ದಾವಣಗೆರೆ (ಸೆ.28) : ಮಧ್ಯವರ್ತಿಗಳ ಆವಾಸ ಸ್ಥಾನವಾಗಿರುವ ದಾವಣಗೆರೆ ತಾಲೂಕು ಕಚೇರಿ ಅವ್ಯವಸ್ಥೆ ಸರಿಪಡಿಸುವ ಜೊತೆಗೆ ಸಾರ್ವಜನಿಕರ ಜೊತೆಗೆ ಬೇಜವಾಬ್ದಾರಿಯಿಂದ ವರ್ತಿಸುವ ಅಧಿಕಾರಿ, ಸಿಬ್ಬಂದಿಗಳ ವಿರುದ್ಧ ಸೂಕ್ತ ಶಿಸ್ತು ಕ್ರಮ ಕೈಗೊಳ್ಳಲು ರೈತ ಸಂಘಟನೆಗಳ ಮುಖಂಡರು ಜಿಲ್ಲಾಧಿಕಾರಿ ಶಿವಾನಂದ ಕಾಪಶಿಗೆ ಒಕ್ಕೊರಲಿನಿಂದ ಒತ್ತಾಯಿಸಿದರು.
ಜಮೀನು ವಿವಾದ: ತಹಸೀಲ್ದಾರ್ ಎದುರು ಗ್ರಾಪಂ ಸದಸ್ಯ ಆತ್ಮಹತ್ಯಗೆ ಯತ್ನ
ನಗರದ ತಾಲೂಕು ಕಚೇರಿಗೆ ಮಂಗಳವಾರ ಭೇಟಿ ನೀಡಿದ್ದ ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಬಳಿ ತಮ್ಮ ದೂರು, ಅಹವಾಲು, ಅಸಮಾಧಾನ ತೋಡಿಕೊಂಡ ರೈತರು, ಗ್ರಾಮೀಣರು ತಾಲೂಕು ಕಚೇರಿಯಲ್ಲಿ ಆಗಿರುವ ಅವ್ಯವಸ್ಥೆಯ ವಿರುದ್ಧ ತೀವ್ರ ಆಕ್ರೋಶವನ್ನು ಹೊರ ಹಾಕಿದರು. ಕಬ್ಬೂರು ಗ್ರಾಮದ ಮಲ್ಲಿಕಾರ್ಜುನ ಕಬ್ಬೂರು, ತಹಸೀಲ್ದಾರ್ ಕಚೇರಿಗೆ ಪಹಣಿ ವ್ಯತ್ಯಾಸ, ಪೋಡಿ ಸಮಸ್ಯೆ ಪರಿಹರಿಸಲು ಮನವಿ ಮಾಡಲು ಬರುವ ಸಿಬ್ಬಂದಿ ಜೊತೆಗೆ ತಹಸೀಲ್ದಾರ್ ಸೌಜನ್ಯದಿಂದ ವರ್ತಿಸುವುದಿಲ್ಲ. ತಹಸೀಲ್ದಾರ್, ತಾಲೂಕು ಕಚೇರಿ ಸಿಬ್ಬಂದಿ ಬೇಜವಾಬ್ದಾರಿ, ನಿರ್ಲಕ್ಷ್ಯದಿಂದಾಗಿ ರೈತರು ವೃಥಾ ತಾಲೂಕು ಕಚೇರಿಗೆ ಪದೇಪದೇ ಅಲೆಯುವ ಪರಿಸ್ಥಿತಿ ನಿರ್ಮಾಣವಾಗಿದೆ. 2 ವರ್ಷದ ಹಿಂದೆ ನಿಯಮಾನುಸಾರ ಪಾಲು ವಿಭಾಕ ಮಾಡಿಕೊಂಡಿದ್ದರೂ ಈವರೆಗೆ ಖಾತಾ ಪ್ರಕ್ರಿಯೆ ಮಾಡಿಕೊಟ್ಟಿಲ್ಲ ಎಂದು ದಾಖಲೆ ಸಮೇತ ಡಿಸಿ ಕಾಪಶಿ ಬಳಿ ದೂರಿದರು.
