
ವರದಿ: ಪುಟ್ಟರಾಜು.ಆರ್.ಸಿ, ಏಷಿಯಾನೆಟ್ ಸುವರ್ಣ ನ್ಯೂಸ್, ಚಾಮರಾಜನಗರ.
ಚಾಮರಾಜನಗರ (ಏ.26): ಏಷ್ಯಾನೆಟ್ ಸುವರ್ಣ ನ್ಯೂಸ್ ಮಾಡಿದ್ದ ಅನಾಥ ಮಕ್ಕಳ ವರದಿಗೆ ಉತ್ತಮ ಸ್ಪಂದನೆ ದೊರೆತಿದೆ. ಇಬ್ಬರು ಅನಾಥ ಮಕ್ಕಳ ಪಾಲನೆ ಪೋಷಣೆ ಮಾಡುತ್ತಿರುವ ಅಜ್ಜಿಗೆ ಒಂದು ಮನೆ, ಅಗತ್ಯ ಧನಸಹಾಯ ಮಕ್ಕಳಿಗೆ ಆಧಾರ್ ಕಾರ್ಡ್ ಪಡಿತರ ಚೀಟಿ ಮಾಡಿಸಿಕೊಡುವ ಭರವಸೆ ಸಿಕ್ಕಿದ್ದು ಈ ಮಕ್ಕಳ ಭವಿಷದಲ್ಲಿ ಆಶಾಕಿರಣ ಮೂಡಿದೆ. ಚಾಮರಾಜನಗರ ತಾಲೂಕಿನ ಮೂಡಲ ಅಗ್ರಹಾರದ ಮಹದೇವ ಕುಡಿತದ ದಾಸನಾಗಿದ್ದ. ಎರಡು ತಿಂಗಳ ಹಿಂದೆ ಕುಡಿದ ಅಮಲಿನಲ್ಲಿ ತನ್ನ ಪತ್ನಿ ಸುಮತಿಗೆ ಸೀಮೆಎಣ್ಣೆ ಎರಚಿ ಬೆಂಕಿ ಹಚ್ಚಿದ್ದ.
ಸುಟ್ಟಗಾಯಗಳಿಂದ ಸುಮತಿ ಮೃತಪಟ್ಟಿದ್ದಳು. ಪತಿ ಜೈಲು ಸೇರಿದ್ದು ಈ ದಂಪತಿಗೆ ಇದ್ದ 6 ವರ್ಷ ಹಾಗು ಒಂದುವರೆ ವರ್ಷದ ಇಬ್ಬರು ಹೆಣ್ಣು ಮಕ್ಕಳು ಇದೀಗ ತಂದೆ ತಾಯಿ ಇಲ್ಲದೆ ತಬ್ಬಲಿಗಳಾಗಿದ್ದಾರೆ. ವಯಸ್ಸಾದ ಅಜ್ಜಿ ಅಂಕಮ್ಮನಿಗೆ ಈ ಎಳೆಯ ಮಕ್ಕಳನ್ನು ಸಾಕಬೇಕಾದ ಅನಿವಾರ್ಯತೆ ಎದುರಾಗಿದೆ. ಯಾವುದೇ ಆದಾಯ ಮೂಲಗಳಿಲ್ಲದೆ ಅಜ್ಜಿ ತನಗೆ ಬರುವ 800 ರೂಪಾಯಿ ವಿಧವಾ ವೇತನದಲ್ಲೇ ಈ ಮಕ್ಕಳನ್ನು ಪೋಷಿಸಬೇಕಾದ ದುಸ್ಥಿಯ ಬಗ್ಗೆ ಏಷ್ಯನೆಟ್ ಸುವರ್ಣ ನ್ಯೂಸ್ ವರದಿ ಮಾಡಿತ್ತು.
ಏಷ್ಯಾನೆಟ್ ಸುವರ್ಣ ನ್ಯೂಸ್ ವರದಿ ಗಮನಿಸಿದ ಚಾಮರಾಜನಗರ ಜಿಲ್ಲಾ ವೀರಶೈವ ಮಹಾಸಭಾಧ್ಯಕ್ಷ ಮೂಡ್ಲುಪುರ ನಂದೀಶ್, ಮೂಡಲ ಅಗ್ರಹಾರ ಗ್ರಾಮಕ್ಕೆ ಧಾವಿಸಿ ಅನಾಥ ಮಕ್ಕಳ ಪಾಲನೆ ಪೋಷಣೆಗೆ ಧನ ಸಹಾಯ ಮಾಡಿದ್ದಾರೆ. ಅಗತ್ಯ ದಿನಸಿ ಸಾಮಾನುಗಳನ್ನು ನೀಡಿದ್ದಾರೆ ಮಕ್ಕಳು ಒಂದು ಹಂತಕ್ಕೆ ಬರುವ ತನಕ ಇನ್ನು ಮುಂದೆಯು ಪ್ರತಿ ತಿಂಗಳು ಎರಡರಿಂದ ಮೂರು ಸಾವಿರ ರೂಪಾಯಿ ನಗದು ಸಹಾಯ ಹಾಗು ಅಗತ್ಯ ದಿನಸಿ ನೀಡುವುದಾಗಿ ಅವರು ತಿಳಿಸಿದ್ದಾರೆ.
