Ambulance: ಗದಗ ರೋಗಿಗಳನ್ನ ಸಾಗಿಸಬೇಕಿದ್ದ ಜಿಮ್ಸ್ ಆಂಬುಲೆನ್ಸ್‌ನಲ್ಲಿ ಕುರಿಗಳಂತೆ ತುಂಬಿ ಪ್ರಯಾಣಿಕರ ಸಾಗಾಟ! ವಿಡಿಯೋ ವೈರಲ್

Published : Mar 09, 2026, 12:16 PM IST
Gadag ambulance misuse

ಸಾರಾಂಶ

ಗದಗ ಜಿಲ್ಲಾಸ್ಪತ್ರೆಯ ಆಂಬುಲೆನ್ಸ್‌ಗಳನ್ನು ರೋಗಿಗಳ ಬದಲು ಸಾಮಾನ್ಯ ಪ್ರಯಾಣಿಕರನ್ನು ಸಾಗಿಸಲು ಅಕ್ರಮವಾಗಿ ಬಳಸಲಾಗುತ್ತಿದೆ. ಈ ಕಾನೂನುಬಾಹಿರ ಕೃತ್ಯದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಚಾಲಕರು ಹಣಕ್ಕಾಗಿ ಆಂಬುಲೆನ್ಸ್‌ಗಳನ್ನು ಟ್ಯಾಕ್ಸಿಯಂತೆ ಬಳಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಗದಗ (ಮಾ.9): ರೋಗಿಗಳ ಜೀವ ಉಳಿಸಬೇಕಾದ ಆಂಬುಲೆನ್ಸ್‌ಗಳು ಈಗ ಹಣ ಮಾಡುವ ದಂಧೆಗೆ ಇಳಿದಿವೆಯೇ ಎಂಬ ಅನುಮಾನ ಕಾಡತೊಡಗಿದೆ. ಗದಗ ಜಿಲ್ಲಾಸ್ಪತ್ರೆ (ಜಿಮ್ಸ್) ಆವರಣದಲ್ಲಿ ರೋಗಿಗಳನ್ನು ಸಾಗಿಸಬೇಕಾದ ಆಂಬುಲೆನ್ಸ್‌ಗಳಲ್ಲಿ ಸಾಮಾನ್ಯ ಪ್ರಯಾಣಿಕರನ್ನು ಕುರಿಗಳಂತೆ ತುಂಬಿಕೊಂಡು ಸಾಗಿಸುತ್ತಿರುವ ಆಘಾತಕಾರಿ ದೃಶ್ಯಗಳು ಬೆಳಕಿಗೆ ಬಂದಿವೆ.

ಜಿಮ್ಸ್ ಆಸ್ಪತ್ರೆಯಿಂದ 'ಪಿಕ್ ಅಂಡ್ ಡ್ರಾಪ್' ಸೇವೆ!

ಗದಗ ಜಿಮ್ಸ್ ಆಸ್ಪತ್ರೆಯಿಂದ ನಗರದ ವಿವಿಧ ಭಾಗಗಳಿಗೆ ಹೋಗುವ ಜನರಿಗೆ ಆಂಬುಲೆನ್ಸ್ ಚಾಲಕರು ಡ್ರಾಪ್ ನೀಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ನಿತ್ಯವೂ ಆಸ್ಪತ್ರೆ ಆವರಣದಿಂದ ಪ್ರಯಾಣಿಕರನ್ನು ಹತ್ತಿಸಿಕೊಂಡು ಹೋಗುವುದು ಈಗ ಇಲ್ಲಿ ಸಾಮಾನ್ಯ ಎಂಬಂತಾಗಿದೆ. ರೋಗಿಗಳ ಸೇವೆಗೆ ಮೀಸಲಿಟ್ಟ ವಾಹನವನ್ನು ಚಾಲಕರು ತಮ್ಮ ಸ್ವಂತ ಲಾಭಕ್ಕೆ ಬಳಸಿಕೊಳ್ಳುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್

ಆಂಬುಲೆನ್ಸ್‌ನಲ್ಲಿ ಪ್ರಯಾಣಿಕರನ್ನು ಸಾಗಿಸುತ್ತಿರುವ ದೃಶ್ಯವನ್ನು ಸ್ಥಳೀಯರು ಮೊಬೈಲ್‌ನಲ್ಲಿ ಸೆರೆಹಿಡಿದಿದ್ದು, ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. ಆರೋಗ್ಯ ಇಲಾಖೆಗೆ ಸೇರಿದ ವಾಹನದಲ್ಲೇ ಇಂತಹ ಕಾನೂನುಬಾಹಿರ ಕೃತ್ಯ ನಡೆಯುತ್ತಿದ್ದರೂ ಅಧಿಕಾರಿಗಳು ಕಣ್ಣುಮುಚ್ಚಿ ಕುಳಿತಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಆಂಬುಲೆನ್ಸ್ ನಿಯಮ ಗಾಳಿಗೆ ತೂರಿದ ಚಾಲಕರು

ಆರ್‌ಟಿಓ (RTO) ನಿಯಮಗಳ ಪ್ರಕಾರ, ಆಂಬುಲೆನ್ಸ್‌ಗಳಿಗೆ 'ಸೇವಾ ವಾಹನ' (Service Vehicle) ಎಂಬ ವಿಶೇಷ ಪರ್ಮಿಟ್ ಇರುತ್ತದೆ. ಇದನ್ನು ಟ್ಯಾಕ್ಸಿ ಅಥವಾ ಕ್ಯಾಬ್‌ಗಳಂತೆ ಬಳಸುವುದು ಮೋಟಾರು ವಾಹನ ಕಾಯ್ದೆಯಡಿ ಗಂಭೀರ ಅಪರಾಧ. ಪ್ರಯಾಣಿಕರನ್ನು ಸಾಗಿಸುವುದು ಕಂಡುಬಂದಲ್ಲಿ ಆ ವಾಹನದ ನೋಂದಣಿ ಮತ್ತು ಚಾಲಕನ ಪರವಾನಗಿಯನ್ನು (License) ತಕ್ಷಣವೇ ರದ್ದುಗೊಳಿಸಲು ಅವಕಾಶವಿದೆ.

