ಆರ್ಥಿಕ ಸಬಲರಾದಾಗ ಮಾತ್ರ ಯಾವುದೇ ಸಮುದಾಯ ತಮ್ಮ ಆಸ್ಮಿತೆ ಉಳಿಸಿಕೊಳ್ಳಲು ಸಾಧ್ಯ ಎಂದು ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ತಿಳಿಸಿದರು.
ಮೈಸೂರು (ಆ.15): ಆರ್ಥಿಕ ಸಬಲರಾದಾಗ ಮಾತ್ರ ಯಾವುದೇ ಸಮುದಾಯ ತಮ್ಮ ಆಸ್ಮಿತೆ ಉಳಿಸಿಕೊಳ್ಳಲು ಸಾಧ್ಯ ಎಂದು ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ತಿಳಿಸಿದರು. ನಗರದಲ್ಲಿ ಉದ್ಯಮಿ ಒಕ್ಕಲಿಗ ವೇದಿಕೆ ಫಸ್ಟ್ ಸರ್ಕಲ್ ಸೊಸೈಟಿ ವತಿಯಿಂದ ಆಯೋಜಿಸಿರುವ ವಾರ್ಷಿಕ ಪ್ರತಿನಿಧಿಗಳ ಮತ್ತು ಹೂಡಿಕೆದಾರರ ಸಮಾವೇಶದಲ್ಲಿ ಸಾನಿಧ್ಯವಹಿಸಿ ಅವರು ಮಾತನಾಡಿದರು. ಕಾಲ ಬದಲಾದಂತೆ ಎಲ್ಲಾ ರೀತಿಯಿಂದಲೂ ಬದಲಾಗುವ ಅನಿವಾರ್ಯತೆ ಇದೆ. ಇಂದು ಒಕ್ಕಲಿಗರು ನೇಗಿಲು ಹಿಡಿದು ಕೃಷಿ ಮಾಡಿ ಬದುಕುತ್ತೇವೆ ಎನ್ನಲಾಗದು. ಕಾಲಕ್ಕೆ ತಕ್ಕಂತೆ ಬದಲಾಗಬೇಕು.
ಹಿಂದೆ ಜ್ಞಾನಕ್ಕೆ ಬ್ರಾಹ್ಮಣರು, ವ್ಯಾಪಾರಕ್ಕೆ ವೈಶ್ಯರು, ಆಡಳಿತಕ್ಕೆ ಕ್ಷತ್ರಿಯರು, ಸೇವೆಗೆ ಶೂದ್ರರೆಂದು ನಿಗದಿ ಮಾಡಿದರು. ಈಗ ಎಲ್ಲವೂ ಬದಲಾಗಿದೆ. ಹಾಗೆಯೇ ಇವತ್ತಿನ ಸಂದರ್ಭದಲ್ಲಿ ಒಕ್ಕಲಿಗರು ನೇಗಿಲು ಹಿಡಿದು ಕೃಷಿ ಮಾಡಿ ಬದುಕುತ್ತೇವೆ ಎನ್ನಲಾಗದು ಎಂದರು. ಒರಿಸ್ಸಾದ ಕೊನಾರ್ಕ್ ಸೂರ್ಯ ದೇವಸ್ಥಾನ ನಿರ್ಮಿಸಿದವರು ಒಕ್ಕಲಿಗರು. ಒಕ್ಕಲಿಗರು ನೇಗಿಲು ಹಿಡಿದು ವ್ಯವಸಾಯ ಮಾಡುತ್ತಿದ್ದರು. ಗಂಗ ಸಾಮ್ರಾಜ್ಯ ಸ್ಥಾಪಿ ಖಡ್ಗ ಹಿಡಿದು ರಾಜ್ಯವನ್ನಾಳಿದರು. ಗಂಗರ ಕಾಲದಲ್ಲಿ ಒಕ್ಕಲಿಗರಲ್ಲಿ ಯಾವುದೇ ಪಂಗಡ ಇರಲಿಲ್ಲ. ಹೊಯ್ಸಳರ ಅರಸ ವಿಷ್ಣುವರ್ಧನನ ಪತ್ನಿ ಶಾಂತಲೆ ಒಕ್ಕಲಿಗ ಸಮುದಾಯಕ್ಕೆ ಸೇರಿದವರು. ಅನಂತರ ನಾಡಪ್ರಭು ಕೆಂಪೇಗೌಡರು ಬಂದಿದ್ದಾಗಿ ಅವರು ತಿಳಿಸಿದರು.
