'ಮುಂದಿನ ಚುನಾವಣೆ ಗೆಲ್ಲಲು ಪೌರತ್ವ ತಿದ್ದುಪಡಿ ತಂತ್ರ'..!

By Kannadaprabha NewsFirst Published Dec 12, 2019, 10:06 AM IST
Highlights

ಆಡಳಿತದಲ್ಲಿ ವಿಫಲವಾಗಿರುವ ಕೇಂದ್ರ ಬಿಜೆಪಿ ಸರ್ಕಾರಕ್ಕೆ ಮುಂದಿನ ಚುನಾವಣೆಯನ್ನು ಎದುರಿಸಲು ವಿಷಯಗಳಿಲ್ಲ. ಹಾಗಾಗಿ ಪೌರತ್ವ ತಿದ್ದುಪಡಿ ಮಸೂದೆಯನ್ನು ಜಾರಿಗೊಳಿಸಲು ಮುಂದಾಗಿದೆ ಎಂದು ಶಾಸಕ ಯು.ಟಿ. ಖಾದರ್‌ ಆರೋಪಿಸಿದ್ದಾರೆ.

ಮಂಗಳೂರು(ಡಿ.12): ದೇಶದ ಐಕ್ಯತೆಗೆ ಮಾರಕವಾಗಲಿರುವ ಪೌರತ್ವ ತಿದ್ದುಪಡಿ ಮಸೂದೆಯನ್ನು 2023ರಲ್ಲಿ ಜಾರಿಗೊಳಿಸುವುದಾಗಿ ಕೇಂದ್ರ ಸರ್ಕಾರ ಹೇಳಿದೆ. 2024ರಲ್ಲಿ ಬರುವ ಸಂಸತ್‌ ಚುನಾವಣೆಯನ್ನು ಗೆಲ್ಲುವ ಹುನ್ನಾರ ಇದರ ಹಿಂದೆ ಅಡಗಿದೆ ಎಂದು ಶಾಸಕ ಯು.ಟಿ. ಖಾದರ್‌ ಆರೋಪಿಸಿದ್ದಾರೆ.

ಆಡಳಿತದಲ್ಲಿ ವಿಫಲವಾಗಿರುವ ಕೇಂದ್ರ ಬಿಜೆಪಿ ಸರ್ಕಾರಕ್ಕೆ ಮುಂದಿನ ಚುನಾವಣೆಯನ್ನು ಎದುರಿಸಲು ವಿಷಯಗಳಿಲ್ಲ. ಹಾಗಾಗಿ ಪೌರತ್ವ ತಿದ್ದುಪಡಿ ಮಸೂದೆಯನ್ನು ಜಾರಿಗೊಳಿಸಲು ಮುಂದಾಗಿದೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

ಹಿಟ್ಲರ್‌ ಮಾದರಿ:

ಪೌರತ್ವ ತಿದ್ದುಪಡಿ ಮಸೂದೆಯು ಮಹಾತ್ಮಾ ಗಾಂಧೀಜಿಯವರ ಭಾರತದ ಕಲ್ಪನೆ, ದೇಶದ ಸಂವಿಧಾನಕ್ಕೆ ವಿರುದ್ಧವಾಗಿದೆ. ಇದು ಹಿಟ್ಲರ್‌ ಮಾದರಿಯ ಫ್ಯಾಸಿಸ್ಟ್‌ ಆಡಳಿತಕ್ಕೆ ಸಾಕ್ಷಿ. ಭವಿಷ್ಯದಲ್ಲಿ ಯಾರೂ ಒಗ್ಗಟ್ಟಾಗಿ ಇರಬಾರದು ಎನ್ನುವ ಅಮಾನವೀಯ ದುರುದ್ದೇಶ ಇದರಲ್ಲಿ ಅಡಗಿದೆ. ದೇಶವನ್ನು ಧರ್ಮಾಧಾರಿತವಾಗಿ ವಿಭಜನೆ ಮಾಡಲು ಹೊರಟರೆ ಭವಿಷ್ಯದ ಪರಿಸ್ಥಿತಿ ಡೋಲಾಯಮಾನವಾಗಲಿದೆ ಎಂದಿದ್ದಾರೆ.

