ಮಾರ್ಚ್ ಅಂತ್ಯಕ್ಕೆ ವಿಜಯಪುರ ವಿಮಾನ ನಿಲ್ದಾಣ ಕಾಮಗಾರಿ ಪೂರ್ಣಗೊಳಿಸಿ

By Suvarna News  |  First Published Aug 12, 2022, 5:09 AM IST

 ಮಾರ್ಚ್ ಅಂತ್ಯಕ್ಕೆ ವಿಜಯಪುರ ವಿಮಾನ ನಿಲ್ದಾಣ ನಿರ್ಮಾಣದ ಕಾಮಗಾರಿ ಪೂರ್ಣಗೊಳಿಸಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಉಮೇಶ ಕತ್ತಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.


 ವಿಜಯಪುರ (ಆ.11): ಮಾರ್ಚ್ ಅಂತ್ಯದೊಳಗಾಗಿ ವಿಮಾನ ನಿಲ್ದಾಣ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಉಮೇಶ ಕತ್ತಿ ಅವರು ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು. ಡೋಣಿ ನದಿಯ ಪ್ರವಾಹ ಸೇರಿದಂತೆ ಮಳೆಯಿಂದಾದ ಹಾನಿ ವೀಕ್ಷಣೆಗಾಗಿ ವಿಜಯಪುರ ಪ್ರವಾಸದಲ್ಲಿದ್ದ ಅವರು ಬುಧವಾರ ವಿಜಯಪುರ ವಿಮಾನ ನಿಲ್ದಾಣ ನಿರ್ಮಾಣದ ಕಾಮಗಾರಿ ಸ್ಥಳಕ್ಕೆ ಖುದ್ದು ಭೇಟಿ ನೀಡಿದ ನಂತರ ಮಾತನಾಡಿದರು. ಜಿಲ್ಲೆಯ ಜನರ ಬಹು ನಿರೀಕ್ಷೆಯ ವಿಮಾನ ನಿಲ್ದಾಣ ನಿರ್ಮಾಣ ಕಾಮಗಾರಿಯನ್ನು 2023ರ ಮಾಚ್‌ರ್‍ ಅಂತ್ಯದವರೆಗೆ ಪೂರ್ಣಗೊಳಿಸಬೇಕು ಎಂದು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ಗಡುವು ವಿಧಿಸಿದರು. ಪ್ರಗತಿಯಲ್ಲಿರುವ, ಟರ್ಮಿನಲ್‌ ಕಟ್ಟಡ, ಎಟಿಸಿ ಟವರ್‌, ಸಿಎಫ್‌ಆರ್‌ ಕಟ್ಟಡ, ರನ್‌ ವೇ ಸೇರಿದಂತೆ ಇತರೆ ಕಾಮಗಾರಿಯ ಪ್ರಗತಿಯನ್ನು ಸಚಿವರು ಪರಿಶೀಲಿಸಿದರು. ವಿಜಯಪುರ ನಿಲ್ದಾಣವನ್ನು ಎಟಿಆರ್‌-72ದಿಂದ ಏರ್‌ ಬಸ್‌-320 ವಿಮಾನಗಳ ಹಾರಾಟಕ್ಕೆ ಮೇಲ್ದರ್ಜೇಗೇರಿಸುವ ಪ್ರಕ್ರಿಯೆ ನಡೆಯುತ್ತಿದೆ. ಮೂರನೇ ಹಂತದ ವಿಮಾನ ನಿಲ್ದಾಣವನ್ನು ಮೇಲ್ದರ್ಜೆಗೇರಿಸುವ ಕಾಮಗಾರಿಗೆ ಅವಶ್ಯವಿರುವ .120 ಕೋಟಿಗಳಿಗೆ ಸಹ ಸರ್ಕಾರದಿಂದ ಅನುಮತಿ ಸಿಕ್ಕಿದೆ ಎಂದು ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರ ಸಿ.ಬಿ.ಚಿಕ್ಕಲಗಿ ಅವರು ಸಚಿವರಿಗೆ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಶಾಸಕ ಸೋಮನಗೌಡ ಪಾಟೀಲ ಸಾಸನೂರ, ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್‌ ಶಿಂಧೆ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಚ್‌.ಡಿ. ಆನಂದಕುಮಾರ, ವಿಜಯಪುರ ತಹಸೀಲ್ದಾರ ಸಿದ್ಧರಾಯ ಬೋಸಗಿ ಹಾಗೂ ಇತರರು ಇದ್ದರು.

Latest Videos

undefined

ಅತಿವೃಷ್ಟಿಯಿಂದಾದ ಹಾನಿಗೆ ಅಗತ್ಯ ಪರಿಹಾರ: ಜಿಲ್ಲೆಯಲ್ಲಿ ಈವರೆಗೆ 267 ಮನೆಗಳಿಗೆ ಎಸ್‌ಡಿಆರ್‌ಎಫ್‌ ಮಾರ್ಗಸೂಚಿ ಅನುಸಾರ .16,14,000 ಪರಿಹಾರ ವಿತರಿಸಲಾಗಿದೆ. ಮಾನವ ಜೀವಹಾನಿ ಪ್ರಕರಣಗಳಿಗೆ .10 ಲಕ್ಷ ಪರಿಹಾರ ಧನ ನಿಡಲಾಗಿದೆ ಎಂದು ಅರಣ್ಯ ಹಾಗೂ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಸಚಿವ ಉಮೇಶ ಕತ್ತಿ ತಿಳಿಸಿದರು.

