
ಕೃಷ್ಣ ಎನ್. ಲಮಾಣಿ
ಹೊಸಪೇಟೆ(ಏ.17): ಕೊರೋನಾ ಪ್ರಕರಣಗಳ ಹೆಚ್ಚಳ ಹಿನ್ನೆಲೆಯಲ್ಲಿ ಹಂಪಿಯಲ್ಲಿ ಸ್ಮಾರಕಗಳ ವೀಕ್ಷಣೆಗೆ ಮೇ.15ರ ವರೆಗೆ ಭಾರತೀಯ ಪುರಾತತ್ವ ಇಲಾಖೆ ನಿಷೇಧಿಸಿ ಆದೇಶ ಹೊರಡಿಸಿರುವ ಹಿನ್ನೆಲೆಯಲ್ಲಿ ವಿಶ್ವ ಪರಂಪರೆ ತಾಣ ಹಂಪಿ ಪ್ರವಾಸಿಗರಿಲ್ಲದೇ ಭಣಗುಡುತ್ತಿದೆ.
ಹಂಪಿ ಸ್ಮಾರಕಗಳ ವೀಕ್ಷಣೆಗೆ ಕಳೆದ ಒಂದು ವರ್ಷದಿಂದ ವಿದೇಶಿ ಪ್ರವಾಸಿಗರು ಆಗಮಿಸಿಲ್ಲ. ಆದರೆ, ದೇಶಿ ಪ್ರವಾಸಿಗರ ಸಂಖ್ಯೆಯಲ್ಲಿ ಗಣನೀಯ ಹೆಚ್ಚಳವಾಗಿತ್ತು. ಅದರಲ್ಲೂ ಲಾಕ್‌ಡೌನ್ ತೆರವುಗೊಳಿಸಿದ ಬಳಿಕ ಹಂಪಿಗೆ ಬರುವ ಪ್ರವಾಸಿಗರ ಸಂಖ್ಯೆಯಲ್ಲಿ ಭಾರಿ ಏರಿಕೆ ಕಂಡಿತ್ತು. ಈಗ ಕೊರೋನಾ ಪ್ರಕರಣಗಳ ಹೆಚ್ಚಳ ಹಿನ್ನೆಲೆಯಲ್ಲಿ ಭಾರತೀಯ ಪುರಾತತ್ವ ಇಲಾಖೆ ಹಂಪಿ ಸೇರಿದಂತೆ ದೇಶದ ರಾಷ್ಟ್ರೀಯ ಸ್ಮಾರಕಗಳ ವೀಕ್ಷಣೆಗೆ ನಿರ್ಬಂಧ ವಿಧಿಸಿ ಆದೇಶಿಸಿದೆ. ಹೀಗಾಗಿ ಹಂಪಿಯಲ್ಲಿ ಸದಾ ಪ್ರವಾಸಿಗರಿಂದ ಲವಲವಿಕೆಯಾಗಿರುತ್ತಿದ್ದ ಸ್ಮಾರಕಗಳು ಈಗ ಪ್ರವಾಸಿಗರಿಲ್ಲದೇ ಖಾಲಿ ಖಾಲಿಯಾಗಿವೆ.
ಹಂಪಿ ಸ್ಮಾರಕ ವೀಕ್ಷಣೆಗೆ ಮೆಟ್ರೋ ಟ್ರೈನ್ ಮಾದರಿ ಮಿನಿ ಬಸ್..!
ಸ್ಮಾರಕಗಳು ಖಾಲಿ ಖಾಲಿ:
ಹಂಪಿಯ ಕಮಲ ಮಹಲ್, ವಿಜಯ ವಿಠ್ಠಲ ದೇಗುಲ, ಕಲ್ಲಿನ ತೇರು, ಶ್ರೀಕೃಷ್ಣ ದೇಗುಲ, ಸಾಸಿವೆ ಕಾಳು ಗಣಪ, ಕಡಲೆಕಾಳು ಗಣಪ, ಉಗ್ರ ನರಸಿಂಹ, ಎದುರು ಬಸವಣ್ಣ ಮಂಟಪ, ಮಹಾನವಮಿ ದಿಬ್ಬ, ವರಾಹ ದೇಗುಲ, ಅಚ್ಯುತರಾಯ ದೇಗುಲ ಸೇರಿದಂತೆ ಹಂಪಿಯ ನಾನಾ ಸ್ಮಾರಕಗಳ ಬಳಿ ಪ್ರವಾಸಿಗರು ಇಲ್ಲದೇ ಖಾಲಿ ಹೊಡೆಯುತ್ತಿದೆ. ಹಂಪಿಯಲ್ಲಿ ಟಿಕೆಟ್ ಬುಕ್ಕಿಂಗ್ ಕಚೇರಿಗಳು ಸಹ ಕ್ಲೋಸ್ ಮಾಡಲಾಗಿದ್ದು, ನಿತ್ಯ ಪ್ರವಾಸಿಗರಿಂದ ತುಂಬಿ ತುಳುಕುತ್ತಿದ್ದ ಮ್ಯೂಸಿಯಂಗಳು ಕೂಡ ಬಂದ್ ಆಗಿವೆ.
