ಸವದತ್ತಿ: ಹುಣ್ಣಿಮೆಗೆ ಯಲ್ಲಮ್ಮ ದೇವಸ್ಥಾನಕ್ಕೆ ಭಕ್ತಸಾಗರ

By Suvarna NewsFirst Published Dec 12, 2019, 9:57 AM IST
Highlights

ಹೊಸ್ತಿಲ ಹುಣ್ಣೆಮೆ ಅಂಗವಾಗಿ ಕ್ಷೇತ್ರಕ್ಕೆ ಸಾಕಷ್ಟು ಸಂಖ್ಯೆಯಲ್ಲಿ ಆಗಮಿಸಿ ಭಕ್ತರು| ಮಹಾರಾಷ್ಟ್ರ ಸೇರಿದಂತೆ ಉತ್ತರ ಕರ್ನಾಟಕದ ಹಲವಾರು ಜಿಲ್ಲೆಗಳಿಂದ ಲಕ್ಷಾಂತರ ಭಕ್ತರು ಶ್ರೀಕ್ಷೇತ್ರಕ್ಕೆ ಆಗಮಿಸಿದ್ದಾರೆ| ಸರಾಗವಾಗಿ ವಾಹನಗಳು ಸಂಚರಿಸಲು ಏಕ ಮುಖ ರಸ್ತೆ ಸಾರಿಗೆ ವ್ಯವಸ್ಥೆ| ಯಲ್ಲಮ್ಮನಗುಡ್ಡದಲ್ಲಿ ಸುವ್ಯವಸ್ಥಿತವಾಗಿ ವಾಹನ ನಿಲುಗಡೆಗೆ ಅವಕಾಶ|

ಸವದತ್ತಿ(ಡಿ.12): ಉತ್ತರ ಕರ್ನಾಟಕದ ಆದಿಶಕ್ತಿ ಶ್ರೀರೇಣುಕಾ ಯಲ್ಲಮ್ಮ ದೇವಸ್ಥಾನದಲ್ಲಿ ಇಂದು(ಗುರುವಾರ) ನಡೆಯುವ ಹೊಸ್ತಿಲ ಹುಣ್ಣೆಮೆ ಅಂಗವಾಗಿ ಕ್ಷೇತ್ರಕ್ಕೆ ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದಾರೆ. ವರ್ಷದಲ್ಲಿ ನಡೆಯುವ ಹನ್ನೆರಡು ಹುಣ್ಣಿಮೆಗಳಂದು ನಡೆಯುವ ಪೂಜಾ ವಿಧಾನಗಳನ್ನು ಹೊರತುಪಡಿಸಿ ಈ ಹೊಸ್ತಿಲ ಹುಣ್ಣೆಮೆಯ ಮುನ್ನಾದಿನ ಯಲ್ಲಮ್ಮ ಕ್ಷೇತ್ರದಲ್ಲಿ ಪೂಜಾ ಪದ್ಧತಿಯೇ ಬೇರೆಯಾಗಿದೆ. 

ಹೊಸ್ತಿಲ ಹುಣ್ಣಿಮೆಯಂದು ದೇವಿಯು ಮೂರು ಘಳಿಗೆ ವಿಧವೆಯಾಗುತ್ತಾಳೆ ಎಂಬ ಪ್ರತೀತವಿದ್ದು, ಹೊಸ್ತಿಲ ಹುಣ್ಣಿಮೆ ಮುನ್ನಾದಿನವೇ ಕ್ಷೇತ್ರದ ಜಮದಗ್ನಿ ದೇವಸ್ಥಾನದ ಬಳಿ ವಿಶೇಷವಾದ ಪೂಜೆಗಳನ್ನು ನೆರವೇರಿಸಿಕೊಂಡು ಬರಲಾಗಿದೆ. ಮಹಾರಾಷ್ಟ್ರ ಸೇರಿದಂತೆ ಉತ್ತರ ಕರ್ನಾಟಕದ ಹಲವಾರು ಜಿಲ್ಲೆಗಳಿಂದ ಲಕ್ಷಾಂತರ ಭಕ್ತರು ಶ್ರೀಕ್ಷೇತ್ರಕ್ಕೆ ಆಗಮಿಸಿದ್ದಾರೆ. ಯಲ್ಲಮ್ಮನ ಗುಡ್ಡಕ್ಕೆ ಆಗಮಿಸುವ ಮುನ್ನ ಭಕ್ತರು ಮಲಪ್ರಭಾ ನದಿ ತೀರದಲ್ಲಿರುವ ಜೋಗುಲ ಬಾವಿ ಸತ್ಯೆಮ್ಮಾದೇವಿಯ ದರ್ಶನ ಮಾಡಿಕೊಂಡು ಬರುವುದು ವಾಡಿಕೆಯಾಗಿದೆ. ಅದರಂತೆ ದೇವಿಯ ದರ್ಶನಕ್ಕೆ ಆಗಮಿಸಿದ್ದ ಭಕ್ತರು ಜೋಗುಲ ಬಾವಿಯಲ್ಲಿ ಮಿಂದು ಸತ್ಯಮ್ಮನ ದರ್ಶನ ಪಡೆದು ಯಲ್ಲಮ್ಮನ ಗುಡ್ಡಕ್ಕೆ ತಮ್ಮ ಪ್ರಯಾಣವನ್ನು ಸಾಲು ಸಾಲಾಗಿ ಬೆಳೆಸುತ್ತಿರುವುದು ಬುಧವಾರ ಕಂಡು ಬಂದಿದೆ.

