ಕಾಂಗ್ರೆಸ್‌ ಬೆಂಬಲ ಕೊಡಲಿಲ್ಲ, ಮಹಿಳೆಯರಿಗೆ ಮೀಸಲು ದೊರೆಯಲಿಲ್ಲ: ಸಂಸದ ಯದುವೀರ್ ಒಡೆಯರ್

Published : Apr 26, 2026, 06:36 PM IST
Yaduveer Wadiyar

ಸಾರಾಂಶ

ಪ್ರಧಾನಿ ಅವರು ಇಂತಹದ್ದೊಂದು ಮಸೂದೆಗಳನ್ನು ಮಂಡಿಸಿದ್ದರು. ಆದರೆ, ಕಾಂಗ್ರೆಸ್‌ ಬೆಂಬಲ ಕೊಡಲಿಲ್ಲ. ಇದರಿಂದ ಮಹಿಳೆಯರಿಗೆ ಮೀಸಲಾತಿ ದೊರೆಯಲಿಲ್ಲ ಎಂದು ಸಂಸದ ಯದುವೀರ್ ಒಡೆಯರ್ ಹೇಳಿದ್ದಾರೆ.

ಮಡಿಕೇರಿ (ಏ.26): ಮಹಿಳೆಯರಿಗೆ ಪ್ರಾತಿನಿಧ್ಯ ನೀಡುವುದಕ್ಕೆ, ಭಾರತದ ನಾಯಕತ್ವಕ್ಕೆ ಹಾಗೂ ನೀತಿ ನಿರೂಪಣೆಯಲ್ಲಿ ಮಹಿಳೆಯರಿರಬೇಕು ಎಂಬ ಕಾರಣಕ್ಕಾಗಿ ಪ್ರಧಾನಿ ಅವರು ಇಂತಹದ್ದೊಂದು ಮಸೂದೆಗಳನ್ನು ಮಂಡಿಸಿದ್ದರು. ಆದರೆ, ಕಾಂಗ್ರೆಸ್‌ ಬೆಂಬಲ ಕೊಡಲಿಲ್ಲ. ಇದರಿಂದ ಮಹಿಳೆಯರಿಗೆ ಮೀಸಲಾತಿ ದೊರೆಯಲಿಲ್ಲ ಎಂದು ಸಂಸದ ಯದುವೀರ್ ಒಡೆಯರ್ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಿಳೆಯರಿಗೆ ರಾಜಕೀಯದಲ್ಲಿ ಮೀಸಲಾತಿ ಕೊಡುವುದು ಹಾಗೂ ರಾಜ್ಯವೂ ಸೇರಿದಂತೆ ದೇಶದ ಸಂಸತ್ ಸದಸ್ಯ ಸ್ಥಾನಗಳ ಸಂಖ್ಯೆ ಹೆಚ್ಚಿಸುವ ಸಾಂವಿಧಾನಿಕ ತಿದ್ದುಪಡಿಯಂತಹ ಮಸೂದೆಗಳಿಗೆ ಕಾಂಗ್ರೆಸ್ ಬೆಂಬಲ ಕೊಡಲಿಲ್ಲ. ಇದರಿಂದ ಮಹಿಳೆಯರಿಗೆ ಮೀಸಲಾತಿ ಕಲ್ಪಿಸುವುದು ಹಾಗೂ ರಾಜ್ಯದ ಸಂಸತ್ ಸದಸ್ಯ ಸ್ಥಾನ ಹೆಚ್ಚಿಸುವ ಉದ್ದೇಶಗಳು ಈಡೇರಲಿಲ್ಲ. ಆದರೆ, ಕೇಂದ್ರ ಸರ್ಕಾರ ತನ್ನ ಪ್ರಯತ್ನ ಮುಂದುವರಿಸಲಿದೆ ಎಂದು ತಿಳಿಸಿದರು.

ಬೆಂಬಲ ಕೊಡಲಿಲ್ಲ

ಪ್ರಧಾನಿ ನರೇಂದ್ರ ಮೋದಿ ಅವರು ಈ ಮಸೂದೆಗಳು ಜಾರಿಯಾದಲ್ಲಿ ಅದರಲ್ಲಿ ನನ್ನ ಚಿತ್ರ ಬೇಡವೇ ಬೇಡ. ವಿರೋಧ ಪಕ್ಷಗಳ ನಾಯಕರ ಚಿತ್ರಗಳನ್ನೇ ಹಾಕುತ್ತೇವೆ ಎಂದರು. ಮಾತ್ರವಲ್ಲ, ವಿರೋಧ ಪಕ್ಷಗಳು ಎತ್ತಿದ ಪ್ರಶ್ನೆಗಳಿಗೆ ಸಮರ್ಪಕವಾದ ಉತ್ತರ ನೀಡಿದರು. ಆದರೂ, ಕಾಂಗ್ರೆಸ್‌ ಬೆಂಬಲ ಕೊಡಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ಎಲ್ಲ ರಾಜ್ಯಗಳ ಸಂಸತ್ ಸದಸ್ಯ ಸ್ಥಾನವೂ ಏರಿಕೆಯಾಗುತ್ತಿತ್ತು.

