ರಾಜ್ಯದಲ್ಲಿ ಕಾಂಗ್ರೆಸ್ಸಿಗರು ಹಗಲು ಗನಸು ಕಾಣುತ್ತಿದ್ದು ಸಿದ್ದರಾಮಯ್ಯನವರ ಸ್ಟೈಲ್ ನಲ್ಲೆ ಹೇಳಬೇಕೆಂದರೆ ಅಪ್ಪನಾಣೇ ಅವರು ಮುಖ್ಯಮಂತ್ರಿಯಾಗಲ್ಲ ಎಂದು ಹೇಳಬಹುದು ಎಂದು ಶಾಸಕ ಸಿ.ಟಿ.ರವಿ ಕುಟುಕಿದರು.
ಚಿಕ್ಕಮಗಳೂರು: ರಾಜ್ಯದಲ್ಲಿ ಕಾಂಗ್ರೆಸ್ಸಿಗರು ಹಗಲು ಗನಸು ಕಾಣುತ್ತಿದ್ದು ಸಿದ್ದರಾಮಯ್ಯನವರ ಸ್ಟೈಲ್ ನಲ್ಲೆ ಹೇಳಬೇಕೆಂದರೆ ಅಪ್ಪನಾಣೇ ಅವರು ಮುಖ್ಯಮಂತ್ರಿಯಾಗಲ್ಲ ಎಂದು ಹೇಳಬಹುದು ಎಂದು ಶಾಸಕ ಸಿ.ಟಿ.ರವಿ ಕುಟುಕಿದರು. 2013ರಿಂದ 2018 ರವರೆಗೂ ಕಾಂಗ್ರೆಸ್ ಅಧಿಕಾರದಲ್ಲಿತ್ತು ಅದನ್ನು ಉಳಿಸಿಕೊಳ್ಳಲಾಗಲಿಲ್ಲಾ. ಜೆಡಿಎಸ್ ಕಾಂಗ್ರೆಸ್ ಸೇರಿ ಸಮ್ಮಿಶ್ರ ಸರ್ಕಾರ ಮಾಡಿದರು ಆಗಲೂ ಉಳಿಸಿಕೊಳ್ಳಲಿಲ್ಲಾ. ಕೊಟ್ಟಿದ್ದನ್ನೆ ಉಳಿಸಿಕೊಳ್ಳಲಾಗಲಿಲ್ಲಾ ಇನ್ನು ಗಳಿಸಿಕೊಳ್ಳುವುದೆಲ್ಲಿಂದ ಎಂದು ಟೀಕಿಸಿದರು. ಇತ್ತೀಚೆಗೆ ನಡೆದ 5 ರಾಜ್ಯದ ಚುನಾವಣೆಯಲ್ಲಿ ಕೆಲವು ಕಡೆ ಕಳೆದುಕೊಂಡರೊ ಇಲ್ಲವೊ? ಛತ್ತೀಸ್‌ಗಢ ರಾಜಸ್ಥಾನದಲ್ಲಿ ಈಗ ಅಧಿಕಾರದಲ್ಲಿದ್ದಾರೆ ನಾಳೆ ಬೆಳಗ್ಗೆ ಅಲ್ಲಿ ಚುನಾವಣೆ ನಡೆದರೆ ನೂರಕ್ಕೆ ನೂರು ಅಲ್ಲಿಯೂ ಅಧಿಕಾರ ಕಳೆದುಕೊಳ್ಳುತ್ತಾರೆ. ಮುಖ್ಯಮಂತ್ರಿ ಎಂದು ನಾನು ಬೋರ್ಡ್ ಹಾಕಿಕೊಂಡ ತಕ್ಷಣ, ಸಾಮಾಜಿಕ ಜಾಲತಾಣದಲ್ಲಿ ಹಾಕಿದಾಕ್ಷಣ ಮುಂದಿನ ಸಿಎಂ ಆಗುತ್ತಾರಾ? ಜನ ಓಟು ಹಾಕಬೇಕಾ ಬೇಡವಾ? ಜನ ಮೊದಲು ಆ ಪಕ್ಷಗಳಿಗೆ ಮತಹಾಕಿ ನಂತರ ಪಕ್ಷ ತೀರ್ಮಾನಿಸಬೇಕು. ನಮ್ಮ ದೇಶದ ಇತಿಹಾಸವನ್ನು ಹತ್ತು ವರ್ಷಗಳಿಂದ ಅವಲೋಕನ ಮಾಡಿದರೆ ಕಾಂಗ್ರೆಸ್ ಅಧಿಕಾರಕ್ಕೆ ಬಂದಿರುವುದಕ್ಕಿಂತ ಅಧಿಕಾರ ಕಳೆದುಕೊಂಡಿರುವುದೇ ಜಾಸ್ತಿ ಎಂದರು.