ಸುಗಮವಾಗಿ ಸಂಚಾರಕ್ಕೆ ಸನ್ನದ್ಧ 

ಇತ್ತೀಚಿನ ದಿನಗಳಲ್ಲಿ ಕ್ಷೇತ್ರಕ್ಕೆ ವಾಹನಗಳ ದಟ್ಟನೆ ಹೆಚ್ಚಾಗಿದ್ದು, ಭಕ್ತರ ವಾಹನಗಳನ್ನು ಸುಗಮವಾಗಿ ಸಂಚರಿಸಲು ಪೊಲೀಸ್ ಇಲಾಖೆಯಿಂದ ಸಾಕಷ್ಟು ಸಿಬ್ಬಂದಿ ಹಗಲು ರಾತ್ರಿ ಕಾರ್ಯನಿರ್ವಹಿಸುತ್ತಿದ್ದಾರೆ. ಜೋಗುಲ ಬಾವಿಯ ಸತ್ಯೆಮ್ಮಾ ಕ್ಷೇತ್ರದಿಂದ ದಬದಬೆ ಮಾರ್ಗವಾಗಿ ಶ್ರೀಕ್ಷೇತ್ರಕ್ಕೆ ಹೋಗುವ ಮಾರ್ಗದಲ್ಲೆಲ್ಲ ಪೊಲೀಸ್ ಸರ್ಪಗಾವಲು ನಿರಂತರವಾಗಿದೆ. ಸರಾಗವಾಗಿ ವಾಹನಗಳು ಸಂಚರಿಸಲು ಏಕ ಮುಖ ರಸ್ತೆ ಸಾರಿಗೆ ವ್ಯವಸ್ಥೆಯನ್ನು ಮಾಡಲಾಗಿದ್ದು, ಯಲ್ಲಮ್ಮನಗುಡ್ಡದಲ್ಲಿ ಸುವ್ಯವಸ್ಥಿತವಾಗಿ ವಾಹನ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ.

ಡಿವೈಎಸ್ಪಿ ನೇತೃತ್ವದಲ್ಲಿ 8 ಸಿಪಿಐ, 12 ಪಿಎಸೈ, 18 ಎಎಸೈ ಸೇರಿದಂತೆ 130ಕ್ಕೂ ಅಧಿಕ ಪೊಲೀಸ್ ಪೇದೆಗಳನ್ನು ದೇವಸ್ಥಾನದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ಮಂಜುನಾಥ ನಡುವಿನಿ ಅವರು ತಿಳಿಸಿದ್ದಾರೆ.

ಸಿಪಿಐ ಕ್ಷೇತ್ರಕ್ಕೆ ಆಗಮಿಸುವ ಭಕ್ತರಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವಲ್ಲಿ ದೇವಸ್ಥಾನದ ಆಡಳಿತ ಮಂಡಳಿಯಿಂದ ಸೂಕ್ತ ಕ್ರಮಕೈಗೊಳ್ಳಲಾಗಿದ್ದು, ಹುಣ್ಣಿಮೆ ಹಿಂದಿನ ದಿನ ಆಗಮಿಸುವ ಭಕ್ತರ ಆಚರಣೆಗಳಿಗೆ ಎಲ್ಲ ವ್ಯವಸ್ಥೆ ಮಾಡಲಾಗಿದೆ ಎಂದು ದೇವಸ್ಥಾನ ಕಾರ್ಯನಿರ್ವಣಾಧಿಕಾರಿ ರವಿ ಕೊಟಾರಗಸ್ತಿ ಅವರು ಹೇಳಿದ್ದಾರೆ.  
 

click me!