
ಕನಕಗಿರಿ (ಜೂ.7) ತಾಲೂಕಿನ ಬಸರಿಹಾಳ ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ ಒಂದೂವರೆ ವರ್ಷದ ಮಗು ಮಂಗಳವಾರ ಮೃತಪಟ್ಟಿದ್ದು, ಇದರೊಂದಿಗೆ ಗ್ರಾಮದಲ್ಲಿ ಈ ದುರಂತದಲ್ಲಿ ಮೃತರಾದವರ ಸಂಖ್ಯೆ 2 ಕ್ಕೇರಿದೆ.
ಗ್ರಾಮದ ಶೃತಿ ಮಂಗಳೇಶ ನಾಯಕ ಎಂಬ ಒಂದೂವರೆ ವರ್ಷದ ಮಗು ಮಂಗಳವಾರ ಮಧ್ಯಾಹ್ನ ತೀವ್ರ ಅಸ್ವಸ್ಥಗೊಂಡಿದ್ದು, ಪಾಲಕರು ಅವಳನ್ನು ತಾವರಗೇರಾ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆ ತಂದಿದ್ದು, ವೈದ್ಯರು ತುರ್ತು ಚಿಕಿತ್ಸೆ ನೀಡಿದರೂ ಸ್ಪಂದಿಸದೆ ಮಗು ಮೃತಪಟ್ಟಿದೆ.
ಕಳೆದ ಮೇ 31 ರಂದು ಅದೇ ಗ್ರಾಮದ ಹೊನ್ನಮ್ಮ ನಟೇಗುಡ್ಡ (55) ಎಂಬವರು ಕಲುಷಿತ ನೀರು ಸೇವಿಸಿ ವಾಂತಿ ಭೇದಿಯಿಂದ ತೀವ್ರ ಅಸ್ವಸ್ಥಗೊಂಡು ಬಳಿಕ ಆಸ್ಪತ್ರೆಯಲ್ಲಿ ಮೃತರಾಗಿದ್ದರು. ಕಳೆದ ಒಂದು ವಾರದಲ್ಲಿ ಗ್ರಾಮದಲ್ಲಿ ಸುಮಾರು 18 ಜನರು ಕಲುಷಿತ ನೀರು ಸೇವಿಸಿ ಅಸ್ವಸ್ಥರಾಗಿದ್ದರು. ಅವರೆಲ್ಲ ಇದೀಗ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.
ಸಿಇಒ ಭೇಟಿ
ಈ ಮಧ್ಯೆ ಮಗು ಮೃತಪಟ್ಟವಿಷಯ ತಿಳಿಯುತ್ತಿದ್ದಂತೆಯೇ ಕೊಪ್ಪಳ ಜಿಪಂ ಸಿಇಒ ರಾಹುಲ್ ರತ್ನಂ ಪಾಂಡೆ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿತು.
