ಮಡಿಕೇರಿ: ಜನೋತ್ಸವ ದಸರಾದಲ್ಲಿ ಚಿಣ್ಣರ ಕಲರವ

By Web Desk  |  First Published Oct 3, 2019, 1:28 PM IST

ಮಡಿಕೇರಿ ದಸರಾ ಜನೋತ್ಸವ ಅಂಗವಾಗಿ ನಡೆದ ಸಾಂಸ್ಕೃತಿಕ ಕಾರ್ಯಕ್ರದ ವೀಕ್ಷಣೆಗೆ ಕಡಿಮೆ ಸಂಖ್ಯೆಯಲ್ಲಿ ಪ್ರೇಕ್ಷಕರು ಕಂಡು ಬಂದಿದ್ದರು| ಮಕ್ಕಳ ದಸರಾದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಹಾಗೂ ಸಾರ್ವಜನಿಕರು ಬಂದಿದ್ದರು| ಮಕ್ಕಳ ಸಂತೆ ಹಾಗೂ ಅಂಗಡಿ ಸ್ಪರ್ಧೆಯಲ್ಲಿ ಸುಮಾರು 171 ಸ್ಟಾಲ್‌ಗಳನ್ನು ಹಾಕಲಾಗಿತ್ತು| ಬಗೆ ಬಗೆಯ ತರಕಾರಿಗಳು, ಸೊಪ್ಪುಗಳು, ಕಾಡಿನಲ್ಲಿ ಸಿಗುವ ಕೆಸ, ತೆರ್ಮೆ ಸೊಪ್ಪು, ವಿವಿಧ ಜಾತಿಯ ಹಣ್ಣುಗಳನ್ನು ಮಕ್ಕಳು ಭರ್ಜರಿಯಾಗಿ ವ್ಯಾಪಾರ ಮಾಡಿದರು| 


ವಿಘ್ನೇಶ್ ಎಂ. ಭೂತನಕಾಡು

ಮಡಿಕೇರಿ(ಅ.3): ಒಂದೆಡೆ ಭರ್ಜರಿ ವ್ಯಾಪಾರ, ಮತ್ತೊಂದೆಡೆ ದೇವಾನುದೇವತೆಗಳ ಆರ್ಭಟ,ವೇದಿಕೆಯಲ್ಲಿ ಬಗೆ ಬಗೆಯ ವೇಷ ತೊಟ್ಟು ಗಮನ ಸೆಳೆದ ಪುಟಾಣಿಗಳು ಚಿಣ್ಣರ ಕೈಯ್ಯಿಂದ ಪಾನಿಪೂರಿ ಸವಿದ ಡಿಸಿ, ಎಸ್ಪಿ, ಸಿಇಒ ಕಿತ್ತಳೆ ಹಣ್ಣು ಖರೀದಿಸಿದ ಶಾಸಕರ ರಂಜನ್‌. ಎಲ್ಲೆಲ್ಲೂ ಮಕ್ಕಳದ್ದೇ ಸಂಭ್ರಮ... ಮಕ್ಕಳ ಸಂತೆ, ಅಂಗಡಿ ಮಳಿಗೆಗಳನ್ನು ಕುತೂಹಲದಿಂದ ವೀಕ್ಷಿಸಿದ ಸಾರ್ವಜನಿಕರು.

Tap to resize

Latest Videos

ಇವು, ರೋಟರಿ ಮಿಸ್ಟಿಹಿಲ್ಸ್‌ ವತಿಯಿಂದ ಮಡಿಕೇರಿ ದಸರಾ ಸಮಿತಿ ಸಹಯೋಗದಲ್ಲಿ ನಗರದ ಗಾಂಧಿ ಮೈದಾನದಲ್ಲಿ ಬುಧವಾರ ನಡೆದ 7ನೇ ವರ್ಷದ ಮಕ್ಕಳ ದಸರಾ ಕಾರ್ಯಕ್ರಮದಲ್ಲಿ ಕಂಡುಬಂದ ದೃಶ್ಯಗಳು.ಮಕ್ಕಳ ದಸರಾ ಅಂಗವಾಗಿ ಮಕ್ಕಳ ಸಂತೆ, ಮಕ್ಕಳ ಅಂಗಡಿ, ಮಕ್ಕಳ ಮಂಟಪ, ಛದ್ಮವೇಷ, ಕ್ಲೇ ಮಾಡೆಲ್‌, ವಿಜ್ಞಾನ ಮಾದರಿ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.

