ಕ್ಲೀನ್ ಸಿಟಿ ಪ್ರಶಸ್ತಿ ಪಡೆದ ಊರಲ್ಲಿ ಇದೆಂಥಾ ಕೊಳಕು: ಗಬ್ಬೆದ್ದು ನಾರ್ತಿದೆ ಉಡುಪಿ..!

By Girish Goudar  |  First Published Apr 26, 2022, 12:21 PM IST

*  ಕೈತೋಡಿನ ಮೂಲಕ ಹರಿದು ಬಾವಿಗಳನ್ನು ಸೇರುತ್ತಿದೆ ತ್ಯಾಜ್ಯ ನೀರು
*  ಕಳೆದ ಒಂದು ವಾರದಿಂದ ವಿಪರೀತವಾದ ಸೊಳ್ಳೆ ಕಾಟ 
*  ಮಳೆ ಬಂದರೆ ಮಲೀನ ನೀರು ಮನೆಗಳಿಗೆ ನುಗ್ಗುವ ಸಾಧ್ಯತೆ
 


ವರದಿ -ಶಶಿಧರ ಮಾಸ್ತಿಬೈಲು ಏಷಿಯಾನೆಟ್ ಸುವರ್ಣ ನ್ಯೂಸ್, ಉಡುಪಿ

ಉಡುಪಿ(ಏ.26):  ಕ್ಲೀನ್ ಸಿಟಿ(Clean City) ಎಂದು ಪ್ರಶಸ್ತಿ ಪಡೆದಿರುವ ಉಡುಪಿ(Uudpi) ನಗರಸಭೆ ವ್ಯಾಪ್ತಿಯಲ್ಲೇ ಹರಿಯುವ ಇಂದ್ರಾಳಿ ನದಿಗೆ(Indrali River) ಮಠದ ಬೆಟ್ಟುವಿನಲ್ಲಿ ನಿರ್ಮಿಸಲಾಗುತ್ತಿರುವ ಸೇತುವೆ ಕಾಮಗಾರಿಗಾಗಿ ತ್ಯಾಜ್ಯ ನೀರನ್ನು ತಡೆ ಹಿಡಿದ ಪರಿಣಾಮ ಈ ಪರಿಸರದ ಸುಮಾರು 30ಕ್ಕೂ ಅಧಿಕ ಮನೆಗಳ ಬಾವಿಗಳು ಕಲುಷಿತಗೊಂಡಿವೆ.

Latest Videos

undefined

ಉಡುಪಿ ನಗರಸಭಾ ವ್ಯಾಪ್ತಿಯ ಬನ್ನಂಜೆ ವಾರ್ಡಿನ ಮಠದಬೆಟ್ಟು ಎಂಬಲ್ಲಿ ಇಂದ್ರಾಣಿ ಹೊಳೆಗೆ ನದಿವೆ ಸಹಿತ ಕಿಂಡಿ ಅಣೆಕಟ್ಟು ನಿರ್ಮಿಸಲು ಪಶ್ಚಿಮ ವಾಹಿನಿ ಯೋಜನೆಯಡಿ ಒಂದು ಕೋಟಿ ರೂ. ಅನುದಾನ ಮಂಜೂರಾಗಿದ್ದು, ಅದರಂತೆ ಕಾಮಗಾರಿ ಈಗಾಗಲೇ ಪ್ರಾರಂಭಗೊಂಡಿದೆ. 

Boycott Muslim Jewellery Shop ಕೇರಳಕ್ಕೆ ಹೋಗಿ ಹೋರಾಡುತ್ತೇನೆಂದ ಮುತಾಲಿಕ್

ಅದಕ್ಕಾಗಿ ನದಿಗೆ ಮಣ್ಣು ಹಾಕಿ ನೀರನ್ನು ತಡೆ ಹಿಡಿಯಲಾಗಿದೆ. ಇನ್ನೊಂದೆಡೆ ನಗರಸಭೆಯಿಂದ ಡ್ರೈನೇಜ್ ನೀರನ್ನು ಇದೇ ನದಿಗೆ ಬಿಡಲಾಗುತ್ತಿದೆ. ಇದರಿಂದ ಸೇತುವೆ(Bridge) ನಿರ್ಮಾಣದ ಪ್ರದೇಶದಲ್ಲಿ ಡ್ರೈನೇಜ್ ನೀರು ಸಂಗ್ರಹ ಗೊಂಡಿದೆ. ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಹೊಳೆಯ ನೀರು ಹೆಚ್ಚಾಗಿ, ತ್ಯಾಜ್ಯ ನೀರು ನದಿಯನ್ನು ಸಂಪರ್ಕಿಸುವ ತೋಡುಗಳಲ್ಲಿ ಹರಿಯುತ್ತಿದೆ.

