ಬೆಂಗಳೂರು: ಕೆ.ಜಿ. ಹಳ್ಳಿ-ಡಿ.ಜೆ.ಹಳ್ಳಿ ಗಲಭೆ ಪ್ರಕರಣ, ಪೊಲೀಸರಿಗೆ ಕ್ಲೀನ್‌ಚಿಟ್‌

By Kannadaprabha News  |  First Published Oct 1, 2023, 1:46 PM IST

ಬೆಂಗಳೂರು ನಗರ ವ್ಯಾಪ್ತಿಯ ಕೆ.ಜಿ. ಹಳ್ಳಿ ಮತ್ತು ಡಿ.ಜೆ. ಹಳ್ಳಿಯಲ್ಲಿ 2020ರ ಆ.11 ರಂದು ಅಹಿತಕರ ಘಟನೆಯಲ್ಲಿ ಡಿ.ಜೆ. ಹಳ್ಳಿ ನಿವಾಸಿಗಳಾದ ಯಾಸಿನ್‌ ಪಾಷಾ , ವಾಜೀದ್‌ ಖಾನ್‌ , ಕೆ.ಜಿ. ಹಳ್ಳಿ ನಿವಾಸಿ ಶೇಕ್‌ ಸಿದ್ದಿಕ್‌  ಪೊಲೀಸರ ಗುಂಡೇಟಿಗೆ ಬಲಿಯಾಗಿದ್ದರು.


ಬೆಂಗಳೂರು(ಅ.01):  ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ 2020ರ ಬೆಂಗಳೂರಿನ ಕೆ.ಜಿ. ಹಳ್ಳಿ ಮತ್ತು ಡಿ.ಜೆ.ಹಳ್ಳಿ ಗಲಭೆ ಪ್ರಕರಣದಲ್ಲಿ ಪೊಲೀಸರ ಗುಂಡೇಟಿನಿಂದ ಗಾಯಗೊಂಡು ಮೂವರು ಯುವಕರು ಸಾವನ್ನಪ್ಪಿದ್ದ ಪ್ರಕರಣದಲ್ಲಿ ಪೊಲೀಸರಿಗೆ ಕ್ಲೀನ್ ಚಿಟ್‌ ನೀಡಿ ಮ್ಯಾಜಿಸ್ಟ್ರೇಟ್ ಸಲ್ಲಿಸಿದ್ದ ವಿಚಾರಣಾ ವರದಿಯನ್ನು 2022ರ ಡಿಸೆಂಬರ್‌ನಲ್ಲಿ ಹಿಂದಿನ ಬಿಜೆಪಿ ಸರ್ಕಾರ ಅಂಗೀಕರಿಸಿದ್ದು, ಈ ಸಂಬಂಧ ಸೆ.26 ರಂದು ಮಂಗಳವಾರ ಅಧಿಕೃತ ರಾಜ್ಯಪತ್ರ ಹೊರಡಿಸಲಾಗಿದೆ.

ಬೆಂಗಳೂರು ನಗರ ವ್ಯಾಪ್ತಿಯ ಕೆ.ಜಿ. ಹಳ್ಳಿ ಮತ್ತು ಡಿ.ಜೆ. ಹಳ್ಳಿಯಲ್ಲಿ 2020ರ ಆ.11 ರಂದು ಅಹಿತಕರ ಘಟನೆಯಲ್ಲಿ ಡಿ.ಜೆ. ಹಳ್ಳಿ ನಿವಾಸಿಗಳಾದ ಯಾಸಿನ್‌ ಪಾಷಾ (21), ವಾಜೀದ್‌ ಖಾನ್‌ (19), ಕೆ.ಜಿ. ಹಳ್ಳಿ ನಿವಾಸಿ ಶೇಕ್‌ ಸಿದ್ದಿಕ್‌ (25) ಪೊಲೀಸರ ಗುಂಡೇಟಿಗೆ ಬಲಿಯಾಗಿದ್ದರು.

Tap to resize

Latest Videos

ಡಿಜೆ ಹಳ್ಳಿ ಗಲಭೆಯಲ್ಲಿ ಅಮಾಯಕರಿದ್ದಾರೆ, ಸರ್ಕಾರದ ವಿರುದ್ಧವೇ ಗುಡುಗಿದ ತನ್ವೀರ್‌ ಸೇಠ್‌!

