ಉತ್ತರಕನ್ನಡ ಜಿಲ್ಲೆಯಲ್ಲಿ ಕುಮಟಾದಲ್ಲಿ ಶೀಘ್ರದಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಮಾಡುತ್ತೇವೆ. ಕುಮಟಾದಲ್ಲಿ ಸ್ಥಳವನ್ನು ನಿಗದಿ ಮಾಡಿದ ನಂತರ ಒಂದೆರಡು ದಿನದಲ್ಲಿ ನಿರ್ಧಾರ ಮಾಡಲಾಗುತ್ತದೆ ಎಂದು ಸಚಿವ ಸುಧಾಕರ್ ಹೇಳಿದ್ದಾರೆ.
ಕಾರವಾರ (ಅ.11): ಉತ್ತರಕನ್ನಡ ಜಿಲ್ಲೆಯಲ್ಲಿ ಶೀಘ್ರದಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಮಾಡುತ್ತೇವೆ. ಜಿಲ್ಲೆಯ ಕುಮಟಾದಲ್ಲಿ ಆಸ್ಪತ್ರೆ ನಿರ್ಮಾಣ ಮಾಡಲಾಗುತ್ತಿದ್ದು, ಸ್ಥಳವನ್ನು ನಿಗದಿ ಮಾಡಿದ ನಂತರ ಒಂದೆರಡು ದಿನದಲ್ಲಿ ನಿರ್ಧಾರ ಮಾಡಲಾಗುತ್ತದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಹೇಳಿದ್ದಾರೆ. ಕಾರವಾರದಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಧಿಕಾರಿಗಳ ಸಭೆ ನಡೆಸಿದ ಬಳಿಕ ಮಾಧ್ಯಮದ ಜತೆ ಮಾತನಾಡಿದ ಸಚಿವರು, ಇಡೀ ಜಿಲ್ಲೆಯ ಜನರಿಗೆ ಉಪಯೋಗ ಆಗುವಂತೆ ಆಸ್ಪತ್ರೆ ನಿರ್ಮಾಣ ಮಾಡಲಾಗುತ್ತದೆ. ಆರೋಗ್ಯ ಕ್ಷೇತ್ರದಲ್ಲಿ ಕರ್ನಾಟಕ ಸ್ವರ್ಗ ಇದ್ದಂತೆ. ಉಳಿದ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಆರೋಗ್ಯ ಕ್ಷೇತ್ರ ತುಂಬಾ ಚೆನ್ನಾಗಿದೆ. ನಾನು ತಮಾಷೆಗಾಗಿ ಈ ಮಾತು ಹೇಳ್ತಾ ಇಲ್ಲ, ಇರೋ ಸತ್ಯವನ್ನೇ ಹೇಳುತ್ತಾ ಇದ್ದೇನೆ. ಎರಡು ವರ್ಷದಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಸಾಕಷ್ಟು ಕೆಲಸಗಳು ಆಗ್ತಾಯಿದೆ ಎಂದು ಹೇಳಿದ ಸಚಿವರು, ಕಾರವಾರ ಸಿವಿಲ್ ಆಸ್ಪತ್ರೆಗೆ ಎಂಆರ್‌ಐ ಸ್ಕ್ಯಾನರ್ ಹಾಗೂ ಜಿಲ್ಲೆಗೆ ಹತ್ತು ಡಯಾಲಿಸಿಸ್ ಮಷಿನ್‌ಗಳನ್ನು ನೀಡಲಾಗುವುದು. ಅಲ್ಲದೇ, ಆರ್ಥೋಪೆಡಿಕ್ ವಿಭಾಗ ಸೇರಿದಂತೆ ವೈದ್ಯಾಧಿಕಾರಿಗಳು ಕೇಳಿರುವ ಹಲವು ಬೇಡಿಕೆಗಳನ್ನು ಪೂರೈಸಲಾಗುವುದು ಎಂದ ಆರೋಗ್ಯ ಸಚಿವರು ತಿಳಿಸಿದ್ದಾರೆ.
