ಸಕಾಲಕ್ಕೆ ಚಿಕಿತ್ಸೆ ಸಿಗದೇ ಕೋವಿಡ್‌ ಮರಣ ಪ್ರಮಾಣ ಹೆಚ್ಚು

By Kannadaprabha News  |  First Published Aug 11, 2021, 1:10 PM IST

*  ತಜ್ಞ ವೈದ್ಯರ ತಂಡದಿಂದ ವರದಿ ಸಲ್ಲಿಕೆ
*  ನಿರ್ಲಕ್ಷ್ಯ, ವೈದ್ಯರ ಮೇಲಿನ ಕಾರ್ಯದ ಒತ್ತಡ
*  ಆಕ್ಸಿಜನ್‌ ಪೂರೈಕೆಯಲ್ಲಿ ವ್ಯತ್ಯಯ ಸೇರಿದಂತೆ ವಿವಿಧ ಕಾರಣಗಳಿಂದ ಹೆಚ್ಚಿದ ಸಾವಿನ ಪ್ರಕರಣ
 


ನಾರಾಯಣ ಹೆಗಡೆ

ಹಾವೇರಿ(ಆ.11):  ಕೊರೋನಾ ಸೋಂಕಿತರಿಗೆ ಸಕಾಲದಲ್ಲಿ ಚಿಕಿತ್ಸೆ ಲಭ್ಯವಾಗದಿರುವುದು, ಸಮರ್ಪಕವಾಗಿ ಆಕ್ಸಿಜನ್‌ ಪೂರೈಕೆ ಆಗದಿರುವುದು, ನಿರ್ವಹಣೆ ಕೊರತೆಯಿಂದ ರಾತ್ರಿ ವೇಳೆಯೇ ಸಾವಿನ ಪ್ರಕರಣ ಹೆಚ್ಚಾಗಿರುವುದು, ವೈದ್ಯರ ಮೇಲಿನ ಕಾರ್ಯದ ಒತ್ತಡ ಇವೇ ಮುಂತಾದ ಕಾರಣಗಳಿಂದ ಜಿಲ್ಲೆಯಲ್ಲಿ ಕೋವಿಡ್‌ ಸೋಂಕಿತರ ಸಾವಿನ ಪ್ರಕರಣ ಹೆಚ್ಚಾಗಲು ಕಾರಣ ಎಂಬ ಅಂಶ ದೃಢಪಟ್ಟಿದೆ.

Tap to resize

Latest Videos

ಇತರ ಜಿಲ್ಲೆಗಳಿಗೆ ಹೋಲಿಸಿದಲ್ಲಿ ಕೋವಿಡ್‌ ಎರಡನೇ ಅಲೆಯ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಹೆಚ್ಚಾಗಲು ಹಲವು ಕಾರಣಗಳನ್ನು ಪತ್ತೆ ಹಚ್ಚಲು ಆಗ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ, ಈಗ ಮುಖ್ಯಮಂತ್ರಿಯಾಗಿರುವ ಬಸವರಾಜ ಬೊಮ್ಮಾಯಿ ಸೂಚನೆ ನೀಡಿದ್ದರು. ಈ ಕುರಿತು ವರದಿ ನೀಡುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಬೆಳಗಾವಿ ವಿಭಾಗೀಯ ಸಹ ನಿರ್ದೇಶಕರಿಗೆ ಸೂಚನೆ ನೀಡಲಾಗಿತ್ತು. ಅದರಂತೆ ಸಹ ನಿರ್ದೇಶಕರು ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸಿ ಜಿಲ್ಲೆಯಲ್ಲಿ ಕೋವಿಡ್‌ 2ನೇ ಅಲೆಯಲ್ಲಿ ಉಂಟಾಗಿರುವ ಮರಣಗಳ ಬಗ್ಗೆ ವರದಿ ಸಲ್ಲಿಸಿದ್ದಾರೆ.

