ಕೊರೋನಾ ಸೋಂಕಿತೆಯನ್ನ ಆಸ್ಪತ್ರೆಯಲ್ಲಿ ಓಡಾಡಿಸಿದ ಡಾಕ್ಟರ್‌!

By Kannadaprabha NewsFirst Published Mar 19, 2020, 11:31 AM IST
Highlights

ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆ ವಿವಿಧ ವಿಭಾಗಕ್ಕೆ ಯುವತಿಯ ಕರೆದೊಯ್ದಿದ್ದ ವೈದ್ಯ|20 ವರ್ಷದ ಯುವತಿಗೆ ಕೊರೋನಾ ವೈರಸ್‌ ಸೋಂಕು ದೃಢ| ಮಾ.14ರಂದು ಆಸ್ಪತ್ರೆಗೆ ಭೇಟಿ ನೀಡಿ ವೈದ್ಯರೊಂದಿಗೆ ಮಾತುಕತೆ ನಡೆಸಿದ್ದ ಸೋಂಕಿತೆ| 

ಬೆಂಗಳೂರು(ಮಾ.19): ಲಂಡನ್‌ನಿಂದ ಮಾ.14ರಂದು ನಗರಕ್ಕೆ ಆಗಮಿಸಿದ್ದ 20 ವರ್ಷದ ಯುವತಿಗೆ ಕೊರೋನಾ ವೈರಸ್‌ ಸೋಂಕು ದೃಢಪಟ್ಟಿದೆ. ಈ ಸೋಂಕಿತ ವ್ಯಕ್ತಿಯು ವಿಕ್ಟೋರಿಯಾ ಆಸ್ಪತ್ರೆ ಆವರಣದ ನೆಫ್ರೋಯುರಾಲಜಿ ಸಂಸ್ಥೆಗೆ ಭೇಟಿ ನೀಡಿರುವ ಮಾಹಿತಿ ಬಹಿರಂಗಗೊಂಡಿರುವುದು ಆಸ್ಪತ್ರೆ ಸಿಬ್ಬಂದಿ ಹಾಗೂ ರೋಗಿಗಳಲ್ಲಿ ತೀವ್ರ ಆತಂಕ ಸೃಷ್ಟಿಸಿದೆ.

ಯುವತಿಯು ಆಸ್ಪತ್ರೆಯ ನೆಫ್ರೋ ವಿಭಾಗದ ಮುಖ್ಯಸ್ಥ ಡಾ. ಉಮೇಶ್‌ ಸಂಬಂಧಿ ಎಂದು ತಿಳಿದುಬಂದಿದೆ. ಮಾ.14ರಂದು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತಪಾಸಣೆ ವೇಳೆ ವ್ಯಕ್ತಿಗೆ ರೋಗ ಲಕ್ಷಣಗಳು ಕಂಡು ಬಂದಿರಲಿಲ್ಲ. ಹೀಗಾಗಿ ಕಡ್ಡಾಯವಾಗಿ 14 ದಿನ ಮನೆಯಲ್ಲೇ ಪ್ರತ್ಯೇಕವಾಗಿರುವಂತೆ ಸೂಚಿಸಲಾಗಿತ್ತು. ಆದರೆ, ಇದನ್ನು ಉಲ್ಲಂಘಿಸಿ ಯುವತಿಯು ಮಾ.14ರಂದು ಆಸ್ಪತ್ರೆಗೆ ಭೇಟಿ ನೀಡಿ ವೈದ್ಯರೊಂದಿಗೆ ಮಾತುಕತೆ ನಡೆಸಿದ್ದಾರೆ. ಬಳಿಕ ಡಾ. ಉಮೇಶ್‌ ಆಕೆಯನ್ನು ಡಯಾಲಿಸಿಸ್‌ ವಿಭಾಗ ಸೇರಿದಂತೆ ಆಸ್ಪತ್ರೆಯ ಎಲ್ಲ ವಿಭಾಗಗಳಿಗೂ ಕರೆದುಕೊಂಡು ಹೋಗಿದ್ದಾರೆ ಎಂಬ ಮಾಹಿತಿ ತಿಳಿದುಬಂದಿದೆ.

ಕೊರೋನಾ ಪತ್ತೆಗೆ ಬೆಂಗಳೂರಲ್ಲಿ ಎರಡು ಲ್ಯಾಬ್

ಅಲ್ಲದೆ, ಸೋಂಕಿತ ಯುವತಿ ಜೊತೆ ಪ್ರಾಥಮಿಕ ಸಂಪರ್ಕ ಸಾಧಿಸಿದ್ದ ಡಾ. ಉಮೇಶ್‌ ಅವರು ಇತರೆ ಇಬ್ಬರು ವೈದ್ಯರೊಂದಿಗೆ ಸಭೆಯಲ್ಲಿ ಭಾಗವಹಿಸಿದ್ದರು. ನಂತರ ಆಸ್ಪತ್ರೆಯ ಇತರೆ ವೈದ್ಯರು ಹಾಗೂ ಸಿಬ್ಬಂದಿ ಮತ್ತು ಕೆಲ ರೋಗಿಗಳು ಸೇರಿದಂತೆ ನೂರಾರು ಜನರ ಸಂಪರ್ಕ ಮಾಡಿದ್ದಾರೆ. ಯುವತಿಗೆ ಸೋಂಕು ದೃಢಪಟ್ಟಿಮಾಹಿತಿ ಹೊರ ಬರುತ್ತಲೇ ಈ ಮೂವರು ವೈದ್ಯರು ನಾಪತ್ತೆಯಾಗಿದ್ದಾರೆ. ಇದರಿಂದ ಆಸ್ಪತ್ರೆಯ ವೈದ್ಯರು, ರೋಗಿಗಳು ಸೇರಿದಂತೆ ನಗರದ ಜನರಲ್ಲಿ ಆತಂಕ ಹೆಚ್ಚಾಗಿದೆ.

ಮಹಾಮಾರಿ ಕೊರೋನಾ ತಡೆಗೆ ಬಿಬಿಎಂಪಿ ಸರ್ವ ಸನ್ನದ್ಧ!

ನೆಫ್ರೋ ಯುರಾಲಜಿ ಸಂಸ್ಥೆಗೆ ಕಿಡ್ನಿ ಸೋಂಕು, ಕಿಡ್ನಿ ವೈಫಲ್ಯದಿಂದ ಡಯಾಲಿಸಿಸ್‌ ಹಾಗೂ ಕಿಡ್ನಿ ಕಸಿ ಶಸ್ತ್ರಚಿಕಿತ್ಸೆಗೆಂದು ನಿತ್ಯ ನೂರಾರು ಮಂದಿ ಬರುತ್ತಾರೆ. ಈ ರೋಗಿಗಳಿಗೆ ಸೋಂಕು ಹರಡದಂತೆ ಎಷ್ಟುಎಚ್ಚರ ವಹಿಸಿದರೂ ಸಾಲದು. ಹೀಗಿರುವಾಗ ಖುದ್ದು ವೈದ್ಯರೇ ಈ ರೀತಿ ಮಾಡಿರುವುದರಿಂದ ಎಲ್ಲಾ ಸಿಬ್ಬಂದಿ ಹಾಗೂ ರೋಗಿಗಳನ್ನು ತಪಾಸಣೆಗೆ ಒಳಪಡಿಸುವ ಒತ್ತಾಯ ಕೇಳಿ ಬಂದಿದೆ.
 

click me!