ರಾಮನಗರ (ನ.10): ಬಣ ರಾಜಕೀಯದಿಂದಾಗಿ (politics) ತೀವ್ರ ಕುತೂಹಲ ಕೆರಳಿಸಿದ್ದ ರಾಮನಗರ (ramanagara) ನಗರಸಭೆ ಆಡಳಿತದ ಚುಕ್ಕಾಣಿ ಕಾಂಗ್ರೆಸ್ (Congress) ತೆಕ್ಕೆಗೆ ಬಿದ್ದಿದೆ.
ನಗರಸಭೆ ಅಧ್ಯಕ್ಷರಾಗಿ 30ನೇ ವಾರ್ಡಿನ ಬಿ.ಸಿ.ಪಾರ್ವತಮ್ಮ ಮತ್ತು ಉಪಾಧ್ಯಕ್ಷರಾಗಿ 1ನೇ ವಾರ್ಡಿನ ಟಿ.ಜಯಲಕ್ಷ್ಮಮ್ಮ ಮಂಗಳವಾರ ನಡೆದ ಚುನಾವಣೆಯಲ್ಲಿ ತಲಾ 9 ಮತಗಳ ಅಂತರದಿಂದ ಗೆಲುವು ಸಾಧಿಸಿ ಆಯ್ಕೆಯಾಗಿದ್ದಾರೆ.
ಅಧ್ಯಕ್ಷ (President) ಸ್ಥಾನಕ್ಕೆ ಸ್ಪರ್ಧೆ ಬಯಸಿ ಕಾಂಗ್ರೆಸ್ ನಿಂದ ಬಿ.ಸಿ.ಪಾರ್ವತಮ್ಮ, 31ನೇ ವಾರ್ಡಿನ ವಿಜಯಕುಮಾರಿ, ಜೆಡಿಎಸ್ ಪಕ್ಷದಿಂದ 8ನೇ ವಾರ್ಡಿನ ಮಂಜುಳಾ ವೆಂಕಟೇಶ್ ನಾಮಪತ್ರ ಸಲ್ಲಿಸಿದರೆ, ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ನಿಂದ ಟಿ.ಜಯಲಕ್ಷ್ಮಮ್ಮ , ಜೆಡಿಎಸ್ನಿಂದ 21ನೇ ವಾರ್ಡಿನ ಕೆ.ರಮೇಶ್ ಉಮೇದುವಾರಿಕೆ ಸಲ್ಲಿಸಿದ್ದರು.
ನಾಮಪತ್ರಗಳ ಪರಿಶೀಲನೆ ನಂತರ ಉಮೇದುವಾರಿಕೆ ಹಿಂಪಡೆಯಲು ಅವಕಾಶ ನೀಡಲಾಯಿತು. ಆದರೆ, ಯಾರೊಬ್ಬರು ನಾಮಪತ್ರ ಹಿಂಪಡೆಯದ ಕಾರಣ ಚುನಾವಣಾ ಪ್ರಕ್ರಿಯೆ ಪ್ರಾರಂಭಗೊಂಡಿತು.
ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಬಿ.ಸಿ.ಪಾರ್ವತಮ್ಮ ಪರ ಸಂಸದ ಡಿ.ಕೆ.ಸುರೇಶ್ (DK Suresh) ಮತ್ತು ಪಕ್ಷೇತರ ಸದಸ್ಯ ಸೇರಿ 21 ಮತಗಳು ಚಲಾವಣೆಯಾದರೆ, ಪ್ರತಿಸ್ಪರ್ಧಿ ಮಂಜುಳಾ ಪರವಾಗಿ ಶಾಸಕಿ ಅನಿತಾ ಸೇರಿ 12 ಮತಗಳು ಲಭಿಸಿದವು. 9 ಮತಗಳ ಅಂತರದಿಂದ ಪಾರ್ವತಮ್ಮ ಗೆಲುವಿನ ನಗೆ ಬೀರಿದರು. ಶೂನ್ಯ ಮತ ಸಂಪಾದಿಸಿದ ಮತ್ತೊರ್ವ ಅಭ್ಯರ್ಥಿ ವಿಜಯಕುಮಾರಿ ತಮ್ಮ ಮತವನ್ನು ಪಾರ್ವತಮ್ಮ ಅವರಿಗೆ ಚಲಾಯಿಸಿ ಅಚ್ಚರಿ ಮೂಡಿಸಿದರು.
