ರಾಜ್ಯದ ಹಳ್ಳಿಗಳಿಂದ ಮಣ್ಣು ಸಂಗ್ರಹಿಸಿ ದಿಲ್ಲಿ ಕರ್ತವ್ಯ ಪಥ್‍ನಲ್ಲಿ ಉದ್ಯಾನವನ: ಸಂಸದ ರಾಘವೇಂದ್ರ

By Kannadaprabha News  |  First Published Oct 21, 2023, 1:08 PM IST

ಮೇರಿ ಮಾಟಿ ಮೇರಾದೇಶ್ ಅಮೃತ ಕಳಶ ಯಾತ್ರೆಯು ದೇಶದ್ಯಾಂತ ಒಂದು ಪ್ರಮುಖ ಕಾರ್ಯಕ್ರಮವಾಗಿದೆ. ಎಲ್ಲ ಹಳ್ಳಿಗಳಿಂದ ಮಣ್ಣು ಸಂಗ್ರಹಿಸಿ, ದೆಹಲಿಯ ಕರ್ತವ್ಯ ಪಥ್‍ನಲ್ಲಿ ಉದ್ಯಾನವನ ನಿರ್ಮಿಸಲಾಗುವುದು ಎಂದು ಬಿ.ವೈ.ರಾಘವೇಂದ್ರ ಹೇಳಿದರು. 
 


ಶಿವಮೊಗ್ಗ (ಅ.21): ಮೇರಿ ಮಾಟಿ ಮೇರಾದೇಶ್ ಅಮೃತ ಕಳಶ ಯಾತ್ರೆಯು ದೇಶದ್ಯಾಂತ ಒಂದು ಪ್ರಮುಖ ಕಾರ್ಯಕ್ರಮವಾಗಿದೆ. ಎಲ್ಲ ಹಳ್ಳಿಗಳಿಂದ ಮಣ್ಣು ಸಂಗ್ರಹಿಸಿ, ದೆಹಲಿಯ ಕರ್ತವ್ಯ ಪಥ್‍ನಲ್ಲಿ ಉದ್ಯಾನವನ ನಿರ್ಮಿಸಲಾಗುವುದು ಎಂದು ಬಿ.ವೈ. ರಾಘವೇಂದ್ರ ಹೇಳಿದರು. ತಾಲೂಕು ಪಂಚಾಯಿತಿ ಕಚೇರಿ ಮುಂಭಾಗದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ನೆಹರು ಯುವ ಕೇಂದ್ರ, ತಾಪಂ ಕುವೆಂಪು ವಿವಿ ಎನ್‌ಎಸ್‌ಎಸ್ ಘಟಕ ಹಾಗೂ ವಿವಿಧ ಸಂಘ ಸಂಸ್ಥೆಗಳ ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ಮೇರಿ ಮಿಟ್ಟಿ ಮೇರಾ ದೇಶ್ ಅಮೃತ ಕಳಶ ಯಾತ್ರೆ ಮೆರವಣಿಗೆಗೆ ಚಾಲನೆ ನೀಡಿ ಅವರು ಮಾತನಾಡಿದರು.

ನಮ್ಮ ಜಿಲ್ಲೆಯ ಶಿಕಾರಿಪುರದ ಈಸೂರು ಗ್ರಾಮ ಸ್ವಾತಂತ್ರ್ಯ ಹೋರಾಟಕ್ಕೆ ಸಾಕ್ಷಿಯಾಗಿ ದೇಶದ ಗಮನ ಸೆಳೆದಿತ್ತು. ಕೆಳದಿ ಶಿವಪ್ಪ ನಾಯಕರು ಕೂಡ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಇಡೀ ದೇಶದಲ್ಲಿ ಲಕ್ಷಾಂತರ ಹೋರಾಟಗಾರರು ಸ್ವಾತಂತ್ರ್ಯಕ್ಕಾಗಿ ಪ್ರಾಣ ತೆತ್ತಿದ್ದಾರೆ. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿ 75 ವರ್ಷ ಪೂರೈಸಿದ ಆಜಾದಿ ಕಾ ಅಮೃತ ಮಹೋತ್ಸವ್ ಸಂದರ್ಭ ಪ್ರಧಾನಿ ನರೇಂದ್ರ ಮೋದಿ ಅವರ ಅಪೇಕ್ಷೆಯಂತೆ ಯುವಶಕ್ತಿಗೆ ಅರಿವು ಮೂಡಿಸುವ ಕೆಲಸವನ್ನು ದೇಶದ ಹಿತದೃಷ್ಟಿಯಿಂದ ಜಿಲ್ಲಾಡಳಿತ ಈ ಯೋಜನೆ ಮಾಡಿದೆ ಎಂದು ಹೇಳಿದರು.