ಟ್ರಾಫಿಕ್ ತಪ್ಪಿಸಲು ಸೈರನ್ ದುರ್ಬಳಕೆ?

ಆಂಬುಲೆನ್ಸ್ ಒಳಗೆ ಕೇವಲ ರೋಗಿ, ಅವರ ಸಹಾಯಕರು ಮತ್ತು ವೈದ್ಯಕೀಯ ಸಿಬ್ಬಂದಿ ಮಾತ್ರ ಇರಬೇಕು. ಆದರೆ, ಇಲ್ಲಿ ಹಣದಾಸೆಗೆ ಪ್ರಯಾಣಿಕರನ್ನು ತುಂಬಲಾಗುತ್ತಿದೆ. ಒಂದು ವೇಳೆ ಟ್ರಾಫಿಕ್ ತಪ್ಪಿಸಲು ಸೈರನ್ ಬಳಸಿದರೆ, ಅದು ನಿಜವಾದ ತುರ್ತು ಪರಿಸ್ಥಿತಿಯಲ್ಲಿರುವ ರೋಗಿಗಳಿಗೆ ಮಾಡುವ ದೊಡ್ಡ ದ್ರೋಹವಾಗಿದೆ. ಅಲ್ಲದೆ, ಪ್ರಯಾಣಿಕರ ಸಾಗಾಟದಿಂದ ಆಂಬುಲೆನ್ಸ್‌ನೊಳಗಿನ ನೈರ್ಮಲ್ಯಕ್ಕೂ ಧಕ್ಕೆಯಾಗುತ್ತಿದೆ.

ಟ್ಯಾಕ್ಸಿ ಕ್ಯಾಬ್‌ಗಳಂತೆ ಬಾಡಿಗೆ ದಂಧೆಯ ಶಂಕೆ?

ತುರ್ತು ಸಂದರ್ಭದಲ್ಲಿ ರೋಗಿಗಳಿಗೆ ಸಿಗದ ಆಂಬುಲೆನ್ಸ್‌ಗಳು ಹೀಗೆ ಬೇಕಾಬಿಟ್ಟಿ ಓಡಾಡುತ್ತಿರುವುದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 'ಇದು ಕೇವಲ ಡ್ರಾಪ್ ಸೇವೆಯೋ ಅಥವಾ ಟ್ಯಾಕ್ಸಿ ಕ್ಯಾಬ್‌ಗಳಂತೆ ಆಂಬುಲೆನ್ಸ್ ಬಾಡಿಗೆ ದಂಧೆ ಮೇಲೆ ನಡೆಯುತ್ತಿದೆಯೇ ಎಂಬ ಶಂಕೆ ವ್ಯಕ್ತವಾಗಿದೆ. ಈ ಹಿನ್ನೆಲೆ ಕೂಡಲೇ ಜಿಲ್ಲಾಧಿಕಾರಿಗಳು ಹಾಗೂ ಆರೋಗ್ಯ ಇಲಾಖೆ ಎಚ್ಚೆತ್ತು ತಪ್ಪಿತಸ್ಥ ಚಾಲಕರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕೆಂದು ಆಗ್ರಹಿಸಿದ್ದಾರೆ.

ಓದುಗರ ಗಮನಕ್ಕೆ: ಆಂಬುಲೆನ್ಸ್‌ಗಳನ್ನು ವೈಯಕ್ತಿಕ ಕಾರ್ಯಗಳಿಗೆ ಅಥವಾ ಪ್ರಯಾಣಕ್ಕೆ ಬಳಸುತ್ತಿರುವುದು ಕಂಡುಬಂದಲ್ಲಿ ಸಾರ್ವಜನಿಕರು ತಕ್ಷಣವೇ 100 ಅಥವಾ ಹತ್ತಿರದ ಆರ್‌ಟಿಓ ಕಚೇರಿಗೆ ದೂರು ನೀಡಬಹುದಾಗಿದೆ.

PREV
Read more Articles on
click me!

Recommended Stories

ಅಯ್ಯೋ ಮಲ್ಲಿಕಾರ್ಜುನ ಮುತ್ಯಾ.., ಜಾಮೀನು ನಿರೀಕ್ಷೆಯಲ್ಲಿದ್ದ ನಿಮಗೆ, ಕೋರ್ಟ್ ಮತ್ತೆ ಶಾಕ್ ಕೊಡ್ತಾ!
ಬೆಂಗಳೂರು ಉದ್ಯೋಗಿ ಸುಪ್ರಿತಾ ಅನುಮಾನಾಸ್ಪದ ಸಾವು; ವರದಕ್ಷಿಣೆ ಕಿರುಕುಳ ಕೊಡ್ತಿದ್ದ ಗಂಡ ಪರಾರಿ!