ಕಿಮ್ಸ್‌ನ ಹಿರಿಯ ವೈದ್ಯರಾದ ಡಾ. ಈಶ್ವರ ಹಸಬಿ, ಡಾ. ಬಸವರಾಜ ಕಲ್ಲಾಪುರ, ಡಾ. ಸಂಪತ್‌ಸಿಂಗ್‌ ರಂಗವಾಲೆ ಅವರನ್ನು ಒಳಗೊಂಡ ತಂಡವು ಕಳೆದ ಮೇ ತಿಂಗಳಲ್ಲಿ ಜಿಲ್ಲೆಯ ಆಸ್ಪತ್ರೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿತ್ತು. ಜಿಲ್ಲೆಯಲ್ಲಿ ಕೊರೋನಾ ಸಾವಿನ ಪ್ರಮಾಣ ಹೆಚ್ಚಿರುವುದಕ್ಕೆ ಕಾರಣವಾದ ಅಂಶಗಳನ್ನು ತಜ್ಞರ ತಂಡ ಪರಿಶೀಲಿಸಿತ್ತು. ಜಿಲ್ಲಾಸ್ಪತ್ರೆಯಲ್ಲಿ ವೈದ್ಯರಿಂದಲೂ ಮಾಹಿತಿ ಪಡೆದಿತ್ತು. ತಜ್ಞರ ತಂಡವು ನೀಡಿರುವ ವರದಿಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಕ್ತ ಡಾ. ಕೆ.ವಿ. ತ್ರಿಲೋಕಚಂದ್ರ ಜಿಲ್ಲಾಧಿಕಾರಿಗೆ ಕಳುಹಿಸಿದ್ದು, ವರದಿಯಲ್ಲಿ ನೀಡಿರುವ ಕಾರಣಗಳ ಬಗ್ಗೆ ಸ್ಪಷ್ಟಅಭಿಪ್ರಾಯ ತಿಳಿಸುವಂತೆ ಸೂಚಿಸಿದ್ದಾರೆ.

ಸೋಂಕು, ಸಾವಲ್ಲಿ ಬೆಂಗ್ಳೂರು ಮೀರಿಸಿದ ದಕ್ಷಿಣ ಕನ್ನಡ ಜಿಲ್ಲೆ

ಮರಣ ಹೆಚ್ಚಲು ಕಾರಣ:

ಜಿಲ್ಲೆಯಲ್ಲಿ ಕೋವಿಡ್‌ ಮರಣ ಪ್ರಮಾಣ ಹೆಚ್ಚಲು ತಜ್ಞರ ತಂಡ ಹಲವು ಕಾರಣಗಳ ಪಟ್ಟಿಮಾಡಿದೆ. ಅವು ಹೀಗಿವೆ. ಕೋವಿಡ್‌ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಒಬ್ಬ ವೈದ್ಯರು ಮತ್ತು ಸಿಬ್ಬಂದಿಗೆ 12 ಗಂಟೆಗಳ ಕಾಲ ಕರ್ತವ್ಯಕ್ಕೆ ಹಾಕಲಾಗುತ್ತಿದೆ. ಇಷ್ಟೊಂದು ಅವಧಿ ವರೆಗೆ ಪಿಪಿಇ ಕಿಟ್‌ ಧರಿಸಿ ಕೋವಿಡ್‌ ಸೋಂಕಿತರಿಗೆ ಚಿಕಿತ್ಸೆ, ಆರೈಕೆ ನೀಡುವುದು ಕಷ್ಟ. ರಾತ್ರಿ ವೇಳೆ ಸಮರ್ಪಕವಾಗಿ ಸೋಂಕಿತರಿಗೆ ಆರೈಕೆ ಸಿಗದ್ದರಿಂದ ರಾತ್ರಿ ವೇಳೆಯಲ್ಲೇ ಹೆಚ್ಚಿನ ಸಾವು ಸಂಭವಿಸಿದೆ. ಸೋಂಕಿತರು ಆಸ್ಪತ್ರೆಗೆ ದಾಖಲಾದ ತಕ್ಷಣ ಅವರಿಗೆ ಸೂಕ್ತ ರೀತಿಯ ಆರೋಗ್ಯ ತಪಾಸಣೆ ನಡೆಸಲಿಲ್ಲ. ಮಾರ್ಗಸೂಚಿ ಪ್ರಕಾರ ಕೋವಿಡ್‌ ಸೋಂಕಿತರ ರಕ್ತ, ಮಧುಮೇಹದ ತಪಾಸಣೆಯನ್ನು ಮಾಡಲಿಲ್ಲ. ಅಲ್ಲದೆ ಕೇಸ್‌ ಪೇಪರ್‌ನಲ್ಲಿ ಈ ಬಗ್ಗೆ ದಾಖಲು ಮಾಡಲಿಲ್ಲ. ಸಾರಿ ಪ್ರಕರಣಗಳ ರೋಗಲಕ್ಷಣಗಳನ್ನು ಸಮರ್ಪಕವಾಗಿ ದಾಖಲಿಸಿಲ್ಲ.

