ದಲಿತರ ಅಭಿವೃದ್ಧಿಗಾಗಿ ಬಿಜೆಪಿ ಸರ್ಕಾರ ಯೋಜನೆಗಳನ್ನ ರೂಪಿಸಿದೆ| ಚುನಾವಣೆ ಸಂದರ್ಭದಲ್ಲಿ ದಲಿತರನ್ನು ಮುಖ್ಯಮಂತ್ರಿ ಮಾಡುವ ವಿಚಾರ ಮುನ್ನೆಲೆಗೆ ತರುವ ಕಾಂಗ್ರೆಸಿಗರು ಗೆದ್ದ ಬಳಿಕ ಮರೆತು ಬಿಡುತ್ತಾರೆ| ಈ ವರೆಗೂ ದಲಿತರನ್ನು ಮುಖ್ಯಮಂತ್ರಿ ಮಾಡಲು ಆ ಪಕ್ಷಕ್ಕೆ ಸಾಧ್ಯವಾಗಿಲ್ಲ ಎಂದರು ದೂರಿದ ಛಲವಾದಿ ನಾರಾಯಣಸ್ವಾಮಿ|
ಬಳ್ಳಾರಿ(ಸೆ.21): ದಲಿತರು ಕಾಂಗ್ರೆಸ್ ತೊರೆಯುತ್ತಿರುವುದರಿಂದ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಆ ಪಕ್ಷ ಅಧಿಕಾರ ಕಳೆದುಕೊಂಡಿದೆ ಎಂದು ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯಾಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ಆರೋಪಿಸಿದ್ದಾರೆ.
ನಗರದ ಬಿಜೆಪಿ ಕಚೇರಿಯಲ್ಲಿ ಭಾನುವಾರ ನಡೆದ ಎಸ್ಸಿ ಮೋರ್ಚಾ ಪದಾಧಿಕಾರಿಗಳ ಸಂಘಟನಾ ಸಭೆಯಲ್ಲಿ ಅವರು ಮಾತನಾಡಿದರು. ಚುನಾವಣೆ ಸಂದರ್ಭದಲ್ಲಿ ದಲಿತರನ್ನು ಮುಖ್ಯಮಂತ್ರಿ ಮಾಡುವ ವಿಚಾರ ಮುನ್ನೆಲೆಗೆ ತರುವ ಕಾಂಗ್ರೆಸಿಗರು ಗೆದ್ದ ಬಳಿಕ ಮರೆತು ಬಿಡುತ್ತಾರೆ. ಈ ವರೆಗೂ ದಲಿತರನ್ನು ಮುಖ್ಯಮಂತ್ರಿ ಮಾಡಲು ಆ ಪಕ್ಷಕ್ಕೆ ಸಾಧ್ಯವಾಗಿಲ್ಲ ಎಂದರು ದೂರಿದರು.
undefined
ಕಾಂಗ್ರೆಸ್ ಸರ್ಕಾರ ಅಧಿಕಾರ ಇದ್ದಾಗಲೂ ಸಂವಿಧಾನದ ಅನೇಕ ತಿದ್ದುಪಡಿಗಳಾಗಿವೆ. ತಿದ್ದುಪಡಿ ಸಹಜ ಪ್ರಕ್ರಿಯೆ. ಹಾಗಂತ ಬಿಜೆಪಿಯವರು ಸಂವಿಧಾನವನ್ನೇ ಬದಲಾಯಿಸುತ್ತಾರೆ. ಮೀಸಲಾತಿಯನ್ನು ತೆಗೆಯುತ್ತಾರೆ ಎಂಬುದು ಶುದ್ಧ ಸುಳ್ಳು. ಬಿಜೆಪಿ ದಲಿತರನ್ನು ನಿರ್ಲಕ್ಷ್ಯ ಮಾಡಿಲ್ಲ. ದಲಿತ ಸಮುದಾಯ ಅಭಿವೃದ್ಧಿಗಾಗಿಯೇ ಅನೇಕ ಯೋಜನೆಗಳನ್ನು ರೂಪಿಸಿದೆ. ಇದನ್ನು ವಿನಾಕಾರಣ ಪಕ್ಷವನ್ನು ದೂರುವವರು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.
ತುಂಗಭದ್ರಾ ಜಲಾಶಯದಿಂದ ನೀರು ಬಿಡುಗಡೆ; ಹಂಪಿ ಸ್ಮಾರಕಗಳು ಮುಳುಗಡೆ
ಪಕ್ಷದ ಎಸ್ಸಿ ಮೋರ್ಚಾ ಮುಖಂಡರು ಹಾಗೂ ಸದಸ್ಯರು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ದಲಿತ ಸಮುದಾಯದ ಪ್ರಗತಿಗಾಗಿ ಜಾರಿಗೊಳಿಸುವ ಯೋಜನೆಗಳ ಕುರಿತು ಮನವರಿಕೆ ಮಾಡಿಕೊಡುವ ಕೆಲಸ ಮಾಡಬೇಕು. ದಲಿತ ಸಮುದಾಯ ಪ್ರಗತಿಗಾಗಿ ಶಿಕ್ಷಣಕ್ಕೆ ಆದ್ಯತೆ ನೀಡಬೇಕು ಎಂದು ತಿಳಿಸಿಕೊಡಬೇಕು ಎಂದು ಪಕ್ಷದ ನಾಯಕರಿಗೆ ಕರೆ ಕೊಟ್ಟರು.