ವಾರದಲ್ಲೇ ಸಮಸ್ಯೆ ಪರಿಹರಿಸಿ:
ಪಾಲು ವಿಭಾಗ ಖಾತಾ ಸಂದರ್ಭದಲ್ಲಿ ತಾಲೂಕು ಕಚೇರಿಯ ಆರ್‌ಆರ್‌ಟಿ ವಿಭಾಗದಲ್ಲಿ ತಮ್ಮ ಹಾಗೂ ತಮ್ಮ ಸಹೋದರರು ಹೆಸರು, ಇನ್ಷಿಯಲ್ ಪಹಣಿಯಲ್ಲಿ ಬೇಕಂತಲೇ ತಪ್ಪು ದಾಖಲು ಮಾಡಿದ್ದಾರೆ. ಅದನ್ನು ಸರಿಪಡಿಸುವಂತೆ ವರ್ಷದ ಹಿಂದೆಯೇ ನಿಯಮಾನುಸಾರ ಅರ್ಜಿ ಸಲ್ಲಿಸಿದ್ದರೂ ಇಂದಿಗೂ ತಾಲೂಕು ಕಚೇರಿಗೆ ನಾವೆಲ್ಲರೂ ಅಲೆದಾಡುವುದು, ಬೇಕಾಬಿಟ್ಟಿಯಾಗಿ ವರ್ತಿಸುವ ತಹಸೀಲ್ದಾರ, ಸಿಬ್ಬಂದಿ ಕಂಡು ಹೋಗುವುದೇ ಆಗಿದೆ ಎಂದು ದೂರಿದರು. ಅದಕ್ಕೆ ಸ್ಪಂದಿಸಿದ ಡಿಸಿ ಶಿವಾನಂದ ಕಾಪಶಿ, ಇನ್ನು ಒಂದು ವಾರದಲ್ಲೇ ಈ ಪಹಣಿ, ಪೋಡಿ ಸಮಸ್ಯೆ ಪರಿಹರಿಸಲು ತಹಸೀಲ್ದಾರ್‌ಗೆ ತಾಕೀತು ಮಾಡಿದರು.
ಅಲೆದರೂ ಕಡತ ನಮ್ಮಲ್ಲಿಲ್ಲ:
ಬಿಜೆಪಿ ರೈತ ಮೋರ್ಚಾ ಮುಖಂಡ, ಎಪಿಎಂಸಿ ಮಾಜಿ ಅಧ್ಯಕ್ಷ ಬಿ.ಎಂ.ಸತೀಶ ಮಾತನಾಡಿ, ಕೊಳೇನಹಳ್ಳಿ ಗ್ರಾಮದ ಹಂಪಮ್ಮ 2019ರಿಂದ ತನ್ನ ಜಮೀನಿನ ಹದ್ದುಬಸ್ತಿಗಾಗಿ ಪ್ರತಿ ವರ್ಷದಂತೆ 4 ಅರ್ಜಿ ಸಲ್ಲಿಸಿದ್ದರೂ ಹದ್ದುಬಸ್ತು ಆಗಿಲ್ಲ. ಅಣಬೇರು ಗ್ರಾಮದ ಗಂಗಮ್ಮ ಜಮೀನು ಮಾಯಕೊಂಡ ಹೋಬಳಿ ಒಂಟಿಹಾಳು ಗ್ರಾಮದ ಸ.ನಂ.18, 3ಪಿ1ರಲ್ಲಿ 34 ಗುಂಟೆ ಇದ್ದು, ಅರ್ಜಿದಾರರು ಪೋಡಿಗಾಗಿ 20.12.2019ರಲ್ಲೇ ಅರ್ಜಿ ಸಲ್ಲಿಸಿದ್ದಾರೆ. ಇದಾಗ ಕೆಲ ತಿಂಗಳಲ್ಲೇ ಹೊಲದ ಸರ್ವೇ ಆಗಿದೆ. ನಂತರ ಅರ್ಜಿದಾರರಿಗೆ ಸರ್ವೇಯವರು ನಿಮ್ಮ ಹೊಲದ ಅಳತೆ ತಪ್ಪಾಗಿದೆ. ಪಹಣಿಯಲ್ಲಿ ಒಂದು ರೀತಿ, ಹೊಲದ ಅಳತೆ ಮತ್ತೊಂದು ರೀತಿ ಬದಲಾವಣೆ ಇದೆ ಅಂತಾ ಹೇಳಿದ್ದಷ್ಟೇ. ಮತ್ತೆ ನಾಲ್ಕೈದು ಸಲ ತಾಲೂಕು ಕಚೇರಿಗೆ ಅಲೆದರೂ ಕಡತ ನಮ್ಮಲ್ಲಿಲ್ಲ. ಅಲ್ಲಿ ಹೋಗಿ, ಇಲ್ಲಿ ಹೋಗಿ ಅಂತಾ ವೃದ್ಧೆ ಅರ್ಜಿದಾರರಾದ ಗಂಗಮ್ಮನಿಗೆ ಅಲೆದಾಡಿಸಿದ್ದಾರೆ. ಕೋವಿಡ್ ವೇಳೆಯಲ್ಲೂ ಅಲೆದಾಡಿಸಿ, ಇಂದಿನವರೆಗೂ ಸಮಸ್ಯೆ ಪರಿಹರಿಸಿಲ್ಲ ಎಂದು ಆರೋಪಿಸಿದರು. ರೈತ ಸಂಘದ ರಾಜ್ಯ ಕಾರ್ಯದರ್ಶಿ ಬಲ್ಲೂರು ರವಿಕುಮಾರ, ಪರಶುರಾಮ ರೆಡ್ಡಿ, ಬಸವರಾಜ ಬಲ್ಲೂರು, ಶಿವಪ್ಪ ರೆಡ್ಡಿ ಇತರರಿದ್ದರು.
ಸಬ್ ರಿಜಿಸ್ಟ್ರಾರ್ ಕಚೇರಿಯ ಆಂಟಿ ಛೇಂಬರ್ ಮಾಡಿ ಹಣ ವಸೂಲು: ಬಿ.ಎಂ.ಸತೀಶ ಆರೋಪ
ದಾವಣಗೆರೆ ಉಪ ನೋಂದಣಾಧಿಕಾರಿ ಕಚೇರಿ ವಿಪರೀತ ಭ್ರಷ್ಟಾಚಾರದ ತಾಣವಾಗಿ ಮಾರ್ಪಟ್ಟಿದೆ. ಉಪ ನೋಂದಣಾಧಿಕಾರಿಗಳು ಆಂಟಿ ಛೇಂಬರ್ ಮಾಡಿ ಹಣ ಪಡೆಯುತ್ತಿದ್ದಾರೆ ಎಂದು ಬಿಜೆಪಿ ರೈತ ಮೋರ್ಚಾ ಮುಖಂಡ, ಎಪಿಎಂಸಿ ಮಾಜಿ ಅಧ್ಯಕ್ಷ ಬಿ.ಎಂ.ಸತೀಶ ಆರೋಪಿಸಿದರು. ನಗರದ ತಾಲೂಕು ಕಚೇರಿಗೆ ಮಂಗಳವಾರ ಭೇಟಿ ನೀಡಿದ್ದ ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಬಳಿ ಉಪ ನೋಂದಣಾಧಿಕಾರಿಗಳ ಕಚೇರಿ ಭ್ರಷ್ಟಾಚಾರದ ಬಗ್ಗೆ ಎಳೆ ಎಳೆಯಾಗಿ ಬಿಡಿಸಿಟ್ಟರು, ಸಬ್ ರಿಜಿಸ್ಟ್ರಾರ್ ಕಚೇರಿ ಮಧ್ಯವರ್ತಿಗಳ ತಾಣವಾಗಿದೆ ಎಂದರು.