ಉತ್ತಮ ಸ್ಪಂದನೆ:

ಮಡಿಕೇರಿ ದಸರಾ ಜನೋತ್ಸವ ಅಂಗವಾಗಿ ನಗರದ ಗಾಂಧಿ ಮೈದಾನದ ಕಲಾ ಸಂಭ್ರಮ ವೇದಿಕೆಯಲ್ಲಿ ಕಳೆದೆರಡು ದಿನ ನಡೆದ ಸಾಂಸ್ಕೃತಿಕ ಕಾರ್ಯಕ್ರದ ವೀಕ್ಷಣೆಗೆ ಕಡಿಮೆ ಸಂಖ್ಯೆಯಲ್ಲಿ ಪ್ರೇಕ್ಷಕರು ಕಂಡು ಬಂದಿದ್ದರು. ಆದರೆ ಮಕ್ಕಳ ದಸರಾದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಹಾಗೂ ಸಾರ್ವಜನಿಕರು ಪ್ರತ್ಯಕ್ಷವಾಗಿದ್ದರು.

ಮಕ್ಕಳ ಸಂತೆ ಹಾಗೂ ಅಂಗಡಿ ಸ್ಪರ್ಧೆಯಲ್ಲಿ ಸುಮಾರು 171 ಸ್ಟಾಲ್‌ಗಳನ್ನು ಹಾಕಲಾಗಿತ್ತು. ಬಗೆ ಬಗೆಯ ತರಕಾರಿಗಳು, ಸೊಪ್ಪುಗಳು, ಕಾಡಿನಲ್ಲಿ ಸಿಗುವ ಕೆಸ, ತೆರ್ಮೆ ಸೊಪ್ಪು, ವಿವಿಧ ಜಾತಿಯ ಹಣ್ಣುಗಳನ್ನು ಮಕ್ಕಳು ಭರ್ಜರಿಯಾಗಿ ವ್ಯಾಪಾರ ಮಾಡಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ  

ಸಾಂಪ್ರದಾಯಿಕ ಉಡುಪು ತೊಟ್ಟು ಅಣ್ಣ ಇಲ್ಲಿ ಬನ್ನಿ... ಅಕ್ಕ... ಆಂಟಿ... ಅಂಕಲ್‌...ಇಲ್ಲಿ ಬನ್ನಿ ಹತ್ತೇ ರುಪಾಯಿ ಎಂದು ವ್ಯಾಪಾರ ಮಾಡಿ ಗಮನ ಸೆಳೆದರು. ಮಡಿಕೇರಿಯ ಬಾಲಕಿಯರ ಬಾಲ ಮಂದಿರದ ವಿದ್ಯಾರ್ಥಿನಿಯರು ತಾವೇ ಸ್ವತಃ ತಯಾರಿಸಿದ್ದ ಕರಕುಶಲ ವಸ್ತುಗಳನ್ನು ಪ್ರದರ್ಶಿಸಿದರು.

ತಿನಿಸುಗಳ ಮಾರಾಟ:

ಚಾಟ್ಸ್‌ ಸ್ಟಾಲ್‌ಗಳಲ್ಲಂತೂ ಪಾನಿಪೂರಿ, ಸಲಾಡ್‌, ಚುರುಮುರಿ, ಬಜ್ಜಿ, ವಡೆ, ಹೋಂ ಮೇಡ್‌ ಕೇಕ್‌ ಸೇರಿದಂತೆ ವಿವಿಧ ಬಗೆಯ ತಿಂಡಿ ತನಿಸುಗಳನ್ನು ಮಾರಾಟ ಮಾಡಿದರು. ಮಕ್ಕಳ ಸಂತೆ ಹಾಗೂ ಅಂಗಡಿಗಳಿಗೆ ಭೇಟಿ ನೀಡಿದ ಶಾಸಕ ಅಪ್ಪಚ್ಚು ರಂಜನ್‌ ಕಿತ್ತಳೆ ಹಣ್ಣು ಖರೀದಿಸಿದರು. ಜಿಲ್ಲಾಧಿಕಾರಿ ಅನೀಸ್‌ ಕಣ್ಮಣಿ ಜಾಯ್‌, ಎಸ್ಪಿ ಸುಮನ್‌, ಜಿಪಂ ಸಿಇಒ ಲಕ್ಷ್ಮೇಪ್ರಿಯಾ ಪಾನಿಪೂರಿ ಸವಿದರು.