ಉಪಾಧ್ಯಕ್ಷ ಸ್ಥಾನದಲ್ಲಿ ಕಾಂಗ್ರೆಸ್ ನ ಟಿ.ಜಯಲಕ್ಷ್ಮಮ್ಮ 21 ಮತಗಳನ್ನು ಪಡೆದು ಜೆಡಿಎಸ್ನ ಕೆ.ರಮೇಶ್ (ಪಡೆದ ಮತ 12) ಅವರನ್ನು 9 ಮತಗಳಿಂದ ಪರಾಭವಗೊಳಿಸಿದರು.
ಈ ಚುನಾವಣೆಯಲ್ಲಿ (Election) ವರಿಷ್ಠರ ಲೆಕ್ಕಾಚಾರಗಳನ್ನು ತಲೆಕೆಳಗಾಗಿಸುವ ಮೂಲಕ ಮೇಲುಗೈ ಸಾಧಿಸಲು ಕಾಂಗ್ರೆಸ್ ನ ಒಂದು ಬಣ ನಿರ್ಧರಿಸಿತ್ತು. ಸಭಾಂಗಣ ಪ್ರವೇಶಿಸುವ ಸಂದರ್ಭದಲ್ಲಿ ಕಾಂಗ್ರೆಸ್ ನ 19 ಸದಸ್ಯರ ನಡುವೆ ಸಮನ್ವಯತೆ ಕೊರತೆ ಎದ್ದು ಕಂಡಿತು.
ಕಾಂಗ್ರೆಸ್ ನಲ್ಲಿ ಸಾಕಷ್ಟುಗೊಂದಲ ಇರುವುದನ್ನು ಸೂಕ್ಷ್ಮವಾಗಿ ಗಮನಿಸಿದ್ದ ಜೆಡಿಎಸ್ (JDS) ನಾಯಕರು ಭಿನ್ನಮತದ ಲಾಭ ಪಡೆದು ಫಲಿತಾಂಶವನ್ನೇ ತಲೆಕೆಳಗಾಗಿಸುವ ಲೆಕ್ಕಾಚಾರ ಹಾಕಿದ್ದರು. ಶಾಸಕಿ ಅನಿತಾ ಕುಮಾರಸ್ವಾಮಿ ಚುನಾವಣೆಯಲ್ಲಿ ಪಾಲ್ಗೊಳ್ಳಲು ಆಗಮಿಸುತ್ತಿದ್ದಂತೆ ಜೆಡಿಎಸ್ ಪಾಳಯದಲ್ಲಿ ಉತ್ಸಾಹ ಕಂಡು ಬಂದಿತು.
ಆದರೆ, ಸಂಸದ ಡಿ.ಕೆ.ಸುರೇಶ್ ರವರು ಖುದ್ದಾಗಿ ಚುನಾವಣೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡು ಯಾವುದೇ ಅಚ್ಚರಿಯ ಬೆಳವಣಿಗೆಗಳಿಗೆ ಅವಕಾಶ ನೀಡಲೇ ಇಲ್ಲ.
ಮೊದಲ ಸರದಿ ಅಧ್ಯಕ್ಷ - ಉಪಾಧ್ಯಕ್ಷ ಸ್ಥಾನ ತನಗೇ ಬೇಕೆಂದು ಪಟ್ಟು ಹಿಡಿದು , ಸ್ವಪಕ್ಷೀಯ ನಾಯಕರಿಗೆ ಸೆಡ್ಡು ಹೊಡೆದಿದ್ದ ಎರಡೂ ಬಣಗಳ ಸದಸ್ಯರು ಅಂತಿಮವಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಸಂಸದ ಡಿ.ಕೆ.ಸುರೇಶ್ ರವರ ಅಣತಿಯಂತೆ ನಡೆದುಕೊಂಡರು.
