ಯುದ್ಧದ ನಡುವೆಯೂ ದೇಶದಲ್ಲಿ ಪೆಟ್ರೋಲ್‌ ಬಂಕ್‌ ಖಾಲಿಯಾಗಿಲ್ಲ: ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ

Published : Apr 26, 2026, 06:07 PM IST
Pralhad Joshi

ಸಾರಾಂಶ

ಮಧ್ಯಪ್ರಾಚ್ಯ ಹಾಗೂ ಯುರೋಪ್‌ನಲ್ಲಿನ ಸಂಘರ್ಷಗಳಿಂದ ಜಾಗತಿಕ ಮಟ್ಟದಲ್ಲಿ ಅಸ್ಥಿರತೆ ಇದೆ. ಆದರೂ ಭಾರತ ಗಮನಾರ್ಹ ಸ್ಥಿರತೆ ಪ್ರದರ್ಶಿಸುತ್ತಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು.

ಹುಬ್ಬಳ್ಳಿ (ಏ.26): ಮಧ್ಯಪ್ರಾಚ್ಯ ಹಾಗೂ ಯುರೋಪ್‌ನಲ್ಲಿನ ಸಂಘರ್ಷಗಳಿಂದ ಜಾಗತಿಕ ಮಟ್ಟದಲ್ಲಿ ಅಸ್ಥಿರತೆ ಇದೆ. ಆದರೂ ಭಾರತ ಗಮನಾರ್ಹ ಸ್ಥಿರತೆ ಪ್ರದರ್ಶಿಸುತ್ತಿದೆ. ವಿಕಸಿತ ಭಾರತದತ್ತ ದೃಢ ಹೆಜ್ಜೆಗಳೊಂದಿಗೆ ಸಾಗುತ್ತಿದೆ ಎಂಬುದಕ್ಕೆ ಇದು ಸಾಕ್ಷಿ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು. ಇಲ್ಲಿನ ಅಮರಗೋಳದ ಎಪಿಎಂಸಿ ಪ್ರಾಂಗಣದಲ್ಲಿ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ (ಕೆಸಿಸಿಐ) ಆಯೋಜಿಸಿರುವ ಇನ್‌ಕಾಮೆಕ್ಸ್‌-2026 ಉದ್ಘಾಟಿಸಿ ಅವರು ಮಾತನಾಡಿದರು.

ಜಾಗತಿಕ ಮಟ್ಟದಲ್ಲಿ ಸಾಕಷ್ಟು ಅಸ್ಥಿರತೆ ಇದೆ. ಅತ್ತ ಮಧ್ಯಪ್ರಾಚ್ಯ ದೇಶಗಳಲ್ಲಿ ಯುದ್ಧ ನಡೆಯುತ್ತಿದೆ. ರಷ್ಯಾ ಮತ್ತು ಉಕ್ರೇನ್‌ ಮಧ್ಯೆ ಸಂಘರ್ಷವಿದೆ. ಇವೆಲ್ಲವೂ ಇಂಧನ ಪೂರೈಕೆ ಮತ್ತು ಪೂರೈಕೆ ಸರಪಳಿಗಳಿಗೆ ಅಡ್ಡಿಪಡಿಸಿವೆ. ಆದರೂ ಭಾರತದಲ್ಲಿ ಒಂದೇ ಒಂದು ಪೆಟ್ರೋಲ್‌ ಪಂಪ್‍ ಕೂಡ ಖಾಲಿಯಾಗಿಲ್ಲ. ಇದು ನಮ್ಮ ವ್ಯವಸ್ಥೆಗಳ ಶಕ್ತಿಯನ್ನು ಪ್ರತಿಬಿಂಬಿಸುತ್ತದೆ. ಜಾಗತಿಕ ಅಸ್ಥಿರತೆ ಹೊರತಾಗಿಯೂ ದೇಶಾದ್ಯಂತ ನಿರಂತರ ಇಂಧನ ಪೂರೈಕೆಯಾಗುತ್ತಿದೆ ಎಂದರು.

