ಹಾಸನದ ಪ್ರಸಿದ್ಧ ಚನ್ನಕೇಶವ ದೇಗುಲವನ್ನು ಒಂದು ತಿಂಗಳ ಕಾಲ ಬಂದ್ ಮಾಡಲಾಗುತ್ತಿದೆ. ಯಾವುದೇ ಪ್ರವಾಸಿಗರಿಗೂ ದೇಗುಲಕ್ಕೆ ಪ್ರವೇಶ ನೀಡುವುದಿಲ್ಲ.
ಬೇಲೂರು (ಏ.17): ದೇಶಾದ್ಯಂತ ಕೊರೋನಾ ಎರಡನೇ ಅಲೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಪುರಾತತ್ವ ಇಲಾಖೆಯ ಆದೇಶದ ಮೇರೆಗೆ 1 ತಿಂಗಳ ಕಾಲ ಚನ್ನಕೇಶವ ದೇವಾಲಯಕ್ಕೆ ಭಕ್ತರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. ದೇಗುಲದ ಮುಖ್ಯದ್ವಾರದ ಬಾಗಿಲನ್ನು ಬಂದ್ ಮಾಡಲಾಗಿದೆ. ಆದರೆ ದೇಗುಲದ ಗರ್ಭಗುಡಿಯಲ್ಲಿ ಎಂದಿನಂತೆ ಪೂಜಾ ವಿಧಿವಿಧಾನಗಳು ನಡೆಯಲಿವೆ.
ಕಳೆದ ವರ್ಷ ಕೊರೋನಾ ಹಿನ್ನೆಲೆಯಲ್ಲಿ ಸುಮಾರು 6 ತಿಂಗಳ ಕಾಲ ಪ್ರವಾಸಿಗರಿಗೆ ಸಂಪೂರ್ಣ ನಿರ್ಬಂಧ ಹೇರಿ ದೇವಾಲಯವನ್ನು ಬಂದ್ ಮಾಡಲಾಗಿತ್ತು. ಈಗ ಮತ್ತೆ ಕೊರೋನಾದ ಎರಡನೇ ಅಲೆ ಹೆಚ್ಚಾದ ಹಿನ್ನೆಲೆಯಲ್ಲಿ ಏಪ್ರಿಲ್ 15ರಿಂದ ಮೇ 15ರವರೆಗೆ ದೇವಾಲಯಕ್ಕೆ ಸಾರ್ವಜನಿಕರ ಪ್ರವೇಶವನ್ನು ಸಂಪೂರ್ಣ ನಿರ್ಬಂಧಿಸುವಂತೆ ಪುರಾತತ್ವ ಇಲಾಖೆ ನಿರ್ದೇಶಕ ಎನ್.ಕೆ.ಪಾಟೀಲ್ ಆದೇಶ ಹೊರಡಿಸಿದ್ದಾರೆ.
ಬೆಂಗಳೂರಲ್ಲಿ ಕೋವಿಡ್ ಅಟ್ಟಹಾಸ : ನಿಮಿಷಕ್ಕೆ 7 ಜನರಿಗೆ ಸೋಂಕು .
ಭಕ್ತರಿಗೆ ನಿರಾಸೆ:
ಕೇವಲ 2 ದಿನಗಳ ಹಿಂದಷ್ಟೇ ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಶ್ರೀ ಚನ್ನಕೇಶವ ದೇಗುಲದ ಒಳಭಾಗದಲ್ಲಿ ಉತ್ಸವ ನಡೆಸಲು ಆದೇಶ ನೀಡಿ ಉತ್ಸವಕ್ಕೆ ಚಾಲನೆ ನೀಡಲು ಪೂರ್ವಭಾವಿ ಸಭೆ ಕರೆಯಲಾಗಿತ್ತು. ಸಾಂಕೇತಿಕವಾಗಿ ಸಣ್ಣ ರಥದಲ್ಲಿ ಉತ್ಸವ ನಡೆಸಲು ನಿರ್ಧರಿಸಲಾಗಿತ್ತು. ಅದರಂತೆ ಸರಳವಾಗಿ ಏ.23 ಬ್ರಹ್ಮರಥೋತ್ಸವ ಮತ್ತು 24ರಂದು ನಾಡ ರಥೋತ್ಸವ ನಡೆಸಲು ತೀರ್ಮಾನಿಸಲಾಗಿತ್ತು. ಆದರೆ, ಈಗ ದೇಗುಲ ದ್ವಾರ ಬಾಗಿಲನ್ನು ಬಂದ್ ಮಾಡಿಸಲು ಪುರಾತತ್ವ ಇಲಾಖೆ ಆದೇಶ ಹೊರಡಿಸಿರುವುದರಿಂದ ಪ್ರವಾಸಿಗರಿಗೆ ಹಾಗೂ ಭಕ್ತರಿಗೆ ತೀವ್ರ ನಿರಾಸೆ ಉಂಟಾಗಿದೆ.
ದಾಸೋಹವೂ ಸ್ಥಗಿತ
ಈ ಸಂದರ್ಭದಲ್ಲಿ ಮಾತನಾಡಿದ ದೇಗುಲದ ಕಾರ್ಯನಿರ್ವಹಣಾ ಅಧಿಕಾರಿ ವಿದ್ಯುಲ್ಲತಾ, ಕೇಂದ್ರ ಸರ್ಕಾರದ ಆದೇಶದಂತೆ ಕೇಂದ್ರ ಪುರಾತತ್ವ ಇಲಾಖೆಯವರು ಪುರಾತತ್ವಕ್ಕೆ ಒಳಪಡುವ ದೇವಸ್ಥಾನಗಳಿಗೆ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿದೆ. ಅದರಂತೆ ಚನ್ನಕೇಶವ ದೇವಾಲಯಕ್ಕೆ ಬರುವ ಭಕ್ತರಿಗೆ ಹಾಗೂ ಪ್ರವಾಸಿಗರಿಗೆ ಪ್ರವೇಶ ಸಂಪೂರ್ಣ ನಿಷೇಧಿಸಲಾಗಿದೆ. ಪ್ರತಿನಿತ್ಯದಂತೆ ಅರ್ಚಕರು ಮಾತ್ರ ದೇವಾಲಯಕ್ಕೆ ಆಗಮಿಸಿ ಪೂಜೆ ಮಾಡಲು ಅವಕಾಶ ಕಲ್ಪಿಸಲಾಗಿದೆ. ಯಾವುದೇ ಉತ್ಸವಗಳನ್ನು ನಡೆಸದಂತೆ ಆದೇಶ ನೀಡಲಾಗಿದೆ. ದಾಸೋಹವನ್ನು ನಿಷೇಧಿಸಲಾಗಿದೆ ಎಂದು ತಿಳಿಸಿದರು.