ಉತ್ತರಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಐತಿಹಾಸಿಕ ಪ್ರಸಿದ್ಧ ಮಿರ್ಜಾನ್ ಕೋಟೆಯಲ್ಲಿ ವಿದ್ಯುತ್ ಅಲಂಕೃತ ತ್ರಿವರ್ಣ ಧ್ವಜ ಕಂಗೊಳಿಸುತ್ತಿದ್ದು, ಜಿಲ್ಲೆಯ ಜನರು ಮಾತ್ರವಲ್ಲದೆ ವಿವಿಧ ಕಡೆಗಳಿಂದ ಬರುವ ಪ್ರವಾಸಿಗರನ್ನು ಕೂಡ ಆಕರ್ಷಿಸುತ್ತಿದೆ.
ವರದಿ: ಭರತ್‌ರಾಜ್ ಕಲ್ಲಡ್ಕ, ಏಷಿಯಾನೆಟ್ ಸುವರ್ಣ ನ್ಯೂಸ್
ಉತ್ತರಕನ್ನಡ (ಆ.11): ದೇಶದಾದ್ಯಂತ 75ನೇ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವದ ಸಂಭ್ರಮ ರಂಗೇರುತ್ತಿದೆ. ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ಕರೆ ಕೊಟ್ಟ ಹಿನ್ನೆಲೆ ಮನೆ ಮನೆಗಳಲ್ಲಿ ತಿರಂಗಾ ಹಾರಾಟ ಕಾಣಿಸುತ್ತಿದೆ. ಈ ನಡುವೆ ಉತ್ತರಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಐತಿಹಾಸಿಕ ಪ್ರಸಿದ್ಧ ಮಿರ್ಜಾನ್ ಕೋಟೆಯಲ್ಲಿ ವಿದ್ಯುತ್ ಅಲಂಕೃತ ತ್ರಿವರ್ಣ ಧ್ವಜ ಕಂಗೊಳಿಸುತ್ತಿದ್ದು, ಜಿಲ್ಲೆಯ ಜನರು ಮಾತ್ರವಲ್ಲದೆ ವಿವಿಧ ಕಡೆಗಳಿಂದ ಬರುವ ಪ್ರವಾಸಿಗರನ್ನು ಕೂಡ ಆಕರ್ಷಿಸುತ್ತಿದೆ. ಉತ್ತರಕನ್ನಡ ಜಿಲ್ಲೆಯ ಕುಮಟಾ ತಾಲೂಕಿನಲ್ಲಿ ನಿರ್ಮಿಸಿದ ಮಿರ್ಜಾನ್ ಕೋಟೆ ಇದೀಗ ಕಂಗೊಳಿಸುವ ರಾಷ್ಟ್ರ ದ್ವಜದ ಬಣ್ಣದಿಂದ ಕಣ್ಮನ ಸೆಳೆಯುತ್ತಿದೆ. ಈ ಕೋಟೆಯ ಅಂದದ ಸೊಬಗನ್ನು ಕಂಡು ಖುದ್ದಾಗಿ ಮುಖ್ಯಮಂತ್ರಿಗಳೇ ಟ್ವೀಟ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದು, ಇದೀಗ ಪ್ರಮುಖ ಜನಾಕರ್ಷಣಾ ಕೇಂದ್ರವಾಗಿ ಮಾರ್ಪಟ್ಟಿದೆ. ದೀಪಾಲಂಕಾರದಿಂದ ಸಿಂಗಾರಗೊಂಡಿರುವ ಈ ಕೆಂಪು ಕಲ್ಲಿನ ಕೋಟೆಯ ಸುಂದರಂತೆ ಜನರ ಮನಸ್ಸನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದ್ದು, ಇದನ್ನು ನೋಡಲೆಂದೇ ವಿವಿಧೆಡೆಯಿಂದ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಿದ್ದಾರೆ.
undefined
ಕುಮಟಾ-ಗೋಕರ್ಣ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಗೋಕರ್ಣದಿಂದ 9 ಕಿ.ಮೀ. ದಕ್ಷಿಣಕ್ಕೆ ಹೆದ್ದಾರಿಯಿಂದ ಪಶ್ಚಿಮ ದಿಕ್ಕಿನಲ್ಲಿ ಸುಮಾರು 0.5 ಕಿ.ಮೀ ದೂರದಲ್ಲಿದೆ ಈ ಮಿರ್ಜಾನ್ ಕೋಟೆ. ಕಾಳು ಮೆಣಸಿನ ರಾಣಿ ಎಂದೇ ಪ್ರಸಿದ್ಧವಾಗಿರುವ ರಾಣಿ ಚೆನ್ನಭೈರಾದೇವಿ 16ನೇ ಶತಮಾನದಲ್ಲಿ ಕುಮಟಾ ತಾಲೂಕಿನ ಈ ಮಿರ್ಜಾನ್ ಕೋಟೆಯನ್ನು ನಿರ್ಮಿಸಿದ್ದು, ಇದು ದಖ್ಖನ್ ಹಾಗೂ ಮೊಗಲ್ ವಾಸ್ತುಶೈಲಿಯ ಮಿಶ್ರಣವಾಗಿದೆ. ಅಘನಾಶಿನಿ ನದಿ ತಟದಲ್ಲಿರುವ ಈ ಕೋಟೆ ನೋಡಲು ದೆಹಲಿಯ ಕೆಂಪುಕೋಟೆಯನ್ನು ಹೋಲುತ್ತದೆ.
