
ಬೆಂಗಳೂರು (ಮಾ.09): ಮೆಜೆಸ್ಟಿಕ್ ಸಮೀಪದ ಉಪ್ಪಾರಪೇಟೆ ವ್ಯಾಪ್ತಿಯ ಲಾಡ್ಜ್ ಒಂದರಲ್ಲಿ ಚನ್ನಗಿರಿ ವಿಧಾನಸಭಾ ಕ್ಷೇತ್ರದ ಶಾಸಕರ ಮಾಜಿ ಆಪ್ತ ಸಹಾಯಕ (PA) ಆತ್ಮ*ಹತ್ಯೆ ಮಾಡಿಕೊಂಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ದಾವಣಗೆರೆ ಮೂಲದ ಶಿವಕುಮಾರ್ (ಮೃತ ವ್ಯಕ್ತಿ) ಎಂದು ತಿಳಿದುಬಂದಿದೆ.
ಈ ದಾರುಣ ಘಟನೆಯು ಫೆಬ್ರವರಿ 16ರಂದು ಉಪ್ಪಾರಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ 'ಜಿ.ಟಿ ರೆಸಿಡೆನ್ಸಿ' ಎಂಬ ಲಾಡ್ಜ್‌ನಲ್ಲಿ ನಡೆದಿದೆ. ಆದರೆ, ಪ್ರಕರಣದ ಹೆಚ್ಚಿನ ವಿವರಗಳು ಹಾಗೂ ಸಾವಿಗೆ ಕಾರಣಗಳು ಈಗ ಅಧಿಕೃತವಾಗಿ ಹೊರಬರುತ್ತಿವೆ. ಮೃತ ಶಿವಕುಮಾರ್ ಅವರು ದಾವಣಗೆರೆ ಮೂಲದವರಾಗಿದ್ದು, ಚನ್ನಗಿರಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಬಸವರಾಜ್ ಶಿವಗಂಗಾ ಅವರ ಬಳಿ ಆಪ್ತ ಸಹಾಯಕರಾಗಿ ಕೆಲಸ ಮಾಡುತ್ತಿದ್ದರು.
ಮೂಲಗಳ ಪ್ರಕಾರ, ಶಿವಕುಮಾರ್ ಅವರನ್ನು ಸುಮಾರು 6 ತಿಂಗಳ ಹಿಂದೆಯೇ ಕೆಲಸದಿಂದ ತೆಗೆದುಹಾಕಲಾಗಿತ್ತು. ಶಾಸಕರ ಕಚೇರಿಯಲ್ಲಿ ಕೆಲಸ ಮಾಡುವಾಗ ಹಲವು ಅಕ್ರಮಗಳನ್ನು ಎಸಗಿದ್ದಾರೆ ಎಂಬ ಗಂಭೀರ ಆರೋಪ ಅವರ ಮೇಲೆ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಶಾಸಕ ಬಸವರಾಜ್ ಶಿವಗಂಗಾ ಅವರು ಶಿವಕುಮಾರ್ ಅವರನ್ನು ಕೆಲಸದಿಂದ ವಜಾಗೊಳಿಸಿದ್ದರು. ಉನ್ನತ ಮಟ್ಟದ ಕೆಲಸ ಕಳೆದುಕೊಂಡಿದ್ದರಿಂದ ಶಿವಕುಮಾರ್ ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದರು ಎನ್ನಲಾಗಿದೆ.
ಇನ್ನು ಶಿವಕುಮಾರ್ ಸಾವಿಗೆ ಶರಣಾಗುವ ಮುನ್ನ ತಮ್ಮ ಪತ್ನಿಗೆ ವಿಡಿಯೋ ಕಾಲ್ ಮಾಡಿದ್ದಾರೆ ಎನ್ನಲಾಗಿದೆ. 'ನನಗೆ ಈ ಜೀವನ ಸಾಕಾಗಿದೆ, ನಾನು ಸಾಯುತ್ತಿದ್ದೇನೆ' ಎಂದು ಪತ್ನಿಗೆ ಹೇಳಿ ಕಣ್ಣೀರಿಟ್ಟಿದ್ದಾರೆ. ಪತ್ನಿ ಎಷ್ಟೇ ಸಮಾಧಾನಪಡಿಸಲು ಪ್ರಯತ್ನಿಸಿದರೂ, ಶಿವಕುಮಾರ್ ಲಾಡ್ಜ್‌ನಲ್ಲಿ ನೇಣಿಗೆ ಶರಣಾಗಿದ್ದಾರೆ. ಮಾಹಿತಿ ತಿಳಿದ ಕೂಡಲೇ ಪೊಲೀಸರು ಸ್ಥಳಕ್ಕೆ ಧಾವಿಸಿ ಮೃತದೇಹವನ್ನು ವಶಕ್ಕೆ ಪಡೆದಿದ್ದಾರೆ.
ತನಿಖೆಯ ವೇಳೆ ಶಿವಕುಮಾರ್ ಅವರಿಗೆ ಮೈತುಂಬಾ ಸಾಲವಿತ್ತು ಎಂಬ ವಿಷಯವೂ ಬೆಳಕಿಗೆ ಬಂದಿದೆ. ಕೆಲಸ ಹೋದ ಮೇಲೆ ಆದಾಯವಿಲ್ಲದೆ ಸಾಲ ತೀರಿಸಲು ಸಾಧ್ಯವಾಗದೆ ಅವರು ಕಂಗಾಲಾಗಿದ್ದರು. ಒಂದೆಡೆ ಕೆಲಸ ಹೋದ ಅವಮಾನ, ಮತ್ತೊಂದೆಡೆ ಸಾಲಗಾರರ ಒತ್ತಡದಿಂದಾಗಿ ಅವರು ಈ ನಿರ್ಧಾರ ಕೈಗೊಂಡಿರಬಹುದು ಎಂದು ಶಂಕಿಸಲಾಗಿದೆ. ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಪೊಲೀಸರು ಲಾಡ್ಜ್‌ನ ಸಿಸಿಟಿವಿ ದೃಶ್ಯಾವಳಿ ಹಾಗೂ ಶಿವಕುಮಾರ್ ಅವರ ಮೊಬೈಲ್ ಫೋನ್ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.