
ಚಿಕ್ಕಬಳ್ಳಾಪುರ: ಪುರಾತತ್ವ ಇಲಾಖೆಯ ಗ್ರಾಮವಾರು ಸರ್ವೆ ಕಾರ್ಯದ ವೇಳೆ ತಾಲೂಕಿನ ಹಂಪಸಂದ್ರ ಗ್ರಾಪಂಗೆ ಸೇರಿದ ಪುಲಸಾನಿಒಡ್ಡು ಗ್ರಾಮದಲ್ಲಿ ವಿಶೇಷವಾದ ವೀರರಗುಡಿ ಪತ್ತೆಯಾಗಿದೆ. ಇದರ ಶಿಲ್ಪಕಲೆ, ವಾಸ್ತುಶೈಲಿ ಹಾಗೂ ವೀರಗಲ್ಲುಗಳು ವಿಜಯನಗರ ಕಾಲದ ಇತಿಹಾಸವನ್ನು ಅನಾವರಣಗೊಳಿಸುತ್ತಿವೆ. ಇತಿಹಾಸಕಾರರಾದ ಕೆ. ಧನಪಾಲ್ ಹಾಗೂ ತ್ಯಾಗರಾಜ್ ಅವರು ಈ ಸ್ಮಾರಕವನ್ನು ಅಧ್ಯಯನ ನಡೆಸಿ ಮಹತ್ವದ ಮಾಹಿತಿಗಳನ್ನು ಹೊರತಂದಿದ್ದಾರೆ.
ಸಾಮಾನ್ಯವಾಗಿ ವೀರರಗುಡಿಗಳನ್ನು ಕಲ್ಲಿನಿಂದ ನಿರ್ಮಿಸಿದ ಸಣ್ಣ ಮಂಟಪಗಳ ರೂಪದಲ್ಲಿ ಹೊಲಗಳಲ್ಲಿ ಅಥವಾ ಗ್ರಾಮದ ಹೊರಭಾಗದಲ್ಲಿ ನಿರ್ಮಿಸಲಾಗುತ್ತದೆ. ಆದರೆ ಈ ಗ್ರಾಮದಲ್ಲಿ ವೀರರಗುಡಿ ಊರಿನ ಮಧ್ಯದಲ್ಲಿಯೇ ಇರುವುದು ವಿಶೇಷವಾಗಿದೆ.
ಈ ವೀರರಗುಡಿಯ ದೇವಾಲಯ ರಚನೆಯು ವಿಜಯನಗರ ಶೈಲಿಯನ್ನು ಹೊಂದಿದ್ದು, ಮುಂಭಾಗದ ಮಂಟಪದಲ್ಲಿ ವಿಜಯನಗರ ಕಾಲದ ಯಾಳಿ ಶಿಲ್ಪಗಳನ್ನು ಕೆತ್ತಲಾಗಿದೆ. ಅಲ್ಲದೆ, ಸುಂದರ ನರ್ತಕಿಯರ ಎರಡು ಶಿಲ್ಪಗಳೂ ಕಂಡುಬರುತ್ತವೆ. ಈ ನರ್ತಕಿಯರು ನೆರಿಗೆಯ ವಸ್ತ್ರ ಧರಿಸಿದ್ದು, ಒಂದು ಶಿಲ್ಪದಲ್ಲಿ ಸ್ತನಪಟ್ಟಿಕೆಯನ್ನು ಧರಿಸಿರುವಂತೆ ಹಾಗೂ ಇನ್ನೊಂದು ಶಿಲ್ಪದಲ್ಲಿ ಅರೆನಗ್ನವಾಗಿ ಕೆತ್ತಲಾಗಿದೆ. ಈ ಶಿಲ್ಪಗಳು ಭಕ್ತಾದಿಗಳನ್ನು ಸ್ವಾಗತಿಸುವ ರೀತಿಯಲ್ಲಿ ರೂಪುಗೊಂಡಿವೆ.
ದೇವಾಲಯವು ಗರ್ಭಗುಡಿ, ಅಂತರಾಳ ಹಾಗೂ ನವರಂಗಗಳನ್ನು ಹೊಂದಿದೆ. ವಿಶಾಲವಾದ ಗರ್ಭಗುಡಿಯಲ್ಲಿ ಸುಮಾರು ಎಂಟು ಸ್ಮಾರಕ ಶಿಲ್ಪಗಳಿದ್ದು, ಅವೆಲ್ಲವೂ ಬೇಟೆಗೆ ಸಂಬಂಧಿಸಿದ ವೀರಗಲ್ಲುಗಳಾಗಿವೆ. ಒಂದು ಶಿಲ್ಪದಲ್ಲಿ ಈ ಪ್ರದೇಶವನ್ನು ಆಳುತ್ತಿದ್ದ ರಾಜನು ತನ್ನ ನಾಯಿಯೊಂದಿಗೆ ಬೇಟೆಗೆ ತೆರಳಿ ಹುಲಿಯನ್ನು ಬೇಟೆಯಾಡಿದ ದೃಶ್ಯವನ್ನು ಚಿತ್ರಿಸಲಾಗಿದೆ. ಕೆಲವು ಶಿಲ್ಪಗಳಲ್ಲಿ ರಾಜನೊಂದಿಗೆ ಸೇವಕರೂ ಬೇಟೆಗೆ ತೆರಳಿರುವುದನ್ನು ಕಾಣಬಹುದು. ಆ ಕಾಲದಲ್ಲಿ ಈ ಪ್ರದೇಶವನ್ನು ಆಳಿದ ರಾಜರು ಅಥವಾ ವಿಜಯನಗರ ಅರಸರ ಸಾಮಂತರಾಗಿದ್ದ ಪಾಳೇಗಾರರ ವಂಶದವರೇ ಬೇಟೆಗೆ ತೆರಳಿದ್ದರೆಂಬ ಸಾಧ್ಯತೆಯಿದೆ ಎಂದು ಈ ಕುರಿತು ಅಧ್ಯಯನ ನಡೆಸಿದ ಕೆ. ಧನಪಾಲ್ ತಿಳಿಸಿದ್ದಾರೆ.