ಅಲ್ಲದೆ ಮಕ್ಕಳ ವಿದ್ಯಾಭ್ಯಾಸದ ಸಂಪೂರ್ಣ ಖರ್ಚನ್ನು ಭರಿಸುವುದಾಗಿ ಅವರು ಭರವಸೆ ನೀಡಿದ್ದಾರೆ. ಏಷ್ಯಾನೆಟ್ ಸುವರ್ಣ ನ್ಯೂಸ್ ವರದಿಗೆ ಸ್ಪಂಧಿಸಿದ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಅಧಿಕಾರಿಗಳು ಮೂಡಲ ಅಗ್ರಹಾರಕ್ಕೆ ಭೇಟಿ ನೀಡಿ ಸಂಕಷ್ಟದಲ್ಲಿಯು ಮೊಮ್ಮಕ್ಕಳನ್ನು ಸಾಕುತ್ತಿರುವ ಅಜ್ಜಿ ಅಂಕಮ್ಮನಿಗೆ ವಾತ್ಸಲ್ಯ ಕಾರ್ಯಕ್ರಮದಡಿ ಒಂದು ಮನೆ ನಿರ್ಮಾಣ ಹಾಗು ಪ್ರತಿ ತಿಂಗಳು ಒಂದು ಸಾವಿರ ರೂಪಾಯಿ ಧನ ಸಹಾಯ ಮಾಡುವ ಭರವಸೆ ನೀಡಿದ್ದಾರೆ.
ಏಷ್ಯಾನೆಟ್ ಸುವರ್ಣ ನ್ಯೂಸ್ ವರದಿಗೆ ಸ್ಪಂಧಿಸಿದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಕಾನೂನು ಸ್ವಯಂ ಸೇವಕ ಆರ್ ಸತೀಶ್ಕುಮಾರ್ ಗ್ರಾಮಕ್ಕೆ ಧಾವಿಸಿ ಅಗತ್ಯ ದಾಖಲೆಗಳನ್ನು ಸಂಬಂಧಿಸಿದ ಇಲಾಖೆಗಳಿಂದ ಪಡೆದು ತಂದೆ ತಾಯಿ ಇಲ್ಲದೆ ಅನಾಥರಾಗಿರುವ ಮಕ್ಕಳಿಗೆ ಆಧಾರ್ ಕಾರ್ಡ್ ಮಾಡಿಸಿಕೊಡಲು ಕಾರ್ಯನಿರತರಾಗಿದ್ದಾರೆ ಅನಾಥ ಮಕ್ಕಳ ಸಂಕಷ್ಟದ ಬಗ್ಗೆ ಬೆಳಕು ಚಲ್ಲಿ ಅವರಿಗೆ ನೆರವಾಗಲು ಕಾರಣವಾದ ಏಷ್ಯನೆಟ್ ಸುವರ್ಣ ನ್ಯೂಸ್ ಗೆ ಗ್ರಾಮಸ್ಥರು ಧನ್ಯವಾದ ಹೇಳಿದ್ದಾರೆ..
ಅನಾಥ ಮಕ್ಕಳಿಗೆ ಸಹಾಯ ಹಸ್ತ ಚಾಚಿದ ಮೂಡ್ಲುಪುರ ನಂದೀಶ್, ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಅಧಿಕಾರಿಗಳು ಹಾಗು ಕಾನೂನು ಸೇವಕ ಸತೀಶ್ಕುಮಾರ್ ಅವರ ಈ ಮಾನವೀಯ ಕಾರ್ಯ ಅನಾಥ ಮಕ್ಕಳ ಉತ್ತಮ ಭವಿಷ್ಯಕ್ಕೆ ಆಶಾಕಿರಣ ಮೂಡಿಸಿದೆ. ಈ ಮಕ್ಕಳಿಗೆ ಸಹಾಯ ಹಸ್ತ ಚಾಚಿರುವುದು ನಿಜಕ್ಕೂ ಶ್ಲಾಘನೀಯವಾಗಿದೆ.