* ದೇಶಕ್ಕೆ ಮಾದರಿಯಾದ ಗ್ರಾಮದಲ್ಲಿ ಸಾಮರಸ್ಯ
* ಈ ಗ್ರಾಮದಲ್ಲಿ ದರ್ಗಾ ನಿರ್ಮಾಣ ಮಾಡಿಸಿದ್ದು ಹಿಂದುಗಳೇ
* ಜಮಾಲ್ ಹೆಸರಲ್ಲಿ ಈಗಲೂ ನಡೆಯುತ್ತಿರುವ ಹಲವಾರು ಪವಾಡಗಳು
ವರದಿ: ವರದರಾಜ್, ಏಷ್ಯಾನೆಟ್ ಸುವರ್ಣ ನ್ಯೂಸ್, ದಾವಣಗೆರೆ
ದಾವಣಗೆರೆ(ಏ.26): ರಾಜ್ಯದಲ್ಲಿ(Karnataka) ಧರ್ಮ ಸಂಘರ್ಷ ನಡೆಯುತ್ತಿದ್ದು ಹಿಜಾಬ್- ಕೇಸರಿ ವಾರ್ ಬಗ್ಗೆ ರಾಜ್ಯದಲ್ಲಿ ಚರ್ಚೆ ನಡೆಯುತ್ತಿದೆ. ಹಲಾಲ್- ಝಟ್ಕಾ ಕಟ್, ಹುಬ್ಬಳ್ಳಿ ಗಲಭೆ, ಕಲ್ಲಂಗಡಿ ಅಂಗಡಿ ಧ್ವಂಸ, ಅಜಾನ್ ಕೂಗು ಹೀಗೆ ಒಂದಾದ ಮೇಲೆ ಮತ್ತೊಂದರ ಬಗ್ಗೆ ಕೋಮು ಸಂಘರ್ಷದ ಬಗ್ಗೆ ಚರ್ಚೆ ನಡೆಯುತ್ತಿದೆ. ಇದೆಲ್ಲದಕ್ಕೂ ಅಪವಾದ ಎಂಬಂತೆ ಇಲ್ಲೊಂದು ಗ್ರಾಮದಲ್ಲಿ ಸಾಮರಸ್ಯದ ಹಬ್ಬ ಇಡೀ ದೇಶಕ್ಕೆ ಮಾದರಿ ಎನ್ನುವಂತಿದೆ. ಹೌದು, ಮುಸ್ಲಿಂರಿಲ್ಲದ ಊರಲ್ಲಿ ಮುಸ್ಲಿಂ ದೇವರನ್ನ ಪೂಜೆ ಮಾಡುವ ಹಿಂದೂಗಳು(Hindu) ತಮ್ಮ ಕಷ್ಟ ಕಾರ್ಪಣ್ಯಗಳನ್ನ ಕಡಿಮೆ ಮಾಡಲು ಭಕ್ತಿಯನ್ನು ಸಮರ್ಪಿಸುತ್ತಿದ್ದಾರೆ.
ಮುಸ್ಲಿಂ ದರ್ಗಾಕ್ಕೆ ನಮಿಸುವ ಹಿಂದೂ ಭಕ್ತರು
ಹಿಂದೂ- ಮುಸ್ಲಿಂರ(Muslim) ಮಧ್ಯೆ ಸಾಮರಸ್ಯ ಸಾರುವ ಜಾತ್ರೆಯೊಂದು ದಾವಣಗೆರೆ(Davanagere) ಜಿಲ್ಲೆಯ ಹರಿಹರ ತಾಲೂಕಿನ ನಾಗೇನಹಳ್ಳಿಯಲ್ಲಿ ನಡೆಯುತ್ತಿದೆ. ಧರ್ಮ(Religion), ಜಾತಿಗಳ(Caste) ನಡುವೆ ಕೋಮು ಸೌಹಾರ್ದತೆ ಬೆಳೆಯುವ ಬದಲಾಗಿ ಕೋಮು ದ್ವೇಷವೇ ಹೆಚ್ಚಾಗುತ್ತಿದೆ. ಅಂತಹದರಲ್ಲಿ ಈ ನಾಗೇನಹಳ್ಳಿ ಗ್ರಾಮ ದೇಶಕ್ಕೆ ಹಿಂದು ಮುಸ್ಲಿಂ ಭಾವೈಕ್ಯತೆ ಸಾರುವಂತಿದೆ. ಈ ಗ್ರಾಮದಲ್ಲಿ ಇರುವುದೆಲ್ಲಾ ಹಿಂದುಗಳು ಮಾತ್ರ.ಆದ್ರು ಇಲ್ಲಿ ಜಮಾಲ್ ಎಂಬ ಮುಸ್ಲಿಂ ಮೌಲ್ವಿಯೊಬ್ಬನ ಸಮಾಧಿಗೆ ಪೂಜೆ ಸಲ್ಲಿಸುತ್ತಾರೆ.
ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಕೆಳದಿ ಚೆನ್ನಮ್ಮನ ಹೆಸರಿಡಲು ವಚನಾನಂದ ಶ್ರೀ ಆಗ್ರಹ
ಹಿಂದೂಗಳ ಸಂಪ್ರದಾಯದಂತೆ ಪೂಜೆ ಜಮಾಲ್ ಸಮಾಧಿಗೆ(Grave) ಪೂಜೆ ಸಲ್ಲಿಸುವ ವಾಡಿಕೆ ಈ ಗ್ರಾಮದಲ್ಲಿದೆ. ಜಮಾಲ್ ಸಮಾಧಿ ಇರುವ ಆ ದರ್ಗಾದ ಪಕ್ಕದಲ್ಲಿಯೇ ದೇವಸ್ಥಾನವನ್ನು(Temple) ನಿರ್ಮಾಣ ಮಾಡಿದ್ದು, ಅದಕ್ಕೆ ಗುಡಿ, ಗೋಪುರ ಕಟ್ಟಿಸಿ ಜಮಾಲ್ ಸ್ವಾಮಿ ಪ್ರಸನ್ನ ಎಂದು ಹೆಸರನ್ನು ಇಟ್ಟಿದ್ದಾರೆ.
ಜಮಾಲ್ ಸಾಬ್ ಎಂಬ ಪವಾಡ ಪುರುಷನಿಂದ ಭಾವೈಕ್ಯತೆ ತಾಣ
ಹಲವು ಶತಮಾನಗಳ ಹಿಂದೆ ದಾವಣಗೆರೆ ಜಿಲ್ಲೆ ತಾಲೂಕಿನ ನಾಗೇನಹಳ್ಳಿ ಗ್ರಾಮಕ್ಕೆ ಜಮಾಲ್ ಸಾಬ್ ಎಂಬ ಪವಾಡ ಪುರುಷನೊಬ್ಬ ಕೇರಳದಿಂದ(Kerala)s ಆಗಮಿಸಿದ್ದ. ಬಹುಕಾಲ ವರ್ಷ ಇಲ್ಲಿಯೇ ತಂಗಿದ್ದ ಆ ಜಮಾಲ್ ಸಾಬ್ ಸ್ಥಳೀಯರಿಗೆ ಹಲವಾರ ಪವಾಡಗಳನ್ನು ಮಾಡಿ ತೋರಿಸಿದ್ದ. ಆನಾರೋಗ್ಯ ಪೀಡಿತ ಜನ ಮತ್ತು ಜಾನುವಾರುಗಳ ರೋಗ ರುಜಿಗಳನ್ನು ತನ್ನ ಪವಾಡದಿಂದ ಹೋಗಲಾಡಿಸಿದ್ದ. ಹೀಗಾಗಿ, ಆಗಿನ ಜನರು ಜಮಾಲ್ ನನ್ನು ಸ್ವಾಮಿ ಎಂದೇ ನಂಬಿದ್ದರು. ಅಲ್ಲದೇ, ಆತ ಕಾಲಾನಂತರ ಆತನ ಸಮಾಧಿಯನ್ನು ಅಂದಿನಿಂದ ಇಂದಿನವರೆಗೂ ಪೂಜೆ ಮಾಡುತ್ತಿದ್ದಾರೆ. ಇನ್ನು, ಪ್ರತಿ ವರ್ಷ ಜಮಾಲ್ ಸ್ವಾಮಿ ಉರುಸ್ ಕೂಡ ನಡೆಯುತ್ತಿದ್ದು, ಅದನ್ನು ಸ್ಥಳೀಯ ಹಿಂದುಗಳೇ ಆಚರಿಸುತ್ತಿದ್ದಾರೆ. ನಿನ್ನೆ ರಾತ್ರಿ ಕೂಡ ಉರುಸ್ ನಡೆದಿದ್ದು, ಇಲ್ಲಿಯ ಹಿಂದು ಜನರೇ ಆತನಿಗೆ ಪ್ರಸಾದ ಮತ್ತು ಮಾಂಸದೂಟ ಪ್ರಸಾದ ಅರ್ಪಿಸುವ ಮೂಲಕ ಶ್ರದ್ಧಾ ಭಕ್ತಿಯಿಂದ ಉರುಸ್ ಕಾರ್ಯವನ್ನು ಅದ್ಧೂರಿಯಾಗಿ ನೆರವೇರಿಸಿದ್ದಾರೆ. ಈ ಉರುಸ್ ನಲ್ಲಿ ಸುತ್ತಮುತ್ತಲಿನ ನೂರಾರು ಮುಸ್ಲಿಂ ಬಾಂಧವರು ಕೂಡ ಭಾಗವಹಿಸುತ್ತಾರೆ.
