ಸರ್ವಪಕ್ಷ ಸಭೆ ಕಾವೇರಿ ಜ್ವಲಂತ ಸಮಸ್ಯೆ ಬಗ್ಗೆ ಚರ್ಚಿಸಲು ಕರೆಯಲಾಗಿತ್ತು. ತುರ್ತಾಗಿ ಕಾವೇರಿ ನೀರು ಬಿಡುವ ವಿಚಾರವಾಗಿ ಚರ್ಚಿಸಬೇಕಿತ್ತು. ಹಾಗಾಗಿ, ಅಲ್ಲಿ ಕೃಷ್ಣೆಯ ಬಗ್ಗೆ ಮಾತನಾಡುವ ಪ್ರಶ್ನೆಯೇ ಬರುವುದಿಲ್ಲ. ಕ್ಯಾಬಿನೆಟ್‌ನಲ್ಲಿ, ಶಾಸಕರ ಪ್ರತ್ಯೇಕ ಸಭೆಯಲ್ಲಿ ಕೃಷ್ಣಾ ವಿಚಾರವಾಗಿ ಚರ್ಚೆ ಆಗಿದೆ ಎಂದ ಸಚಿವ ಎಂ.ಬಿ.ಪಾಟೀಲ
ವಿಜಯಪುರ(ಆ.25): ಆಲಮಟ್ಟಿ ಎತ್ತರ ಹೆಚ್ಚಳ ಸಂಬಂಧ ಭೂ ಪರಿಹಾರ ವಿತರಣೆ ಬಗ್ಗೆ ಮುಂದಿನ ವರ್ಷದಿಂದ ಜಾರಿಗೊಳಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರು ಭರವಸೆ ನೀಡಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಹೇಳಿದರು. ಗುರುವಾರ ನಗರದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಸರ್ವ ಪಕ್ಷಗಳ ತುರ್ತುಸಭೆಯಲ್ಲಿ ಕಾವೇರಿ ನೀರು ಬಿಡುವ ವಿಚಾರವಾಗಿ ಚರ್ಚಿಸಲಾಗಿದೆ ಎಂದು ತಿಳಿಸಿದರು.
ಸರ್ವ ಪಕ್ಷ ಸಭೆಯಲ್ಲಿ ಕಾವೇರಿ, ಮಹದಾಯಿ ನದಿ ವಿವಾದ ಚರ್ಚಿಸಿ ಕೃಷ್ಣಾ ನದಿ ವಿಚಾರವಾಗಿ ಚರ್ಚಿಸದೇ ಮಲತಾಯಿ ಧೋರಣೆ ಅನುಸರಿಸಲಾಗಿದೆ ಎಂಬ ವಿರೋಧಿಗಳ ಟೀಕೆಗೆ ಪ್ರತಿಕ್ರಿಯಿಸಿದ ಅವರು, ಸರ್ವಪಕ್ಷ ಸಭೆ ಕಾವೇರಿ ಜ್ವಲಂತ ಸಮಸ್ಯೆ ಬಗ್ಗೆ ಚರ್ಚಿಸಲು ಕರೆಯಲಾಗಿತ್ತು. ತುರ್ತಾಗಿ ಕಾವೇರಿ ನೀರು ಬಿಡುವ ವಿಚಾರವಾಗಿ ಚರ್ಚಿಸಬೇಕಿತ್ತು. ಹಾಗಾಗಿ, ಅಲ್ಲಿ ಕೃಷ್ಣೆಯ ಬಗ್ಗೆ ಮಾತನಾಡುವ ಪ್ರಶ್ನೆಯೇ ಬರುವುದಿಲ್ಲ. ಕ್ಯಾಬಿನೆಟ್‌ನಲ್ಲಿ, ಶಾಸಕರ ಪ್ರತ್ಯೇಕ ಸಭೆಯಲ್ಲಿ ಕೃಷ್ಣಾ ವಿಚಾರವಾಗಿ ಚರ್ಚೆ ಆಗಿದೆ ಎಂದರು.
ನಾವು ‘ಆಪರೇಷನ್ ಹಸ್ತ’ ಮಾಡುತ್ತಿಲ್ಲ, ಅವರೇ ಬರ್ತಿದ್ದಾರೆ: ಸಚಿವ ಎಂ.ಬಿ.ಪಾಟೀಲ್
ಇಂಡಿಯಾ ಒಕ್ಕೂಟ, ಸ್ಟಾಲಿನ್ ಮೆಚ್ಚಿಸಲು ತಮಿಳುನಾಡಿಗೆ ಕಾವೇರಿ ನೀರು ಬಿಟ್ಟಿದ್ದಾರೆ ಎಂಬ ಬಿಜೆಪಿ ಆರೋಪದಲ್ಲಿ ಹುರುಳಿಲ್ಲ. ಹಿಂದೆ ಎಐಡಿಎಂಕೆ, ಡಿಎಂಕೆ ಮೆಚ್ಚಿಸಲು ಬಿಜೆಪಿಯವರು ನೀರು ಬಿಟ್ಟಿದ್ದರಾ ಎಂದು ಎಂ.ಬಿ.ಪಾಟೀಲ ಟಾಂಗ್ ನೀಡಿದರು.
15 ಸಾವಿರ ಕ್ಯುಸೆಕ್ ತಮಿಳುನಾಡಿಗೆ ನೀರು ಬಿಡುವಂತೆ ಸಿಡಬ್ಲ್ಯೂಸಿ ಆದೇಶವಿದೆ. ನಾವು ಸರಿಯಾಗಿ ವಾದ ಮಂಡಿಸಿದಾಗ 10 ಸಾವಿರ ಕ್ಯುಸೆಕ್ ನೀರು ಬಿಡಲು ಆದೇಶವಾಗಿದೆ. ಇದನ್ನು ತಮಿಳುನಾಡಿನವರು ಒಪ್ಪಿಕೊಳ್ಳದೇ ಸಭೆಯಿಂದ ಎದ್ದು ಹೋಗಿದ್ದಾರೆ. ಪರಸ್ಪರ ಎರಡೂ ರಾಜ್ಯದವರು ಸುಪ್ರೀಂ ಮೊರೆ ಹೋಗಿದ್ದೇವೆ. ನಮ್ಮ ರಾಜ್ಯದ ಹಿತ ಕಾಯಲು ಬೇರೆ ರಾಜ್ಯದ ರಾಜಕೀಯ ಪಕ್ಷ ಓಲೈಸುವ ಪರಿಸ್ಥಿತಿ ಬಂದಿಲ್ಲ. ಇನ್ನು ಮುಂದೆ ಬರುವುದೂ ಇಲ್ಲ ಎಂದು ಹೇಳಿದರು.