ಪ್ರವಾಸಿಗರ ಪ್ರಮುಖ ಆಕರ್ಷಣಾ ಕೇಂದ್ರವಾಗಿರುವ ಮಿರ್ಜಾನ್ ಕೋಟೆ ಇಂದಿಗೂ ಸುಸ್ಥಿತಿಯಲ್ಲಿದ್ದು, ರಾಜ್ಯ ಹಾಗೂ ಹೊರ ರಾಜ್ಯದ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡಿ ಇತಿಹಾಸದ ಅದ್ಭುತ ರಚನೆಯೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಾರೆ. 75ನೇ ಸ್ವಾತಂತ್ರ್ಯೋತ್ಸವದ ಹಿನ್ನೆಲೆ ಮೊದಲ ಬಾರಿಗೆ ಮಿರ್ಜಾನ್ ಕೋಟೆಗೆ ರಾಷ್ಟ್ರಧ್ವಜ ಬಣ್ಣದ ವಿದ್ಯುತ್ ದೀಪದ ಅಲಂಕಾರ ಮಾಡಲಾಗಿದ್ದು, ಇದಕ್ಕೆ ಸುಮಾರು ಮೂರು ಸಾವಿರಕ್ಕೂ ಹೆಚ್ಚು ಹೈ ಓಲ್ಟೇಜ್ ಬಲ್ಪ್ ಗಳನ್ನು ಬಳಕೆ ಮಾಡಲಾಗಿದೆ.
ಚಿತ್ರದುರ್ಗ: ಕೋಟೆನಾಡಲ್ಲಿ ಗಮನ ಸೆಳೆಯುತ್ತಿರುವ ತ್ರಿವರ್ಣ ಧ್ವಜದ ಲೈಟಿಂಗ್ಸ್
ತ್ರಿವರ್ಣ ಧ್ವಜ ಬಣ್ಣದ ವಿದ್ಯುತ್ ಅಲಂಕಾರ ಹಾಗೂ ರಾಷ್ಟ್ರಪ್ರೇಮವನ್ನು ತಟ್ಟಿ ಎಚ್ಚರಿಸುವಂತಹ ಹಾಡಿನಿಂದ ಕೋಟೆಯ ಅಂದ ಮತ್ತಷ್ಟು ಹೆಚ್ಚಿದೆ. ಪುರಾತತ್ವ ಇಲಾಖೆ ಹಾಗೂ ಜಿಲ್ಲಾಡಳಿತದ ಸಹಯೋಗದಲ್ಲಿ ಈ ಪ್ರಸಿದ್ಧ ಕೋಟೆಗೆ ವಿದ್ಯುತ್ ದೀಪಾಲಂಕಾರ ಮಾಡಲಾಗಿದ್ದು, ಪ್ರತಿಯೊಬ್ಬರು ಈ ಸ್ಥಳಕ್ಕೆ ತೆರಳಿ ಸುಂದರ ದೃಶ್ಯವನ್ನು ಕಣ್ತುಂಬಿಕೊಳ್ಳಬೇಕೆಂದು ಉತ್ತರಕನ್ನಡ ಜಿಲ್ಲಾಧಿಕಾರಿ ವಿನಂತಿಸಿಕೊಂಡಿದ್ದಾರೆ.
ರಾಷ್ಟ್ರಧ್ವಜಕ್ಕಿಂತಲೂ ಎತ್ತರದಲ್ಲಿ ಎಬಿವಿಪಿ ಧ್ವಜ ಹಾರಾಟ, ಶಿಕ್ಷಣ ಸಚಿವರ ವಿರುದ್ಧ ದೂರು
ಒಟ್ಟಿನಲ್ಲಿ ಕೇಂದ್ರ ಸರ್ಕಾರದ ಪುರಾತತ್ವ ಇಲಾಖೆಯ ಅಡಿಯಲ್ಲಿ ಬರುವ ಮಿರ್ಜಾನ್ ಕೋಟೆಗೆ ಇದೇ ಮೊದಲ ಬಾರಿಗೆ ವಿದ್ಯುತ್ ದೀಪಗಳ ಅಲಂಕಾರ ಮಾಡಿರುವುದು ಜಿಲ್ಲೆಯ ಜನರಿಗೆ ಸಂತಸ ತಂದಿದೆ. ಈ ಸುಂದರ ದೃಶ್ಯವನ್ನು ನೋಡಲೆಂದು ವಿವಿಧೆಡೆಯಿಂದ ಜನರು ಆಗಮಿಸುತ್ತಿದ್ದು, ಪ್ರವಾಸೋದ್ಯಮಕ್ಕೂ ಇದು ಪೂರಕವಾಗಿದೆ.