ಪಿಡಿಒ, ಗ್ರಾಪಂ ಸಿಬ್ಬಂದಿ ಜತೆ ಚರ್ಚಿಸಿದ ಸಿಇಒ, ಸ್ಥಳೀಯರೊಂದಿಗೆ ಗ್ರಾಮದ ಓಣಿಗಳಲ್ಲಿ ಸಂಚರಿಸಿ ನೀರು ಕಲುಷಿತಗೊಳ್ಳಲಿಕ್ಕೆ ಕಾರಣವಾದ ಪೈಪ್‌ಲೈನ್ ಒಡೆದಿರುವುದು, ಮಲೀನ ಪ್ರದೇಶ, ನೀರಿನ ಟ್ಯಾಂಕ್, ತೊಟ್ಟಿಗಳನ್ನು ಪರಿಶೀಲಿಸಿದರು. ಗ್ರಾಮಸ್ಥರು ಅನಧಿಕೃತ ನಲ್ಲಿಗಳನ್ನು ಅಳವಡಿಸಿಕೊಂಡಿರುವ ಬಗ್ಗೆ ಗಮನಿಸಿದರು. ಬಳಿಕ ಕಲುಷಿತ ನೀರು ಸೇವನೆಯಿಂದ ಸಾವನ್ನಪ್ಪಿರುವ ವೃದ್ಧೆ ಹೊನ್ನಮ್ಮ ನಟೆಗುಡ್ಡ ಹಾಗೂ ಮಂಗಳವಾರ ಮೃತಪಟ್ಟಮಗು ಶೃತಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ರಾಯಚೂರು ಆಯ್ತು, ಈಗ ಕೊಪ್ಪಳದಲ್ಲಿ ಕಲುಷಿತ ನೀರು ಸೇವನೆಗೆ ಮಹಿಳೆ ಬಲಿ: 10 ಮಂದಿ ಅಸ್ವಸ್ಥ
ಇನ್ನೂ ಕುಷ್ಟಗಿ ತಾಲೂಕಿನ ತಾವರಗೇರಾದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹನುಮಂತಿಯನ್ನು ಕೊಪ್ಪಳ ಜಿಲ್ಲಾಸ್ಪತ್ರೆಗೆ ಸ್ಥಳಾಂತರಿಸಲು ಹಾಗೂ ರಾಯಚೂರು ಜಿಲ್ಲೆಯ ಸಿಂಧನೂರಿನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಆಕೆಯ ಮಗಳನ್ನು ಹೆಚ್ಚಿನ ಚಿಕಿತ್ಸೆಗೆ ರಾಯಚೂರಿಗೆ ಸ್ಥಳಾಂತರಿಸಲು ಕ್ರಮ ಕೈಗೊಳ್ಳಲು ಡಿಎಚ್‌ಒ ಅಲಕಾನಂದಗೆ ತಿಳಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಿಇಒ, ಗ್ರಾಮದಲ್ಲಿ ಅನಧಿಕೃತ ನಲ್ಲಿಗಳನ್ನು ಅಳವಡಿಸಿಕೊಂಡಿರುವುದು ಕಂಡು ಬಂದಿದೆ. ನೀರು ಸರಬರಾಜು ಬಂದ್ ಆದಾಗ ನಲ್ಲಿ ಪಕ್ಕದಲ್ಲಿನ ಹೊಲಸು ಪೈಪಿಗೆ ಸೇರಿಕೊಳ್ಳುತ್ತಿದೆ. ಇದರಿಂದ ನೀರು ಕಲುಷಿತಗೊಂಡಿದ್ದು, ಘಟನೆಗೆ ಕಾರಣವಾಗಿದೆ. ಸಧ್ಯಕ್ಕೆ ಬೋರ್‌ವೆಲ್ ನೀರು ಸ್ಥಗಿತಗೊಳಿಸಿ ಟ್ಯಾಂಕರ್ ಮೂಲಕ ನೀರು ಪೂರೈಸಲು ಸೂಚಿಸಲಾಗಿದೆ. ಒಎಚ್‌ಟಿ ಟ್ಯಾಂಕ್ ಮುಖಾಂತರ ಜೆಜೆಎಂ ಯೋಜನೆಯ ನಲ್ಲಿಗಳಿಗೆ ನೀರು ಸರಬರಾಜು ಮಾಡುವಂತೆ ಸೂಚಿಸಿದೆ ಎಂದರು.
ವೃದ್ಧೆ ಸಾವಿಗೆ ಹೃದಯ ಕಾಯಿಲೆ, ಕಿಡ್ನಿ ವಿಫಲತೆ ಕಾರಣ- ಡಿಎಚ್‌ಓ
ಕೊಪ್ಪಳ
ಬಸರಿಹಾಳ ಗ್ರಾಮದ ಹೊನ್ನಮ್ಮ ಅವರಿಗೆ ಹೃದಯದ ಕಾಯಿಲೆ, ನ್ಯುಮೋನಿಯಾ ಇದ್ದು ಕಿಡ್ನಿ ವಿಫಲಗೊಂಡಿದ್ದು ಈ ಕಾರಣಗಳಿಂದ ಮರಣ ಹೊಂದಿರುತ್ತಾರೆ ಎಂದು ಜಿಲ್ಲಾಸ್ಪತ್ರೆಯ ವೈದ್ಯರು ವರದಿ ನೀಡಿದ್ದಾರೆ ಎಂದು ಡಿಎಚ್‌ಓ ಡಾ.ಅಲಕನಂದಾ ಕೆ ಮಳಗಿ ತಿಳಿಸಿದ್ದಾರೆ.