ಅಧಿಕಾರ ಹಂಚಿಕೆ ಸೂತ್ರ:
ನಗರಸಭೆ ಅಧ್ಯಕ್ಷ ಗಾದಿ ತಲಾ 7 ತಿಂಗಳಂತೆ ನಾಲ್ವರಿಗೆ ಹಾಗೂ ಉಪಾಧ್ಯಕ್ಷ ಸ್ಥಾನ 14 ಮತ್ತು 16 ತಿಂಗಳಂತೆ ಇಬ್ಬರಿಗೆ ಹಂಚಿಕೆ ಮಾಡಲಾಗಿದೆ. ಕಾಂಗ್ರೆಸ್ ನ ಹಿರಿಯ ನಾಯಕರ ಬಣ ಸೂಚಿಸಿದ್ದ ಪಾರ್ವತಮ್ಮ ಮೊದಲು 7 ತಿಂಗಳು ಅವಧಿ ಪೂರೈಸಿದ ನಂತರ ಜಿಪಂ (zilla Panchayat) ಮಾಜಿ ಅಧ್ಯಕ್ಷ ಇಕ್ಬಾಲ್ ಬಣದಲ್ಲಿ ಗುರುತಿಸಿಕೊಂಡಿರುವ ವಿಜಯ ಕುಮಾರಿ ಎರಡನೇ ಅವಧಿಗೆ ಗದ್ದುಗೆ ಅಲಂಕರಿಸುವರು. ಇನ್ನಿಬ್ಬರು ಆಕಾಂಕ್ಷಿಗಳಿಗೆ ಉಳಿದ ಅವಧಿ ಹಂಚಿಕೆ ಮಾಡಲಾಗಿದೆ.
ಅದೇ ರೀತಿ ಉಪಾಧ್ಯಕ್ಷ ಸ್ಥಾನ ಅಲಂಕರಿಸಿರುವ ಇಕ್ಬಾಲ್ ಬಣದ ಜಯಲಕ್ಷ್ಮಮ್ಮ 14 ತಿಂಗಳು ಹಾಗೂ ಹಿರಿಯ ನಾಯಕರ ಬಣದ ಸೋಮಶೇಖರ್ ಉಳಿದ 16 ತಿಂಗಳ ಅವಧಿಗೆ ಅವಕಾಶ ನೀಡುವ ನಿರ್ಧಾರವನ್ನು ಕಾಂಗ್ರೆಸ್ ವರಿಷ್ಠರು ಕೈಗೊಂಡಿದ್ದಾರೆ ಎನ್ನಲಾಗಿದೆ.
ಕೈ ನಾಯಕರಲ್ಲಿ ಮೂಡದ ಒಗ್ಗಟ್ಟು
ನಗರಸಭೆ ಅಧ್ಯಕ್ಷ - ಉಪಾಧ್ಯಕ್ಷ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದ ಕಾಂಗ್ರೆಸ್ ಪಾಳಯದ ಎರಡು ಬಣಗಳಲ್ಲಿ ಒಗ್ಗಟ್ಟು ಮೂಡಲೇ ಇಲ್ಲ.