ಸಿಟಿ ಸ್ಜ್ಯಾನ್ ನಿರ್ವಹಣೆ ಕುರಿತು ಅಸಮಾಧಾನ; ಆರೋಗ್ಯ ಸಚಿವರಿಂದ ಕ್ಲಾಸ್
ಉತ್ತರಕನ್ನಡ ಜಿಲ್ಲೆಯ ಕಾರವಾರದ ಸಿವಿಲ್ ಆಸ್ಪತ್ರೆಗೆ ಇಂದು ಭೇಟಿ ನೀಡಿದ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಆಸ್ಪತ್ರೆಯ ಡೀನ್, ಸರ್ಜನ್ ಸೇರಿದಂತೆ ಇತರರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. 150 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ 450 ಬೆಡ್‌ಗಳ ಕಾರವಾರ ಮೆಡಿಕಲ್ ಕಾಲೇಜು ಆಸ್ಪತ್ರೆ ಕಾಮಗಾರಿ ವೀಕ್ಷಿಸಿದ ಆರೋಗ್ಯ ಸಚಿವರು, ಬಳಿಕ ವಿದ್ಯಾರ್ಥಿನಿಯರ ವಸತಿ ಗೃಹ ಉದ್ಘಾಟಿಸಿ, ಸೌಲಭ್ಯಗಳನ್ನು ವೀಕ್ಷಿಸಿದ್ದರು. ನಂತರ ನೇರವಾಗಿ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕಿ ರೂಪಾಲಿ ನಾಯ್ಕ್ ಜತೆ ಸಿವಿಲ್ ಆಸ್ಪತ್ರೆಗೆ ಭೇಟಿ ನೀಡಿದ ಸಚಿವರು, ಸಿವಿಲ್ ಆಸ್ಪತ್ರೆಯ ಗುಣಮಟ್ಟದ ಬಗ್ಗೆ ಪರಿಶೀಲನೆ ನಡೆಸಿದ್ದಾರೆ.
ಸಭೆಯಲ್ಲಿ ಮಹತ್ವದ ತೀರ್ಮಾನ:ಉ.ಕನ್ನಡ ಜಿಲ್ಲೆಗೆ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಕನಸು ನನಸು
ಆಸ್ಪತ್ರೆಯಲ್ಲಿ ಪದೇ ಪದೇ ಡಯಾಲಿಸಿಸ್, ಸಿಟಿ ಸ್ಕ್ಯಾನ್ ಪೂರೈಕೆ ವಿಚಾರ ಸಂಬಂಧಿಸಿ ವ್ಯವಸ್ಥೆ ಪರಿಶೀಲಿಸಿದ ಸಚಿವರು, ಸಿಟಿ ಸ್ಕ್ಯಾನ್ ಯಂತ್ರದ ನಿರ್ವಹಣೆ ಕುರಿತು ಅಸಮಾಧಾನ ತೋರ್ಪಡಿಸಿದ್ದಾರೆ. ಸ್ಥಳದಲ್ಲಿದ್ದ ಮೆಡಿಕಲ್ ಕಾಲೇಜು ಡೀನ್ ಡಾ ಗಜಾನನ್ ನಾಯ್ಕ್,, ಜಿಲ್ಲಾ ಸರ್ಜನ್ ಡಾ. ಶಿವಾನಂದ್ ಕುಡ್ತಲ್‌ಕರ್, ಡಾ. ನಾಗರಾಜ ನಾಯ್ಕ್ ಮುಂತಾದವರನ್ನು ಸ್ಥಳದಲ್ಲೇ ತರಾಟೆಗೆ ತೆಗೆದುಕೊಂಡಿದ್ದಾರೆ.
ಉತ್ತರ ಕನ್ನಡಕ್ಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ: ಸಿಎಂ ಮುಂದೆ ಷರತ್ತುಗಳನ್ನಿಟ್ಟ ಹೋರಾಟಗಾರರು
ಆಸ್ಪತ್ರೆಯಲ್ಲಿ ಹಳೇಯ ಮಿಷನ್ ಇಟ್ಟಿದ್ದರಿಂದ ನೂತನ ತಂತ್ರಜ್ಞಾನದ ಮಷಿನ್ ಯಾಕೆ ಅಳವಡಿಸಿಲ್ಲ ಎಂದು ಪ್ರಶ್ನಿಸಿದ ಸಚಿವರು, ತಾಂತ್ರಿಕ ಸಮಸ್ಯೆಗಳನ್ನು ಬಗೆಹರಿಸಿ ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡಿದಿದ್ದಲ್ಲಿ ಜನರು ಹೇಗೆ ಬರ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಗತ್ಯ ಸೌಲಭ್ಯಗಳನ್ನು ಒದಗಿಸಲು ಸರಕಾರ ತಯಾರಿದ್ದು, ಶೀಘ್ರದಲ್ಲಿ ಅಳವಡಿಸುವಂತೆ ಕ್ರಮಕ್ಕೆ ಸೂಚಿಸಿದ್ದಾರೆ.