂದ ಹಬ್ಬಲ್ಲ:  ಕೊರೋನಾ ಇದ್ದರೂ ಮಾಸ್ಕ್‌ ಹಾಕಿಕೊಂಡು ತಾಯಂದಿರು ಹಸುಗೂಸುಗಳಿಗೆ ಹಾಲುಣಿಸುತ್ತಿದ್ದಾರೆ. ತಾಯಿಯಿಂದ ಮಗುವಿಗೆ ಕೊರೋನಾ ಬರುವುದಿಲ್ಲ. ತಾಯಿಯ ಎದೆ ಹಾಲು ಕುಡಿದ ಯಾವ ಮಗುವಿಗೂ ಇದುವರೆಗೂ ಸೋಂಕು ತಗುಲಿಲ್ಲ ಎನ್ನುತ್ತಾರೆ ವೈದ್ಯರು.

ಹಸುಗೂಸಿಗೆ ಕೊರೋನಾ:  ಈ ನಡುವೆ 52 ಹೆರಿಗೆಯ ಪೈಕಿ ಕೇವಲ ಒಂದು ಹಸುಗೂಸಿಗೆ ಕೊರೋನಾ ಸೋಂಕು ತಗುಲಿತ್ತು. ಅದು ತಾಯಿ ಮಾಸ್ಕ್‌ ಹಾಕಿಕೊಳ್ಳುವುದರಲ್ಲಿ ವ್ಯತ್ಯಾಸವಾಗಿದ್ದರಿಂದ ಕೊರೋನಾ ಬಂದಿರಬಹುದು ಎಂದು ಹೇಳಲಾಗಿದೆ. ಹೆರಿಗೆಯಾದ ಪ್ರತಿಯೊಂದು ಮಗುವಿನ ಕೊರೋನಾ ಟೆಸ್ಟ್‌ ಮಾಡಲಾಗುತ್ತದೆ. ಇಂಥ ಸೋಂಕಿತರ ತಾಯಂದಿರು ಮತ್ತು ಅವರಿಗೆ ಜನಿಸಿದ ಮಗುವಿನ ಮೇಲೆ ವಿಶೇಷ ನಿಗಾ ಇಡಲಾಗುತ್ತದೆ.

ಗರ್ಭಿಣಿಯರು ಕೊರೋನಾ ವಿಷಯದಲ್ಲಿ ಎಚ್ಚರಿಕೆಯಿಂದ ಇರುವುದು ಒಳ್ಳೆಯದು. ಇದನ್ನು ಮೀರಿಯೂ ಬಂದಾಗ ತಕ್ಷಣ ವೈದ್ಯರಿಂದ ಚಿಕಿತ್ಸೆ ಪಡೆಯಬೇಕು. ಬೇಗನೆ ಗೊತ್ತಾದರೆ ಯಾವುದೇ ಸಮಸ್ಯೆ ಆಗುವುದಿಲ್ಲ ಎನ್ನುತ್ತಾರೆ ತಜ್ಞರು.

ಇಬ್ಬರು ವೆಂಟಿಲೇಟರ್‌ನಲ್ಲಿ:

52 ಬಾಣಂತಿಯರ ಪೈಕಿ ಕೇವಲ ಇಬ್ಬರಿಗೆ ಮಾತ್ರ ಉಸಿರಾಟದ ಸಮಸ್ಯೆಯಾಗಿದೆ. ಅವರು ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಗುಣಮುಖವಾಗುತ್ತಿದ್ದಾರೆ. ಕೊರೋನಾ ಲಕ್ಷಣ ಕಂಡು ಬಂದರೂ ಮೊದಲೇ ಆಸ್ಪತ್ರೆಗೆ ದಾಖಲಾಗಿಲ್ಲ. ಸೋಂಕು ಉಲ್ಬಣಗೊಂಡ ಬಳಿಕ ದಾಖಲಾದ ಕಾರಣ ಉಸಿರಾಟದ ಸಮಸ್ಯೆಯಾಗಿದೆ. ಆದರೂ ಅವರು ಗುಣಮುಖರಾಗುತ್ತಿದ್ದಾರೆ ಎನ್ನುತ್ತಾರೆ ವೈದ್ಯರು.

ಕೊರೋನಾ ಸೋಂಕಿತ 52 ಗರ್ಭಿಣಿಯರ ಸುರಕ್ಷಿತ ಹೆರಿಗೆಯಾಗಿದ್ದು, ಎಲ್ಲರೂ ಆರೋಗ್ಯವಾಗಿದ್ದಾರೆ. ಇನ್ನು ಆಗತಾನೆ ಜನಿಸಿದ ಒಂದು ಹಸುಗೂಸಿಗೂ ಕೊರೋನಾ ಸೋಂಕು ತಗಲಿತ್ತು. ಆದರೆ, ಅದೂ ಸಹ ಗುಣಮುಖವಾಗಿರುವುದು ಸಮಾಧಾನದ ವಿಷಯ.

-ಡಾ. ಬಿ.ಎಚ್‌. ನಾರಾಯಣಿ, ಹೆರಿಗೆ ವಿಭಾಗದ ಮುಖ್ಯಸ್ಥರು

ಕೊರೋನಾ ಸೋಂಕು ತಗುಲಿದ ತಾಯಂದಿರು ಕಂದಮ್ಮಗಳಿಗೆ ಹಾಲುಣಿಸುತ್ತಿದ್ದಾರೆ. ಆದರೂ ಹಸುಗೂಸುಗಳಿಗೆ ಸೋಂಕು ತಗುಲಲಿಲ್ಲ. ಕಾರಣ, ತಾಯಿ ತಪ್ಪದೇ ಮಾಸ್ಕ್‌ ಹಾಕಿಕೊಂಡಿರಬೇಕು. ಸೋಂಕಿತ ತಾಯಿ ನಿಯಮ ಪಾಲನೆ ಮಾಡಿ ಹಾಲುಣಿಸುವುದರಿಂದ ಹಸುಗೂಸುಗಳಿಗಿಲ್ಲ ಅಪಾಯ.

ಡಾ. ಸುರೇಖಾ, ಹೆರಿಗೆ ತಜ್ಞೆ

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

click me!