ಕೊಡಗಿಗೆ ಪ್ರತ್ಯೇಕವಾದ ಸಂಸತ್ ಸದಸ್ಯ ಸ್ಥಾನವೂ ಸಿಗುವ ಸಂಭವ ಸಹ ಇತ್ತು. ಆದರೆ, ಕಾಂಗ್ರೆಸ್ ವಿರೋಧ ಮಾಡಿದ್ದರಿಂದ ಇಂತಹ ಸುವರ್ಣ ಅವಕಾಶಗಳು ವ್ಯರ್ಥವಾದವು ಎಂದು ಹೇಳಿದರು. ಮೈಸೂರು–ಕುಶಾಲನಗರ ರೈಲು ಸಂರ್ಪಕ ಯೋಜನೆ ರದ್ದಾಗಿಲ್ಲ. ರಾಜ್ಯ ಸರ್ಕಾರ ಭೂಮಿಯನ್ನು ಸ್ವಾಧೀನಪಡಿಸಿಕೊಂಡು ನೀಡಿದರೆ ರೈಲು ಯೋಜನೆ ಕಾರ್ಯಗತವಾಗುತ್ತದೆ ಎಂದರು. ಮಾಜಿ ಸಚಿವ ಅಪ್ಪಚ್ಚುರಂಜನ್ ಮಾತನಾಡಿ, ವಿರೋಧ ಪಕ್ಷದಲ್ಲಿಯೂ ಮಹಿಳೆಯರಿದ್ದಾರೆ. ಕಾಂಗ್ರೆಸ್‌ನ ಈ ವರ್ತನೆಯನ್ನು ಎಲ್ಲ ಮಹಿಳೆಯರೂ ಪಕ್ಷಾತೀತವಾಗಿ ಖಂಡಿಸಬೇಕು.

ದೇಶದ ಹಿತಕ್ಕಾಗಿ ವಿರೋಧ ಪಕ್ಷಗಳೆಲ್ಲವೂ ಬೆಂಬಲ ಕೊಡುತ್ತವೆ ಎಂಬ ನಂಬಿಕೆ ಇತ್ತು. ಹಿಂದೆಯೂ ಕೆಲವೊಂದು ಸಂದರ್ಭಗಳಲ್ಲಿ ಬೆಂಬಲ ನೀಡಿದ್ದರು. ಆ ನಂಬಿಕೆಯ ಮೇಲೆ ಮಸೂದೆ ಮಂಡಿಸಲಾಯಿತು. ಆದರೆ, ಆ ನಂಬಿಕೆಯನ್ನು ಕಾಂಗ್ರೆಸ್ ಮತ್ತದರ ಮೈತ್ರಿಕೂಟ ಉಳಿಸಿಕೊಳ್ಳಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಬಿಜೆಪಿ ರಾಜ್ಯ ಸಮಿತಿ ಸದಸ್ಯೆ ರೀನಾ ಪ್ರಕಾಶ್ ಮಾತನಾಡಿ ಮಹಿಳಾ ಪರವಾದ ವಿಧೇಯಕಕ್ಕೆ ಬೆಂಬಲ ಕೊಡದ ಮೂಲಕ ಕಾಂಗ್ರೆಸ್ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿತು ಎಂದು ಆರೋಪಿಸಿದರು.

PREV
Read more Articles on
click me!

Recommended Stories

ಯುದ್ಧದ ನಡುವೆಯೂ ದೇಶದಲ್ಲಿ ಪೆಟ್ರೋಲ್‌ ಬಂಕ್‌ ಖಾಲಿಯಾಗಿಲ್ಲ: ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ
ಕೋರಮಂಗಲದಲ್ಲಿ ಕುಡಿದು ತೂರಾಡುವ ಹುಡುಗಿಯರು; ಮಾತಾಡಿಸಿದರೆ ಕೇಸು, ಬುದ್ಧಿ ಹೇಳಿದ್ರೆ ಬೀಳ್ತಾವೆ ಒದೆ!