ಮಕ್ಕಳ ಮಂಟಪ:

ಈ ಬಾರಿ 8 ಮಕ್ಕಳ ಮಂಟಪ ಮಾತ್ರ ಸ್ಪರ್ಧೆಯಲ್ಲಿ ಪಾಲ್ಗೊಂಡಿತ್ತು. ಮಡಿಕೇರಿ ದಸರಾದ ಪ್ರಮುಖ ಆಕರ್ಷಣೆಯಾಗಿರುವ ದಶಮಂಟಪಗಳಂತೆ ಮಕ್ಕಳು ಕೂಡ ವಿವಿಧ ಕಥಾ ಸಾರಾಂಶಗಳನ್ನು ಒಳಗೊಂಡ ಮಂಟಪಗಳನ್ನು ರಚಿಸಿದ್ದರು. ಮಂಟಪದಲ್ಲಿ ದೇವತೆಗಳು ದುಷ್ಟರನ್ನು ಸಂಹಾರ ಮಾಡುವ ದೃಶ್ಯಗಳನ್ನು ಪ್ರದರ್ಶಿಸಿದರು.

ವಿಜ್ಞಾನ ಮಾದರಿ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು ತಮ್ಮ ಕಲ್ಪನೆಯಲ್ಲಿ ಅದ್ಭುತವಾದ ಮಾದರಿಗಳನ್ನು ರಚಿಸಿದ್ದರು. ನೀರಿನ ಮಾಲಿನ್ಯ ತಡೆಗಟ್ಟುವುದು, ಪ್ರಾಣಿಗಳಿಂದ ಕೃಷಿ ಬೆಳೆಗಳನ್ನು ಹೇಗೆ ಸಂರಕ್ಷಿಸಿಕೊಳ್ಳುವುದು, ಸೋಲಾರ್‌ ಮೂಲಕ ವಿದ್ಯುತ್‌ ಉತ್ಪಾದನೆ ಸೇರಿದಂತೆ ವಿವಿಧ ಮಾದರಿಗಳನ್ನು ಸಿದ್ಧಪಡಿಸಿದ್ದರು.

ಛದ್ಮವೇಷ ಸ್ಪರ್ಧೆಯಲ್ಲಿ ಸುಮಾರು 70ಕ್ಕೂ ಅಧಿಕ ಮಂದಿ ಮಕ್ಕಳು ವಿವಿಧ ವೇಷತೊಟ್ಟು ಪ್ರೇಕ್ಷಕರ ಗಮನ ಸೆಳೆದರು. ಮಹಿಳೆಯರನ್ನು ರಕ್ಷಿಸಿ... ವಿದೇಶಿ ಪಾನೀಯಗಳನ್ನು ಕುಡಿಯುವ ಬದಲು ಎಳನೀರು ಕುಡಿಯಿರಿ... ಪ್ರಾಣಿ ಪಕ್ಷಿಗಳನ್ನು ರಕ್ಷಿಸಿ... ಎಂಬ ಸಂದೇಶ ಕಂಡುಬಂತು.

ದೇವತೆಗಳಾದ ಕಾಳಿ, ವಿಷ್ಣು, ಶಿವ, ಕೃಷ್ಣ, ರಾಧೆ, ಮಹಾನ್‌ ನಾಯಕರಾದ ಗಾಂಧೀಜಿ, ಸ್ವಾಮಿ ವಿವೇಕಾನಂದ, ಸುಭಾಷ್‌ಚಂದ್ರ ಬೋಸ್‌, ಸಂಗೊಳ್ಳಿ ರಾಯಣ್ಣ, ಕಿತ್ತೂರು ರಾಣಿ ಚೆನ್ನಮ್ಮ, ಉಳಿದಂತೆ ದ್ರಾಕ್ಷಿ, ಕೊಕ್ಕರೆ, ಎಳನೀರು, ಹುಲಿ, ಶ್ವಾನ, ಬಾಳೆಗೊನೆ, ತೆಂಗಿನಕಾಯಿ ಮತ್ತಿತರ ವೇಷವನ್ನು ತೊಟ್ಟಿದರು.