ಜಾತಿ ಕೆರಳಿಸಿ ರಾಜಕಾರಣ ಮಾಡುವ ಷಡ್ಯಂತ್ರ
ಕಾಂಗ್ರೆಸ್ ಪಕ್ಷದ ಆಂತರಿಕ ಜಗಳದಲ್ಲಿ ಒಕ್ಕಲಿಗ ಸಮುದಾಯವನ್ನು ನಿಂದನೆ ಮಾಡಿದ್ದಾರೆಂಬ ಪ್ರಶ್ನೆಗೆ ಸಿ.ಟಿ.ರವಿ ಉತ್ತರಿಸಿ, ಜಾತಿಯನ್ನು ಕೆರಳಿಸಿ, ಪ್ರಚೋದಿಸುವ ಮೂಲಕ ರಾಜಕಾರಣ ಮಾಡುವ ಷಡ್ಯಂತ್ರ ನಡೆಯುತ್ತಿದ್ದು ಒಂದೆಡೆ ಜಾತ್ಯಾತೀತ ರಾಷ್ಟ್ರವೆಂದು ಹೇಳುತ್ತಲೆ ಇನ್ನೊಂದೆಡೆ ಜಾತಿ ಹೆಸರಲ್ಲಿ ಪ್ರಚೋದಿಸುವುದು, ಸವಾಲು ಹಾಕುವುದು ಸರಿಯಲ್ಲ. ಒಂದೆಡೆ ಸಂಖ್ಯಾ ಬಲದಲ್ಲಿ ದೊಡ್ಡವರೆನ್ನುತ್ತೀರಿ, ಇನ್ನೊಂದೆಡೆ ಅಲ್ಪಸಂಖ್ಯಾತರೆನ್ನುತ್ತೀರಿ ಎರಡು ಏಕಕಾಲಕ್ಕೆ ಆಗಲು ಸಾಧ್ಯವಿಲ್ಲ. ಮುಖ್ಯಮಂತ್ರಿ ಹುದ್ದೆಗಳು ಸಾಂವಿಧಾನಿಕ ಹುದ್ದೆಗಳು, ಸಿಎಂ ಆಗಬೇಕಾದವರಿಗೆ ಅಭಿವೃದ್ದಿಯ ಸಂಕಲ್ಪ, ಚಿಂತನೆ, ದೂರದೃಷ್ಟಿ ಜೊತೆ ಜನಾನುರಾಗಿ ಆಗಿರಬೇಕು. ಈ ಎಲ್ಲಾ ಗುಣಗಳೊಂದಿಗೆ ದೂರದೃಷ್ಟಿ ಹೊಂದಿ ರಾಜ್ಯವನ್ನು ಸಮಗ್ರವಾಗಿ ಯಾವ ದಿಕ್ಕಿನತ್ತ ಕೊಂಡೊಯ್ಯಬೇಕೆನ್ನುವ ಸಂಕಲ್ಪ ಇಲ್ಲದಿದ್ದರೆ ಅಂತವರ ಕೈ ಗೆ ಅಧಿಕಾರ ಕೊಟ್ಟರೆ ಏನಾಗುತ್ತದೆ ಹೇಳಿ? ದಿನ ಬೆಳಗಾದರೆ ಭ್ರಷ್ಟಾಚಾರದ ಹಗರಣ ಬರುತ್ತಿದ್ದುದನ್ನು ನಮ್ಮ ದೇಶದ ಇತಿಹಾಸದಲ್ಲೆ ನೋಡಿದ್ದೇವೆ. ಈ ರೀತಿ ಸ್ವಾರ್ಥ ರಾಜಕಾರಣ ಮಾಡುವವರಿಗೆ ಅಧಿಕಾರ ಕೊಟ್ಟರೆ ನಮ್ಮ ಪರಿಸ್ಥಿತಿ ಶ್ರೀಲಂಕಾದಂತಾಗುತ್ತದೆ. ಆ ರೀತಿ ಆಗಬಾರದೆಂದಿದ್ದರೆ ಜಾತಿ ವ್ಯಾಮೋಹವನ್ನು ಮೀರಿ ಅಭಿವೃದ್ದಿ ಚಿಂತನೆ ಮೈಗೂಡಿಕೊಂಡಿರುವ, ಪರಿಶ್ರಮಕ್ಕೆ ಹೆಸರಿರುವ , ರಾಜ್ಯದ ಹಿತದೃಷ್ಟಿ ಬಯಸುವ ಯೋಗ್ಯತೆ ಇರುವವರನ್ನು ಗುರುತಿಸುವ ಹೊಣೆ ಜನರ ಮೇಲಿದೆ. ಜಾತಿ, ಹಣದ ಮೇಲೆ ಮತ ನೀಡುವ ಮನೋಭಾವನೆಯಾದರೆ ಇಂತಹವರು ಹೀಗೆಲ್ಲಾ ಮಾತನಾಡುತ್ತಾರೆ ಎಂದರು.
ಕಾಂಗ್ರೆಸ್ಸಿಗರು ಪ್ರಾಮಾಣಿಕರಾಗಿದ್ದರೆ ಇ.ಡಿ.ಗೇಕೆ ಹೆದರಬೇಕು?: ಸಿ.ಟಿ.ರವಿ
ಈಶ್ವರಪ್ಪ ಪರ ಬ್ಯಾಟಿಂಗ್
ತನ್ನ ಮೇಲೆ ಆಪಾದನೆ ಬಂದಾಗ ಈಶ್ವರಪ್ಪನವರು ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಟ್ಟಿದ್ದರು ಈಗ ಮುಖ್ಯಮಂತ್ರಿಗಳು ಪರಿಶೀಲಿಸಬೇಕು ಪಕ್ಷವನ್ನು ಈ ಹಂತದಲ್ಲಿ ಕಟ್ಟಿ, ಬೆಳೆಸಿದ ಹಲವು ಪ್ರಮುಖರಲ್ಲಿ ಈಶ್ವರಪ್ಪನವರೂ ಒಬ್ಬರು ಎಂದರು. ಬಿಜೆಪಿ ನಮ್ಮ ಸಾಧನೆ, ಸಿದ್ದಾಂತಗಳನ್ನು ಮುಂದಿಟ್ಟು ಓಟು ಕೇಳುತ್ತೇವೆ. ಒಂದು ಪಕ್ಷ ಅಧಿಕಾರಕ್ಕೆ ಬರಬೇಕೆಂದರೆ ಆ ಪಕ್ಷದ ನೀತಿ, ನೇತೃತ್ವ ಮತ್ತು ನಮ್ಮ ನಿಯತ್ತಿನ ಮೇಲೆ ಜನ ಓಟು ಹಾಕುತ್ತಾರೆ. ನಮಗೆ ನೀತಿ, ನಿಯತ್ತು ಇದೆ, ನೇತೃತ್ವವೂ ಇದೆ ಬಿಜೆಪಿಯೇ ಮತ್ತೆ ಅಧಿಕಾರಕ್ಕೆ ಬರುತ್ತದೆ. ಉಳಿದವರೆಲ್ಲಾ ಇಲ್ಲದಿರುವ ಕುರ್ಚಿಗೆ ಕಿತ್ತಾಡುತ್ತಿದ್ದಾರೆ. ಟವಲ್ ಹಾಕಲು ಖುರ್ಚಿಯೇ ಖಾಲಿ ಇಲ್ಲ ಎಂದರು.