ಭಾರತವು ನಾಲ್ಕು ಟ್ರಿಲಿಯನ್‌ ಆರ್ಥಿಕತೆ ಹೊಂದಿದ ದೇಶವಾಗಿ ಹೊರಹೊಮ್ಮುತ್ತಿದೆ. ಇದು ಆರ್ಥಿಕ ಸದೃಢತೆಯ ಲಕ್ಷಣ ಎಂದ ಸಚಿವರು, ಉತ್ಪಾದನಾ ಆಧಾರಿತ ಪ್ರೋತ್ಸಾಹಕ ಯೋಜನೆಯ ಯಶಸ್ಸು ಎಂದು ನುಡಿದರು. ಭಾರತವು ಎಲೆಕ್ಟ್ರಾನಿಕ್ಸ್‌ನ ನಿವ್ವಳ ಆಮದುದಾರ ರಾಷ್ಟ್ರದಿಂದ ಪ್ರಮುಖ ರಫ್ತುದಾರ ರಾಷ್ಟ್ರವಾಗಿ ಪರಿವರ್ತನೆಗೊಂಡಿದೆ ಮತ್ತು ಜಾಗತಿಕ ಮೊಬೈಲ್ ಫೋನ್ ಮಾರುಕಟ್ಟೆಯಲ್ಲಿ ಗಣನೀಯ ಪಾಲು ಹೊಂದಿದೆ ಎಂದ ಅವರು, ಪ್ರಮುಖ ಜಾಗತಿಕ ತಂತ್ರಜ್ಞಾನ ಕಂಪನಿಗಳ ಇತ್ತೀಚಿನ ರಫ್ತುಗಳ ಪೈಕಿ ಹೆಚ್ಚಿನ ಭಾಗವು ಈಗ ಭಾರತದಲ್ಲೇ ತಯಾರಾಗುತ್ತಿದೆ. ರಾಷ್ಟ್ರೀಯ ಒಟ್ಟು ರಫ್ತು 820 ಬಿಲಿಯನ್ ಡಾಲರ್ ದಾಟಿದೆ ಎಂದು ಹೇಳಿದರು.

ಉಕ ಮೇಲೆ ಗಮನ

ಪ್ರಾದೇಶಿಕ ಬೆಳವಣಿಗೆ ಉತ್ತೇಜಿಸಲು ಪ್ರಮುಖವಾಗಿ ಮೂಲಸೌಕರ್ಯ ಒದಗಿಸಬೇಕು. ಹುಬ್ಬಳ್ಳಿ-ಅಂಕೋಲಾ ರೈಲ್ವೆ ಮಾರ್ಗದ ಪರಿಷ್ಕೃತ ಪ್ರಸ್ತಾವನೆಯನ್ನು ಪರಿಸರ ಅನುಮತಿಗಾಗಿ ಸಲ್ಲಿಸಲಾಗಿದೆ. ಇದು ಈ ಭಾಗದ ಅಭಿವೃದ್ಧಿಗೆ ಪೂರಕವಾಗಲಿದೆ. ಹೊಸ ಬಂದರು ನಿರ್ಮಾಣ, ಅವುಗಳ ಸಂಪರ್ಕಕ್ಕೆ ದಾರಿ ಮಾಡಿಕೊಡುತ್ತದೆ. ಲಾಜಿಸ್ಟಿಕ್ಸ್ ಸವಾಲುಗಳನ್ನು ಕಡಿಮೆ ಮಾಡುತ್ತದೆ ಎಂದರು. ಬೆಂಗಳೂರು-ಮುಂಬೈ ಹೈಸ್ಪೀಡ್ ರೈಲು ಕಾರಿಡಾರ್ ಯೋಜನೆಗಳು ಪ್ರಗತಿಯಲ್ಲಿವೆ ಮತ್ತು ಹುಬ್ಬಳ್ಳಿ-ಧಾರವಾಡ ಪ್ರಮುಖ ಕೇಂದ್ರವಾಗಿ ಹೊರಹೊಮ್ಮುವ ನಿರೀಕ್ಷೆಯಿದೆ. ಹೆಚ್ಚುವರಿಯಾಗಿ ಜಾಗತಿಕ ಸ್ಪರ್ಧಾತ್ಮಕತೆಯನ್ನು ಸುಧಾರಿಸಲು 2035ರ ವೇಳೆಗೆ ಲಾಜಿಸ್ಟಿಕ್ಸ್ ವೆಚ್ಚವನ್ನು ಶೇ. 12ರಿಂದ ಶೇ. 6ಕ್ಕೆ ಇಳಿಸಲು ಸರ್ಕಾರ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.

PREV
Read more Articles on
click me!

Recommended Stories

ಕೋರಮಂಗಲದಲ್ಲಿ ಕುಡಿದು ತೂರಾಡುವ ಹುಡುಗಿಯರು; ಮಾತಾಡಿಸಿದರೆ ಕೇಸು, ಬುದ್ಧಿ ಹೇಳಿದ್ರೆ ಬೀಳ್ತಾವೆ ಒದೆ!
ಯಗಚಿ ಹಳ್ಳಕ್ಕೆ ಸೇರುತ್ತಿದೆ ಕಲುಷಿತ ನೀರು: ಪತ್ರಕರ್ತನ ದೂರಿಗೆ ಸ್ಪಂದಿಸಿದ ಪ್ರಧಾನಿ ಕಾರ್ಯಾಲಯ