ಚಾಮರಾಜನಗರದಲ್ಲಿ ಚಿರತೆ ದಾಳಿಗೆ ಹಸು ಬಲಿ: ಅರಣ್ಯಾಧಿಕಾರಿಗಳ ವಿರುದ್ಧ ಸ್ಥಳೀಯರ ಆಕ್ರೋಶ
ಕವಿ ಕುವೆಂಪು ತಾವು ಅನುಭವಿಸಿದ ನೋವನ್ನು ತಮ್ಮ ಸಾಹಿತ್ಯದ ಪಾತ್ರದ ಮೂಲಕ ಹೊರ ಹಾಕಿದ್ದಾರೆ. ಈ ಶೂದ್ರರೊಳಗೆ ಕವಿಗಳು ಉದಿಸುವರೇ? ಜ್ಞಾನಿಗಳು, ಸಾಹಿತಿಗಳು ಉದಿಸುವರೇ? ಎಂದು ಹೇಳಿಸಿದ್ದಾರೆ. ಈಗ ಬದುಕಿದ್ದರೆ ಈ ಶೂದ್ರರೊಳಗೆ ಉದ್ಯಮಿಗಳು ಉದಿಸುವರೇ? ಎಂದು ಕೇಳುತ್ತಿದ್ದಾಗಿ ವ್ಯಾಖ್ಯಾನಿಸಿದರು. ಭಾರತ ವಿಶ್ವದಲ್ಲಿ ಐದನೇ ಅತಿದೊಡ್ಡ ಆರ್ಥಿಕತೆ ಹೊಂದಿದೆ. ಅಮೆರಿಕ 26 ಟ್ರಿಲಿ ಯನ್, ಚೀನಾ 20 ಟ್ರಿಲಿಯನ್, ಭಾರತ 4 ಟ್ರಿಲಿಯನ್ ತಲುಪಲು ಕಷ್ಟಪಡುತ್ತಿದೆ. ದೇಶ ಆರ್ಥಿಕವಾಗಿ ಸದೃಢವಾಗಬೇಕಾದರೆ ಆಯಾಯ ಸಮುದಾಯಗಳು ಅಭಿವೃದ್ಧಿ ಹೊಂದಬೇಕು ಎಂದರು.
ಕಳೆದ ಶತಮಾನವನ್ನು ಮೂವರು ಆಳಿದ್ದಾರೆ. ಐನ್ ಸ್ಟೈನ್, ಚಾರ್ಲ್ಸ್ ಡಾರ್ವಿನ್ ಮತ್ತು ಸಿಗ್ಮನ್ ಫ್ರಾಯ್ಡ್. ಈ ಮೂವರು ಯಹೂದಿಗಳು. ಅತಿ ಹೆಚ್ಚು ನೊಬಲ್ ಪ್ರಶಸ್ತಿ ಪಡೆದರು. ಅಮೆರಿಕದ ಆರ್ಥಿಕತೆ ನಿಯಂತ್ರಿಸುತ್ತಿರುವವರು ಶೇ. 2ರ ಜನಸಂಖ್ಯೆಯ ಯಹೂದಿಗಳು ಎಂದು ಅವರು ಹೇಳಿದರು. ಶಾಸಕ ಜಿ.ಟಿ. ದೇವೇಗೌಡ ಮಾತನಾಡಿ, ಮೈಸೂರು ನಗರದ ಸುತ್ತಮುತ್ತಲಿನ 40 ಕಿ.ಮೀ. ವ್ಯಾಪ್ತಿಯಲ್ಲಿನ ಜಮೀನು ಒಕ್ಕಲಿಗರಿಗೆ ಸೇರಿದೆ. ಸಮಾಜಕ್ಕೆ ಅನ್ನ ನೀಡುವ ಕೆಲಸವನ್ನು ಒಕ್ಕಲಿಗ ಸಮಾಜ ಮಾಡುತ್ತಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಒಕ್ಕಲಿಗ ಸಮುದಾಯ ತೊಂದರೆ ಅನುಭವಿಸುತ್ತಿದೆ. ಒಕ್ಕಲಿಗ ಉದ್ಯಮಿಗಳು ಬದುಕು ಕಟ್ಟಿಕೊಳ್ಳುವುದರ ಜೊತೆಗೆ ಇತರರಿಗೂ ಉದ್ಯೋಗ ಕೊಡಬೇಕು ಎಂದರು.
