ಶಿವಮೊಗ್ಗ (ಜು.22): ಲಂಡನ್‌ನಿಂದ ಕೊಡುಗೆಯಾಗಿ ಶಿವಮೊಗ್ಗಕ್ಕೆ ಬಂದು ಸರಿಸುಮಾರು 4 ವರ್ಷ ಕಳೆದರೂ ಪ್ರತಿಷ್ಠಾಪನೆಗೆ ಕಾಲ ಕೂಡಿ ಬರದೆ ಪಾಲಿಕೆಯ ಕೊಠಡಿಯಲ್ಲಿ ಬಂಧಿಯಾಗಿದ್ದ ಬಸವೇಶ್ವರರ ಕಂಚಿನ ಪುತ್ಥಳಿಗೆ ಕೊನೆಗೂ ಪ್ರತಿಷ್ಠಾಪನೆಯಾಗುವ ಯೋಗ ಕೂಡಿ ಬಂದಿದೆ.
ಈ ಪ್ರತಿಮೆ ಸ್ಥಾಪನೆಗೆ ಇಡೀ ಸಮಾಜದ ಸಂಪೂರ್ಣ ಬೆಂಬಲವಿತ್ತು. ಆದರೂ ಪ್ರತಿಷ್ಠಾಪನೆಗೆ ಯೋಗಾಯೋಗ ಕೂಡಿ ಬಂದಿರಲಿಲ್ಲ. ಆದರೀಗ ಸರ್ಕಾರದ ಇಚ್ಛಾಶಕ್ತಿಯಿಂದಾಗಿ ಪ್ರತಿಮೆ ಪ್ರತಿಷ್ಠಾಪನೆಯಾಗಲಿದೆ. ಜು.24 ರಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಪ್ರತಿಮೆಯ ಪ್ರತಿಷ್ಠಾಪನೆ ನೆರವೇರಿಸಲಿದ್ದಾರೆ.
ಆಕಸ್ಮಿಕವಾಗಿ ಕೂಡಿ ಬಂದ ಯೋಗ:
2016ರ ಆಗಸ್ಟ್ 14 ರಂದು ಮಹಾನಗರ ಪಾಲಿಕೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅನಿವಾಸಿ ಭಾರತೀಯ ಹಾಗೂ ಲಂಡನ್‌ನ ಲ್ಯಾಂಬೆತ್ ಪ್ರಾಂತ್ಯದ ಮಾಜಿ ಮೇಯರ್ ಡಾ. ನೀರಜ್ ಪಾಟೀಲ್‌ರನ್ನು ಸನ್ಮಾನಿಸಲಾಯಿತು. ಆ ವೇಳೆ ಮಾತನಾಡಿದ್ದ ಡಾ. ನೀರಜ ಪಾಟೀಲ್, ಥೇಮ್ಸ್ ನದಿ ದಡದಲ್ಲಿ, ಬ್ರಿಟನ್ ಪಾರ್ಲಿಮೆಂಟ್ ಎದುರು ವಿಶ್ವದ ಮಹಾನ್ ಮಾನವತಾವಾದಿ ಬಸವೇಶ್ವರರ ಪುತ್ಥಳಿಯನ್ನು ಸ್ಥಾಪಿಸಿರುವ ಕುರಿತು ಪ್ರಸ್ತಾಪಿಸಿದರು. ಶಿವಮೊಗ್ಗ ನಗರದಲ್ಲೂ ಇದೇ ರೀತಿ ಬಸವೇಶ್ವರರ ಪ್ರತಿಮೆ ಸ್ಥಾಪಿಸುವುದಾದರೆ 3 ಅಡಿ ಎತ್ತರದ ಕಂಚಿನ ಪ್ರತಿಮೆಯೊಂದನ್ನು ಲ್ಯಾಂಬೆತ್ ಬಸವೇಶ್ವರ ಫೌಂಡೇಶನ್ ವತಿಯಿಂದ ಕೊಡುಗೆಯಾಗಿ ನೀಡುವುದಾಗಿಯೂ ಪ್ರಕಟಿಸಿದರು.
ಬಿಎಸ್‌ವೈ ಕನಸಿನ ಯೋಜನೆ, ವಿಧಾನಸೌಧದಲ್ಲಿ ಬಸವೇಶ್ವರ ಪ್ರತಿಮೆ ಅನುಮತಿ!