Tap to resize

Latest Videos

ಶಾಸಕ ಆರಗ ಜ್ಞಾನೇಂದ್ರರಿಗೆ ಹಣ ಬಲ ಅಹಂಕಾರ: ಕಿಮ್ಮನೆ ರತ್ನಾಕರ್‌ ಟೀಕೆ

ದೆಹಲಿಯಲ್ಲಿ ಕೂಡ ಪ್ರಮುಖ ರಸ್ತೆಯಲ್ಲಿ ಕರ್ತವ್ಯ ಪಥ ಎಂದು ಘೋಷಣೆ ಮಾಡಿ ದೇಶದ 8 ಲಕ್ಷ ಗ್ರಾಮಗಳಿಂದ ಸಸಿ ಮತ್ತು ಮಣ್ಣು ತಂದು ಅಲ್ಲಿ ಸಸಿ ನೆಡುವ ಪುಣ್ಯದ ಕಾರ್ಯ ಮಾಡಲಾಗುತ್ತಿದೆ. ಇದರಲ್ಲಿ ಭಾಗವಹಿಸಿದ ಒಂದು ಅವಕಾಶ ನಿಮಗೂ ಸಲ್ಲತ್ತೆ ಎಂದರು. ಶಾಸಕ ಎಸ್.ಎನ್. ಚನ್ನಬಸಪ್ಪ ಮಾತನಾಡಿ, ಇದು ಮಣ್ಣು ಮಾತ್ರ ಅಲ್ಲ. ಮಾತೃಭೂಮಿ ಎಂದು ನಾವು ಈ ದೇಶದ ಮಣ್ಣನ್ನು ಪೂಜಿಸುತ್ತೇವೆ. ಉದಾತ್ತ ಭಾವನೆಯಿಂದ ಈ ಮಣ್ಣನ್ನು ಗೌರವಿಸುತ್ತೇವೆ. ಕರ್ತವ್ಯ ಪಥ ಈ ದೇಶಕ್ಕೆ ಮಾತ್ರವಲ್ಲ. ಜಗತ್ತಿಗೇ ಶಕ್ತಿ ತುಂಬುವಂಥದ್ದು ಎಂದರು.

ಜಿಲ್ಲಾಧಿಕಾರಿ ಡಾ. ಸೆಲ್ವಮಣಿ, ಜಿ.ಪಂ ಸಿಇಒ ಸ್ನೇಹಲ್ ಸುಧಾಕರ್ ಲೋಖಂಡೆ, ನೆಹರು ಯುವ ಕೇಂದ್ರದ ಅಧಿಕಾರಿ ಉಲ್ಲಾಸ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಶಿವಮೊಗ್ಗ ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್, ಭಾರತೀಯ ಅಂಚೆ ಇಲಾಖೆ ಹಾಗೂ ವಿವಿಧ ಸಂಘ ಸಂಸ್ಥೆಗಳು, ಕಾಲೇಜು ವಿದ್ಯಾರ್ಥಿಗಳು ಅಭಿಯಾನದಲ್ಲಿ ಭಾಗವಹಿಸಿದ್ದರು.

ತಾಲೂಕು ಪಂಚಾಯಿತಿ ಕಚೇರಿಯಿಂದ ಆಂರಭವಾದ ಮೆರವಣಿಗೆ ಜಿಲ್ಲಾಧಿಕಾರಿ ಕಚೇರಿ, ಕೋರ್ಟ್ ರಸ್ತೆ ಮಾರ್ಗವಾಗಿ ನೆಹರು ಒಳಾಂಗಣ ಕ್ರೀಡಾಂಗಣಕ್ಕೆ ತಲುಪಿತು. ಯಾತ್ರೆ ಬಳಿಕ ಕಳಶವನ್ನು ನೆಹರು ಯುವ ಕೇಂದ್ರಕ್ಕೆ ಹಸ್ತಾಂತರಿಸಲಾಗುತ್ತದೆ. ಅನಂತರ ಈ ಕಳಶವನ್ನು ರಾಷ್ಟ್ರೀಯ ಯುವ ಕಾರ್ಯಕರ್ತರು ದೆಹಲಿಗೆ ತೆಗೆದುಕೊಂಡು ಹೋಗಲಿದ್ದು, ಅಮೃತ ಕಳಶ ಯಾತ್ರೆಯನ್ನು ಇದೇ ತಿಂಗಳ ಕೊನೆ ವಾರದಲ್ಲಿ ದೆಹಲಿಯಲ್ಲಿ ಹಮ್ಮಿಕೊಳ್ಳಲಾಗುವುದು. ಈ ಮಣ್ಣಿನಿಂದ ದೆಹಲಿಯಲ್ಲಿ ಅಮೃತ ವಾಟಿಕಾ (ಉದ್ಯಾನವನ) ಮತ್ತು ಆಜಾದಿ ಕಾ ಅಮೃತ ಮಹೋತ್ಸವ ಸ್ಮಾರಕವನ್ನು ಕರ್ತವ್ಯ ಪಥ್, ಇಂಡಿಯಾ ಗೇಟ್‍ನಲ್ಲಿ ಸ್ಥಾಪಿಸಲಾಗುವುದು.

ರೈತರಿಗೆ ಸಿಹಿ ಸುದ್ದಿ ನೀಡಿದ ಸಚಿವ ಎಂ.ಸಿ.ಸುಧಾಕರ್: ಕೃಷಿಗೆ ನಿತ್ಯ 5 ತಾಸು ವಿದ್ಯುತ್ ಪೂರೈಕೆ

ಸ್ವಾತಂತ್ರ್ಯಕ್ಕಾಗಿ ಹೋರಾಡಿ ಪ್ರಾಣ ತೆತ್ತ ಯೋಧರು ಮತ್ತು ಭಾರತದ ಪರಂಪರೆಯನ್ನು ಉಳಿಸಿ ಬೆಳೆಸಿ ಮುನ್ನಡೆಸಿದ ರಾಜ ಮಹಾರಾಜರ ಬಗ್ಗೆ ಮತ್ತು ದೇಶದ ಸಂಸ್ಕಾರ-ಸಂಸ್ಕೃತಿಯ ಬಗ್ಗೆ ಯುವಕರಲ್ಲಿ ಅರಿವು ಮೂಡಿಸುವ ಸಲುವಾಗಿ ಕೇಂದ್ರ ಸರ್ಕಾರ ತಾಲೂಕು ಮಟ್ಟದ ಮೇರಿ ಮಾಟಿ ಮೇರಾ ದೇಶ್ ಅಮೃತ ಕಳಶ ಯಾತ್ರೆ ಹಮ್ಮಿಕೊಂಡಿದೆ
- ಬಿ.ವೈ.ರಾಘವೇಂದ್ರ, ಸಂಸದ

click me!