ಮದುವೆಯಲ್ಲಿ ಇನ್ಮುಂದೆ ತಡರಾತ್ರಿವರೆಗೆ ಬ್ಯಾಂಡ್, ಬೆಂಜೊ ಸದ್ದಿಲ್ಲ; ಹೊಸ ನಿಯಮಗಳು

Published : Jun 18, 2026, 07:13 AM IST
Marriage

ಸಾರಾಂಶ

ಮದುವೆ ಸಮಾರಂಭಗಳಲ್ಲಿ ತಡರಾತ್ರಿವರೆಗೆ ವಾದ್ಯ ನುಡಿಸುವುದನ್ನು ಮತ್ತು ಮದುವೆಗೆ ಒಂದು ದಿನ ಮುಂಚಿತವಾಗಿ ಸೇವೆ ನೀಡುವುದನ್ನು ನಿಲ್ಲಿಸಲು ನಿರ್ಧರಿಸಿದೆ. ಇನ್ನು ಮುಂದೆ, ಮದುವೆ ದಿನದಂದು ಬೆಳಗ್ಗೆ 8 ರಿಂದ ರಾತ್ರಿ 8 ಗಂಟೆಯವರೆಗೆ ಮಾತ್ರ ಸೇವೆ ಲಭ್ಯವಿರಲಿದೆ. 

ಕಾರವಾರ: ಮದುವೆ ಸೇರಿದಂತೆ ವಿವಿಧ ಶುಭ ಸಮಾರಂಭಗಳಲ್ಲಿ ತಡರಾತ್ರಿವರೆಗೆ ಬ್ಯಾಂಡ್ ಹಾಗೂ ಬೆಂಜೊ ವಾದ್ಯಗಳನ್ನು ನುಡಿಸುವ ಪದ್ಧತಿಗೆ ಬ್ರೇಕ್ ಹಾಕಲು ''''ಕಾರವಾರ ತಾಲೂಕು ಬ್ಯಾಂಡ್ ಹಾಗೂ ಬೆಂಜೊ ಸಂಘ'''' ಮಹತ್ವದ ನಿರ್ಧಾರ ಕೈಗೊಂಡಿದೆ. ಇದರ ಜೊತೆಗೆ ಮದುವೆಗೆ ಒಂದು ದಿನ ಮುಂಚಿತವಾಗಿ ತೆರಳಿ ಸೇವೆ ನೀಡುವ ಪದ್ಧತಿಯನ್ನೂ ಸಂಪೂರ್ಣವಾಗಿ ಸ್ಥಗಿತಗೊಳಿಸಲು ಸಂಘ ತೀರ್ಮಾನಿಸಿದೆ.

ನಗರದ ಪತ್ರಿಕಾ ಭವನದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಸಂಘದ ಅಧ್ಯಕ್ಷ ಸಂದೀಪ ಬಾಡ್ಕರ್ ಈ ಹೊಸ ನಿಯಮಗಳ ಕುರಿತು ಅಧಿಕೃತ ಮಾಹಿತಿ ನೀಡಿದರು.

ಯಾಕೆ ಈ ನಿರ್ಧಾರ?

ಇದುವರೆಗೆ ಮದುವೆಯ ಹಿಂದಿನ ದಿನವೇ ಬ್ಯಾಂಡ್ ತಂಡಗಳು ಮದುವೆ ಮನೆಗಳಿಗೆ ತೆರಳಿ ತಡರಾತ್ರಿಯವರೆಗೂ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದವು. ಮದುವೆಯ ದಿನವೂ ಸಹ ಅನೇಕ ಬಾರಿ ತಡರಾತ್ರಿವರೆಗೆ ನಿರಂತರವಾಗಿ ವಾದ್ಯ ನುಡಿಸಬೇಕಾಗುತ್ತಿತ್ತು. ನಿದ್ದೆ, ವಿಶ್ರಾಂತಿ ಇಲ್ಲದೆ ದುಡಿಯುವುದರಿಂದ ಕಲಾವಿದರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿತ್ತು. ಅಲ್ಲದೆ, ಒಂದೇ ದಿನ ಬೇರೆ ಬೇರೆ ಕಡೆ ಬುಕ್ಕಿಂಗ್ ಇದ್ದಾಗ, ಮುಂದಿನ ಕಾರ್ಯಕ್ರಮಗಳಿಗೆ ಸಮಯಕ್ಕೆ ಸರಿಯಾಗಿ ತೆರಳಲು ತೀವ್ರ ತೊಂದರೆಯಾಗುತ್ತಿತ್ತು ಎಂದು ಅವರು ವಿವರಿಸಿದರು.

ಹಲವು ವಾದಕರು, ವಿಶೇಷವಾಗಿ ಕೀಬೋರ್ಡ್ ಸೇರಿದಂತೆ ವಿವಿಧ ವಾದ್ಯಗಳನ್ನು ನುಡಿಸುವ ಕಲಾವಿದರು ಒಂದಕ್ಕಿಂತ ಹೆಚ್ಚು ತಂಡಗಳಲ್ಲಿ ಕಾರ್ಯನಿರ್ವಹಿಸುತ್ತಿರುತ್ತಾರೆ. ತಡರಾತ್ರಿವರೆಗೆ ಕಾರ್ಯಕ್ರಮ ನಡೆಯುವುದರಿಂದ ವೇಳಾಪಟ್ಟಿ ನಿರ್ವಹಣೆಯಲ್ಲಿ ಭಾರಿ ಸಮಸ್ಯೆಗಳು ಎದುರಾಗುತ್ತಿವೆ.