ರಾಜಸ್ಥಾನದಿಂದ ಬಂದಿರುವವರು ಇಲ್ಲಿ ದೊಡ್ಡ ದೊಡ್ಡ ಉದ್ದಿಮೆ ಮಾಡುತ್ತಿದ್ದಾರೆ. ಈ ಮಣ್ಣಿನಲ್ಲಿ ಹುಟ್ಟಿರುವವರೂ ಉದ್ದಿಮೆ ಸ್ಥಾಪಿಸಬೇಕು. ಒಕ್ಕಲಿಗರು ಯಾವುದೇ ಪಕ್ಷದಲ್ಲಿದ್ದರೂ, ಸಮುದಾಯದ ವಿಚಾರ ಬಂದಾಗ ಪಕ್ಷ ಭೇದ ಮರೆತು ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಎಂದು ಅವರು ಹೇಳಿದರು. ಹಳ್ಳಿಯಲ್ಲಿ ಇಂದು ಮಾರ್ವಾಡಿಗಳು ಬೀಡುಬಿಟ್ಟಿದ್ದಾರೆ. ಉದ್ಯಮಗಳಲ್ಲಿ ಯಶಸ್ಸು ಕಂಡಿದ್ದಾರೆ. ಆದರೆ, ನಮ್ಮವರಿಗೆ ಎಲ್ಲಾ ಅವಕಾಶ ಇದ್ದರೂ ಅದು ಸಾಧ್ಯವಾಗುತ್ತಿಲ್ಲ. ನಮ್ಮ ಅಧಿಕಾರಿಗಳ ಬಗ್ಗೆ ಸರ್ಕಾರ ಸವಾರಿ ಮಾಡುತ್ತಿದೆ. ಆಯಾ ಸಮುದಾಯದ ಸಿಎಂ ಬಂದರೆ ಅವರವರಿಗೆ ಹೆಚ್ಚಿನ ಮಾನ್ಯತೆ ಸಿಗುತ್ತಿದೆ. ಇದು ಎಲ್ಲಾ ಕಾಲದಲ್ಲೂ ನಡೆದುಕೊಂಡು ಬಂದಿದೆ. ನಮ್ಮ ಸಮುದಾಯ ಮೇಲೆ ಬರಬೇಕು. ನಮ್ಮಲ್ಲಿ ಎಲ್ಲಾ ರೀತಿಯ ಶಕ್ತಿ ಇದೆ. ಅದರ ಸದ್ಬಳಕೆ ಆಗಬೇಕು ಎಂದು ಹೇಳಿದರು.
ಸುದೀಪ್ ಸರ್ ನನ್ನ ಇನ್ನೋಸೆಂಟ್ ಅಂದಿದ್ದು ಚೆಕ್ ಮಾಡ್ತಾ ಇದ್ದೀನಿ, ಹೌದೋ ಅಲ್ವೋ ಅಂತ: ಸಮರ್‌ಜಿತ್ ಲಂಕೇಶ್
ಆದಿಚುಂಚನಗಿರಿ ಮೈಸೂರು ಶಾಖಾಮಠದ ಶ್ರೀ ಸೋಮೇಶ್ವರನಾಥ ಸ್ವಾಮೀಜಿ, ಶಾಸಕ ಕೆ. ಹರೀಶ್ ಗೌಡ, ಐಪಿಎಸ್ ಅಧಿಕಾರಿ ಡಾ..ಎ.ಎನ್. ಪ್ರಕಾಶ್ ಗೌಡ, ಉದ್ಯಮಿ ಒಕ್ಕಲಿಗ ಸಂಸ್ಥೆ ಅಧ್ಯಕ್ಷ ಜಯರಾಮ್ ರಾಯಪುರ, ರಾಜ್ಯ ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ಮಂಜುಳಾ ಮಾನಸ, ಮಾಜಿ ಮೇಯರ್ ಮೋದಾಮಣಿ, ಬೆಂಗಳೂರು ಕೃಷಿ ವಿವಿ ಕುಲಪತಿ ಡಾ. ಸುರೇಶ್, ಎಫ್ಕೆಸಿಸಿಐ ಅಧ್ಯಕ್ಷ ಬಾಲಕೃಷ್ಣ, ಕಾಸಿಯಾ ಅಧ್ಯಕ್ಷ ರಾಜಗೋಪಾಲ್, ಒಕ್ಕಲಿಗರ ಸಂಘದ ನಿರ್ದೇಶಕ ಗಂಗಾಧರಗೌಡ, ಮಂಜೇಗೌಡ, ಉದ್ಯಮಿ ಒಕ್ಕಲಿಗ ಅಧ್ಯಕ್ಷ ನಂದೀಶ್, ಎಂಡಿಎ ಮಾಜಿ ಅಧ್ಯಕ್ಷ ಯಶಸ್ವಿನಿ ಸೋಮಶೇಖರ್, ವಿಧಾನ ಪರಿಷತ್ ಮಾಜಿ ಸದಸ್ಯರಾದ ಮರಿತಿಬ್ಬೇಗೌಡ, ಸಂದೇಶ್ ನಾಗರಾಜ್, ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಇದ್ದರು.