ದಿನವೊಂದಕ್ಕೆ ಎಷ್ಟುನೋಂದಣಿ?:
ತಕ್ಷಣವೇ ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ತಹಸೀಲ್ದಾರ್ ಬಸವರಾಜ ಕೋಟೂರು ಮುಖಾಂತರ ಸಬ್ ರಿಜಿಸ್ಟಾರ್ ಹೇಮಂತ್‌ಗೆ ಕರೆ ಮಾಡಿಸಿ, ಸ್ಥಳಕ್ಕೆ ಕರೆಸಿಕೊಂಡರು. ತಾಲೂಕು ಕಚೇರಿಗೆ ಧಾವಿಸಿದ ಉಪ ನೋಂದಣಾಧಿಕಾರಿ ಹೇಮಂತ್‌ರನ್ನು ದಿನವೊಂದಕ್ಕೆ ಎಷ್ಟುನೋಂದಣಿ ಮಾಡುತ್ತೀರಿ ಎಂಬುದಾಗಿ ಡಿಸಿ ಪ್ರಶ್ನಿಸಿದರು. ಆಗ ದಿನಕ್ಕೆ 100-120 ನೋಂದಣಿಯಾಗುತ್ತದೆಂದು ನೋಂದಣಾಧಿಕಾರಿ ಹೇಮಂತ್ ಡಿಸಿ ಕಾಪಶಿ ಗಮನಕ್ಕೆ ತಂದರು.
ಖೊಟ್ಟಿ ದಾಖಲೆ ಸೃಷ್ಟಿ: ಬೆಳಗಾವಿ ಡಿಸಿ, ತಹಸೀಲ್ದಾರ್ ವಿರುದ್ಧ FIR
ಆಗ ಮಧ್ಯ ಪ್ರವೇಶಿಸಿದ ರೈತ ಮುಖಂಡ ಬಿ.ಎಂ.ಸತೀಶ, ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಏನೇ ನೋಂದಣಿ, ಕೆಲಸ, ಕಾರ್ಯಗಳು ಆಗುವುದಿದ್ದರೂ ಮಧ್ಯವರ್ತಿಗಳ ಮೂಲಕವೇ ಆಗಬೇಕು. ನೋಂದಣಿ ಮೌಲ್ಯಕ್ಕೆ ಇಂತಿಷ್ಟುಹಣ ನಿಗದಿಪಡಿಸಿ, ಪಡೆಯುತ್ತಾರೆ. ಮೊದಲು ಆ ಕಚೇರಿಯ ಎಲ್ಲಾ ಸಿಸಿ ಕ್ಯಾಮೆರಾಗಳನ್ನು ಪರಿಶೀಲಿಸಿ, ಎಲ್ಲವೂ ಮಧ್ಯವರ್ತಿಗಳಿಂದಲೇ ಕೆಲಸ ಆಗುವುದು, ವ್ಯವಹರಿಸುವುದು ಸ್ಪಷ್ಟವಾಗುತ್ತದೆ ಎಂದು ಹೇಳಿದರು.
ಅದಕ್ಕೆ ಜಿಲ್ಲಾಧಿಕಾರಿ ಶಿವಾನಂದ ಕಾಪಶಿ, ಉಪ ನೋಂದಣಾಧಿಕಾರಿಗಳ ಕಚೇರಿ ಅಧಿಕಾರಿ, ಸಿಬ್ಬಂದಿ ಹಾಗೂ ನೋಂದಣಿಗೆ ಸಂಬಂಧಿಸಿದವರು ಮಾತ್ರವೇ ಇಂದಿನಿಂದಲೇ ಕಚೇರಿಯಲ್ಲಿ ಇದು ಕಾರ್ಯ ರೂಪಕ್ಕೆ ಬರಬೇಕು. ಮಧ್ಯವರ್ತಿಗಳಿಗೆ ಯಾವುದೇ ಕಾರಣಕ್ಕೂ ಕಚೇರಿಗೆ ಪ್ರವೇಶಿಸದಂತೆ ನಿಷೇಧಿಸಬೇಕು ಎಂದು ಉಪ ನೋಂದಣಾಧಿಕಾರಿ ಹೇಮಂತ್‌ರಿಗೆ ತಾಕೀತು ಮಾಡಿದರು.