ಈ ಬೇಟೆಗಳಲ್ಲಿ ಅನೇಕ ವೀರರು ಮಡಿದಿರುವ ಸಾಧ್ಯತೆಯಿದ್ದು, ನಂತರ ಅವರ ಪತ್ನಿಯರು ಸತಿಯಾದಿರಬಹುದೆಂಬ ಊಹೆಯೂ ಇದೆ. ಒಂದು ಶಿಲ್ಪದಲ್ಲಿ ಶಾಸನವಿದ್ದು, ಅದರ ಲಿಪಿಯ ಆಧಾರದ ಮೇಲೆ ಈ ಶಿಲ್ಪಗಳು ಸುಮಾರು 16-17ನೇ ಶತಮಾನಕ್ಕೆ ಸೇರಿದವುಗಳಾಗಿರಬಹುದೆಂದು ಅಂದಾಜಿಸಲಾಗಿದೆ. ಈ ಶಾಸನದಲ್ಲಿ ವೀರನ ಹೆಸರು ‘ಎರಕದುರಯ್ಯ’ ಎಂದು ತಿಳಿದುಬರುವ ಸಾಧ್ಯತೆಯಿದೆ.
ಈಗಿರುವಂತೆ ಆಗಲೂ ಈ ಪ್ರದೇಶವು ದಟ್ಟ ಕಾಡಿನಿಂದ ಕೂಡಿದ್ದು, ಕ್ರೂರ ಪ್ರಾಣಿಗಳ ಉಪಟಳದಿಂದ ಪ್ರಜೆಗಳನ್ನು ರಕ್ಷಿಸಲು ಸ್ವತಃ ರಾಜರೇ ಬೇಟೆಗೆ ತೆರಳಿ ಮಡಿದಿರಬಹುದೆಂಬ ಸಾಧ್ಯತೆಯಿದೆ. ಅಂತಹ ವೀರರಿಗೆ ದೇವರ ಸ್ಥಾನಮಾನ ನೀಡಿ ಈ ದೇವಸ್ಥಾನವನ್ನು ನಿರ್ಮಿಸಿರುವ ಸಾಧ್ಯತೆಯೂ ಇದೆ. ಎಲ್ಲಾ ಶಿಲ್ಪಗಳಲ್ಲಿಯೂ ಕೈಲಾಸದ ಚಿತ್ರಣವಿರುವುದರಿಂದ ಅವರು ಶೈವ ಸಂಪ್ರದಾಯಕ್ಕೆ ಸೇರಿದವರಾಗಿದ್ದರೆಂಬುದು ತಿಳಿದುಬರುತ್ತದೆ.
ಈ ಗ್ರಾಮದಲ್ಲಿ ಈ ದೇವಸ್ಥಾನದ ಕುರಿತು ಒಂದು ಜಾನಪದ ಕಥೆಯೂ ಜನಪ್ರಿಯವಾಗಿದೆ. ಹಿಂದೆ ಪುಲಸಾನಿ ಎಂಬ ಮಹಿಳೆ ಇಲ್ಲಿಂದ ಲೇಪಾಕ್ಷಿಗೆ ಬುಟ್ಟಿಯಲ್ಲಿ ಊಟ ತೆಗೆದುಕೊಂಡು ಹೋಗುತ್ತಿದ್ದಳು. ಅಲ್ಲಿಂದ ಹಿಂದಿರುಗುವಾಗ ಈ ಕಲ್ಲುಗಳನ್ನು ಒಂದೊಂದಾಗಿ ತಂದು ಇಲ್ಲಿ ಮಂದಿರವನ್ನು ನಿರ್ಮಿಸಿದ್ದಾಳೆ ಎಂದು ಗ್ರಾಮಸ್ಥರು ಹೇಳುತ್ತಾರೆ.
ಈ ಕ್ಷೇತ್ರ ಕಾರ್ಯದಲ್ಲಿ ಗ್ರಾಮಸ್ಥರಾದ ಕಿಶೋರ್, ಚಂದು, ಜಸ್ವಂತ್, ಸೋಮು, ಕುಮಾರ, ಗಂಗಾಧರಪ್ಪ ಹಾಗೂ ನಾರಾಯಣಸ್ವಾಮಿ ಪಾಲ್ಗೊಂಡು ಸಹಕಾರ ನೀಡಿದ್ದಾರೆ.