ರಾಯಚೂರು: ಕಲುಷಿತ ನೀರು ಸೇವನೆಗೆ 5 ವರ್ಷದ ಮಗು ಸಾವು, 30ಕ್ಕೂ ಹೆಚ್ಚು ಜನರು ತೀವ್ರ ಅಸ್ವಸ್ಥ!
ಬಸರಿಹಾಳ ಗ್ರಾಮದ ಹೊನ್ನಮ್ಮ (55) ಅವರಿಗೆ ಮೇ 30 ರಂದು ಎರಡು ಬಾರಿ ಬೇಧಿಯಿಂದ ಗಂಗಾವತಿ ನಗರದ ಆಸ್ಪತ್ರೆಗೆ ದಾಖಲಾಗಿದ್ದರು. ಅಲ್ಲಿ ಇಸಿಜಿ ಮತ್ತು ರಕ್ತ ಪರೀಕ್ಷೆ ಮಾಡಲಾಗಿ ರೋಗಿಗೆ ಕಿಡ್ನಿ ತೊಂದರೆ ಮತ್ತು ಹೃದಯ ತೊಂದರೆಗಳು ಇರುವುದು ಕಂಡುಬಂದಾಗ ವೈದ್ಯರು ಹೆಚ್ಚಿನ ಚಿಕಿತ್ಸೆಗೆ ನಿರ್ದೇಶಿಸಿದ್ದರು. ಆದರೆ,ಆ ರೋಗಿಯು ಆ ದಿನ ವಾಪಸ್ ಊರಿಗೆ ಬಂದು ಮಾರನೆ ದಿನ ಮೇ 31ರಂದು ಕಿಮ್ಸ್‌ಗೆ ಹೋಗಿದ್ದರು. ಅಲ್ಲಿ ರೋಗಿ ದಾಖಲು ಮಾಡಿಕೊಂಡು ಚಿಕಿತ್ಸೆ ನೀಡಲಾಗಿದ್ದು, ದಾಖಲು ಮಾಡಿಕೊಳ್ಳುವಾಗ ರೋಗಿಯ ಸ್ಥಿತಿ ತುಂಭಾ ಗಂಭೀರವಾಗಿತ್ತು. ತುರ್ತು ಚಿಕಿತ್ಸಾ ಘಟಕದಲ್ಲಿ ದಾಖಲಿಸಿಕೊಂಡು ಚಿಕಿತ್ಸೆ ನೀಡಿದಾಗಲೂ ಚಿಕಿತ್ಸೆ ಫಲಕಾರಿಯಾಗದೆ ರೋಗಿಯು ಅದೇ ದಿನ ಮೇ 31ರಂದು ಮೃತರಾದರು. ಮೃತರಿಗೆ ಹೃದಯದ ಕಾಯಿಲೆ, ನ್ಯುಮೋನಿಯಾ ಇದ್ದು, ಕಿಡ್ನಿ ವಿಫಲಗೊಂಡಿದ್ದು ಈ ಕಾರಣಗಳಿಂದ ಮರಣ ಹೊಂದಿರುತ್ತಾರೆ ಎಂದು ಜಿಲ್ಲಾಸ್ಪತ್ರೆಯ ವೈದ್ಯರು ವರದಿ ನೀಡಿದ್ದಾಗಿ ಮಾಹಿತಿ ನೀಡಿದ್ದಾರೆ.