
ಚಾಮರಾಜನಗರ (ಸೆ.04): ಜಿಲ್ಲಾ ಕೇಂದ್ರ ಚಾಮರಾಜನಗರ ಪಟ್ಟಣದಲ್ಲಿ ನಡೆದ ಘಟನೆ ಎಲ್ಲರನ್ನೂ ಆಶ್ಚರ್ಯಕ್ಕೆ ಗುರಿಮಾಡಿದೆ. ಕೇವಲ 10 ವರ್ಷದ ಬಾಲಕನೊಬ್ಬ, ಟ್ಯೂಷನ್‌ಗೆ ಹೋಗುವುದರ ಬದಲು ಗೋಬಿ ತಿನ್ನಲು ಹೋಗಿದ್ದಕ್ಕಾಗಿ ಮನೆಯವರಿಗೆ ಮತ್ತು ಪೊಲೀಸರಿಗೆ ಸುಳ್ಳು ಕಿಡ್ನಾಪ್ ಕಥೆ ಕಟ್ಟಿದ ಪ್ರಕರಣ ಬೆಳಕಿಗೆ ಬಂದಿದೆ.
ಘಟನೆ ಹೀಗಿದೆ:
ಮನೆಗೆ ಬಂದು ಬಾಲಕ, 'ನನ್ನನ್ನು ಅಪರಿಚಿತರು ಕಿಡ್ನಾಪ್ ಮಾಡಿ ಇದೀಗ ಬಂದು ಬಿಟ್ಟು ಹೋಗಿದ್ದಾರೆ' ಎಂದು ಹೇಳಿದ್ದಾನೆ. ಪೋಷಕರು ಮಗನ ಮಾತು ನಂಬಿ ತಕ್ಷಣವೇ ಪೊಲೀಸರಿಗೆ ದೂರು ನೀಡಿದ್ದಾರೆ. ಮಗನ ಸುರಕ್ಷತೆಗೆ ಆತಂಕಗೊಂಡ ಕುಟುಂಬ ಸದಸ್ಯರೊಂದಿಗೆ ಪೊಲೀಸರು ಕೂಡ ತಕ್ಷಣ ಕಾರ್ಯಪ್ರವೃತ್ತರಾಗಿ, ನಗರದೆಲ್ಲೆಡೆ ಪುಲ್‌ಸರ್ಚಿಂಗ್ ನಡೆಸಿದ್ದಾರೆ. ಬಾಲಕ ಹೇಳಿದಂತೆ ಪಾನಿಪುರಿ, ಗೋಬಿ ಅಂಗಡಿ ಹಾಗೂ ಬೇರೆ ಕಡೆಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ಸಂಗ್ರಹಿಸಿದರು. ಕಿಡ್ನ್ಯಾಪರ್ಸ್ ತಮ್ಮನ್ನು ಗೋಬಿ, ಐಸ್ ಕ್ರೀಂ ತಿನ್ನುವಂತೆ ಬಲವಂತ ಪಡಿಸಿದರು, ಬಳಿಕ 'ಕೆಇಬಿ ಕಚೇರಿ ಮುಂಭಾಗ ಬಾ' ಎಂದಿದ್ದರು ಎಂಬ ಕಥೆಯನ್ನು ಬಾಲಕ ಪೊಲೀಸರಿಗೆ ಹೇಳಿದ್ದಾನೆ.
ಸತ್ಯ ಬಹಿರಂಗ:
ಆದರೆ ತನಿಖೆ ಮುಂದುವರಿಸಿದ ಪೊಲೀಸರು ಯಾವುದೇ ಕಿಡ್ನಾಪ್ ನಡೆದಿಲ್ಲವೆಂದು ದೃಢಪಡಿಸಿದ್ದಾರೆ. ಬಾಲಕ ಹೇಳಿದ ಕಥೆ ಎಲ್ಲೂ ಸತ್ಯವಲ್ಲ ಎಂಬುದು ತಿಳಿದುಬಂದಿದೆ. ಹೀಗಾಗಿ, ಬಾಲಕನನ್ನು ಪುನಃ ವಿಚಾರಣೆ ನಡೆಸಿದಾಗ, ಬಾಲಕ ಟ್ಯೂಷನ್‌ಗೆ ಹೋಗದೆ ಗೋಬಿ ತಿನ್ನಲು ಹೋಗಿದ್ದನ್ನು ಪಕ್ಕದ ಮನೆಯವರು ನೋಡಿದ್ದರಿಂದ, ಆ ಸಂಗತಿಯನ್ನು ಮುಚ್ಚಿಹಾಕಲು ಕಿಡ್ನಾಪ್ ಕಥೆ ಕಟ್ಟಿದ್ದಾನೆ ಎಂಬುದು ಬಹಿರಂಗವಾಗಿದೆ.
ಎಸ್‌ಪಿ ಮಾಹಿತಿ: ಚಾಮರಾಜನಗರ ಜಿಲ್ಲಾ ಪೊಲೀಸ್ ಅಧಿಕಾರಿ ಡಾ. ಬಿ.ಟಿ. ಕವಿತಾ ಅವರು, 'ಬಾಲಕ ಹೇಳಿದ ರೀತಿಯಲ್ಲಿ ಯಾವುದೇ ಕಿಡ್ನಾಪ್ ನಡೆದಿಲ್ಲ. ತನಿಖೆಯಲ್ಲಿ ಎಲ್ಲವೂ ಸುಳ್ಳು ಕಥೆ ಎಂಬುದು ಬೆಳಕಿಗೆ ಬಂದಿದೆ' ಎಂದು ಸ್ಪಷ್ಟಪಡಿಸಿದ್ದಾರೆ. ಈ ಘಟನೆ ಕೇಳಿ ಎಲ್ಲರೂ ನಗುವಂತಾದರೂ, ಪೋಷಕರು ಮಕ್ಕಳಿಗೆ ಅತಿಯಾದ ಒತ್ತಡ ಕೊಡುವ ಬದಲು, ಅವರ ವರ್ತನೆಗೆ ಸೂಕ್ತ ಮಾರ್ಗದರ್ಶನ ನೀಡುವುದು ಮುಖ್ಯ ಎಂದು ಪೊಲೀಸರು ತಿಳಿಸಿದ್ದಾರೆ.