ಒಂದು ಬಣ ಮೇಲುಗೈ ಸಾಧಿಸಲೇ ಬೇಕೆಂದು ಹಠಕ್ಕೆ ಬಿದ್ದು ನಗರಸಭೆಯಲ್ಲಿ ಜೆಡಿಎಸ್ ನೊಂದಿಗೆ ಅಧಿಕಾರ ಹಂಚಿಕೆಗೂ ಮಾತುಕತೆ ನಡೆಸಿತ್ತು. ಇದಕ್ಕೆ ಪುಷ್ಠಿ ನೀಡುವಂತೆ ಒಂದು ಬಣದ 9 ಮಂದಿ ಸದಸ್ಯರು ಕಾಂಗ್ರೆಸ್ ಅಭ್ಯರ್ಥಿ ಪಾರ್ವತಮ್ಮ ಪರವಾಗಿ ಮತ ಚಲಾಯಿಸಲು ತೀವ್ರ ವಿರೋಧ ವ್ಯಕ್ತಪಡಿಸಿ ಸಭೆಯಿಂದ ಹೊರ ಬಂದಿದ್ದರು.
ಇದೆಲ್ಲವನ್ನು ಗಮನಿಸಿದ ಸಂಸದ ಡಿ.ಕೆ.ಸುರೇಶ್ ಚುನಾವಣೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡು ಕಾಂಗ್ರೆಸ್ ಸದಸ್ಯರೆಲ್ಲರು ವರಿಷ್ಠರ ಸೂಚಿಸಿದ ಅಭ್ಯರ್ಥಿ ಪರವಾಗಿ ಮತ ಚಲಾವಣೆಯಾಗುವಂತೆ ನೋಡಿಕೊಂಡರು. ಚುನಾವಣೆ ಮುಗಿದ ನಂತರ ಸುರೇಶ್ ಅವರತ್ತ ವಿಧಾನ ಪರಿಷತ್ ಸದಸ್ಯ ಸಿ.ಎಂ.ಲಿಂಗಪ್ಪ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಜಿಯಾವುಲ್ಲಾ ಸುಳಿಯಲಿಲ್ಲ.
ನಗರಸಭೆ ಬಳಿಗೆ ಧಾವಿಸಿದ ಇಕ್ಬಾಲ್ ಹುಸೇನ್ ರವರು ಹಿರಿಯ ನಾಯಕರತ್ತ ತಿರುಗಿಯೂ ನೋಡಲಿಲ್ಲ. ನೂತನ ಅಧ್ಯಕ್ಷೆ ಬಿ.ಸಿ.ಪಾರ್ವತಮ್ಮ ಮತ್ತು ಉಪಾಧ್ಯಕ್ಷೆ ಜಯಲಕ್ಷ್ಮಮ್ಮ ಅವರನ್ನು ಅಭಿನಂದಿಸಲಿಲ್ಲ. ನಗರಸಭೆಯಿಂದ ಹೊರ ಬಂದ ಸಂಸದ ಡಿ.ಕೆ.ಸುರೇಶ್ ಅವರೊಂದಿಗೆ ತೆರಳಿದರು.
ಬಂದ ದಾರಿಗೆ ಸುಂಕ ಇಲ್ಲದಂತಾಯಿತು!
ಕಾಂಗ್ರೆಸ್ನಲ್ಲಿನ ಬಣ ರಾಜಕೀಯದಿಂದಾಗಿ ನಗರಸಭೆಯಲ್ಲಿ ಅಧಿಕಾರ ಹಿಡಿಯುವ ಸಣ್ಣ ಆಸೆಯೊಂದು ಜೆಡಿಎಸ್ ಪಾಳಯದಲ್ಲಿ ಚಿಗುರಿತ್ತು.
ಕೈ ಬಣದ ಬೆಂಬಲದೊಂದಿಗೆ ಅಧ್ಯಕ್ಷ - ಉಪಾಧ್ಯಕ್ಷ ಸ್ಥಾನಗಳನ್ನು ಹಂಚಿಕೊಳ್ಳುವ ಮಾತುಗಳು ಕೇಳಿ ಬಂದಿದ್ದವು. ಹೀಗಾಗಿ ನಗರಸಭೆ ಬಳಿ ಜಮಾಯಿಸಿದ್ದ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರ ನಡೆ ಕುತೂಹಲ ಮೂಡಿಸಿತ್ತು.
