ಕೊರೋನಾ 2 ನೇ ಅಲೆಗೆ ಕಲಬುರಗಿ ತತ್ತರ: 'ಜಿಲ್ಲಾ ಉಸ್ತುವಾರಿ ಜವಾಬ್ದಾರಿ ಅನ್ಯರಿಗೆ ವಹಿಸಿ'

Kannadaprabha News   | Asianet News
Published : Apr 17, 2021, 01:41 PM IST
ಕೊರೋನಾ 2 ನೇ ಅಲೆಗೆ ಕಲಬುರಗಿ ತತ್ತರ: 'ಜಿಲ್ಲಾ ಉಸ್ತುವಾರಿ ಜವಾಬ್ದಾರಿ ಅನ್ಯರಿಗೆ ವಹಿಸಿ'

ಸಾರಾಂಶ

ಪರಿಸ್ಥಿತಿ ವಿಷಮಿಸದಂತೆ ನಿಗಾ ಇಡಲು ಯಾರೂ ಇಲ್ಲ| ಕಳೆದ 10 ದಿನದಿಂದ ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಶೇ.200ರಿಂದ 700ರಷ್ಟು ತಲುಪಿದೆ. ಆದರೆ ವೆಬ್‌ ಪೋರ್ಟಲ್‌ನಲ್ಲಿ ಈ ಸಂಖ್ಯೆ 1 ಸಾವಿರ ಗಡಿ ದಾಟಿದೆ| ಸರ್ಕಾರ ಯಾಕೆ ಹೀಗೆ ಸಂಖ್ಯೆ ಹೇಳುವಲ್ಲಿ ಎಡವುತ್ತಿದೆ?| ಕೊರೋನಾ ವಿಚಾರದಲ್ಲಿ ಯಾವುದೂ ಪಾರದರ್ಶಕವಾಗಿಲ್ಲ ಎಂದು ದೂರಿದ ಕಾಂಗ್ರೆಸ್‌| 

ಕಲಬುರಗಿ(ಏ.17): ಕೊರೋನಾ 2ನೇ ಅಲೆ ಶರವೇಗದಲ್ಲಿರುವ ಕಲಬುರಗಿಯಲ್ಲಿ ಇದನ್ನು ಕಟ್ಟಿ ಹಾಕುವಲ್ಲಿ ಜಿಲ್ಲಾಡಳಿತ ವಿಫಲವಾಗಿದೆ. ತಪಾಸಣೆ, ಚಿಕಿತ್ಸೆ, ಔಷಧಿ ದಾಸ್ತಾನು ಇತ್ಯಾದಿ ವಿಚಾರಗಳಲ್ಲಿ ಯಾವುದೇ ಸಿದ್ಧತೆಗಳನ್ನು ಸಹ ಮಾಡಿಕೊಂಡಿಲ್ಲ ಎಂದು ಆರೋಪಿಸಿದ ಕಾಂಗ್ರೆಸ್‌ ಮುಖಂಡರು ಇದಕ್ಕೆ ಜಿಲ್ಲಾ ಉಸ್ತುವಾರಿ ಸಚಿವರ ನಿರ್ಲಕ್ಷ್ಯವೇ ಮೂಲ ಕಾರಣ ಎಂದು ದೂರಿದ್ದಾರೆ.

ಕಾಂಗ್ರೆಸ್‌ ಮುಖಂಡರಾದ ಮಾಜಿ ಸಚಿವ ಡಾ. ಶರಣಪ್ರಕಾಶ ಪಾಟೀಲ್‌, ಪ್ರಿಯಾಂಕ್‌ ಖರ್ಗೆ, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಜಗದೇವ ಗುತ್ತೇದಾರ್‌ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತಕ್ಷಣ ರೆಮಿಡೆಸಿವೀರ್‌ ಇಂಜೆಕ್ಷನ್‌ ಎಲ್ಲರಿಗೂ ದೊರಕುವಂತೆ ಮಾಡಬೇಕು, ತಾಲೂಕು ಕೇಂದ್ರಗಳಲ್ಲಿ ಕೋವಿಡ್‌ ಕೇರ್‌ ಸೆಂಟರ್‌ ಆರಂಭಿಸಬೇಕು ಎಂದು ಅವರು ಸರ್ಕಾರವನ್ನು ಆಗ್ರಹಿಸಿದ್ದಾರೆ.