ಕಾಕತಾಳೀಯ ಎಂಬಂತೆ ಇದಕ್ಕೆ ಮೂರು ತಿಂಗಳು ಮೊದಲು ನಡೆದಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಆಗ ಪ್ರತಿಪಕ್ಷದ ನಾಯಕರಾಗಿದ್ದ ಬಿ.ಎಸ್. ಯಡಿಯೂರಪ್ಪ ಅವರು ಜಗಜ್ಯೋತಿ ಬಸವೇಶ್ವರ ಪ್ರತಿಮೆ ಸ್ಥಾಪಿಸುವ ಘೋಷಣೆ ಮಾಡಿದ್ದರು. ಈ ಎರಡೂ ಘಟನೆಯನ್ನು ಒಗ್ಗೂಡಿಸಿ ಲಂಡನ್‌ನಿಂದ ಇಲ್ಲಿಗೆ ಪ್ರತಿಮೆ ತಂದು ಅದನ್ನು ಪ್ರತಿಷ್ಠಾಪಿಸಲು ಪಾಲಿಕೆ ನಿರ್ಧರಿಸಿತು.
ನಗರಕ್ಕೆ ಬಂದ ಪ್ರತಿಮೆ: ಡಾ. ನೀರಜ್ ಪಾಟೀಲ್ ಆಹ್ವಾನದಂತೆ ಲಂಡನ್‌ಗೆ ತೆರಳಿದ ಆಗಿನ ಮೇಯರ್ ಏಳುಮಲೈ ಬಾಬು ಅವರು 2017ರ ಅಕ್ಟೋಬರ್ 5 ರಂದು ಬಸವೇಶ್ವರರ ಕಂಚಿನ ಪುತ್ಥಳಿಯನ್ನು ನಗರಕ್ಕೆ ತಂದರು. ಇದರ ಸ್ಥಾಪನೆಗಾಗಿ 2016-17ನೇ ಸಾಲಿನ ಪಾಲಿಕೆಯ ಆಯವ್ಯಯದಲ್ಲಿ ಹಣ ಕೂಡ ನಿಗದಿಗೊಳಿಸಲಾಯಿತು. ಆದರೆ ಏಕೋ ಏನೋ ಪ್ರತಿಷ್ಠಾಪನೆ ಆಗಲೇ ಇಲ್ಲ. ಹೋರಾಟವೂ ನಡೆಯಿತು. ಯಾರ ಪ್ರತಿಮೆಯನ್ನೂ ಸ್ಥಾಪಿಸುವಂತಿಲ್ಲ ಎಂಬ ಹೈಕೋರ್ಟ್ ಆದೇಶವನ್ನು ತೋರಿಸಲಾಯಿತು.
ಕೊನೆಗೆ ಸರ್ಕಾರ ತನ್ನ ಇಚ್ಛಾಶಕ್ತಿ ಪ್ರದರ್ಶಿಸಿತು. ಇದೇ ಜು.15 ರಂದು ಕ್ಯಾಬಿನೆಟ್‌ನಲ್ಲಿ ಇದನ್ನೊಂದು ವಿಶೇಷ ಪ್ರಕರಣ ಎಂದು ಪರಿಗಣಿಸಿ ಬಸವೇಶ್ವರ ಪುತ್ಥಳಿ ಸ್ಥಾಪಿಸಲು ನಿರ್ಣಯ ಕೈಗೊಂಡು ಅನುಮತಿ ನೀಡಲಾಯಿತು. ಶಿವಮೊಗ್ಗ ನಗರದ ಗಾಂಧಿ ಪಾರ್ಕ್ ಪ್ರವೇಶ ದ್ವಾರದ ಎದುರು ಈ ಪುತ್ಥಳಿ ಸ್ಥಾಪನೆಗೆ ಜಾಗ ಗುರುತಿಸಲಾಗಿದ್ದು, 32 ಲಕ್ಷ ರು. ವೆಚ್ಚದಲ್ಲಿ ಜಾಗ ಸಿದ್ಧಗೊಳಿಸಲಾಗಿದೆ.
ಇದೊಂದು ಮಹತ್ಕಾರ್ಯ ಎಂದೇ ಭಾವಿಸಿದ್ದೇನೆ. ವಿವಿಧ ಕಾರಣದಿಂದ ಸುದೀರ್ಘ ಕಾಲ ಕೂಡಿ ಬರದ ಯೋಗ ಇದೀಗ ಬಂದಿದೆ. ಮುಖ್ಯಮಂತ್ರಿ ಅವರು ಪ್ರತಿಮೆಯನ್ನು ಅನಾವರಣಗೊಳಿಸಲಿದ್ದಾರೆ. ಪುತ್ಥಳಿ ಸ್ಥಾಪನೆಗೆ ಅನುಮೋದನೆ ನೀಡಿದ ಸಿಎಂ ಯಡಿಯೂರಪ್ಪ, ಸಚಿವ ಈಶ್ವರಪ್ಪ, ಸಂಸದ ಬಿ. ವೈ. ರಾಘವೇಂದ್ರ ಸೇರಿದಂತೆ ಕಾರಣೀಭೂತರಾದ ಎಲ್ಲರನ್ನೂ ಅಭಿನಂದಿಸುತ್ತೇನೆ.
-ಸುನೀತಾ ಅಣ್ಣಪ್ಪ, ಮೇಯರ್