
ವರದಿ: ಆಲ್ದೂರು ಕಿರಣ್ಏಷ್ಯಾನೆಟ್ ಸುವರ್ಣ ನ್ಯೂಸ್
ಚಿಕ್ಕಮಗಳೂರು: ಅದೊಂದು ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ. ಅಲ್ಲಿ ಒಳಗೆ ಚಪ್ಪಲಿ ಹಾಕಿಕೊಂಡು ಹೋಗುವಂತಿಲ್ಲ. ಯಾರೂ ಕ್ಯೂನಲ್ಲಿ ನಿಲ್ಲುವಂತಿಲ್ಲ. ಹೈಟೆಕ್ ಬೆಡ್ ಅಂಡ್ ಬಿಲ್ಡಿಂಗ್. ಇನ್ನು ಆಸ್ಪತ್ರೆ ಶುಚಿ ಬಗ್ಗೆ ನೋ ಕಾಮೆಂಟ್ಸ್.ನಿತ್ಯ 100-120 ರೋಗಿಗಳು ಬರ್ತಾರೆ. ಬಂದ ರೋಗಿಗಳಿಗೆ ಶುಚಿತ್ವದ ಊಟ-ತಿಂಡಿ ವ್ಯವಸ್ಥೆಯೂ ಇದೆ. ಜಿಲ್ಲಾಸ್ಪತ್ರೆ ಬಿಟ್ಟು ಜನ ಈ ಸಣ್ಣ ಆರೋಗ್ಯ ಕೇಂದ್ರಕ್ಕೆ ಹೋಗ್ತಾರೆ. ಈ ಸರ್ಕಾರಿ ಆರೋಗ್ಯ ಕೇಂದ್ರದ ಮುಂದೆ ಹೈಟೆಕ್ ನರ್ಸಿಂಗ್ ಹೋಮ್ ಗಳೇ ನಿಲ್. ಈ ಕುರಿತು ಒಂದು ವರದಿ ಇಲ್ಲಿದೆ.
ಸಮೃದ್ಧವಾದ ಕಟ್ಟಡ. ನೀಟಾಗಿ ಕೂತಿರೋ ರೋಗಿಗಳು. ಪ್ರತಿಯೊಬ್ಬರ ಕಷ್ಟ ಕೇಳ್ತಿರೋ ಸಿಬ್ಬಂದಿಗಳು. ಹೋಟೆಲ್ ನಲ್ಲಿ ಕೂತು ಊಟ ಮಾಡ್ತಿರೋ ರೋಗಿಗಳು. ಹೈಟೆಕ್ ಬೆಡ್ ಗಳು. ಅತ್ಯಂತ ಶುಚಿಯಾಗಿರೋ ಕಟ್ಟಡದ ಒಳಭಾಗ. ಇದು ಯಾವ್ದೋ ಖಾಸಗಿ ಆಸ್ಪತ್ರೆ ಅಂತ ನೀವು ಭಾವಿಸಿದ್ರೆ ನಿಮ್ಮ ಊಹೆ ತಪ್ಪು. ಅಸಲಿಗೆ ಇದು ಸರ್ಕಾರಿ ಆಸ್ಪತ್ರೆ. ಚಿಕ್ಕಮಗಳೂರು ತಾಲೂಕಿನ ಹಿರೇಮಗಳೂರು ಗ್ರಾಮದಲ್ಲಿರೋ ಪ್ರಾಥಮಿಕ ಅರೋಗ್ಯ ಕೇಂದ್ರ. ಈ ಆಸ್ಪತ್ರೆ ಒಳಗೋದ್ರೆ ಸರ್ಕಾರಿ ಆಸ್ಪತ್ರೆ ಅಂತ ಅನ್ನಿಸೋದೇ ಇಲ್ಲ. ಖಾಸಗಿ ಆಸ್ಪತ್ರೆಗಳು ನಾಚುವಂತಿದೆ ಈ ಸರ್ಕಾರಿ ಆಸ್ಪತ್ರೆ. ಈ ಆಸ್ಪತ್ರೆ ಒಳಗೆ ಚಪ್ಪಲಿ ಹಾಕಿ ಹೋಗುವಂತಿಲ್ಲ. ನಿತ್ಯ 100-120 ಜನ ರೋಗಿಗಳು ಬರೋ ಈ ಆಸ್ಪತ್ರೆಯಲ್ಲಿ ನಿತ್ಯ ಬೆಳಗ್ಗೆ-ಮಧ್ಯಾಹ್ನ 50-50 ಜನ ಒಳ ರೋಗಿಗಳು ರುಚಿ-ಶುಚಿಯಾದ ಫ್ರೀ ಊಟ ತಿಂಡಿ-ಮಾಡ್ತಾರೆ. ಪ್ರತಿ 2 ಗಂಟೆಗೊಮ್ಮೆ ನೆಲವನ್ನ ಕ್ಲೀನ್ ಮಾಡ್ತಾರೆ. ಚಿಕ್ಕಮಗಳೂರು ನಗರದಲ್ಲಿ ಬೃಹತ್ ಜಿಲ್ಲಾಸ್ಪತ್ರೆ ಇದೆ. ಆದ್ರೆ, ಕೆಲ ರೋಗಿಗಳು 10 ಕಿ.ಮೀ. ದೂರದ ರೋಗಿಗಳು, ಕೆಲ ಹಳ್ಳಿಯ ರೋಗಿಗಳು ಜಿಲ್ಲಾಸ್ಪತ್ರೆ ಬಿಟ್ಟು ಇಲ್ಲಿಗೆ ಹೋಗ್ತಾರೆ. ಯಾಕಂದ್ರೆ, ಈ ಸರ್ಕಾರಿ ಆಸ್ಪತ್ರೆ ಅಷ್ಟು ಕ್ಲೀನಾಗಿ ಇದೆ. ರೋಗಿಗಳು ಕೂಡ ಸರ್ಕಾರಿ ಆಸ್ಪತ್ರೆ ಅಂದ್ರೆ ಮೂಗು ಮುರಿಯುತ್ತಾರೆ. ಆದ್ರೆ, ಈ ಆಸ್ಪತ್ರೆ ಅಂದ್ರೆ ಬಾಯಿ ತುಂಬಾ ಹೋಗಳುತ್ತಾರೆ.