ಕ್ರೈಸ್ತರು, ದಲಿತರಿಗೂ ಕಷ್ಟಬರಲಿದೆ:

ದೇಶದ ಪೌರತ್ವವನ್ನು ಧರ್ಮಾಧಾರಿತವಾಗಿ, ಜಾತಿ ಆಧಾರಿತವಾಗಿ ನೀಡಲು ಸಾಧ್ಯವಿಲ್ಲ. ಸಂವಿಧಾನದಲ್ಲಿ ‘ನಾವೆಲ್ಲಾ ಭಾರತೀಯರು’ ಎಂದು ಹೇಳಿರುವುದು ಇದೇ ಕಾರಣಕ್ಕೆ. ಆದರೆ ಈಗ ಮುಸಲ್ಮಾನರನ್ನು ಗುರಿ ಮಾಡಿ ಮಸೂದೆ ಜಾರಿಗೆ ಹೊರಟಿದ್ದಾರೆ. ಮುಂದೆ ಕ್ರೈಸ್ತರು, ದಲಿತರು, ಹಿಂದುಳಿದವರನ್ನು ಕೂಡ ಇದೇ ರೀತಿ ಪ್ರತ್ಯೇಕಿಸುವ ಹುನ್ನಾರ ಕೇಂದ್ರ ಸರ್ಕಾರದ್ದು. ಭವಿಷ್ಯದಲ್ಲಿ ದೇಶ ವಿಭಜನೆಗೆ ಬೀಜ ಬಿತ್ತುವ ಕೆಲಸವನ್ನು ಮಾಡಲಾಗುತ್ತಿದೆ ಎಂದು ಖಾದರ್‌ ಆರೋಪಿಸಿದ್ದಾರೆ.

ರಾಜ್ಯಸಭೆಯಲ್ಲೂ ಪೌರತ್ವ ಮಸೂದೆ ಪಾಸ್, ಯಾವ ಬದಲಾವಣೆ ಆಗಲಿದೆ?

ಈ ಮಸೂದೆ ಜಾರಿಗೊಳಿಸಲು ಸುಪ್ರೀಂ ಕೋರ್ಟ್‌ ಅವಕಾಶ ನೀಡಲಾರದು. ಹಾಗಾಗಿ ಜನತೆ ಭಯಪಡುವ ಅಗತ್ಯವಿಲ್ಲ. ಈ ಮಸೂದೆಯನ್ನು ರಾಜ್ಯ ಸರ್ಕಾರವೂ ವಿರೋಧಿಸಬೇಕಾಗಿದೆ ಎಂದು ಆಗ್ರಹಿಸಿದ್ದಾರೆ.

ವಿಪಕ್ಷಗಳಿಂದ ಅಮಿತ್ ಶಾ ತರಾಟೆ: ಏಕಾಏಕಿ ಬಂದ್ ಆದ ರಾಜ್ಯಸಭಾ ಟಿವಿ!

ಅಕ್ರಮ ವಲಸಿಗರ ಸಮಸ್ಯೆ ಇರುವುದು ದೇಶದ ಗಡಿ ಭಾಗಗಳಲ್ಲಿ. ಅಲ್ಲಿನ ಸಮಸ್ಯೆಯನ್ನು ಇಡೀ ದೇಶಕ್ಕೆ ಅನ್ವಯಿಸುವುದು ಅಮಾನವೀಯ. ಈಗಾಗಲೇ ಅನೇಕ ಬಿಜೆಪಿ ನಾಯಕರು ಇದನ್ನು ವಿರೋಧಿಸಿದ್ದಾರೆ. ಇನ್ನು ಜಾರಿಗೆ ಹೊರಟರೆ ಇಡೀ ದೇಶದ ಜನ ಒಕ್ಕೊರೊಲಿನಿಂದ ವಿರೋಧಿಸಲಿದ್ದಾರೆ ಎಂದು ಖಾದರ್‌ ಹೇಳಿದ್ದಾರೆ.