ಪ್ರತಿಭೆ ಅನಾವರಣಕ್ಕೆ ಮಕ್ಕಳ ದಸರಾ ಸಹಕಾರಿ

ಮಕ್ಕಳಲ್ಲಿ ಅಡಗಿರುವ ಪ್ರತಿಭೆಗಳನ್ನು ಅನಾವರಣ ಮಾಡಲು ಮಕ್ಕಳ ದಸರಾ ಕಾರ್ಯಕ್ರಮ ಸಹಕಾರಿ ಎಂದು ಶಾಸಕ ಅಪ್ಪಚ್ಚು ರಂಜನ್‌ ಹೇಳಿದ್ದಾರೆ. ನಗರದ ಗಾಂಧಿ ಮೈದಾನದ ಕಲಾ ಸಂಭ್ರಮ ವೇದಿಕೆಯಲ್ಲಿ ರೋಟರಿ ಮಿಸ್ಟಿಹಿಲ್ಸ್‌ ವತಿಯಿಂದ ದಸರಾ ಸಮಿತಿ ಸಹಯೋಗದಲ್ಲಿ ಬುಧವಾರ ನಡೆದ 7ನೇ ವರ್ಷದ ಮಕ್ಕಳ ದಸರಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮಡಿಕೇರಿ ದಸರಾಗೆ ಸರ್ಕಾರ ರು.1 ಕೋಟಿ ಬಿಡುಗಡೆ ಮಾಡಿ ಹಣವೂ ಬಂದಾಗಿದೆ. ಆದರೆ ಕಳೆದ ವರ್ಷದ ಹಣ ಬಂದಿಲ್ಲ ಎಂದು ಅವರು ನುಡಿದರು.

ಜಿಲ್ಲಾಧಿಕಾರಿ ಅನೀಸ್‌ ಕಣ್ಮಣಿ ಜಾಯ್‌ ಮಾತನಾಡಿ, ಮಡಿಕೇರಿ ದಸರಾವನ್ನು ದಸರಾ ಜನೋತ್ಸವ ಎಂದು ಕರೆಯಲಾಗುತ್ತದೆ. ಇದು ಸಮಿತಿಯ ಉತ್ಸವ ಅಲ್ಲ. ಅಲ್ಲದೆ ಜಿಲ್ಲಾಡಳಿತ, ನಗರಸಭೆಯ ಉತ್ಸವವಲ್ಲ.ದಸರಾ ಕಾರ್ಯಕ್ರಮವನ್ನು ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಬಂದು ವೀಕ್ಷಣೆ ಮಾಡಬೇಕೆಂದು ಮನವಿ ಮಾಡಿದರು.

ಮಡಿಕೇರಿ ದಸರಾ ಸಮಿತಿಯ ಕಾರ್ಯಾಧ್ಯಕ್ಷ ರಾಬಿನ್‌ ದೇವಯ್ಯ, ಪ್ರಧಾನ ಕಾರ್ಯದರ್ಶಿ ಬಿ.ಕೆ. ಜಗದೀಶ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಿ.ಪಿ. ಸುಮನ್‌, ಹೆಚ್ಚುವರಿ ಜಿಲ್ಲಾಧಿಕಾರಿ ಸ್ನೇಹಾ, ಜಿಲ್ಲಾ ಪಂಚಾಯಿತಿ ಸಿಇಒ ಲಕ್ಷ್ಮೇಪ್ರಿಯಾ, ದಸರಾ ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಆರ್‌.ಬಿ. ರವಿ, ರೋಟರಿ ಮಿಸ್ಟಿಹಿಲ್ಸ್‌ ಅಧ್ಯಕ್ಷ ಎಂ.ಆರ್‌.ಜಗದೀಶ್‌, ಸಹಾಯಕ ಗವರ್ನರ್‌ ನಾಗೇಶ್‌, ಸಾಂಸ್ಕೃತಿಕ ಸಮಿತಿ ಗೌರವ ಸಲಹೆಗಾರರಾದ ಅನಿಲ್‌ ಎಚ್‌.ಟಿ. ಮತ್ತಿತರರು ಹಾಜರಿದ್ದರು.

click me!