ಮಾಸ್ಟರ್‌ ಕೋವಿಡ್‌ ರಜಿಸ್ಟರ್‌ ನಿರ್ವಹಣೆ ಮಾಡಲಿಲ್ಲ. ಕೋವಿಡ್‌ ಮಾರ್ಗಸೂಚಿಯಂತೆ ಐಸಿಯು ಮತ್ತು ವಾರ್ಡ್‌ಗಳಲ್ಲಿ ಸಮರ್ಪಕವಾಗಿ ಸೋಂಕಿತರ ಚಿಕಿತ್ಸೆ ನಿರ್ವಹಣೆ ಸರಿಯಾಗಿ ಮಾಡಿಲ್ಲ. ಐಸಿಯುಗೆ ದಾಖಲಿಸುವಲ್ಲಿ ವಿಳಂಬ ಮಾಡಲಾಗಿದೆ. ಕೊರೋನಾ ಸೋಂಕು ತೀವ್ರಗೊಂಡಿದ್ದರೂ ರಾಸಾಯನಿಕ ಕಾರಕ ಸೇರಿದಂತೆ ಔಷಧಗಳ ಅಭಾವವೂ ಸಾವಿಗೆ ಕಾರಣವಾಗಿದೆ.

ಖಾಸಗಿ ಆಸ್ಪತ್ರೆಗಳಿಂದ 87 ಸೋಂಕಿತರನ್ನು ತಡವಾಗಿ ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ. 50 ಸೋಂಕಿತರು ಆಕ್ಸಿಜನ್‌ ಸ್ಯಾಚುರೇಶನ್‌ ಶೇ. 30ಕ್ಕಿಂತ ಕಡಿಮೆ ಇದ್ದಾಗ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದು ಅಧಿಕಾರಿಗಳ ಕಾರ್ಯಚಟುವಟಿಕೆಯ ಕೊರತೆಯನ್ನು ತೋರಿಸುತ್ತದೆ. ವೆಂಟಿಲೇಟರ್‌ಗಳಿಗೆ ಆಕ್ಸಿಜನ್‌ ಪೂರೈಕೆಯು ನಿರೀಕ್ಷಿತ ಪ್ರಮಾಣದಲ್ಲಿ ಇರಲಿಲ್ಲ ಎಂದು ತಜ್ಞರ ತಂಡ ವರದಿಯಲ್ಲಿ ತಿಳಿಸಿದೆ.

ರಾಜ್ಯದ ಪಾಸಿಟಿವಿಟಿ ರೇಟ್, ಸಾವಿನ ಪ್ರಮಾಣ ಏರಿಕೆ: 5 ಜಿಲ್ಲೆಗಳು ಕೊರೊನಾ ಹಾಟ್‌ಸ್ಪಾಟ್..!

