
ಬೆಂಗಳೂರು (ಸೆ.04): ರಾಜಧಾನಿ ಬೆಂಗಳೂರಿನಲ್ಲಿ ನಾಯಿ ಕಂಡು ಕರಡಿ ಎಂದು ಆತಂಕಗೊಂಡಿರುವ ಘಟನೆ ಪರಪ್ಪನ ಜೈಲಿನ ಬಳಿ ನಡೆದಿದೆ. ಸಾಕಿದ ನಾಯಿಯೊಂದು ಪರಪ್ಪನ ಅಗ್ರಹಾರ ಜೈಲಿನ ಬಳಿ ಓಡಾಡಿತ್ತು. ಇದನ್ನ ಅಪಾರ್ಟ್ಮೆಂಟ್ ನಿವಾಸಿಗಳು ಮೊಬೈಲ್ ನಲ್ಲಿ ಸೆರೆಹಿಡಿದಿದ್ದರು. ನಂತರ ದೂರದಿಂದ ನಾಯಿಯನ್ನ ಕಂಡು ಕರಡಿ ಎಂದು ಆತಂಕ ಹುಟ್ಟಿಸಿದ್ದರು.
ಇಡೀ ಪರಪ್ಪನ ಅಗ್ರಹಾರ ಜೈಲಿನಲ್ಲಿ ಕರಡಿ ಬಂದಿದೆ ಎಂದು ಸುಳ್ಳು ಸುದ್ದಿ ಹಬ್ಬಿತ್ತು. ನಂತರ ಸ್ಥಳಕ್ಕೆ ತೆರಳಿ ಪರಪ್ಪನ ಅಗ್ರಹಾರ ಪೊಲೀಸರು ಪರಿಶೀಲನೆ ಮಾಡಿದ್ದರು. ಪರಿಶೀಲನೆ ಬಳಿಕ ಅದು ನಾಯಿ ಎಂಬುದು ಪತ್ತೆಯಾಗಿತ್ತು. ನಾಯಿ ಎಂದು ಗೊತ್ತಾಗುತ್ತಲೇ ನಕ್ಕು ಸುಮ್ಮನಾಗಿರೋ ಜೈಲಿನ ಅಧಿಕಾರಿಗಳು, ನಂತರ ಕೆಸರಿನಲ್ಲಿ ಸಿಲುಕಿದ್ದ ನಾಯಿ ರಕ್ಷಣೆ ಮಾಡಿ ಮಾಲೀಕರಿಗೆ ಪೊಲೀಸರು ಒಪ್ಪಿಸಿದ್ದಾರೆ.
ಸಾಕು ನಾಯಿ ಮೇಲೆ ಚಿರತೆ ದಾಳಿ: ಮದ್ದೂರು ತಾಲೂಕಿನ ಕೆ.ಹೊನ್ನಲಗೆರೆ ಸಮೀಪದ ರಾಜೇಗೌಡನದೊಡ್ಡಿ ಗ್ರಾಮದ ಶ್ರೀ ಮುತ್ತುರಾಯಸ್ವಾಮಿ ದೇಗುಲದ ಬಳಿ ಬುಧವಾರ ರಾತ್ರಿ ಸಾಕು ನಾಯಿ ಮೇಲೆ ಚಿರತೆ ದಾಳಿ ನಡೆಸಿ ತಿಂದು ಹಾಕಿರುವ ಘಟನೆ ಜರುಗಿದೆ. ಗ್ರಾಮದ ಪ್ರಕಾಶ್ ಎಂಬುವವರ ಮನೆ ಮುಂದೆ ಕಟ್ಟಿ ಹಾಕಿದ್ದ ನಾಯಿ ಮೇಲೆ ಚಿರತೆ ದಾಳಿ ನಡೆಸಿ ತಿಂದು ಹಾಕಿ ಪರಾರಿಯಾಗಿದೆ.
ಚಿರತೆ ದಾಳಿ ಹಿನ್ನೆಲೆಯಲ್ಲಿ ಗ್ರಾಮಸ್ಥರಲ್ಲಿ ಭೀತಿಯ ವಾತಾವರಣ ಉಂಟು ಮಾಡಿದೆ. ಚಿರತೆ ದಾಳಿ ನಡೆಸಿರುವ ದೃಶ್ಯ ಪ್ರಕಾಶ್ ಮನೆ ಮುಂದೆ ಅಳವಡಿಸಿರುವ ಸಿಸಿಟಿವಿಯಲ್ಲಿ ದಾಖಲಾಗಿದೆ. ರಾಜೇಗೌಡನ ದೊಡ್ಡಿ ಕೋಳಿರಾಯನಗುಡ್ಡೆ ಅರಣ್ಯ ಪ್ರದೇಶದಲ್ಲಿ ಬೀಡು ಬಿಟ್ಟಿರುವ ಚಿರತೆಗಳ ಹಿಂಡು ಕಳೆದ ಮೂರು ದಿನಗಳಿಂದ ಅರಣ್ಯ ದಿಂದ ಹೊರ ಬಂದು ಮುರಾರ್ಜಿ ದೇಸಾಯಿ ವಸತಿ ಶಾಲೆ ಅರಣ್ಯ ಇಲಾಖೆಯ ನೆಡುತೋಪಿನ ನಿರ್ಜನ ಪ್ರದೇಶದಲ್ಲಿ ಅಡಗಿವೆ ಎಂದು ಹೇಳಲಾಗುತ್ತಿದೆ.
ಚಿರತೆಗಳು ರಾತ್ರಿ ವೇಳೆ ರಸ್ತೆಗಳಲ್ಲಿ ಸಂಚಾರ ನಡೆಸುವ ಮೂಲಕ ಸಾಕು ಪ್ರಾಣಿಗಳ ಮೇಲೆ ದಾಳಿ ನಡೆಸಲು ಹೊಂಚು ಹಾಕುತ್ತಿವೆ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ. ಚಿರತೆಗಳ ಬಗ್ಗೆ ಮಾಹಿತಿ ಅರಿತಿರುವ ವಲಯ ಅರಣ್ಯಾಧಿಕಾರಿ ಗವಿಯಪ್ಪ ನೇತೃತ್ವದಲ್ಲಿ ಇಲಾಖೆ ಸಿಬ್ಬಂದಿ ಗ್ರಾಮಕ್ಕೆ ಭೇಟಿ ನೀಡಿ ಚಿರತೆ ಸೆರೆ ಹಿಡಿಯಲು ಬೋನ್ ಇಡಲು ಕ್ರಮ ಕೈಗೊಂಡಿದ್ದಾರೆ.