ಸೆನ್ಸಸ್‌ ನಡುವೆ ಏಕೆ ಮಸೂದೆ:

ಮುಂದಿನ ವರ್ಷ ಏಪ್ರಿಲ್‌ ತಿಂಗಳಲ್ಲಿ ಜನಗಣತಿ ಆರಂಭವಾಗಲಿದೆ. ಆಗ ಎಲ್ಲ ಕುಟುಂಬದವರೂ ಸಂಪೂರ್ಣವಾದ ಮಾಹಿತಿ ನೀಡುತ್ತಾರೆ. ಆಗ ಅಕ್ರಮ ವಲಸಿಗರಿದ್ದರೆ ಗೊತ್ತಾಗುವುದಿಲ್ಲವೇ? ಜನಗಣತಿ ಆಗುವುದಕ್ಕೂ ಮೊದಲೇ ಮಸೂದೆ ತರುವ ಅಗತ್ಯವೇನು ಎಂದು ಪ್ರಶ್ನಿಸಿದರು.

‘ಭಾರತ್‌ ಬಚಾವೊ’ಗೆ ಕಾರ್ಯಕರ್ತರು: ಕೇಂದ್ರ ಸರ್ಕಾರದ ವಿವಿಧ ಜನವಿರೋಧಿ ನೀತಿಗಳನ್ನು ವಿರೋಧಿಸಿ ರಾಷ್ಟ್ರ ಮಟ್ಟದಲ್ಲಿ ಕಾಂಗ್ರೆಸ್‌ ವತಿಯಿಂದ ‘ಭಾರತ್‌ ಬಚಾವೊ’ ಆಂದೋಲನ ಡಿ.14ರಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ ನಡೆಯಲಿದ್ದು, ಅದರಲ್ಲಿ ಪಾಲ್ಗೊಳ್ಳಲು ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯ ನಾಯಕರು, ಕಾರ್ಯಕರ್ತರು ತೆರಳಲಿದ್ದಾರೆ ಎಂದಿದ್ದಾರೆ.

ಕಾಂಗ್ರೆಸ್‌ ಮುಖಂಡರಾದ ಚಂದ್ರಹಾಸ ಕರ್ಕೇರ, ಮಮತಾ ಗಟ್ಟಿ, ಸದಾಶಿವ ಉಳ್ಳಾಲ್‌, ಈಶ್ವರ ಉಳ್ಳಾಲ್‌, ಮೋಹನ್‌ ಶೆಟ್ಟಿ, ಎನ್‌.ಎಸ್‌. ಕರೀಂ ಇದ್ದರು.

ಉಳ್ಳಾಲ ದರ್ಗಾ: ಶಾಂತಿಯ ಹೊಣೆ ಜಿಲ್ಲಾಡಳಿತದ್ದು

ದಕ್ಷಿಣ ಭಾರತದ ಅಜ್ಮೀರ್‌ ಖ್ಯಾತಿಯ ಉಳ್ಳಾಲ ದರ್ಗಾ ಪಾವಿತ್ರ್ಯತೆಗೆ ಕಳಂಕ ಬಾರದ ರೀತಿಯಲ್ಲಿ ಶಾಂತಿ ಕಾಪಾಡುವುದು ಜಿಲ್ಲಾಡಳಿತದ ಕರ್ತವ್ಯ. ಸರ್ಕಾರವು ಆಡಳಿತಾಧಿಕಾರಿ ನೇಮಕ ಮಾಡುವ ಸಂದರ್ಭ ಯಾರಲ್ಲೂ ಚರ್ಚಿಸಿಲ್ಲ. ಮಾಹಿತಿ ನೀಡಿಲ್ಲ. ಅದರ ಸರಿ ತಪ್ಪು ತೀರ್ಮಾನಿಸುವುದು ಕೋರ್ಟ್‌ಗೆ ಬಿಟ್ಟವಿಚಾರ. ಆದರೆ ಅಲ್ಲಿ ಶಾಂತಿ ಹಾಗೂ ಸೌಹಾರ್ದತೆ ಕಾಪಾಡುವುದು ಜಿಲ್ಲಾಧಿಕಾರಿ ಕರ್ತವ್ಯ. ಅಲ್ಲಿನ ಎರಡು ತಂಡಗಳು ರಾಜಿ ಮೂಲಕ ಸಮಸ್ಯೆ ಪರಿಹರಿಸುವುದು ಉತ್ತಮ ಎಂದು ಖಾದರ್‌ ಹೇಳಿದ್ದಾರೆ.

click me!