ಶಾಸಕಿ ಅನಿತಾ ಕುಮಾರಸ್ವಾಮಿ ಚುನಾವಣೆ ಪ್ರಕ್ರಿಯೆಯಲ್ಲಿ ಆಗಮಿಸುತ್ತಿದ್ದಂತೆ ಜೆಡಿಎಸ್ ಪಾಳಯದಲ್ಲಿ ಚಟುವಟಿಕೆ ಚುರುಕು ಪಡೆಯಿತು. ಅಧಿಕಾರ ಗ್ಯಾರೆಂಟಿ ಎಂದು ಭಾವಿಸಿದ ಕಾರ್ಯಕರ್ತರು ಉತ್ಸಾಹದಿಂದ ಹೂವಿನ ಹಾರ, ಪಟಾಕಿಗಳ ಸಿದ್ಧತೆ ಮಾಡಿಕೊಳ್ಳಲು ಅಣಿಯಾದರು.
ಆದರೆ, ಚುನಾವಣೆಯಲ್ಲಿ ಯಾವುದೇ ಚಮತ್ಕಾರ ನಡೆಯದ ಕಾರಣ ಶಾಸಕಿ ಅನಿತಾ ಕುಮಾರಸ್ವಾಮಿ ಬಂದ ದಾರಿಗೆ ಸುಂಕ ಇಲ್ಲದಂತಾಗಿ ಹೊರ ನಡೆದರು. ಜೆಡಿಎಸ್ ನಾಯಕರು ಒಬ್ಬೊಬ್ಬರಾಗಿ ಕಾಲ್ಕಿತ್ತರು.
ಎಲ್ಲಾ ದಿನವೂ ಕುಡಿವ ನೀರು ಸರಬರಾಜಿಗೆ ಕ್ರಮ: ಬಿ.ಸಿ.ಪಾರ್ವತಮ್ಮ
ರಾಮನಗರ: ಮುಂದಿನ ಒಂದು ವರ್ಷದೊಳಗೆ ವಾರದ ಎಲ್ಲಾ ದಿನವೂ ಕುಡಿಯುವ ನೀರು ಸರಬರಾಜು ಯೋಜನೆ ಜಾರಿಗೆ ಬರಲಿದೆ ಎಂದು ನಗರಸಭೆ ನೂತನ ಅಧ್ಯಕ್ಷೆ ಬಿ.ಸಿ.ಪಾರ್ವತಮ್ಮ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರ ಬೆಳೆಯುತ್ತಿರುವ ಹಿನ್ನೆಲೆಯಲ್ಲಿ ಸಮಸ್ಯೆಗಳು ಹೆಚ್ಚಾಗುತ್ತಿವೆ. ನಗರ ವ್ಯಾಪ್ತಿಯಲ್ಲಿ ಸ್ವಚ್ಛತೆ, ಕುಡಿಯುವ ನೀರು ಮತ್ತು ಮೂಲ ಸೌಕರ್ಯಗಳಿಗೆ ಮೊದಲ ಆದ್ಯತೆ ನೀಡುತ್ತೇನೆ ಎಂದರು.
ತಮ್ಮ ಅಧ್ಯಕ್ಷಾವಧಿಯಲ್ಲಿ ಎಲ್ಲಾ ಸದಸ್ಯರನ್ನು ಮತ್ತು ಅಧಿಕಾರಿ ವರ್ಗವನ್ನು ವಿಶ್ವಾಸಕ್ಕೆ ತೆಗೆದುಕೊಂಡು ಉತ್ತಮ ಆಡಳಿತ ನೀಡುತ್ತೇನೆ. ನಗರದ ಸಮಸ್ಯೆಗಳ ಪರಿಹಾರಕ್ಕೆ ಶಾಸಕರಾದ ಅನಿತಾ ಕುಮಾರಸ್ವಾಮಿಯವರು ಸ್ಪಂದಿಸುವ ವಿಶ್ವಾಸವಿದೆ. ಇನ್ನೊಂದೆಡೆ ಸರ್ಕಾರದಿಂದ ಸವಲತ್ತುಗಳಿಗಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಸಂಸದ ಡಿ.ಕೆ.ಸುರೇಶ್ ಅವರ ಮಾರ್ಗದರ್ಶನವನ್ನು ಸಹ ಪಡೆಯುವುದಾಗಿ ತಿಳಿಸಿದರು.