ಬುಧವಾರ ನಗರದ ಜಿಪಂ ಕಚೇರಿ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಅವರು ಮಾತನಾಡಿದರು. ಜೂ.1ರಿಂದ ಆಗಸ್ಟ್‌ 9ರವರೆಗೆ 16 ಜಾನುವಾರುಗಳು ಮೃತಪಟ್ಟಿದ್ದು ಸಣ್ಣ ಜಾನುವಾರುಗಳಿಗೆ .3000 ಮತ್ತು ದೊಡ್ಡ ಜಾನುವಾರುಗಳಿಗೆ .25,000 ಮತ್ತು .35,000 ಸೇರಿ ಇದುವರೆಗೆ .2.64 ಲಕ್ಷ ಪರಿಹಾರ ಧನ ವಿತರಿಸಲಾಗಿದೆ ಎಂದು ತಿಳಿಸಿದರು.

ಆಗಸ್ಟ್‌ ತಿಂಗಳಲ್ಲಿ, ಪ್ರವಾಹ ಮತ್ತು ಅತಿವೃಷ್ಟಿಯಿಂದಾಗಿ ವಿವಿಧ ತಾಲೂಕುಗಳಲ್ಲಿ ಸಜ್ಜೆ, ತೊಗರಿ, ಸೂರ್ಯಕಾಂತಿ, ಹತ್ತಿ, ಕಬ್ಬು, ಹೆಸರು, ಮೆಕ್ಕೆಜೋಳ ಮತ್ತು ಉದ್ದು ಸೇರಿ ಒಟ್ಟು ಅಂದಾಜು 11,236 ಹೆಕ್ಟೇರ್‌ ಪ್ರದೇಶದಲ್ಲಿ ಕೃಷಿ ಬೆಳೆಗಳಿಗೆ ಹಾನಿಯಾಗಿದೆ. ಅತಿವೃಷ್ಟಿಮತ್ತು ಪ್ರವಾಹದಿಂದಾಗಿ ಬಬಲೇಶ್ವರ ಮತ್ತು ತಿಕೋಟಾ ತಾಲೂಕುಗಳಲ್ಲಿ ಅಂದಾಜು 236 ಹೆಕ್ಟೇರ್‌ನಷ್ಟುತೋಟಗಾರಿಕಾ ಬೆಳೆಗಳಿಗೆ ಹಾನಿಯಾಗಿದೆ. ಈ ಸಂಬಂಧ ಜಂಟಿ ಸಮೀಕ್ಷೆ ಕಾರ್ಯ ನಡೆಯುತ್ತಿದ್ದು, ಸಮೀಕ್ಷೆ ಮುಕ್ತಾಯದ ನಂತರ ನಿಯಮಾನುಸಾರ ಪರಿಹಾರಧನ ವಿತರಣೆಗೆ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.

ಪ್ರಕೃತಿ ವಿಕೋಪದಿಂದಾಗಿ ಮೂಲಭೂತ ಸೌಕರ್ಯಗಳಿಗೆ ಹಾನಿಯಾಗಿದೆ. 88 ಅಂಗನವಾಡಿ ಕಟ್ಟಡಗಳಿಗೆ ಹಾನಿಯಾಗಿದೆ. 46 ವಿದ್ಯುತ್‌ ಕಂಬಗಳು ಹಾನಿಗೀಡಾಗಿವೆ. ಮೇ 21ರಿಂದ ಜುಲೈ 15ರವರೆಗೆ 597 ಕಿಮೀಯಷ್ಟುಗ್ರಾಮೀಣ ರಸ್ತೆಗಳಿಗೆ ಹಾನಿಯಾಗಿದೆ ಎಂದು ತಿಳಿಸಿದರು.

ಚಿಕ್ಕಮಗಳೂರಲ್ಲಿ ಭಾರೀ ಮಳೆ: ಮನೆ ಮೇಲೆ‌ ಮರ ಬಿದ್ದು ಇಬ್ಬರ ದುರ್ಮರಣ

ಪ್ರಕೃತಿ ವಿಕೋಪ ನಿರ್ವಹಣೆಯನ್ನು ಜಿಲ್ಲಾಡಳಿತವು ಅಚ್ಚುಕಟ್ಟಾಗಿ ನಡೆಸುತ್ತಿದೆ. ಜಿಪಂ ಮತ್ತು ಜಿಲ್ಲಾ ಪೊಲೀಸ್‌ ಇಲಾಖೆಗಳಿಂದ ಉತ್ತಮ ಸಹಕಾರ ಸಿಗುತ್ತಿದೆ ಎಂದರು. ಜಿಲ್ಲೆಯ ತಹಸೀಲ್ದಾರ ಪಿಡಿ ಖಾತೆಯಲ್ಲಿ 578.20 ಲಕ್ಷ ಅನುದಾನ ಲಭ್ಯವಿದೆ ಎಂದರು.

ಮೂಡಿಗೆರೆ: ಮನೆ ಮೇಲೆ ಮರಬಿದ್ದು ಇಬ್ಬರು ಮಹಿಳೆಯರು ಸಾವು, ಮಕ್ಕಳು ಅಪಾಯದಿಂದ ಪಾರು

ಸುದ್ದಿಗೋಷ್ಠಿಯಲ್ಲಿ ಶಾಸಕ ಸೋಮನಗೌಡ ಪಾಟೀಲ ಸಾಸನೂರ, ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಚ್‌.ಡಿ.ಆನಂದಕುಮಾರ, ಜಿಪಂ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ರಾಹುಲ್‌ ಶಿಂಧೆ ಮತ್ತಿತರ ಹಿರಿಯ ಅಧಿಕಾರಿಗಳು ಇದ್ದರು.

click me!