ರಾಜಕಾರಣ ಬಿಟ್ಟು ಪ್ರವಾಹದತ್ತ ಗಮನ ನೀಡಲಿ: ಎಚ್‌.ಕೆ. ಪಾಟೀಲ

By Kannadaprabha NewsFirst Published Jul 26, 2021, 7:30 AM IST
Highlights

* ತೊಂದರೆಯಲ್ಲಿರುವ ಜನರಿಗೆ ತಕ್ಷಣವೇ ಸ್ಪಂದಿಸಬೇಕು
* ಯುದ್ಧೋಪಾದಿಯಲ್ಲಿ ಕೆಲಸ ಮಾಡಬೇಕು
* ಮೋದಿ ಹಾಗೂ ಶಾ ಅಧಿಕಾರದಲ್ಲಿ ಒಂದು ಕ್ಷಣವೂ ಮುಂದುವರಿಯಲು ನೈತಿಕತೆ ಇಲ್ಲ

ಗದಗ(ಜು.26): ರಾಜ್ಯದ ಹಲವಾರು ಜಿಲ್ಲೆಗಳು ಪ್ರವಾಹದಿಂದಾಗಿ ತತ್ತರಿಸಿ ಹೋಗಿದ್ದು, ರಾಜ್ಯ ಸರ್ಕಾರ ಬದಲಾವಣೆ ಸೇರಿದಂತೆ ತಮ್ಮ ರಾಜಕೀಯ ಚಟುವಟಿಕೆಯಲ್ಲಿ ಮಗ್ನರಾಗಿದ್ದು, ಅದನ್ನೆಲ್ಲ ಬಿಟ್ಟು ತಕ್ಷಣವೇ ಪ್ರವಾಹಪೀಡಿತ ಜಿಲ್ಲೆಗಳ ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ಕಾಂಗ್ರೆಸ್‌ನ ಹಿರಿಯ ನಾಯಕ, ಗದಗ ಶಾಸಕ ಡಾ. ಎಚ್‌.ಕೆ. ಪಾಟೀಲ ಸಲಹೆ ನೀಡಿದ್ದಾರೆ.

ಅವರು ಭಾನುವಾರ ನಗರದ ತೀವ್ರ ಯಿಂದ ಬಳಲುತ್ತಿರುವ ಮಕ್ಕಳ ಪಾಲನೆಗಾಗಿ ಪ್ರಾರಂಭಿಸಲಾಗಿರುವ ಅಪೌಷ್ಟಿಕತೆ ನಿವಾರಣಾ ಕೇಂದ್ರಕ್ಕೆ ಭೇಟಿ ನೀಡಿದ ಆನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಈ ಹಿಂದೆ ಉಂಟಾದ ಪ್ರವಾಹದ ಸಂದರ್ಭದಲ್ಲಿ ಉಂಟಾದ ತೊಂದರೆಗಳ ಆಧಾರದಲ್ಲಿ ರಾಜ್ಯ ಸರ್ಕಾರ ಮತ್ತು ಜಿಲ್ಲಾಡಳಿತಗಳು ಪಾಠ ಕಲಿತಿಲ್ಲ. ಈಗಲೂ ಕೇವಲ ಕಾಟಾಚಾರಕ್ಕೆ ಎನ್ನುವಂತೆ ಕಾಳಜಿ ಕೇಂದ್ರಗಳನ್ನು ತೆರೆದಿದ್ದಾರೆ. ಕೇವಲ ಕಾಳಜಿ ಕೇಂದ್ರ ತೆರೆದರೆ ಸಾಲದು, ಸತತ ಮಳೆಯಿಂದಾಗಿ ಮಣ್ಣಿನ ಮನೆಗಳು ಸಂಪೂರ್ಣ ನೆನೆದು ಬೀಳುತ್ತಿದ್ದು, ಈ ಕುರಿತು ಕೂಡಲೇ ಮನೆ ಕಳೆದುಕೊಂಡವರಿಗೆ ಸೂಕ್ತ ಪರಿಹಾರ ಮತ್ತು ಪುನರ್‌ ಮನೆ ನಿರ್ಮಾಣಕ್ಕೆ ಹಣ ನೀಡಬೇಕು. ಇದೆಲ್ಲವೂ ಯುದ್ಧೋಪಾದಿಯಲ್ಲಿ ನಡೆಯಬೇಕು ಎಂದರು.

