ಕನ್ನಡ ಪತ್ರಿಕೋದ್ಯಮದ ಅತಿ ಪ್ರತಿಷ್ಠಿತ ಪ್ರಶಸ್ತಿಗಳು ಪ್ರಕಟ - ಶುಭಾಶಯಗಳು

By Suvarna News  |  First Published Dec 13, 2019, 11:17 PM IST

ಮುತಾಲಿಕ್ ದೇಸಾಯಿ ಮತ್ತು ಡಿ ಮಹಾದೇವಪ್ಪ ಅವರಿಗೆ ಟೀಯೆಸ್ಸಾರ್ ಸ್ಮಾರಕ ಪತ್ರಿಕೋದ್ಯಮ ಪ್ರಶಸ್ತಿ/ ಎಸ್. ನಾಗಣ್ಣ ಮತ್ತು ಡಾ ಯು. ಪಿ. ಶಿವಾನಂದ ಅವರಿಗೆ ಮೊಹರೆ ಹಣಮಂತರಾಯ ಪತ್ರಿಕೋದ್ಯಮ ಪ್ರಶಸ್ತಿ/ ಕನ್ನಡ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಅನುಪಮ ಸೇವೆ ಸಲ್ಲಿಸಿದವರಿಗೆ ಪ್ರಶಸ್ತಿ


ಬೆಂಗಳೂರು(ಡಿ. 13)  ಕನ್ನಡ ಪತ್ರಿಕೋದ್ಯಮದಲ್ಲಿ ಅನುಪಮ ಸೇವೆ ಸಲ್ಲಿಸಿರುವವರಿಗೆ ನೀಡಲಾಗುವ ಪ್ರತಿಷ್ಠಿತ ಟೀಯೆಸ್ಸಾರ್ ಸ್ಮಾರಕ ಪತ್ರಿಕೋದ್ಯಮ ಪ್ರಶಸ್ತಿ ಹಾಗೂ ಒಂದು ಕನ್ನಡ ಪತ್ರಿಕೆಯನ್ನು ಹುಟ್ಟು ಹಾಕಿ ಬೆಳೆಸಿದವರಿಗೆ ನೀಡಲಾಗುವ ವಿಶೇಷ ಗೌರವದ ಮೊಹರೆ ಹಣಮಂತರಾಯ ಪತ್ರಿಕೋದ್ಯಮ ಪ್ರಶಸ್ತಿಗಳನ್ನು ರಾಜ್ಯ ಸರ್ಕಾರ ಪ್ರಕಟಿಸಿದೆ.

ಅದರಂತೆ, 2017 ನೇ ವರ್ಷದ ಟೀಯೆಸ್ಸಾರ್ ಸ್ಮಾರಕ ಪತ್ರಿಕೋದ್ಯಮ ಪ್ರಶಸ್ತಿಯು ಸಂಯುಕ್ತ ಕರ್ನಾಟಕ ಹಾಗೂ ಕರ್ಮವೀರ ಪತ್ರಿಕೆಯ ನಿವೃತ್ತ ಸಂಪಾದಕ ಧೃವರಾಜ್ ವೆಂಕಟರಾವ್ ಮುತಾಲಿಕ್ ದೇಸಾಯಿ ಅವರಿಗೆ ಹಾಗೂ 2018 ನೇ ವರ್ಷದ ಇದೇ ಪ್ರಶಸ್ತಿಯು ಮೈಸೂರಿನ ಕನ್ನಡಿಗರ ಪ್ರಜಾ ನುಡಿ ಪತ್ರಿಕೆಯ ಸಂಪಾದಕ ಡಿ ಮಹಾದೇವಪ್ಪ ಅವರಿಗೆ ಲಭಿಸಿದೆ.

Tap to resize

Latest Videos

ಸೈನಿಕರಿಗೂ ಸಿಗಲಿದೆ ರಾಜ್ಯೋತ್ಸವ ಪ್ರಶಸ್ತಿ

ಅದೇ ರೀತಿ, 2017 ನೇ ವರ್ಷದ ಮೊಹರೆ ಹಣಮಂತರಾಯ ಪತ್ರಿಕೋದ್ಯಮ ಪ್ರಶಸ್ತಿಗೆ ತುಮಕೂರು ಪ್ರಾದೇಶಿಕ ಪತ್ರಿಕೆಯ ಸಂಪಾದಕ ಎಸ್.ನಾಗಣ್ಣ ಹಾಗೂ 2018 ನೇ ವರ್ಷದ ಇದೇ ಪ್ರಶಸ್ತಿಗೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಸುದ್ದಿ ಬಿಡುಗಡೆ ಪತ್ರಿಕೆಯ ಪ್ರಧಾನ ಸಂಪಾದಕ ಡಾ ಯು. ಪಿ. ಶಿವಾನಂದ ಅವರು ಭಾಜನರಾಗಿದ್ದಾರೆ.

ತಲಾ ಎರಡು ಲಕ್ಷ ರೂ ನಗದು, ಸ್ಮರಣಿಕೆ ಹಾಗೂ ಫಲ-ತಾಂಬೂಲ ಒಳಗೊಂಡ  ಈ ಎರಡೂ ಪ್ರಶಸ್ತಿಗಳಿಗೆ ಕರ್ನಾಟಕ ಉಚ್ಛ ನ್ಯಾಯಾಲಯದ  ನಿವೃತ್ತ ನ್ಯಾಯಾಧೀಶರಾದ ನ್ಯಾಯಮೂರ್ತಿ ಡಿ. ವಿ. ಶೈಲೇಂದ್ರ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ರಾಜ್ಯ ಸರ್ಕಾರ ಆಯ್ಕೆ ಸಮಿತಿಯನ್ನು ರಚಿಸಿತ್ತು.

ಹಿರಿಯ ಪತ್ರಕರ್ತ ಜೋಗಿಗೆ "ಅಮ್ಮ" ಪ್ರಶಸ್ತಿ

ಅಂತೆಯೇ ಜನವರಿ ಮೊದಲನೇ ವಾರದಲ್ಲಿ ನಡೆಯಲಿರುವ ವಿಶೇಷ ಸಮಾರಂಭದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಈ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. 

ಅಲ್ಲದೇ, 2016 ನೇ ವರ್ಷದ ಟೀಯೆಸ್ಸಾರ್ ಸ್ಮಾರಕ ಪತ್ರಿಕೋದ್ಯಮ ಪ್ರಶಸ್ತಿಗೆ ಆಯ್ಕೆಯಾಗಿರುವ ಪ್ರಜಾವಾಣಿ ಪತ್ರಿಕೆಯ ನಿವೃತ್ತ ಸಹಾಯಕ ಸಂಪಾದಕ  ನಾಗೇಶ್ ಹೆಗಡೆ ಹಾಗೂ ಮೊಹರೆ ಹಣಮಂತರಾಯ ಪತ್ರಿಕೋದ್ಯಮ ಪ್ರಶಸ್ತಿಗೆ ಭಾಜನರಾಗಿರುವ ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಮುಂಜಾವು ದಿನ ಪತ್ರಿಕೆಯ ಸಂಪಾದಕ ಗಂಗಾಧರ ಹಿರೇಗುತ್ತಿ ಅವರಿಗೂ ಕೂಡಾ ತಲಾ ಎರಡು ಲಕ್ಷ ರೂ. ನಗದು ಒಳಗೊಂಡ ಈ ಪ್ರಶಸ್ತಿಗಳನ್ನು ಮುಖ್ಯಮಂತ್ರಿಯವರು ಅಂದು ಪ್ರದಾನ ಮಾಡಲಿದ್ದಾರೆ. 

click me!