ಸದಾಶಿವ ವರದಿ ಏಕೆ ಜಾರಿಗೊಳಿಸಲಿಲ್ಲ?
ಕಾಂಗ್ರೆಸ್ ನಾಯಕರು ಇದೀಗ ನ್ಯಾ. ಸದಾಶಿವ ವರದಿ ಜಾರಿಗೆ ಆಗ್ರಹಿಸುತ್ತಿದ್ದಾರೆ. ಈ ಹಿಂದೆ ರಾಜ್ಯದಲ್ಲಿ ಕಾಂಗ್ರೆಸ್ ಇತ್ತು. ಆಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಏಕೆ ಜಾರಿಗೊಳಿಸಲಿಲ್ಲ. ವರದಿ ಜಾರಿಗೆ ಸರ್ಕಾರ ಸಿದ್ಧವಿದೆ. ಸೋಮವಾರದಿಂದ ಶುರುವಾಗುವ ಅಧಿವೇಶನದಲ್ಲಿ ಚರ್ಚೆಗೆ ಬರುತ್ತದೆ. ಬಳಿಕ ನಿರ್ಧಾರ ಮಾಡುತ್ತಾರೆ. ಕಾಂಗ್ರೆಸ್‌ನವರು ರಾಜಕಾರಣಕ್ಕಾಗಿ ಏನೇನೋ ಮಾತನಾಡುತ್ತಾರೆ. ಅವರಿಗೆ ನಿಜವಾಗಿಯೂ ದಲಿತರ ಮೇಲೆ ಕಾಳಜಿಗಳಿಲ್ಲ ಎಂದು ದೂರಿದರು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದಲಿತರ ಪರವಾಗಿ ಮಾತನಾಡುತ್ತಾರೆ. ಆದರೆ, ಕಾರ್ಯರೂಪಕ್ಕೆ ತರುವುದಿಲ್ಲ. ಇವರಿಗೆ ನಿಜವಾಗಿಯೂ ಕಾಳಜಿ ಇದ್ದಿದ್ದರೆ ಈ ಹಿಂದೆ ಇವರೇ ಮುಖ್ಯಮಂತ್ರಿಗಳಾಗಿ ಪೂರ್ಣಾವಧಿ ಮಾಡಿದರು. ಆಗ ನ್ಯಾ. ಸದಾಶಿವ ಆಯೋಗ ವರದಿಯನ್ನು ಏಕೆ ಜಾರಿಗೊಳಿಸಲಿಲ್ಲ? ಎಂದು ಕೇಳಿದರು. ಎಸ್ಸಿ ಮೋರ್ಚಾದ ರಾಜ್ಯ ಉಪಾಧ್ಯಕ್ಷ ಈಶಪ್ಪ ಹಿರೇಮನಿ, ಪ್ರಧಾನ ಕಾರ್ಯದರ್ಶಿ ದಿನಕರಬಾಬು, ಜಿಲ್ಲಾಧ್ಯಕ್ಷ ವಿ. ಗೋವಿಂದರಾಜುಲು ಸೇರಿದಂತೆ ಪಕ್ಷದ ಜಿಲ್ಲಾ ಹಾಗೂ ತಾಲೂಕು ಸಮಿತಿ ಪದಾಧಿಕಾರಿಗಳು ಇದ್ದರು.
ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದ ಸ್ವಾಮಿ
ಬಿ.ಎಸ್. ವಿಜಯೇಂದ್ರ ಸೂಪರ್ ಸಿಎಂ ಎಂದಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಛಲವಾದಿ ನಾರಾಯಣಸ್ವಾಮಿ ಹರಿಹಾಯ್ದರು.ಹಿಂದೆ ತಮ್ಮ ಅಧಿಕಾರ ಅವಧಿಯನ್ನು ಅವರು ನೆನಪು ಮಾಡಿಕೊಳ್ಳಬೇಕು. ಪುತ್ರ ರಾಕೇಶ್ ಬಗ್ಗೆ ಏನೇನು ಬಂದಿತ್ತು ಗೊತ್ತಿದೆಯೇ? ರಾಕೇಶ್ ಅವರದು ಎಲ್ಲೆಲ್ಲಿ ಏನೇನು ಇತ್ತು ಗೊತ್ತಾ? ಅವರ ಮತ್ತೊಬ್ಬ ಪುತ್ರ ಡಾ. ಯತೀಂದ್ರ ಸಿದ್ದರಾಮಯ್ಯ ಅವರ ಜತೆ ಇಲ್ವಾ ಎಂದು ಪ್ರಶ್ನಿಸಿದರಲ್ಲದೆ, ವಿಜಯೇಂದ್ರ ಮುಖ್ಯಮಂತ್ರಿಯ ಮಗ ಆಗಿರೋದೇ ತಪ್ಪಾ? ವಿಜಯೇಂದ್ರ ನಮ್ಮ ಪಕ್ಷದ ರಾಜ್ಯ ಉಪಾಧ್ಯಕ್ಷರಾಗಿದ್ದಾರೆ. ಅವರು ರಾಜಕಾರಣದಲ್ಲಿ ಸಕ್ರಿಯವಾಗಿದ್ದಾರೆ. ಹಾಗೆಂದ ಮಾತ್ರ ಸೂಪರ್ ಸಿಎಂ ಎಂದು ದೂರುವುದು ಎಷ್ಟುಸರಿ ಎಂದು ನಾರಾಯಣಸ್ವಾಮಿ ಪ್ರಶ್ನಿಸಿದರು.