ಇನ್ನು ಆ ಪ್ರಾಥಮಿಕ ಆರೋಗ್ಯ ಕೇಂದ್ರವನ್ನ ನಗರದ ವಿದ್ಯಾ ಕಾಫಿ ಸಂಸ್ಥೆಯವರು ಕಟ್ಟಿಸಿಕೊಟ್ಡಿದ್ದಾರೆ. ಸುಮಾರು 1 ಕೋಟಿ 42 ಲಕ್ಷ ವೆಚ್ಚದಲ್ಲಿ ಸುಂದರವಾದ ಬೃಹತ್ ಕಟ್ಟಡ ನಿರ್ಮಿಸಿಕೊಟ್ಟಿದ್ದಾರೆ. ಆಸ್ಪತ್ರೆಯ ಸರ್ಕಾರಿ ಸಿಬ್ಬಂದಿಗಳು ಬಿಟ್ಟು ಕಾಫಿ ಸಂಸ್ಥೆಯವರೇ 5 ಜನ ಸಿಬ್ಬಂದಿಗಳನ್ನಿಟ್ಟು ಸಂಬಳ ನೀಡುತ್ತಿದ್ದಾರೆ. ಆಸ್ಪತ್ರೆಯಲ್ಲಿ ಯಾವುದೇ ಸಮಸ್ಯೆ ಇರದಂತೆ ಇವರೇ ನೋಡಿಕೊಳ್ಳಬೇಕು. ಆಸ್ಪತ್ರೆಗೆ ನಿತ್ಯ ,100-120 ಜನ ರೋಗಿಗಳು ಬಂದ್ರೆ ಸುಮಾರು 50 ಒಳರೋಗಿಗಳಿಗೆ ಸಂಸ್ಥೆಯವರೇ ಫ್ರೀಯಾಗಿ ರುಚಿ-ರುಚಿಯಾದ ಊಟ-ತಿಂಡಿ ಕೊಡ್ತಾರೆ. ಒಂದೊಂದು ದಿನ ಒಂದೊಂದು ಅಡುಗೆ ಮಾಡುತ್ತಾರೆ. ಎಲ್ಲವನ್ನೂ ಸಂಸ್ಥೆಯವರೇ ನೋಡಿಕೊಳ್ಳುತ್ತಾರೆ. ಬಹುಶಃ ರಾಜ್ಯದಲ್ಲಿ ಈ ರೀತಿಯ ಅತ್ಯಂತ ಶುಚಿಯಾದ ಆಸ್ಪತ್ರೆ ಇರೋದು ಕೇವಲ ಕಾಫಿನಾಡಲ್ಲಿ ಮಾತ್ರ ಅನ್ಸತ್ತೆ.
ಒಟ್ಟಾರೆ, ಸದ್ಯ ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಒಂದಿದ್ರೆ 9 ಇರಲ್ಲ. ಡಾಕ್ಟರ್ ಇದ್ರೆ ರೋಗಿಗಳು ಇರಲ್ಲ. ರೋಗಿ ಇದ್ರೆ ಡಾಕ್ಟರ್ ಇರಲ್ಲ. ಇಬ್ಬರೂ ಇರ್ತಾರೆ. ಆದ್ರೆ ಬಿಲ್ಡಿಂಗ್ ಇರಲ್ಲ. ಆದ್ರೆ, ಈ ಆಸ್ಪತ್ರೆ ಅಂತಹಾ ಯಾವುದೇ ಆರೋಪಕ್ಕೆ ಗುರಿಯಾಗಿಲ್ಲ. ರಾಜ್ಯದ ಎಲ್ಲಾ ಆಸ್ಪತ್ರೆಗಳು ಇದೇ ರೀತಿ ಇರಬೇಕು ಅನ್ನೋದು ಎಲ್ಲರ ಆಸೆ. ಅದು ದಾನಿಗಳ ನೆರವಿನಿಂದ ಅಲ್ಲ. ಸರ್ಕಾರದ ಹಣದಲ್ಲೇ ಈ ರೀತಿ ಮಾಡ್ಬೋದು. ಅದಕ್ಕೆ ಆಳುವ ವರ್ಗದ ಇಚ್ಛಾಶಕ್ತಿ ಬೇಕಷ್ಟೆ. ಆದ್ರೆ, ಈ ಆಸ್ಪತ್ರೆ ಮಾತ್ರ ನೋಡೋಕೆ ಸಣ್ಣದಾದ್ರು ಇಲ್ಲಿನ ಸೌಲಭ್ಯ-ಸೌಕರ್ಯ ಮಾತ್ರ ದೊಡ್ಡದ್ದು.