ಈ ಬಗ್ಗೆ ವಿಚಾರಣೆ ನಡೆಸಿ ಘಟನಾವಳಿಗಳ ಸರಣಿ ಮತ್ತು ಸನ್ನಿವೇಶಗಳ ಸಹಿತ ಮ್ಯಾಜಿಸ್ಟ್ರಿರಿಯಲ್‌ ವಿಚಾರಣೆ ನಡೆಸಿ ಮೂರು ತಿಂಗಳ ಒಳಗಾಗಿ ವರದಿ ಸಲ್ಲಿಸುವಂತೆ ಅಂದಿನ ರಾಜ್ಯ ಸರ್ಕಾರ ಆದೇಶಿಸಿತ್ತು. ವರದಿ ಸಲ್ಲಿಸಲು ನೀಡಿದ್ದ 3 ತಿಂಗಳ ಗಡುವನ್ನು ವಿಸ್ತರಿಸಿತ್ತು.

ಬಳಿಕ ಜಿಲ್ಲಾ ದಂಡಾಧಿಕಾರಿಯೂ ಆದ ಜಿಲ್ಲಾಧಿಕಾರಿ 2022ರಲ್ಲಿ ಮ್ಯಾಜಿಸ್ಟ್ರೇಟ್‌ ವಿಚಾರಣಾ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದರು. ಇದನ್ನು ಹಿಂದಿನ ಬಿಜೆಪಿ ಸರ್ಕಾರವು 2022ರ ಡಿ.12ರಂದು ನಡೆದ ಸಚಿವ ಸಂಪುಟದಲ್ಲಿ ಅಂಗೀಕರಿಸಿತ್ತು. ಅಲ್ಲದೆ, 2023ರ ಜ.13ರಂದು ಮ್ಯಾಜಿಸ್ಟೀರಿಯಲ್‌ ವಿಚಾರಣಾ ವರದಿಯನ್ನು ಸರ್ಕಾರವು ಅಂಗೀಕರಿಸಿರುವುದಾಗಿ ಸರ್ಕಾರಿ ಆದೇಶವನ್ನೂ ಹೊರಡಿಸಿತ್ತು.

ಪೊಲೀಸರಿಗೆ ಕ್ಲೀನ್‌ ಚಿಟ್‌:

ತನಿಖೆ ಹಾಗೂ ಸಾಕ್ಷ್ಯಗಳನ್ನು ಆಧರಿಸಿ ಪೊಲೀಸರು ಆತ್ಮರಕ್ಷಣೆ, ಸಾರ್ವಜನಿಕರ ಪ್ರಾಣ ಹಾಗೂ ಆಸ್ತಿ ರಕ್ಷಣೆ, ಕಾನೂನು ಮತ್ತು ಸುವ್ಯವಸ್ಥೆ ಪಾಲನೆ ಸಲುವಾಗಿ ನೇರ ಗುಂಡಿನ ದಾಳಿ ನಡೆಸಿದ್ದು ನ್ಯಾಯೋಚಿತವಾಗಿದೆ ಎಂದು ವಿಚಾರಣಾಧಿಕಾರಿಗಳು ಅಭಿಪ್ರಾಯಪಟ್ಟಿರುವುದಾಗಿ ವರದಿಯಲ್ಲಿ ತಿಳಿಸಲಾಗಿದೆ. ತನ್ಮೂಲಕ ಪೊಲೀಸರ ಗುಂಡಿನಿಂದ ಮೃತಪಟ್ಟ ಮೂವರು ಯುವಕರ ಸಾವಿನ ಪ್ರಕರಣದಲ್ಲಿ ಪೊಲೀಸರಿಗೆ ಕ್ಲೀನ್‌ ಚಿಟ್‌ ನೀಡಲಾಗಿದೆ.

ವರದಿ ಸಾರಾಂಶವೇನು?

ವರದಿಯಲ್ಲಿ ಉಲ್ಲೇಖಿಸಿರುವ ಘಟನಾವಳಿಗಳ ಪ್ರಕಾರ, ದುಷ್ಕರ್ಮಿಗಳು ಪೊಲೀಸರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲು ಹಾಗೂ ಪೊಲೀಸ್‌ ಠಾಣೆಗಳ ಮೇಲೆ ದಾಳಿ ನಡೆಸಿ ನಾಶಪಡಿಸಲು ಉದ್ರಿಕ್ತರ ಗುಂಪನ್ನು ಪ್ರಚೋದಿಸುತ್ತಿರುವುದು ಕಂಡು ಬಂದಿತ್ತು.