ಜಮೀರ್ ವಿರುದ್ದ ಕಿಡಿ
ಬಿಜೆಪಿ ಅಧಿಕಾರಕ್ಕೆ ಬಂದರೆ ಯಡಿಯೂರಪ್ಪನ ಮನೆಯಲ್ಲಿ ವಾಚ್ಮನ್ ಆಗುತ್ತೇನೆಂದು ಶಾಸಕ ಜಮೀರ್ ಅಹಮದ್ ಹೇಳುತ್ತಿದ್ದಾರಲ್ಲ ಆ ಮಾತನ್ನು ಮೊದಲು ಉಳಿಸಿಕೊಳ್ಳಲಿ ನಂತರ ಜನರ ಬಳಿ ಮುಖ ತೋರಿಸಲಿ ಎಂದು ಶಾಸಕ ಸಿ.ಟಿ.ರವಿ ತಿರುಗೇಟು ನೀಡಿದರು. ಶಾಸಕ ಜಮೀರ್ ಅಹಮದ್ ಟೀಕೆಗೆ ಪ್ರತಿಕ್ರಿಯಿಸಿದ ಅವರು, ನಾನು ಬಕೆಟ್ ಹಿಡಿದು ರಾಜಕಾರಣ ಮಾಡಿದವನಲ್ಲ, ಮಾಜಿ ಪ್ರಧಾನಿ ದೇವೇಗೌಡ, ಕುಮಾರಣ್ಣನ ಬಕೆಟ್ ಹಿಡಿಯುವುದು , ಈಗ ಸಿದ್ದರಾಮಯ್ಯನವರ ಬಕೆಟ್ ಹಿಡಿಯುವುದು. ಇಂತಹ ಬಕೆಟ್ ರಾಜಕಾರಣಿ ನಾನಲ್ಲ. ನಾನು ಜನರ ನಡುವೆ ಇದ್ದು ರಾಜಕಾರಣ ಮಾಡುವವನು, ಅಧಿಕಾರವೇ ಮುಖ್ಯ ಎಂದಾಗಿದ್ದರೆ ಇಲ್ಲಿ ಮಂತ್ರಿಯಾಗಿದ್ದವನು ಪಕ್ಷದ ಕೆಲಸಕ್ಕೆ ಹೋಗುತ್ತಿರಲಿಲ್ಲ. ಜನರ ಮೇಲೆ ಪ್ರೀತಿ ವಿಶ್ವಾಸ ವಿರುವುದಕ್ಕೆ ಜನ ನನಗೆ ಓಟು ಹಾಕಿರೋದು. ನಾನು ಮಂತ್ರಿಯಾಗಿದ್ದವನು ಪಕ್ಷದ ಕೆಲಸಕ್ಕಾಗಿ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಹೋಗಿದ್ದೇನೆ. ನನ್ನ ನಿಯತ್ತೇನೆಂಬುದನ್ನು ಕ್ಷೇತ್ರದ ಜನ 4 ಬಾರಿ ಗೆಲ್ಲಿಸಿ ತೋರಿಸಿದ್ದಾರೆ. ನಾನು ಕೆಲಸ ಮಾಡಿದ್ದನ್ನು ನೋಡಿಯೇ ಜನ ಗೆಲ್ಲಿಸಿರುವುದು ಎಂದು ಉತ್ತರಿಸಿದರು.
ಹಿಂದೂ ಸಮಾಜಕ್ಕೆ ಸಿದ್ದು ಕೊಡಲಿ ಕಾವು ಆಗದಿರಲಿ: ಸಿ.ಟಿ.ರವಿ