ಬಿಜೆಪಿ ಸ್ಥಳೀಯ ನಾಯಕರ ಮಾತು ಸರ್ಕಾರದ ಮಟ್ಟದಲ್ಲಿ ಕೇಳೋದಿಲ್ಲ, ಜಿಲ್ಲಾ ಉಸ್ತುವಾರಿ ಸಚಿವರು ಇತ್ತ ಬರೋದೇ ಇಲ್ಲ. ಹೀಗಿದ್ದಾಗ ಕೊರೋನಾ ನಿಯಂತ್ರಣ ಸಾಧ್ಯವೆ? ಜನಪರ ನಿಲುವು ತೆಗೆದುಕೊಳ್ಳುವಂತೆ ಆಡಳಿತಕ್ಕೆ ಆಗ್ರಹಿಸುವವರು ಯಾರು? ಅದಕ್ಕಾಗಿಯೇ ಕೊರೋನಾ ಕಾಲದಲ್ಲಾದರೂ ತಕ್ಷಣ ಜಿಲ್ಲಾ ಉಸ್ತುವಾರಿ ಜವಾಬ್ದಾರಿ ಅನ್ಯರಿಗೆ ವಹಿಸಿಕೊಟ್ಟು ಜನರ ಗೋಳು ಕಮ್ಮಿ ಮಾಡಲು ಸರ್ಕಾರ ಮುಂದಾಗಲಿ ಎಂದರು.

ಲಾಕ್ಡೌನ್‌ ಘೋಷಣೆ : ಮಹಾ ವಲಸೆ ಶುರು, ಆತಂಕ ಸೃಷ್ಟಿ

ಬಿಜೆಪಿ ಸರ್ಕಾರಕ್ಕೆ 2ನೇ ಅಲೆ ಗೊತ್ತಿದ್ದರೂ ಸಿದ್ಧತೆ ಮಾಡಿಕೊಳ್ಳದೆ ಮೌನವಾಗಿ ಕುಳಿತಿದೆ. ಇದರಿಂದಲೇ ಎಲ್ಲೆಡೆ ಸೋಂಕಿನ ಅಟ್ಟಹಾಸ ಶುರುವಾಗಿದೆ. ಇದಕ್ಕೆಲ್ಲ ಸರ್ಕಾರದ ನಿರ್ಲಕ್ಷ್ಯವೇ ಕಾರಣ, ವಿಶ್ವದಲ್ಲೇ ಅನೆಕ ಕಡೆ 2ನೇ, 3ನೇ ಅಲೆ ಬಂದು ಹೋಗಿರುವ ಬಗ್ಗೆ ಮಾಹಿತಿ ಇದ್ದರೂ ರಾಜ್ಯ ಸರ್ಕಾರ ಚುನಾವಣೆ, ರಾರ‍ಯಲಿಗಳಲ್ಲೇ ತಲ್ಲೀನವಾಯ್ತು. ಇದರಿಂದಲೇ ಸೋಂಕು ಹೆಚ್ಚುತ್ತ ಹೊರಟಿದೆ ಎಂದು ದೂರಿದ್ದಾರೆ.

ಕಳೆದ 10 ದಿನದಿಂದ ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಶೇ.200ರಿಂದ 700ರಷ್ಟು ತಲುಪಿದೆ. ಆದರೆ ವೆಬ್‌ ಪೋರ್ಟಲ್‌ನಲ್ಲಿ ಈ ಸಂಖ್ಯೆ 1 ಸಾವಿರ ಗಡಿ ದಾಟಿದೆ. ಸರ್ಕಾರ ಯಾಕೆ ಹೀಗೆ ಸಂಖ್ಯೆ ಹೇಳುವಲ್ಲಿ ಎಡವುತ್ತಿದೆ? ಕೊರೋನಾ ವಿಚಾರದಲ್ಲಿ ಯಾವುದೂ ಪಾರದರ್ಶಕವಾಗಿಲ್ಲ ಎಂದು ದೂರಿದರು.

ಕಳೆದ ಬಾರಿಯೂ ಕೆಕೆಆರ್‌ಡಿಬಿ ಕೊರೋನಾ ಸಹಾಯವಾಣಿ ಆರಂಭಿಸಿತು. ಅಭಿವೃದ್ಧಿ ಹಣ ಇದಕ್ಯಾಕೆ ಎಂದು ತಾವು ಸದನದಲ್ಲಿ ಎತ್ತಿದ ಪ್ರಶ್ನೆಗೆ ಉತ್ತರವೇ ಕೊಟ್ಟಿಲ್ಲ. ಸಹಾಯವಾಣಿಯಿಂದ ಯಾರಿಗೆ, ಅದೆಷ್ಟುನೆರವು ದೊರಕಿತೋ ಎಂದು ಪ್ರಿಯಾಂಕ್‌ ಖರ್ಗೆ ಪ್ರಶ್ನಿಸಿದರು. ತೆರಿಗೆ ಹಣ ಜನರಿಗೇ ಬಳಕೆಯಾಗಬೇಕು, ಆದರೆ ಗೊತ್ತು ಗುರಿ ಇಲ್ಲದೆ ಹಣ ವೆಚ್ಚ ಮಾಡಿದರೆ ಹಬೇಗೆಂದು ಪ್ರಶ್ನಿಸಿದ ಅವರು ಕೊರೋನಾ ವೆಚ್ಚವೆಲ್ಲವೂ ಪಾರದರ್ಶಕವಾಗಿರಲಿ ಎಂದರು.

