• ರೈತರ ಕನಸಿನ ಯೋಜನೆಯ ಪೈಪ್ ವಿತರಣಾ ಜಾಲದ ಕಾಮಗಾರಿಗೆ ಶಂಕುಸ್ಥಾಪನೆ
• ಬೂದಿಹಾಳ-ಪೀರಾಪೂರ ಏತ ನೀರಾವರಿ ಯೋಜನೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಂದ ಚಾಲನೆ
-ಷಡಕ್ಷರಿ ಕಂಪೂನವರ್, ಏಷ್ಯಾನೆಟ್ ಸುವರ್ಣ ನ್ಯೂಸ್
ವಿಜಯಪುರ (ಏ.26): ಬರದ ನಾಡಿನ ಅನ್ನದಾತರ ಎರಡು ದಶಕಗಳ ಕನಸು ನನಸು. ಮಹತ್ವದ ಯೋಜನೆಯೊಂದು ಇಂದು ಸಾಕಾರಗೊಂಡಿದೆ.. ಬೂದಿಹಾಳ-ಪೀರಾಪೂರ ಏತನೀರಾವರಿ ಯೋಜನೆಯ ಹಂತ 1ರ ಪೈಪ್ ವಿತರಣಾ ಜಾಲದ ಕಾಮಗಾರಿಗೆ ಸಿಎಂ ಬಸವರಾಜ್ ಬೊಮ್ಮಾಯಿ ಶಂಕುಸ್ಥಾಪನೆ ನೆರವೇರಿಸಿದ್ದಾರೆ...
ಜನರಿಂದ ಹರ್ಷೋದ್ಧಾರ: ನಾಡಿನ ಘನತೆವೆತ್ತ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿಯವರು ಮಹತ್ಚದ ಏತ ನೀರಾವರಿ ಯೋಜನೆಗೆ ಚಾಲನೆ ನೀಡಲು ಪೂರ್ವ ನಿಗದಿಯಂತೆ ಜಿಂದಾಲ್ ಹೆಲಿಪ್ಯಾಡನಿಂದ ಹೊರಟು ಅಲ್ಲಿಂದ ನೇರವಾಗಿ ಕೊಡಗಾನೂರ ಹೆಲಿಪ್ಯಾಡಗೆ ಬೆಳಗ್ಗೆ ಸರಿಯಾಗಿ 11.42ಕ್ಕೆ ಆಗಮಿಸುತ್ತಿದ್ದಂತೆ ಬರದ ನಾಡಿನ ಜನರಿಂದ ಹರ್ಷೋದ್ಘಾರ ಮುಗಿಲುಮುಟ್ಟಿತು.
Vijayapura ಬೇಸಿಗೆ ಬಿಸಿಗಾಳಿ-ಸಿಡಿಲು ನಿಭಾಯಿಸಲು ಜನತೆಗೆ ಸಲಹೆ ನೀಡಿದ ಹೊಸ ಜಿಲ್ಲಾಧಿಕಾರಿ!
ಮುಖ್ಯಮಂತ್ರಿಗಳಿಗೆ ಗೋ ಕಾಣಿಕೆ ನೀಡಿದ ರೈತರು..!
ಈ ಕಾರ್ಯಕ್ರಮಕ್ಕೆ ಆಗಮಿಸಿದ ಮುಖ್ಯಮಂತ್ರಿಗಳನ್ನು, ಶಾಸಕರು ಮತ್ತು ಗಣ್ಯರನ್ನು ಭವ್ಯವಾದ ವಾದ್ಯಮೇಳಗಳ ಮೂಲಕ ಹೆಲಿಪ್ಯಾಡನಿಂದ ವೇದಿಕೆಗೆ ಬರಮಾಡಿಕೊಳ್ಳಲಾಯಿತು. ಇದೆ ವೇಳೆ ಬಂಟನೂರ ಗ್ರಾಮಸ್ಥರು ಮುಖ್ಯಮಂತ್ರಿಗಳಿಗೆ ರೈತರ ಬದುಕಿನ ಸಂಕೇತದ ಗೋಮಾತೆಯನ್ನು ಕಾಣಿಕೆಯಾಗಿ ನೀಡಿದರು. ಇದೆ ವೇಳೆ ಜೋಡೆತ್ತುಗಳು ಮತ್ತು ಮಡಕೆಯನ್ನು ದೇವರ ಹಿಪ್ಪರಗಿ ಮತಕ್ಷೇತ್ರದ ಶಾಸಕರಾದ ಸೋಮನಗೌಡ ಬ.ಪಾಟೀಲ ಸಾಸನೂರ ಅವರಿಗೆ ಸಮರ್ಪಿಸಲಾಯಿತು.