ತಾವು ನಗರಸಭೆಗೆ 3ನೇ ಬಾರಿಗೆ ಆಯ್ಕೆಯಾಗಿದ್ದೇನೆ. 1995ರಲ್ಲಿ ಪುರಸಭೆಗೆ ಆಯ್ಕೆಯಾಗಿದ್ದ ವೇಳೆ ಆರೋಗ್ಯ ಸಮಿತಿಯ ಅಧ್ಯಕ್ಷರಾಗಿ 5 ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿದ ಅನುಭವವಿದೆ. ಜಿಲ್ಲಾ ಕಾಂಗ್ರೆಸ್ನ ಮಹಿಳಾ ಘಟಕದ ಅಧ್ಯಕ್ಷರಾಗಿ ರಾಜಕೀಯ ಅನುಭವವೂ ಇದೆ. ಕನ್ನಡ ಸಾಹಿತ್ಯ ಪರಿಷತ್ತು, ಸೇವಾದಳ ಸಂಘಟನೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದು, ಅಂತಾರಾಷ್ಟ್ರೀಯ ಅಥ್ಲೆಟಿಕ್ಸ್ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದ ಅನುಭವಗಳು ತಮ್ಮನ್ನು ಸಾರ್ವಜನಿಕ ಸೇವೆಯಲ್ಲಿ ತೊಡಗಿಸಿಕೊಳ್ಳುವಂತೆ ಮಾಡಿದೆ ಎಂದು ಪಾರ್ವತಮ್ಮ ಹೇಳಿದರು.
ರಾಮನಗರ ನಗರಸಭೆ ಅಧ್ಯಕ್ಷ - ಉಪಾಧ್ಯಕ್ಷ ಸ್ಥಾನ ಕಾಂಗ್ರೆಸ್ ಪಕ್ಷದ ಸದಸ್ಯರಿಗೆ ಲಭ್ಯವಾಗಿದೆ. ನಗರದ ಒಟ್ಟಾರೆ ಅಭಿವೃದ್ಧಿಗೆ ಬದ್ಧರಾಗಿ ಎಲ್ಲರು ಒಗ್ಗಟ್ಟಾಗಿ ಕೆಲಸ ಮಾಡಲು ಸೂಚಿಸಲಾಗಿದೆ. ಅಧಿಕಾರ ಹಿಡಿಯುವ ಆಸೆ ಎಲ್ಲರಿಗೂ ಇದ್ದೇ ಇರುತ್ತದೆ. ತಮ್ಮ ಪಕ್ಷದ ಇಬ್ಬರು ಅಭ್ಯರ್ಥಿಗಳು ಸಹ ಇದೇ ಕಾರಣಕ್ಕೆ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದರು. ಆದರೆ, ಪಕ್ಷದ ನಿರ್ಧಾರಕ್ಕೆ ಎಲ್ಲರೂ ಬದ್ಧರಾಗಿ, ಬಿ.ಸಿ.ಪಾರ್ವತಮ್ಮ ಅವರನ್ನು ಅಧ್ಯಕ್ಷರನ್ನಾಗಿ, ಉಪಾಧ್ಯಕ್ಷರನ್ನಾಗಿ ಟಿ.ಜಯಲಕ್ಷಮ್ಮ ಅವರನ್ನು ಆಯ್ಕೆ ಮಾಡಿದ್ದಾರೆ.
- ಡಿ.ಕೆ.ಸುರೇಶ್, ಸಂಸದರು,ಬೆಂಗಳೂರು ಗ್ರಾಮಾಂತರ ಕ್ಷೇತ್ರ.