ಲಸಿಕೆ ಕೊರತೆ ಕಾಡುತ್ತಿದ್ದರೂ ಲಸಿಕಾ ಉತ್ಸವ ಮಾಡುತ್ತಿದ್ದಾರೆ, ಮಹಾ ಅಲೆ ಆತಂಕವಿದ್ದರೂ ಚೆಕ್‌ಪೋಸ್ಟ್‌ ಪರಿಣಾಮಕಾರಿ ಕೆಲಸ ಮಾಡುತ್ತಿಲ್ಲ, ಶೇ.30ರಷ್ಟುಬೆಡ್‌ ಕೊಡುವಂತೆ ಕೋರಿದ್ದರೂ ಖಾಸಗಿಯವರು ಇನ್ನೂ ಕೊಡುತ್ತಿಲ್ಲ, ಈ ಸರ್ಕಾರದ ಮಾತಿಗೆ ಕಾಸಿನ ಕಿಮ್ಮತ್ತು ಇಲ್ಲದಂತಾಗಿದೆ ಎಂದು ಲೇವಡಿ ಮಾಡಿದರು.

ಬೆಂಗ್ಳೂರು ನಂತರ ಹೆಚ್ಚಿನ ಸೋಂಕು ಕಲಬುರಗಿಯಲ್ಲಿ ಪತ್ತೆ: ಆತಂಕದಲ್ಲಿ ಜನತೆ

ಕಲಬುರಗಿಯಲ್ಲೇ ಜಿಮ್ಸ್‌ ಟ್ರಾಮಾ ಕೇರ್‌ ಸೆಂಟರ್‌ ಕೋವಿಡ್‌ ಆಸ್ಪತ್ರೆ ಬಿಟ್ಟರೆ ಇನ್ನೊಂದು ವ್ಯವಸ್ಥೆ ಇಲ್ಲ, ತಾಲೂಕಿನಲ್ಲಿ ಕೋವಿಡ್‌ ಕೇರ್‌ ಸೆಂಟರ್‌ ಆರಂಭಿಸಿಲ್ಲ, ಹಳ್ಳಿಗಾಡಿನ ಜನತೆ ಚಿಕಿತ್ಸೆಗೂ ಪರದಾಡುತ್ತಿದ್ದಾರೆ. ಟ್ರಾಮಾ ಕೇರ್‌ ಸೆಂಟರ್‌ ಮುಂದೆ ಸರತಿಯಲ್ಲಿ ಜನ ನಿಲ್ಲುವಂತಾಗಿದೆ. ತಕ್ಷಣ ಜಿಮ್ಸ್‌ನಲ್ಲೇ ಇನ್ನೊಂದು 100 ಹಾಸಿಗೆ ಕಾಳಜಿ ಕೇಂದ್ರ ಆರಂಭಿಸಲಿ ಎಂದು ಡಾ. ಶರಣಪ್ರಕಾಶ ಆಗ್ರಹಿಸಿದ್ದಾರೆ.

ಯೋಜನೆ ಇಲ್ಲದೆಯೇ ಕೋವಿಡ್‌ ಎದುರಿಸುತ್ತೇವೆಂದು ಹೊರಟ ಬಿಜೆಪಿ ಸರ್ಕಾರ ತನ್ನ ಅಲಕ್ಷತನಕ್ಕೆ ಜನರನ್ನೇ ಬಲಿ ನೀಡಲು ಮುಂದಾಗಿದೆ. ಈ ಸರ್ಕಾರ ಭ್ರಷ್ಟಾಚಾರದ ಕೂಪವಾಗಿದೆ. ಜನಪರ ಯಾವುದೇ ಕೆಲಸ ಇದು ಮಾಡುತ್ತಿಲ್ಲ. ಹಣವಿದ್ದರೆ ಮಾತ್ರ ಕಡತ ಸಹಿ ಹಾಕುವ ಮಂತ್ರಿ- ಅಧಿಕಾರಿಗಳಿಂದ ತುಂಬಿರುವ ಬಿಜೆಪಿ ಸರ್ಕಾರಕ್ಕೆ ಜನರ ಹಿತಾಸಕ್ತಿಯೇ ಬೇಡವಾಗಿದೆ ಎಂದು ಡಾ. ಶರಣ ಪಾಟೀಲ್‌, ಪ್ರಿಯಾಂಕ್‌ ದೂರಿದ್ದಾರೆ.
 

PREV
click me!

Recommended Stories

Bengaluru: ಕ್ಯಾಬ್ ಚಾಲಕನ ಮೇಲೆ ಯುವತಿ ರೇಪ್ ಆರೋಪ, ತನಿಖೆ ವೇಳೆ ಬಿಗ್ ಟ್ವಿಸ್ಟ್!
ನಮ್ಮನ್ನು ಗುಲಾಮರನ್ನಾಗಿಸಿ ಹಿಂದೂ ಧರ್ಮ ಸೃಷ್ಟಿಸಿದ್ದು ಬ್ರಾಹ್ಮಣರು: ನಿವೃತ್ತ ಹೈಕೋರ್ಟ್ ನ್ಯಾಯಮೂರ್ತಿ