ಬಳಿಕ ವೇದಿಕೆಗೆ ಆಗಮಿಸಿದ ಮುಖ್ಯಮಂತ್ರಿಗಳು, ಜಗಜ್ಯೋತಿ ಶ್ರೀ ಬಸವೇಶ್ವರ ಜನ್ಮಭೂಮಿಯಲ್ಲಿ ರೈತರ ಬದುಕು ಹಸನಗೊಳಿಸುವ ಮಹತ್ವದ ಬೂದಿಹಾಳ-ಪೀರಾಪುರ ಏತ ನೀರಾವರಿ ಯೋಜನೆಯ ಹಂತ ಫೈಪ್ ವಿತರಣಾ ಜಾಲದ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದರು.
ತಾಳಿಕೋಟಿ ತಾಲೂಕಿನ ಕೊಡಗಾನೂರ ಗ್ರಾಮದ ಜಮೀನಿನೊಂದರಲ್ಲಿ ಆಯೋಜನೆ ಮಾಡಲಾಗಿದ್ದ ಭವ್ಯ ಸಮಾರಂಭದಲ್ಲಿ ಮಹತ್ಚದ ಯೋಜನೆಗೆ ಚಾಲನೆ ಸಿಗುತ್ತಿದ್ದಂತೆ ಮುತ್ತಿನಂತಹ ಬೆಳೆ ವಿವಿಧ ತಳಿಯ ಜೋಳ ಬೆಳೆಯುವ ನಾಡಿನ ಜನರ ಮೊಗದಲ್ಲಿನ ಸಂತಸ ಕಂಡುಬಂದಿತು.
ಜಲ ಸಂಪನ್ಮೂಲ ಇಲಾಖೆ, ಕೃಷ್ಣಾ ಭಾಗ್ಯ ಜಲ ನಿಗಮ ನಿಯಮಿತದಿಂದ ನಡೆದ ಈ ಐತಿಹಾಸಿಕ ಕಾರ್ಯಕ್ರಮಕ್ಕೆ ದೇವರ ಹಿಪ್ಪರಗಿ ಕ್ಷೇತ್ರದ ಶಾಸಕರಾದ ಸೋಮನಗೌಡ ಪಾಟೀಲ ಸಾಸನೂರ ಸೇರಿದಂತೆ ಜಲ ಸಂಪನ್ಮೂಲ ಸಚಿವರಾದ ಗೋವಿಂದ ಕಾರಜೋಳ, ಅರಣ್ಯ ಮತ್ತು ಆಹಾರ ಇಲಾಖೆಯ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಉಮೇಶ ವಿ ಕತ್ತಿ, ಸಂಸದರಾದ ರಮೇಶ ಜಿಗಜಿಣಗಿ, ವಿಜಯಪುರ ಜಿಲ್ಲೆಯ ವಿವಿಧ ವಿಧಾನಸಭಾ ಮತ ಕ್ಷೇತ್ರಗಳ ಶಾಸಕರಾದ ಎ.ಎಸ್.ಪಾಟೀಲ ನಡಹಳ್ಳಿ, ಬಸನಗೌಡ ಪಾಟೀಲ ಯತ್ನಾಳ, ರಮೇಶ ಬೂಸನೂರ, ವಿಧಾನ ಪರಿಷತ್ತಿನ ವಿರೋಧ ಪಕ್ಷದ ಮುಖ್ಯ ಸಚೇತಕರಾದ ಮತ್ತು ವಿಧಾನ ಪರಿಷತ್ತಿನ ಶಾಸಕರಾದ ಪ್ರಕಾಶ ಕೆ.ರಾಠೋಡ್, ಪಿ.ಎಚ್.ಪೂಜಾರ, ಕರ್ನಾಟಕ ರಾಜ್ಯ ಬೀಜ ಮತ್ತು ಸಾವಯವ ಪ್ರಮಾಣ ಸಂಸ್ಥೆಯ ಅಧ್ಯಕ್ಷರಾದ ವಿಜುಗೌಡ ಪಾಟೀಲ, ಕರ್ನಾಟಕ ರಾಜ್ಯ ಲಿಂಬೆ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾದ ಅಶೋಕ ಅಲ್ಲಾಪೂರ, ಕಾಡಾ ನಿಗಮದ ಅಧ್ಯಕ್ಷರಾದ ಶರಣಪ್ಪ ತಳವಾರ, ಕೊಡಗಾನೂರ ಗ್ರಾಪಂ ಅಧ್ಯಕ್ಷರಾದ
ಬಸನಗೌಡ ಪಾಟೀಲ ಹಾಗೂ ಇನ್ನಿತರ ಗಣ್ಯರು ಸಾಕ್ಷಿಯಾದರು.
ಉಕ್ರೇನ್‌ನಿಂದ ವಾಪಸ್ ಆದ ಮೆಡಿಕಲ್ ವಿದ್ಯಾರ್ಥಿಗಳಿಗೆ ವಿಜಯಪುರದಲ್ಲಿ ಪಾಠ.!
