* ಜೆಡಿಎಸ್ ಮುಖಂಡ, ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷ ಹುಣಸೀಮರದ ಆಕ್ಷೇಪ
* ಉತ್ತಮ ನಾಯಕನಿಗೆ ಅನ್ಯಾಯ ಮಾಡಬಾರದು
* ಮುಖ್ಯಮಂತ್ರಿ ಬದಲಾವಣೆಗೆ ಮುಂದಾಗಿರುವ ಕೇಂದ್ರದ ಬಿಜೆಪಿ ನಾಯಕರು
ಧಾರವಾಡ(ಜು.22): ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಬದಲಾವಣೆ ಮಾಡುವುದು ವೀರಶೈವ ಲಿಂಗಾಯತ ಸಮುದಾಯಕ್ಕೆ ಮಾಡುವ ಅವಮಾನ ಎಂದು ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ, ಜೆಡಿಎಸ್ ಮುಖಂಡ ಗುರುರಾಜ ಹುಣಸಿಮರದ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಬದಲಾವಣೆ ಮಾಡುವ ಚಿಂತನೆ ಮಾಡಬಾರದಿತ್ತು. ಒಂದು ವೇಳೆ ಬದಲಾವಣೆ ಮಾಡಿದರೆ ಬರುವ ದಿನಗಳಲ್ಲಿ ಸಮಾಜದಿಂದ ಬಿಜೆಪಿಗೆ ಬೆಂಬಲ ಸಿಗದೇ ಇರಬಹದು. ಬಿಜೆಪಿ ಬರುವ ದಿನಗಳಲ್ಲಿ ಕೆಟ್ಟ ಪರಿಣಾಮ ಎದುರಿಸಬೇಕಾಗುತ್ತದೆ. ಉದ್ದೇಶಪೂರ್ವಕವಾಗಿ ಯಡಿಯೂರಪ್ಪ ಅವರನ್ನು ಬದಲಾವಣೆ ಮಾಡಿದರೆ ವೀರಶೈವ ಸಮಾಜ ಬಿಜೆಪಿಯನ್ನು ಕ್ಷಮಿಸುವುದಿಲ್ಲ. ಅವರ ಅವಧಿ ಪೂರ್ಣಗೊಳ್ಳುವವೆರೆಗೂ ಅವರಿಗೆ ತೊಂದರೆ ಮಾಡದೆ ಮುಂದುವರೆಸಬೇಕು ಎಂದು ಆಗ್ರಹಿಸಿದ್ದಾರೆ.
undefined
ಸಿಎಂ ಸ್ಥಾನಕ್ಕೆ ರಾಜೀನಾಮೆ ಫಿಕ್ಸ್? ಮಹತ್ವದ ಸುಳಿವು ಕೊಟ್ಟ ಯಡಿಯೂರಪ್ಪ
ವೀರಶೈವ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಶಾಮನೂರ ಶಿವಶಂಕರಪ್ಪ, ಪದಾಧಿಕಾರಿಗಳು ಹಾಗೂ ಮಠಾಧೀಶರು ಈಗಾಗಲೇ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಇಷ್ಟಾದರೂ ಕೇಂದ್ರದ ಬಿಜೆಪಿ ನಾಯಕರು ಬದಲಾವಣೆಗೆ ಮುಂದಾಗಿದ್ದಾರೆ. ರಾಜ್ಯದಲ್ಲಿ ಸಮಾಜ ಒಡೆಯುವ ಕೆಲಸ ನಡೆಯುತ್ತಿದ್ದು ಸಮಾಜದ ನಾಯಕರು ಷಡ್ಯಂತ್ರಕ್ಕೆ ಬಲಿಯಾಗಬಾರದು ಎಂದರು.
ಒಂದು ವೇಳೆ ಕೇಂದ್ರದಲ್ಲಿ ಕುಳಿತು ಇಲ್ಲಿಯ ನಾಯಕನನ್ನು ಬದಲಾವಣೆ ಮಾಡಿದರೆ ರಾಜ್ಯದಲ್ಲಿ ಬಿಜೆಪಿಗೆ ನಷ್ಟವಾಗಲಿದೆ. ರಾಜ್ಯದಲ್ಲಿ ಬಿಜೆಪಿ ಹೆಸರಿಲ್ಲದಂತೆ ಹೋಗುತ್ತದೆ. ಉತ್ತಮ ನಾಯಕನಿಗೆ ಅನ್ಯಾಯ ಮಾಡಬಾರದು ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಹಾಸಭಾ ಪದಾಧಿಕಾರಿಗಳಾದ ಶಿವಶರಣ ಕಲಬಶೆಟ್ಟರ್, ಎಂ.ಎಂ. ಹಿರೇಮಠ, ಮೈಲಾರ ಉಪ್ಪಿನ, ಎಸ್.ಎಚ್. ಪಾಟೀಲ, ರಾಜೇಂದ್ರ ಕಪಲಿ, ಬಿ.ಎಸ್. ಗೋಲಪ್ಪನವರ, ಎನ್.ಎಸ್. ಬಿರಾದಾರ, ಜಯಶ್ರೀ ಪಾಟೀಲ ಇದ್ದರು.