ದೇಗುಲದಲ್ಲಿ ಪೂಜೆ:
ಹಂಪಿಯ ಶ್ರೀವಿರೂಪಾಕ್ಷೇಶ್ವರ ದೇವಾಲಯದ ರಥಬೀದಿಯಲ್ಲೂ ಜನರಿಲ್ಲದಂತಾಗಿದೆ. ಭಕ್ತರ ಸಂಖ್ಯೆಯಲ್ಲಿ ಭಾರಿ ಇಳಿಮುಖವಾಗಿದೆ. ದೇಗುಲದಲ್ಲಿ ಪೂಜೆಗೆ ಅವಕಾಶ ಇದ್ದರೂ ಭಕ್ತರ ಸಂಖ್ಯೆಯಲ್ಲಿ ಇಳಿಮುಖವಾಗಿದೆ. ಶ್ರೀವಿರೂಪಾಕ್ಷೇಶ್ವರ ದೇಗುಲದಲ್ಲಿ ಹಿಂದೂ ಧಾರ್ಮಿಕ ದತ್ತಿ ಇಲಾಖೆಯಿಂದ ನಿತ್ಯ ಪೂಜೆ ನಡೆಯಲಿದೆ. ದೇಗುಲದಲ್ಲಿ ಪೂಜೆಗೆ ಯಾವುದೇ ನಿರ್ಬಂಧವಿಧಿಸಿಲ್ಲ. ಹೀಗಾಗಿ ಭಕ್ತರು ಆಗಮಿಸಬಹುದು. ಜತೆಗೆ ಸಾಮಾಜಿಕ ಅಂತರ, ಮಾಸ್ಕ್ ಧರಿಸಿ ದೇವರ ದರ್ಶನ ಪಡೆಯಬಹುದು ಎಂದು ಹೇಳುತ್ತಾರೆ ಹಿಂದೂ ಧಾರ್ಮಿಕ ದತ್ತಿ ಇಲಾಖೆ ಅಧಿಕಾರಿಗಳು.
ಹಂಪಿಯಲ್ಲಿ ಪೈಪ್‌ಲೈನ್ ಕಾಮಗಾರಿ: ಸ್ಮಾರಕಗಳಿಗೆ ಧಕ್ಕೆ?
ವೀಕೆಂಡ್‌ಗೆ ಬರುತ್ತಿದ್ದ ಪ್ರವಾಸಿಗರು:
ಹಂಪಿಯಲ್ಲಿ ಲಾಕ್‌ಡೌನ್ ಬಳಿಕ ವೀಕೆಂಡ್‌ನಲ್ಲಿ ಪ್ರವಾಸಿಗರ ಸಂಖ್ಯೆಯಲ್ಲಿ ಗಣನೀಯ ಹೆಚ್ಚಳವಾಗಿತ್ತು. ಅದರಲ್ಲೂ ಸ್ಥಳೀಯ ಪೊಲೀಸರು ಕೂಡ ಪ್ರವಾಸಿಗರಿಗೆ ಮಾಸ್ಕ್ ಧರಿಸಲು ತಿಳಿ ಹೇಳುತ್ತಿದ್ದರೂ ನಿಯಮ ಪಾಲನೆಯಾಗುತ್ತಿರಲಿಲ್ಲ. ಈಗ ಪ್ರವಾಸಿಗರ ಪ್ರವೇಶ ನಿರ್ಬಂಧಿಸಿರುವುದರಿಂದ ಪ್ರಮುಖ ಪ್ರವಾಸಿ ತಾಣವಾಗಿರುವ ಹಂಪಿ, ಹೊಸಪೇಟೆ, ತುಂಗಭದ್ರಾ ಪ್ರದೇಶ, ದರೋಜಿ ಕರಡಿಧಾಮ ಹಾಗೂ ಅಟಲ್ ಬಿಹಾರಿ ಝೂಲಾಜಿಕಲ್ ಪಾರ್ಕ್‌ನಲ್ಲೂ ಪ್ರವಾಸಿಗರ ಸಂಖ್ಯೆಯಲ್ಲಿ ಭಾರಿ ಇಳಿಕೆಯಾಗಿದೆ.
ಬ್ಯಾಟರಿ ಚಾಲಿತ ವಾಹನಗಳ ಓಡಾಟ ಇಲ್ಲ:
ಹಂಪಿಯ ಗೆಜ್ಜಲಮಂಟಪದಿಂದ ವಿಜಯ ವಿಠ್ಠಲ ದೇಗುಲದವರೆಗೆ ಹಂಪಿ ಅಭಿವೃದ್ಧಿ ಪ್ರಾಧಿಕಾರದಡಿಯಲ್ಲಿ ನಡೆಯುತ್ತಿದ್ದ ಬ್ಯಾಟರಿ ಚಾಲಿತ ವಾಹನಗಳ ಓಡಾಟವನ್ನೂ ನಿಲ್ಲಿಸಲಾಗಿದೆ. ಹಂಪಿಯಲ್ಲಿ ಸ್ಮಾರಕಗಳ ವೀಕ್ಷಣೆಗೆ ಭಾರತೀಯ ಪುರಾತತ್ವ ಇಲಾಖೆ ನಿಷೇಧ ಹೇರಿರುವ ಹಿನ್ನೆಲೆಯಲ್ಲಿ ಪ್ರಾಧಿಕಾರ ಈ ಕ್ರಮಕೈಗೊಂಡಿದೆ.
ಹಂಪಿ ಸ್ಮಾರಕಗಳ ವೀಕ್ಷಣೆಗೆ ಭಾರತೀಯ ಪುರಾತತ್ವ ಇಲಾಖೆ ಮೇ 15ರ ವರೆಗೆ ನಿಷೇಧಿಸಿದೆ. ಹೀಗಾಗಿ ಬ್ಯಾಟರಿ ಚಾಲಿತ ವಾಹನಗಳನ್ನು ಓಡಾಟ ಕೂಡ ನಿಲ್ಲಿಸಲಾಗಿದೆ ಎಂದು ಹಂಪಿ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಸಿದ್ದರಾಮೇಶ್ವರ ತಿಳಿಸಿದ್ದಾರೆ.