ಸಮಾರಂಭದಲ್ಲಿ ಸಿದ್ಧಲಿಂಗ ದೇವರು, ಮಾಡಿವಾಳೇಶ್ವರ ಶ್ರೀಗಳು, ಸೋಮಲಿಂಗ ಸ್ವಾಮೀಜಿ, ಜಯ ಶಾಂತಲಿಂಗಮಠ ಶ್ರೀಗಳು ಸೇರಿದಂತೆ ಕೊಡಗಾನೂರ, ಹಿರೂರ, ಸಾಲವಾಡಗಿ, ಕೆರೂಟಗಿ, ನಾವದಗಿಮಠ, ಗುಂಡಕನಾಳನ ಮಠಾಧೀಶರು ಸಾನ್ನಿಧ್ಯ ವಹಿಸಿದ್ದರು. ಜಿಲ್ಲಾಧಿಕಾರಿಗಳಾದ ಡಾ.ವಿಜಯ ಮಹಾಂತೇಶ ಸ್ವಾಗತಿಸಿದರು. ಸಮಾರಂಭದಲ್ಲಿ ಜಲ ಸಂಪನ್ಮೂಲ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ ಸಿಂಗ್, ಐಜಿಪಿ ಸತೀಶಕುಮಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಎಚ್.ಡಿ.ಆನಂದಕುಮಾರ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಶಿಂಧೆ ಮತ್ತು ಕೃಷ್ಣ ಭಾಗ್ಯ ಜಲ ನಿಗಮ ನಿಯಮಿತದ ಅಧಿಕಾರಿಗಳಾದ ಬಿ.ಎಸ್.ಶಿವಕುಮಾರ, ಎಚ್.ಸುರೇಶ, ಜಗದೀಶ ರಾಠೋಡ, ಬಿ.ಟಿ.ಪಾಟೀಲ, ರವಿ ಚಂದ್ರಗಿರಿ, ಸದಾನಂದ ಪತ್ತಾರ, ಮಾರುತಿ ಕದಂ, ಮೋಹನ ಹಲಗತ್ತಿ, ವಿ.ಎಲ್.ಸೇಗುಣಸಿ, ಹನುಮಂತ ಗುಡಗುಂಟಿ ಮತ್ತಿತರರು ಉಪಸ್ಥಿತರಿದ್ದರು.
ಅಂದಾಜು 25 ಸಾವಿರ ಜನರ ಆಗಮನ..!
ನೀರಾವರಿ ಕಲ್ಪಿಸಲು ಉದ್ದೇಶಿಸಿರುವ ತಾಳಿಕೋಟಿ ತಾಲೂಕು ವ್ಯಾಪ್ತಿಯ ಮಸಕನಾಳ, ಭೀಳೆಬಾವಿ, ಮೈಲೇಶ್ವರ, ಬಿ.ಸಾಲವಾಡಗಿ, ಮಟಕದನಹಳ್ಳಿ, ನವದಗಿ, ಬೇಲೂರ, ಗುಂಡಕನಾಳ, ಕೊಡಗಾನೂರ, ಲಕ್ಕುಂಡಿ, ಶೆಳ್ಳಗಿ, ಕಾರಗನೂರ, ಗೊಟಕಂಡಕಿ, ಗಡಿ ಸೋಮನಾಳ, ಬಂಟನೂರ, ಪೀರಾಪುರ, ಹೂವಿನಹಳ್ಳಿ, ಅಸ್ಕಿ, ನೀರಲಗಿ, ಬೇಕಿನಾಳ, ಬನಹಟ್ಟಿ, ಜಲಪುರ, ಬೀಂಜಲಬಾವಿ, ಕಲಕೇರಿ, ಬೂದಿಹಾಳ, ಹಾಳಗುಂಡಕನಾಳ, ರಾಂಪುರ, ತುರುಕನಗೇರಿ, ವನಕ್ಯಾಳ ಮತ್ತು ದೇವರ ಹಿಪ್ಪರಗಿ ತಾಲೂಕಿನ ಅಸ್ತನಾಪುರ, ಅಲಗೂರ, ಹುಣಶಿಹಾಳ, ಯದ್ಯಾಪುರ, ಕುದರಗೊಂಡ, ಕೆರುಟಗಿ, ತಿಳಗುಳ, ಬಿಬಿ ಇಂಗಳಗಿ ಮತ್ತು ಹಂಚ್ಲಿ ಗ್ರಾಮಸ್ಥರು ಕಾರ್ಯಕ್ರಮಕ್ಕೆ ಝರಿಯಂತೆ ಹರಿದು ಬಂದಿದ್ದು ವಿಶೇಷವಾಗಿತ್ತು. ಕಾರ್ಯಕ್ರಮಕ್ಕೆ ಅಂದಾಜು 25 ಸಾವಿರ ಜನರು ಆಗಮಿಸಿದ್ದರು.