ಬೆಳಗ್ಗೆ 8 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಮಾತ್ರ ಬ್ಯಾಂಡ್

ಈ ಎಲ್ಲಾ ಸಮಸ್ಯೆಗಳನ್ನು ನಿವಾರಿಸುವ ಹಿನ್ನೆಲೆ ಕಾರವಾರದ ಎಲ್ಲ ಬ್ಯಾಂಡ್ ತಂಡಗಳೊಂದಿಗೆ ಸಭೆ ನಡೆಸಿ ಚರ್ಚಿಸಲಾಗಿದೆ. ಸರ್ವಾನುಮತದ ತೀರ್ಮಾನದ ಪ್ರಕಾರ, ಇನ್ನು ಮುಂದೆ ಮದುವೆ ದಿನ ಬೆಳಗ್ಗೆ 8 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಮಾತ್ರ ಬ್ಯಾಂಡ್ ಹಾಗೂ ಬೆಂಜೊ ತಂಡಗಳು ಸೇವೆ ನೀಡಲಿವೆ. ಮದುವೆಗೆ ಒಂದು ದಿನ ಮುಂಚಿತವಾಗಿ ಮದುವೆ ಮನೆಗಳಿಗೆ ತೆರಳಿ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದನ್ನು ಕಟ್ಟುನಿಟ್ಟಾಗಿ ನಿಲ್ಲಿಸಲಾಗುವುದು ಎಂದು ಸ್ಪಷ್ಟಪಡಿಸಿದರು.

ಕಾರವಾರ ತಾಲೂಕಿನಲ್ಲಿ ಒಟ್ಟು 17 ಬ್ಯಾಂಡ್ ಹಾಗೂ ಬೆಂಜೊ ತಂಡಗಳು ಅಧಿಕೃತವಾಗಿ ಕಾರ್ಯನಿರ್ವಹಿಸುತ್ತಿದ್ದು, ಪ್ರತಿ ತಂಡದಲ್ಲಿ ಸರಾಸರಿ ಏಳು ಮಂದಿ ಸದಸ್ಯರಿದ್ದಾರೆ. ಎಲ್ಲ ತಂಡಗಳ ಪ್ರತಿನಿಧಿಗಳೊಂದಿಗೆ ಸಮಾಲೋಚನೆ ನಡೆಸಿಯೇ ಈ ಅಂತಿಮ ತೀರ್ಮಾನ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ವಿಜಯ್ ಕಾಂಬ್ಳೆ, ಪ್ರಮುಖರಾದ ಕುಶಾಲಿ ಗುನಗಿ, ವಿನೇಶ್ ಮುದ್ಗೇಕರ, ಪ್ರವೀಣ ಸಾರಂಗ, ನಾಗೇಶ ತದಡಿಕರ, ಸಾಗರ ಅಂಬಿಗ, ಸಂದೇಶ್ ಕಢೆಕರ, ಸಂತೋಷ ಪಡಲಕರ, ವಿನಾಯಕ ಮಾಜಾಳಿಕರ, ಸರ್ವೇಶ್ ಅಂಬಿಗ, ಜಗದೀಶ ಗಡಕರ, ಅನಿಲ್ ಬೋಳೆಕರ, ಆನಂದ ತದಡಿಕರ, ಮುಕುಲ್ ಸೇರಿದಂತೆ ಸಂಘದ ಹಲವು ಸದಸ್ಯರು ಉಪಸ್ಥಿತರಿದ್ದರು.

ಇದನ್ನೂ ಓದಿ: ಇನ್ಮುಂದೆ ಮದುವೆ ದಿಬ್ಬಣಗಳ ಫೋಟೋ, ವಿಡಿಯೋ ಚಿತ್ರೀಕರಣ ಮಾಡಲ್ಲ: ಫೋಟೋಗ್ರಾಫರ್ಸ್ ನಿರ್ಧಾರ

PREV
Read more Articles on
click me!

Recommended Stories

'ತಾತನಿಂದ ಬಂದ ಆಸ್ತಿ ತಂದೆಯ ವೈಯಕ್ತಿಕ ಆಸ್ತಿ, ಮೊಮ್ಮಕ್ಕಳಿಗೆ ಹಕ್ಕಿಲ್ಲ: ಹೈಕೋರ್ಟ್ ಮಹತ್ವದ ತೀರ್ಪು!
Karnataka Politics: ಜೂ.21ಕ್ಕೆ ಅಖಂಡ ಶ್ರೀನಿವಾಸಮೂರ್ತಿ ಎಚ್ಡಿಕೆ ಸಮ್ಮುಖದಲ್ಲಿ ಜೆಡಿಎಸ್ ದಳಕ್ಕೆ ಸೇರ್ಪಡೆ