ಮುಂದಿನ ಮುಖ್ಯಮಂತ್ರಿ ಎಚ್‌.ಕೆ. ಪಾಟೀಲ..!

ಕೇಂದ್ರ ಸರ್ಕಾರ ದೇಶದ ಜನರ ಸಾವಿರಾರು ಕೋಟಿ ರುಪಾಯಿ ತೆರಿಗೆ ಹಣದಲ್ಲಿ ಪೆಗಾಸಸ್‌ ಎನ್ನುವ ವಿದೇಶಿ ಸಂಸ್ಥೆಗೆ ಗುತ್ತಿಗೆ ನೀಡಿ, ದೇಶದ ವಿರೋಧ ಪಕ್ಷದ ನಾಯಕರು, ನ್ಯಾಯಾಧೀಶರು ಸೇರಿದಂತೆ ಹಲವಾರು ಜನರ ಪೋನ್‌ಗಳನ್ನು ಹ್ಯಾಕ್‌ ಮಾಡಿದೆ. ಕೇವಲ ದೂರವಾಣಿ ಕರೆಗಳು ಮಾತ್ರವಲ್ಲ, ಅವರ ವಾಟ್ಸ್‌ಆ್ಯಪ್‌, ಇಮೇಲ್‌, ಮೊಬೈಲ್‌ಗಳಲ್ಲಿನ ಅವರ ವೈಯಕ್ತಿಕ ಮಾಹಿತಿಗಳನ್ನೇ ಹ್ಯಾಕ್‌ ಮಾಡಿಸಿದೆ. ಇದು ಯಾವ ಪುರುಷಾರ್ಥಕ್ಕೆ? ಇದು ದೇಶದ ಭದ್ರತೆಯ ದೃಷ್ಟಿಯಿಂದಲೂ ದೊಡ್ಡ ಆತಂಕದ ವಿಷಯವಾಗಿದೆ. ದೇಶದ ಆಂತರಿಕ ಭದ್ರತೆ ಧಕ್ಕೆ ತಂದಿದೆ. ಇದೊಂದು ಪ್ರಜಾಪ್ರಭುತ್ವ ವಿರೋಧಿ ಸರ್ಕಾರವಾಗಿದೆ. ಪ್ರಧಾನಿ ಮೋದಿ ಹಾಗೂ ಗೃಹ ಸಚಿವ ಶಾ ಅಧಿಕಾರದಲ್ಲಿ ಒಂದು ಕ್ಷಣವೂ ಮುಂದುವರಿಯಲು ಯಾವುದೇ ನೈತಿಕತೆ ಇಲ್ಲ ಎಂದರು.

ಜಿಲ್ಲಾ ಯುವ ಕಾಂಗ್ರೆಸ್‌ ಅಧ್ಯಕ್ಷ ಅಶೋಕ ಮಂದಾಲಿ, ಜಿಪಂ ಮಾಜಿ ಅಧ್ಯಕ್ಷ ಸಿದ್ಧಲಿಂಗೇಶ್ವರ ಪಾಟೀಲ, ರಾಜುಗೌಡ ಕೆಂಚನಗೌಡ್ರ, ಉಮರ್‌ಫಾರೂಕ್‌ ಹುಬ್ಬಳ್ಳಿ, ಪ್ರಭು ಬುರಬುರೆ, ಬಸವರಾಜ ಕಡೇಮನಿ ಹಾಜರಿದ್ದರು.
 

click me!