ಗಲಭೆ ನಡೆದಾಗ ಮೊದಲಿಗೆ ಟಿಜಿ ಶೆಲ್‌, ಲಾಠಿ ಚಾರ್ಚ್‌, ಗಾಳಿಯಲ್ಲಿ ಗುಂಡು ಇತ್ಯಾದಿ ನಡೆಸಿ ಗುಂಪನ್ನು ಚದುರಿಸಲು ಯತ್ನಿಸಿದರೂ ಉದ್ರಿಕ್ತ ಗುಂಪು ಚದುರದೇ ಪೊಲೀಸರ ಮೇಲೆ ದಾಳಿ ನಡೆಸಿತ್ತು. ವಾಹನಗಳನ್ನು, ಆಸ್ತಿಗಳನ್ನು ನಾಶಪಡಿಸುತ್ತಾ ಭಯಾನಕ ವಾತಾವರಣ ನಿರ್ಮಿಸಿತ್ತು. ಈ ಸಮಯದಲ್ಲಿ ಸಾರ್ವಜನಿಕರ ಮತ್ತು ಸರ್ಕಾರಿ ಆಸ್ತಿಪಾಸ್ತಿಗಳ ರಕ್ಷಣೆ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಎಲ್ಲಾ ರೀತಿಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡರೂ ಫಲಕಾರಿಯಾಗಿರಲಿಲ್ಲ.

ಈ ಹಿನ್ನೆಲೆಯಲ್ಲಿ ಹಾಗೂ ಮುಂದೆ ಸಂಭವಿಸಬಹುದಾದ ಹೆಚ್ಚಿನ ಅನಾಹುತ ತಪ್ಪಿಸಲು, ಜತೆಗೆ ನಗರದ ಇತರೆ ಮತೀಯ ಸೂಕ್ಷ್ಮ ಪ್ರದೇಶಗಳಿಗೆ ಗಲಭೆ ಹರಡುವ ಸಾಧ್ಯತೆಗಳು ಹೆಚ್ಚಾಗಿದ್ದನ್ನು ಗಮನಿಸಿ, ಪರಿಸ್ಥಿತಿಯನ್ನು ಸಂಪೂರ್ಣ ಹತೋಟಿಗೆ ತರುವುದು ಅನಿವಾರ್ಯವಾಗಿತ್ತು.

ಡಿಜೆ ಹಳ್ಳಿ- ಕೆಜಿ ಹಳ್ಳಿ ಗಲಭೆ ಪ್ರಕರಣ, ಬೆಂಕಿ ಹಚ್ಚಿದವರ ರಕ್ಷಣೆಗೆ ಸರ್ಕಾರದಿಂದ ವೇದಿಕೆ ಸಿದ್ಧ!

ಗುಂಡಿನ ದಾಳಿ ಹೊರತು ಅನ್ಯ ಮಾರ್ಗವಿರಲಿಲ್ಲ’ ಗಲಭೆನಿರತರ ಕಡೆಗೆ ನೇರವಾಗಿ ಗುಂಡನ್ನು ಹಾರಿಸಿದ್ದು, ಈ ಪೊಲೀಸ್‌ ಕಾರ್ಯಾಚರಣೆಯಲ್ಲಿ ಮೂವರು ಗಾಯಗೊಂಡು ಮೃತಪಟ್ಟಿದ್ದರು. ಗಲಭೆಕೋರರು ಪೊಲೀಸರಿಂದ ಗನ್‌ ಕಿತ್ತುಕೊಂಡು ದಾಳಿ ಮಾಡಲು ಪ್ರಯತ್ನಿಸಿದ್ದರಿಂದ ಪೊಲೀಸರಿಗೆ ಆತ್ಮರಕ್ಷಣೆ, ಸಾರ್ವಜನಿಕರ ಪ್ರಾಣ, ಸರ್ಕಾರಿ ಆಸ್ತಿ ರಕ್ಷಣೆ, ಕಾನೂನು ಮತ್ತು ಸುವ್ಯವಸ್ಥೆ ಪಾಲನೆ ಸಲುವಾಗಿ ನೇರ ಗುಂಡಿನ ದಾಳಿ ನಡೆಸುವುದಲ್ಲದೇ ಅನ್ಯ ಮಾರ್ಗವಿರಲಿಲ್ಲ.

ತನಿಖೆ ಹಾಗೂ ಸಾಕ್ಷ್ಯಗಳನ್ನು ಆಧರಿಸಿ ಪೊಲೀಸರು ಆತ್ಮರಕ್ಷಣೆ, ಸಾರ್ವಜನಿಕ ಪ್ರಾಣ ಹಾಗೂ ಆಸ್ತಿ ರಕ್ಷಣೆ, ಕಾನೂನು ಮತ್ತು ಸುವ್ಯವಸ್ಥೆ ಪಾಲನೆ ಸಲುವಾಗಿ ನೇರ ಗುಂಡಿನ ದಾಳಿ ನಡೆಸಿದ್ದು, ಈ ಕ್ರಮವು ನ್ಯಾಯೋಚಿತವಾಗಿದೆ ಎಂದು ವಿಚಾರಣಾಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

click me!