ಚಿಕ್ಕಮಗಳೂರು ನಗರಸಭೆಯಿಂದ ಅಂಗಡಿಗಳ ಮೇಲೆ ದಿಢೀರ್ ದಾಳಿ, 100 ಕೆಜಿಗೂ ಅಧಿಕ ಪ್ಲಾಸ್ಟಿಕ್ ವಶಕ್ಕೆ

By Suvarna News  |  First Published Oct 11, 2022, 11:27 PM IST

ಚಿಕ್ಕಮಗಳೂರು  ನಗರದ ವಿವಿಧೆಡೆ ಅಂಗಡಿಗಳು, ಹೋಟೆಲ್ಗಳ ಮೇಲೆ ದಾಳಿ ನಡೆಸಿದ ನಗರಸಭೆ ಹಾಗೂ ಅಧಿಕಾರಿಗಳ ತಂಡ 100 ಕೆ.ಜಿ.ಗೂ ಹೆಚ್ಚಿನ ಪ್ಲಾಸ್ಟಿಕ್ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದೆ.


ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್

ಚಿಕ್ಕಮಗಳೂರು (ಅ.11): ಚಿಕ್ಕಮಗಳೂರು  ನಗರದ ವಿವಿಧೆಡೆ ಅಂಗಡಿಗಳು, ಹೋಟೆಲ್ಗಳ ಮೇಲೆ ದಾಳಿ ನಡೆಸಿದ ನಗರಸಭೆ ಹಾಗೂ ಅಧಿಕಾರಿಗಳ ತಂಡ 100 ಕೆ.ಜಿ.ಗೂ ಹೆಚ್ಚಿನ ಪ್ಲಾಸ್ಟಿಕ್ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿರುವುದಲ್ಲದೆ, ಶುಚಿತ್ವ ಕಾಪಾಡಿಕೊಳ್ಳದ ಹೋಟೆಲ್ ಮಾಲೀಕರಿಗೆ ದಂಡ ವಿಧಿಸಿ ಬಿಸಿ ಮುಟ್ಟಿಸಿದ್ದಾರೆ.ಚಿಕ್ಕಮಗಳೂರು ನಗರಸಭೆ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್ ನೇತೃತ್ವದಲ್ಲಿ ರತ್ನಗಿರಿ ರಸ್ತೆ, ಉಪ್ಪಳ್ಳಿ, 60 ಅಡಿ ರಸ್ತೆಯಲ್ಲಿ ಕಾರ್ಯಾಚರಣೆ ನಡೆದಿದ್ದು,  ಲಕ್ಷ್ಮಿ ಕೆಫೆ, ಅನ್ನಪೂರ್ಣ ಹೋಮ್ ಮೇಡ್ ಘಟಕ, ರೆಹಮಾನಿಯ ಟ್ರೇಡರ್ಸ್ ಇನ್ನಿತರೆ ಅಂಗಡಿಗಳಲ್ಲಿ ನಿಷೇಧಿತ ಪ್ಲಾಸ್ಟಿಕ್ ವಸ್ತುಗಳ ಬಳಕೆ ಮತ್ತು ಮಾರಾಟ ಮಾಡುತ್ತಿರುವುದನ್ನು ಪತ್ತೆ ಹಚ್ಚಿ ವಶಕ್ಕೆ ಪಡೆಯಲಾಯಿತು.ಇದೇ ವೇಳೆ ಸ್ವಚ್ಛತೆ ಕಾಪಾಡಿಕೊಳ್ಳದಿರುವುದು ಸಹ ಕಂಡು ಬಂದ ಹಿನ್ನೆಲೆಯಲ್ಲಿ ದಂಡ ವಿಧಿಸಿ ಕಟ್ಟುನಿಟ್ಟಿನ ಎಚ್ಚರಿಕೆಯನ್ನೂ ನೀಡಿದ್ದಲ್ಲದೆ, ಅನ್ನಪೂರ್ಣ ಹೋಮ್ ಮೇಡ್ ಅಂಗಡಿಯ ಬಾಗಿಲು ಮುಚ್ಚಿಸಲಾಯಿತು. ದಿಢೀರ್ ಭೇಟಿ ಸಂದರ್ಭದಲ್ಲಿ ಪ್ರತಿ ಅಂಗಡಿಗಳಲ್ಲೂ ಸುಮಾರು 20 ಕೆ.ಜಿ.ಗೂ ಅಧಿಕ ಪ್ರಮಾಣದ ಪ್ಲಾಸ್ಟಿಕ್ ವಸ್ತು ಪತ್ತೆಯಾಗಿದ್ದು, ಒಟ್ಟಾರೆ ನೂರಾರು ಕೆಜಿ ವಸ್ತುಗಳನ್ನು ವಶಕ್ಕೆ ಪಡೆಯಲಾಯಿತು.