ಇದರ ಪರಿಣಾಮವಾಗಿ ಮಠದಬೆಟ್ಟು ಪರಿಸರsದ ಸುಮಾರು 30ಕ್ಕೂ ಅಧಿಕ ಮನೆಗಳ ಬಾವಿಯ ನೀರು ಸಂಪೂರ್ಣ ಹಸಿರು ಬಣ್ಣಕ್ಕೆ ತಿರುಗಿ ಮಲೀನಗೊಂಡಿವೆ. ಬಾವಿಯ ನೀರಿನಲ್ಲಿ ತ್ಯಾಜ್ಯ ನೀರು(Waste Water) ಸೇರಿರುವುದರಿಂದ ನೀರಿನ ಮಟ್ಟ ಕೂಡ ಜಾಸ್ತಿಯಾಗಿದೆ. ಬೇಸಿಗೆಯಲ್ಲಿ ನಗರಸಭೆ ನೀರು ಬಾರದೆ ಇದ್ದಾಗ ಸ್ಥಳೀಯರು ತಮ್ಮ ಬಾವಿಯ ನೀರನ್ನು ಬಳಸುತ್ತಿದ್ದರು. ಆದರೆ ಈ ಬಾರಿ ತ್ಯಾಜ್ಯ ನೀರಿನಿಂದಾಗಿ ಬಾವಿಯ ನೀರು ದಿನಬಳಕೆಗೆ ಅಯೋಗ್ಯವಾಗಿದೆ, ಇಷ್ಟಾದರೂ ಕೂಡ ನಗರದ ಮಧ್ಯ ಭಾಗದಲ್ಲೇ ಇರುವ ನಮ್ಮ ನರಕಯಾತನೆ ಬಗ್ಗೆ ಯಾರು ಕೇಳುತ್ತಿಲ್ಲ. ಸಂಬಂಧಪಟ್ಟವರಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ. ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳದಿದ್ದರೆ ಮುಂದಿನ ಚುನಾವಣೆಯನ್ನು ನಾವೆಲ್ಲ ಬಹಿಷ್ಕರಿಸುವ ತೀರ್ಮಾನ ಮಾಡಿದ್ದೇವೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಬಾವಿಯ ನೀರು ಮಲಿನಗೊಂಡ ಪರಿಣಾಮ ಪರಿಸರದ ಹಲವರಿಗೆ ವಿವಿಧ ಕಾಯಿಲೆಗಳು ಕಂಡುಬಂದಿದೆ. ಮಕ್ಕಳು ಕೂಡ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಸೊಳ್ಳೆಯಿಂದ ರಾತ್ರಿ ಮಲಗಲು ಕೂಡ ಆಗುತ್ತಿಲ್ಲ. ಒಂದೆರೆಡು ಮಳೆಯಲ್ಲಿ ಹೊಳೆಯ ನೀರಿನ ಮಟ್ಟ ಹೆಚ್ಚಾಗಿದ್ದು, ಮುಂದೆ ನಿರಂತರ ಮಳೆ ಬಂದರೆ ಈ ಮಲೀನ ನೀರು ಮನೆಗಳ ಒಳಗೆ ನುಗ್ಗುವ ಅಪಾಯವಿದೆ ಎಂದು ಸ್ಥಳೀಯ ನಿವಾಸಿ ರಾಘವೇಂದ್ರ ಮಠದಬೆಟ್ಟು ತಿಳಿಸಿದ್ದಾರೆ.

Udupi ತಲಾಕ್ ನಂತೆ ಬಹುಪತಿತ್ವವನ್ನೂ ನಿಷೇಧಿಸಲು ಮೋದಿಗೆ ಮುಸ್ಲಿಂ ಕುಟುಂಬದ ಮನವಿ

ನದಿಯಲ್ಲಿ ತ್ಯಾಜ್ಯ ನೀರು ಸಂಗ್ರಹದ ಪರಿಣಾಮ ಇಡೀ ಪರಿಸರ ಗಬ್ಬು ವಾಸನೆಯಿಂದ ಮಾಲಿನ್ಯಗೊಂಡಿವೆ. ಜನ ಮೂಗು ಮುಚ್ಚಿಕೊಂಡೇ ಇರುವ ಪರಿಸ್ಥಿತಿ ನಿರ್ಮಾಣವಾಗಿದೆ. ಅಲ್ಲದೆ ಕಳೆದ ಒಂದು ವಾರದಿಂದ ಸೊಳ್ಳೆ ಕಾಟ ವಿಪರೀತವಾಗಿದೆ ಎಂದು ಸ್ಥಳೀಯ ನಿವಾಸಿ ಆಶಾ ಅಮೀನ್ ಹೇಳಿದ್ದಾರೆ.

‘ಇಷ್ಟು ದೊಡ್ಡ ನದಿಗೆ ಮಣ್ಣು ಹಾಕಿ ಕಟ್ಟ ಹಾಕಿದ್ದು, ಅಲ್ಲಿನ ನೀರು ಹರಿದು ಹೋಗಲು ಕೇವಲ ನಾಲ್ಕು ಇಂಚಿನ ಪೈಪನ್ನು ಹಾಕಿದ್ದಾರೆ. ಇದರಿಂದ ನೀರು ಸರಿಯಾಗಿ ಹರಿದುಹೋಗುತ್ತಿಲ್ಲ. ಈ ರೀತಿಯ ಅವೈಜ್ಞಾನಿಕ ಕಾಮಗಾರಿಯ ಪರಿಣಾಮ ನದಿಯಲ್ಲಿ ನೀರು ಸಂಗ್ರಹಗೊಂಡು, ಕೈತೋಡಿನ ಮೂಲಕ ಹರಿದು ಬಾವಿಗಳನ್ನು ಸೇರುತ್ತಿವೆ. ಈ ಬಗ್ಗೆ ನಗರಸಭೆ ದೂರು ನೀಡಿದರೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಸ್ಥಳೀಯರಾದ ಪ್ರವೀಣ್ ಮೆಂಡನ್ ಆರೋಪಿಸಿದ್ದಾರೆ.
 

click me!