ಜಮಾಲ್ ಹೆಸರಲ್ಲಿ ಈಗಲೂ ಹಲವಾರು ಪವಾಡಗಳು ನಡೆಯುತ್ತವೆ ಅಂತೆ. ಹೀಗಾಗಿ, ದಾವಣಗೆರೆ ಜಿಲ್ಲೆಯ ನಾನಾ ಭಾಗಗಳ ಹಿಂದು ಮುಸ್ಲಿಂ ಜನರು ಈ ಜಮಾಲ್ ಸ್ವಾಮಿ ಸನ್ನಿಧಿಗೆ ಬಂದು ಆರೋಗ್ಯ, ಕೌಟುಂಬಿಕ ಸಮಸ್ಯೆ, ವಿವಾಹ ಪ್ರಾಪ್ತಿ ಸೇರಿದಂತೆ ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಹರಕೆ ಹೊತ್ತುಕೊಳ್ಳುತ್ತಾರೆ. ಜಮಾಲ್ ಸ್ವಾಮಿಗೆ ಭಕ್ತಿಯಿಂದ ಪೂಜೆ ಸಲ್ಲಿಸಿದರೆ ಇಷ್ಟಾರ್ಥಗಳು ಸಿದ್ದಿಸುತ್ತವೆ ಎನ್ನುವುದು ಇಲ್ಲಿನ ಭಕ್ತರ ನಂಬಿಕೆ. ಹೀಗಾಗಿ, ಇದೀಗ ಜಮಾಲ್ ಸ್ವಾಮಿ ಶ್ರೀ ಕ್ಷೇತ್ರ ದಾವಣಗೆರೆ ಸೇರಿದಂತೆ ಸುತ್ತಲಿನ ಜಿಲ್ಲೆಗಳಲ್ಲಿ ಪ್ರಸಿದ್ಧಿ ಪಡೆದಿದೆ.
Karnataka Politics: 150 ಸೀಟು ಗೆಲ್ಲಲೇ ಬೇಕು ಅಂತ ರಾಹುಲ್ ಹೇಳಿದ್ದಾರೆ: ಸಿದ್ದು
ಇಂದು ಧರ್ಮ, ಜಾತಿಗಳ ನಡುವೆ ಕೋಮು ಸೌಹಾರ್ದತೆ ಬೆಳೆಯುವ ಬದಲಾಗಿ ಕೋಮು ದ್ವೇಷ ಹೆಚ್ಚಿ ದೇಶದಲ್ಲಿ ಕೋಮು ಗಲಭೆಗಳು ಉಂಟಾಗುತ್ತಿವೆ. ಅಲ್ಲದೆ ಇಂದಿನ ರಾಜಕಾರಣಿಗಳು ತಮ್ಮ ರಾಜಕೀಯ ಹಸ್ತ್ರವನ್ನಾಗಿ ಮಾಡಿಕೊಂಡು ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ. ಆದರೆ ಈ ಗ್ರಾಮದಲ್ಲಿ ಹಿಂದುಗಳು ಮಾತ್ರ ಇದ್ದು ದ್ವೇಷ, ಅಸೂಹೆ ತೋರದೆ ಮುಸ್ಲಿಂ ಧರ್ಮದ ದರ್ಗಕ್ಕೆ ಹೋಗಿ ಗ್ರಾಮದಲ್ಲಿ ಹಬ್ಬ ಮಾಡುತ್ತಾರೆ.
ನಾಗೇನಹಳ್ಳಿ ಗ್ರಾಮದಲ್ಲಿ ದರ್ಗಾವನ್ನು ನಿರ್ಮಾಣ ಮಾಡಿಸಿದವರು ಹಿಂದುಗಳೇ. ಈ ಗ್ರಾಮದಲ್ಲಿ ಹೇಳಿಕೊಳ್ಳಲು ಒಂದು ಮುಸ್ಲಿಂ ಕುಟುಂಬ ಇಲ್ಲ. ಜಮಾಲ್ ಸ್ವಾಮಿ ಬಂದು ಇಲ್ಲಿ ಪವಾಡ ಮಾಡಿದ್ದರಿಂದ ಹಿಂದುಗಳು ಇಲ್ಲಿ ಪ್ರತಿನಿತ್ಯ ಪೂಜೆ ಪುನಸ್ಕಾರಗಳನ್ನು ಮಾಡುತ್ತಾರೆ. ಈ ಸನ್ನಿಧಿಯಲ್ಲಿ ಇಷ್ಟಾರ್ಥಗಳು ಸಿದ್ದಿಸುತ್ತವೆ ಎನ್ನುವುದು ಇಲ್ಲಿನ ಭಕ್ತರ ನಂಬಿಕೆಯಾಗಿದೆ. ಇಂದು ದೇಶದಲ್ಲಿ ಹಿಂದೂ ಮುಸ್ಲಿಂ ಎಂದು ಕೋಮುಗಲಭೆ ಸೃಷ್ಠಿಯಾಗಿ ಎಷ್ಟೋ ಜನರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಈ ಮಧ್ಯೆ ನಾಗೇನಹಳ್ಳಿಯ ಹಿಂದೂ ಮುಸ್ಲಿಂರ ಸಾಮರಸ್ಯ ದೇಶಕ್ಕೆ ಮಾದರಿ ಎನ್ನುವಂತಿದೆ.