ಇದಲ್ಲದೇ ಕೆಲವು ತಾಲೂಕುಗಳಲ್ಲಿ ಸೋಂಕಿತರ ಮತ್ತು ಸಂಪರ್ಕಿತರ ಸ್ವಾಬ್‌ ಸಂಗ್ರಹ 5-6 ದಿನ ತಡವಾಗಿ ಮಾಡಲಾಗಿದೆ. ಸೋಂಕಿತರನ್ನು ತಡವಾಗಿ ಕೋವಿಡ್‌ ಕೇರ್‌ ಸೆಂಟರ್‌ ಮತ್ತು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆರೋಗ್ಯ ಕಾರ್ಯಕರ್ತರು ಸಮರ್ಪಕವಾಗಿ ಕಾರ್ಯನಿರ್ವಹಣೆ ಮಾಡಿಲ್ಲ. ಕೋವಿಡ್‌ ಸೋಂಕಿತರನ್ನು ಪತ್ತೆಹಚ್ಚುವಲ್ಲಿ ವಿಳಂಬ ಮಾಡಲಾಗಿದೆ. ಇದಲ್ಲದೇ ತಂತ್ರಜ್ಞರು, ಸ್ಟಾಫ್‌ ನರ್ಸ್‌, ಐಸಿಯು ತಂತ್ರಜ್ಞರು, ಸವೀರ್‍ಸ್‌ ಎಂಜಿನಿಯರ್‌ಗಳ ಕೊರತೆಯೂ ಸಾಕಷ್ಟಿದೆ. ರಾಣಿಬೆನ್ನೂರು ಮತ್ತು ಬ್ಯಾಡಗಿ ಆಸ್ಪತ್ರೆಗಳಲ್ಲಿ ವೆಂಟಿಲೇಟರ್‌ ಇದ್ದರೂ ನಿರ್ವಹಣೆಗೆ ಸಿಬ್ಬಂದಿ ಇಲ್ಲದಿರುವುದು ಕಂಡುಬಂದಿದೆ. ಕೆಲವು ಕಡೆ ವೆಂಟಿಲೇಟರ್‌ ಇದ್ದರೂ ಸೋಂಕಿತರನ್ನು ದಾಖಲಿಸಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಈ ಎಲ್ಲ ಕಾರಣಗಳಿಂದ ಜಿಲ್ಲೆಯಲ್ಲಿ ಕೋವಿಡ್‌ ಸಾವಿನ ಪ್ರಮಾಣ ಹೆಚ್ಚಿದೆ ಎಂದು ತಜ್ಞ ವೈದ್ಯರ ತಂಡ ಅಭಿಪ್ರಾಯ ವ್ಯಕ್ತಪಡಿಸಿದೆ.

ಎರಡನೇ ಅಲೆಯಲ್ಲಿ 439 ಜನ ಸಾವು:

ಜಿಲ್ಲೆಯಲ್ಲಿ ಕೊರೋನಾ ಎರಡನೇ ಅಲೆಯಲ್ಲೇ 439 ಜನರು ಮೃತಪಟ್ಟಿದ್ದಾರೆ. 10,903 ಪಾಸಿಟಿವ್‌ ಕೇಸ್‌ ದೃಢಪಟ್ಟಿದ್ದು, ಇಷ್ಟೊಂದು ಜನರು ಮೃತಪಟ್ಟಿರುವುದು ಆತಂಕ ಹುಟ್ಟಿಸಿದೆ. ಸರ್ಕಾರದಿಂದ ಎಲ್ಲ ವ್ಯವಸ್ಥೆ ಮಾಡಿದ್ದರೂ ಸಾವು ಹೆಚ್ಚಾಗಿದ್ದರಿಂದ ಆಗ ಉಸ್ತುವಾರಿ ಸಚಿವರಾಗಿದ್ದ ಬಸವರಾಜ ಬೊಮ್ಮಾಯಿ ಅವರೇ ತಜ್ಞರ ತಂಡದಿಂದ ಪರಿಶೀಲನೆ ನಡೆಸುವಂತೆ ಸೂಚಿಸಿದ್ದರು. ಇದುವರೆಗೆ 637 ಜನರು ಕೋವಿಡ್‌ಗೆ ಬಲಿಯಾಗಿದ್ದಾರೆ. ಇತರ ಜಿಲ್ಲೆಗಳಿಗೆ ಹೋಲಿಸಿದಲ್ಲಿ ಜಿಲ್ಲೆಯಲ್ಲಿ ಸಾವಿನ ಪ್ರಮಾಣ ಹೆಚ್ಚಿರುವುದು ಆತಂಕಕಾರಿಯಾಗಿದೆ.

ಕೋವಿಡ್‌ ಮರಣ ಪ್ರಮಾಣ ಹೆಚ್ಚಿರುವ ಕುರಿತು ತಜ್ಞರ ತಂಡ ಜಿಲ್ಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿತ್ತು. ಈಗ ವರದಿ ಬಂದಿದೆ. ಸಾವಿಗೆ ಕಾರಣವಾದ ಅಂಶಗಳನ್ನು ಪಟ್ಟಿಮಾಡಿದೆ. ಇದರ ಆಧಾರದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹಾವೇರಿ ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ತಿಳಿಸಿದ್ದಾರೆ. 
 

click me!