Tap to resize

Latest Videos

ಪ್ಲಾಸ್ಟಿಕ್ ಮುಕ್ತಗೊಳಿಸಲು ನಗರಸಭೆ ಪ್ರಯತ್ನ: ಈ ವೇಳೆ ನಗರಸಭೆ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್ ಮಾತನಾಡಿ, ಕಳೆದ 10 ತಿಂಗಳಿನಿಂದ ನಗರವನ್ನು ಪ್ಲಾಸ್ಟಿಕ್ ಮುಕ್ತಗೊಳಿಸಲು ನಗರಸಭೆ ಪ್ರಯತ್ನಿಸುತ್ತಲೇ ಇದೆ. ತಳ್ಳು ಗಾಡಿಗಳಲ್ಲಿ ಹೆಚ್ಚಾಗಿ ಪ್ಲಾಸ್ಟಿಕ್ ಬಳಕೆ ಮಾಡುತ್ತಿರುವ ಬಗ್ಗೆ ದೂರುಗಳು ಬರುತ್ತಿವೆ. ಕೆಲವು ಅಂಗಡಿಯವರು ಪ್ಲಾಸ್ಟಿಕ್ ವಸ್ತುಗಳನ್ನು ಬೇರೆ ಕಡೆ ಗೋಡಾನ್ಗಳಲ್ಲಿ ಬಚ್ಚಿಟ್ಟು ಗ್ರಾಹಕರಿಗೆ ಕೊಡುತ್ತಿರುವುದು ಸಹ ನಗರಸಭೆಯ ಗಮನಕ್ಕೆ ಬಂದಿದೆ, ಇದು ಮುಂದುವರೆದರೆ ಮುಲಾಜಿಲ್ಲದೆ ಅವರ ಅಂಗಡಿ ಪರವಾನಿಗೆಯನ್ನು ಕೂಡಲೇ ರದ್ದುಗೊಳಿಸಿ ದಂಡ ವಿಧಿಸಲಾಗುವುದು ಎಂದು ಎಚ್ಚರಿಸಿದರು. 

ನಗರದಲ್ಲಿ ಪ್ಲಾಸ್ಟಿಕ್ ಬಳಕೆ ಸ್ವಲ್ಪ ಪ್ರಮಾಣದಲ್ಲಿ  ಕಡಿಮೆಯಾಗಿದೆ, ಆದರೆ ಈ ಪ್ರಯತ್ನಕ್ಕೆ ಸಾರ್ವಜನಿಕರಿಂದ ಪೂರ್ಣ ಪ್ರಮಾಣದಲ್ಲಿ ಸಹಕಾರ ಸಿಗುತ್ತಿಲ್ಲ ಎಂದು ವಿಷಾಧಿಸಿದ ಅವರು, ಪ್ರತಿಯೊಬ್ಬ ಗ್ರಾಹಕ ಹಾಗೂ ಅಂಗಡಿ  ಮಾಲೀಕರು ಸ್ವಯಂ ಪ್ರೇರಿತವಾಗಿ ಪ್ಲಾಸ್ಟಿಕ್ ಬಳಕೆ ನಿಷೇಧಕ್ಕೆ ಸ್ಪಂದಿಸಿದಲ್ಲಿ ನಗರಸಭೆಯ ಪ್ರಯತ್ನಕ್ಕೆ ಪ್ರತಿಫಲ ಸಿಗುತ್ತದೆ ಎಂದರು.ಈ ವಿಚಾರದಲ್ಲಿ ಸಾರ್ವಜನಿಕರು ಜಾಗೃತರಾಗಬೇಕು , ಅವರ ಸಹಕಾರದಿಂದ ಮಾತ್ರ ನಗರ ಸ್ವಚ್ಚ ಹಾಗೂ ಸುಂದರವಾಗುತ್ತದೆ ಎಂದು ಹೇಳಿದರು.ಈ ಸಮಯದಲ್ಲಿ ನಗರಸಭೆ ಆರೋಗ್ಯ ನಿರೀಕ್ಷಕ ನಾಗಪ್ಪ,  ಈಶ್ವರ್, ಶಶಿರಾಜ್ ಅರಸ್, ಸೂಪರ್ವೈಸರ್  ಅಣ್ಣಯ್ಯ, ವಿವೇಕ್, ಶ್ರೀನಿವಾಸ್ ನಾಗರಾಜ್ ಇನ್ನಿತರೆ ಅಧಿಕಾರಿಗಳು ಇದ್ದರು.

click me!